ಮಂಗಳವಾರ, ಜನವರಿ 31, 2023
18 °C
ಸರ್ಕಾರಿ ನೌಕರರ ಸಂಘದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ನ್ಯಾ. ಸಂತೋಷ್‌ ಹೆಗ್ಡೆ

ಮಾನವೀಯತೆ, ತೃಪ್ತಿ ಇಲ್ಲದಿರುವುದೇ ಭ್ರಷ್ಟಾಚಾರಕ್ಕೆ ಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಎಷ್ಟು ಗಳಿಸಿದರೂ ಇರದ ತೃಪ್ತಿ ಮತ್ತು ಜನರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂಬ ಮನಸ್ಸು ಇಲ್ಲದೇ ಮಾನವೀಯತೆ ಮರೆಯುವುದೇ ಭ್ರಷ್ಟಾಚಾರಕ್ಕೆ ಕಾರಣ ಎಂದು ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎನ್‌. ಸಂತೋಷ್‌ ಹೆಗ್ಡೆ ಹೇಳಿದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆ ಗುರುವಾರ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ, 2023 ನೇ ಸಾಲಿನ ಕ್ಯಾಲೆಂಡರ್‌ ಬಿಡುಗಡೆ, ಪ್ರಜಾಸ್ನೇಹಿ ಆಡಳಿತ ಸುಧಾರಣೆಯಲ್ಲಿ ಸರ್ಕಾರಿ ನೌಕರರ ಪಾತ್ರ ಬಗ್ಗೆ ವಿಚಾರ ಸಂಕಿರಣ, ಸಾಮಾನ್ಯಸಭೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕ್ಯಾನ್ಸರ್‌, ಕೊರೊನಾ ಸಹಿತ ಎಲ್ಲ ರೋಗಗಳಿಗೆ ಔಷಧವಿದೆ. ಈ ಭ್ರಷ್ಟಾಚಾರ ಎಂಬ ರೋಗಕ್ಕೆ ಮದ್ದಿಲ್ಲ. ಎಲ್ಲ ಆಸೆಗಳನ್ನು ಬಿಟ್ಟು ಸನ್ಯಾಸಿ ಆಗಿ ಎಂದು ಹೇಳುತ್ತಿಲ್ಲ. ಇನ್ನೊಬ್ಬರ ಜೇಬಿಗೆ ಕೈ ಹಾಕದೇ, ಇನ್ನೊಬ್ಬರ ಹೊಟ್ಟೆಗೆ ಹೊಡೆಯದೇ, ಕಾನೂನಿನ ಅಡಿಯಲ್ಲಿ ನಿಮ್ಮ ಆದಾಯ ಇರಲಿ. ಹಿಂದೆ ನಾವು ತಪ್ಪಿ ನಡೆದಾಗ ತಿದ್ದು ಹೇಳುವ ಗುರುಗಳಿದ್ದು, ಮನೆಯಲ್ಲಿ ಅಜ್ಜ ಅಜ್ಜಿ ಇದ್ದರು. ಇಂದು ಮಕ್ಕಳನ್ನು ತಿದ್ದುವವರಿಲ್ಲ. ಅಜ್ಜ ಅಜ್ಜಿ ಇದ್ದರೂ ವೃದ್ಧಾಶ್ರಮದಲ್ಲಿ ಇರುತ್ತಾರೆ. ಮಕ್ಕಳನ್ನು ಐಫೋನ್‌, ಲ್ಯಾಪ್‌ಟಾಪ್‌ಗಳು ನಿಯಂತ್ರಿಸುತ್ತಿರುತ್ತದೆ ಎಂದು ವಿಷಾದ ವ್ಯಕ್ತಪಡಿಸಿದರು.

‘ಈಗಿನ ಸರ್ಕಾರ 40 ಪರ್ಸೆಂಟ್‌ ಸರ್ಕಾರ ಎಂದು ಹಿಂದೆ ಆಡಳಿತ ಮಾಡಿದವರು ಟೀಕೆ ಮಾಡುತ್ತಿದ್ದಾರೆ. ಅದಕ್ಕೆ ನಿಮ್ಮ ಕಾಲದಲ್ಲಿ ಪರ್ಸಂಟೇಜ್‌ ಪಡೆದಿಲ್ವ ಎಂದು ಈ ಪಕ್ಷದವರು ಪ್ರಶ್ನಿಸುತ್ತಾರೆ. ನಮ್ಮ ಕಾಲದಲ್ಲಿ 10 ಪರ್ಸೆಂಟ್‌ ಎಂದು ಅವರು ಉತ್ತರಿಸುತ್ತಾರೆ. ಆನೆ ಕದ್ದರೂ ಕಳ್ಳ, ಅಡಿಕೆ ಕದ್ದರೂ ಕಳ್ಳ ಎಂದು ಇವರಿಗೆ ಹೇಳಿಕೊಡಬೇಕಿದೆ. ನಾನು ಯಾವ ಪಕ್ಷಕ್ಕೂ ಸೇರಿದವನಲ್ಲ. ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಮೂವರು ಮುಖ್ಯಮಂತ್ರಿಗಳ ಬಗ್ಗೆ ವರದಿ ನೀಡಿದ್ದೆ. ಅವರು ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಹೀಗೆ ಮೂರು ಪಕ್ಷಕ್ಕೆ ಸೇರಿದವರು’ ಎಂದು ಹೇಳಿದರು.

ಪ್ರಜಾಪ್ರಭುತ್ವದಲ್ಲಿ ರಾಜಕೀಯ ಬಹಳ ಮುಖ್ಯ. ಆದರೆ ಇಂದು ರಾಜಕೀಯ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದೆ. ಇದೊಂದೇ ಕ್ಷೇತ್ರವಲ್ಲ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾರಂಗ, ಖಾಸಗಿ ರಂಗಗಳೆಲ್ಲವೂ ಭ್ರಷ್ಟಮಯವಾಗಿವೆ. ನೀವು ಸರ್ಕಾರಿ ಅಧಿಕಾರಿಗಳು, ನೌಕರರು ಸಂವಿಧಾನ ಕೊಡಮಾಡಿದ ಸ್ಥಾನವನ್ನು ಪಡೆದಿದ್ದೀರಿ. ಇಲ್ಲಿ ಪ್ರಮೋಶನ್‌ ಸಿಕ್ಕಿಲ್ಲ ಎಂದು ಕೊರಗುವ ಮೊದಲು ಒಮ್ಮೆ ತಿರುಗಿ ನೋಡಿ. ನಿಮಗೆ ಸಿಕ್ಕಿರುವ ಸ್ಥಾನ ಲಕ್ಷಾಂತರ ಮಂದಿಗೆ ಸಿಕ್ಕಿರುವುದಿಲ್ಲ ಎಂದು ಬುದ್ಧಿಮಾತು ಹೇಳಿದರು.

ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ. ಫಾಲಾಕ್ಷಿ ಪ್ರಾಸ್ತಾವಿಕವಾಗಿ ಮಾತನಾಡಿ, ‘ಶೇ 90ಕ್ಕೂ ಹೆಚ್ಚು ಅಂಕ ಗಳಿಸಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಇಂದು ಪ್ರತಿಭಾ ಪುರಸ್ಕಾರ ಮಾಡಲಾಗುತ್ತಿದೆ. ಸರ್ಕಾರಿ ನೌಕರರಿಗೆ ಸರಿಯಾದ ಸಮಯದಲ್ಲಿ ಸೌಲಭ್ಯಗಳು ಸಿಕ್ಕಾಗ ಜನರಿಗೆ ಸೇವೆ ಸಲ್ಲಿಸಲು ಸಾಧ್ಯ’ ಎಂದರು.

ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪೂರೆ, ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಡಾ. ಎಸ್. ರಂಗನಾಥ್, ಜಿಲ್ಲಾ ಕಾರ್ಯದರ್ಶಿ ಸಿ. ಗುರುಮೂರ್ತಿ, ಖಜಾಂಚಿ ಬಿ.ಆರ್. ತಿಪ್ಪೇಸ್ವಾಮಿ, ಗೌರವಾಧ್ಯಕ್ಷ ಡಾ. ಡಿ. ಉಮೇಶ್, ವಿವಿಧ ತಾಲ್ಲೂಕುಗಳ ಬಿ. ಕುಮಾರ್,ಜಿ.ಬಿ. ವಿಜಯ್ ಕುಮಾರ್, ಎಂ.ಕೆ. ಶಶಿಧರ, ಬಿ.ಆರ್. ಚಂದ್ರಪ್ಪ, ಎ.ಕೆ. ಭೂಮೇಶ್, ನಾಮನಿರ್ದೇಶಿತ ನಿರ್ದೇಶಕರಾದ ಆರ್. ತಿಪ್ಪೇಸ್ವಾಮಿ, ಶರತ್ ಚಂದ್ರ ಹೆಗಡೆ, ನಟಿಯರಾದ ಮೇಘಾ ಶೆಟ್ಟಿ, ರಚನಾ, ನಿರ್ದೇಶಕ ಮಹೇಶ್ ಗೌಡ ಮತ್ತಿತರರು ಇದ್ದರು.

ನ್ಯಾ. ಹೆಗ್ಡೆ ಅಫಿಡವಿಟ್‌

* ಒಂದು ಫ್ಲಾಟ್‌ ಬಿಟ್ಟರೆ ಜಗತ್ತಿನಲ್ಲಿ ನನಗೆ ಬೇರೆ ಆಸ್ತಿ ಎಲ್ಲಿಯೂ ಇಲ್ಲ.

* ಲೋಕಾಯುಕ್ತ ವೆಬ್‌ಸೈಟ್‌ನಲ್ಲಿ ತನ್ನ ಆಸ್ತಿ ಘೋಷಣೆ ಮಾಡಿದ ಏಕೈಕ ಲೋಕಾಯುಕ್ತ ನಾನು.

* ಸನ್ಮಾನ ಮಾಡುವಾಗ ನೀಡಿರುವ ಹಣವನ್ನು ವಾಪಸ್‌ ನೀಡಿದ್ದೇನೆ. ಒಂದು ಸಂಸ್ಥೆ ₹ 1 ಕೋಟಿ ನೀಡಿದ್ದನ್ನು ಯೋಧರಿಗೆ ಕೊಟ್ಟಿದ್ದೇನೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು