ಶುಕ್ರವಾರ, ಅಕ್ಟೋಬರ್ 22, 2021
30 °C
ಹಕ್ಕುಪತ್ರ ನೀಡದಿದ್ದರೆ ಹೋರಾಟ; ರೈತರ ಎಚ್ಚರಿಕೆ

ಭೂಮಿ ಹಕ್ಕಿಗಾಗಿ ತಪ್ಪದ ಅಲೆದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಶ್ವನಾಥ ಡಿ.

ಹರಪನಹಳ್ಳಿ: ತಾಲ್ಲೂಕಿನ ಅರಣ್ಯ ಭೂಮಿಯಲ್ಲಿ ಉಳುಮೆ ಮಾಡಿರುವ ಸಾವಿರಾರು ರೈತರು ಬಗರ್‌ಹುಕುಂ ಭೂಮಿ ಸಕ್ರಮಕ್ಕಾಗಿ ಅರ್ಜಿ ಸಲ್ಲಿಸಿ ಹಕ್ಕು ಪತ್ರಕ್ಕಾಗಿ ನಿತ್ಯವೂ ಅಲೆದಾಡುತ್ತಿದ್ದಾರೆ.

ಸರ್ಕಾರದ ಬಗರ್‌ಹುಕುಂ ಭೂಮಿ ಸಕ್ರಮೀಕರಣ ಯೋಜನೆ ಅಡಿ 2018-19ರಲ್ಲಿ ಫಾರಂ 57ರ ಅಡಿ ಒಟ್ಟು 9,372 ಅರ್ಜಿಗಳು ಸ್ವೀಕೃತಿಗೊಂಡಿವೆ. ಇದರಲ್ಲಿ ಅರಣ್ಯ ಭೂಮಿಯಲ್ಲಿ ಉಳುಮೆ ಮಾಡಿರುವವರಿಗೆ ನಿಯಮಾನುಸಾರ ಹಕ್ಕುಪತ್ರ ವಿತರಣೆಗೆ ಅವಕಾಶವಿಲ್ಲ. ಅಂತಹ 4 ಸಾವಿರಕ್ಕೂ ಅಧಿಕ ಅರ್ಜಿಗಳನ್ನು ಗುರುತಿಸಿದ್ದು, ಪರಿಶೀಲನೆ ಬಳಿಕ ತಿರಸ್ಕೃತವಾಗುತ್ತವೆ ಎಂದು ತಹಶೀಲ್ದಾರ್ ಎಲ್.ಎಂ.ನಂದೀಶ್ ತಿಳಿಸಿದರು.

ಪಟ್ಟಣದಿಂದ 5 ಕಿ.ಮೀ. ವ್ಯಾಪ್ತಿಯೊಳಗೆ ಅರ್ಜಿ ಸಲ್ಲಿಸಿರುವವರಿಗೂ ಹಕ್ಕುಪತ್ರ ವಿತರಿಸಲು ಸಾಧ್ಯವಿಲ್ಲ. ಅಂತಹ 982 ಅರ್ಜಿಗಳಿದ್ದು, ಪರಿಶೀಲಿಸಲಾಗುತ್ತಿದೆ. ಬಗರ್‌ಹುಕುಂ ಸಮಿತಿ ಅಧ್ಯಕ್ಷರಾಗಿರುವ ಶಾಸಕ ಜಿ. ಕರುಣಾಕರ ರೆಡ್ಡಿ ಅವರ ಅಧ್ಯಕ್ಷತೆಯಲ್ಲಿ ಶೀಘ್ರ ಸಭೆ ನಡೆಸಿ ಹಕ್ಕುಪತ್ರ ವಿತರಣೆ ಸಂಬಂಧ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.

ಈ ಹಿಂದೆ ಫಾರಂ 50 ಮತ್ತು ಫಾರಂ 53 ಅಡಿ ಸಲ್ಲಿಕೆಯಾಗಿದ್ದ ಅರ್ಜಿಗಳ ಪೈಕಿ 1,600 ಫಲಾನುಭವಿಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಕೆಲವು ಪರಿಶೀಲನೆ ಹಂತದಲ್ಲಿವೆ ಎಂದು ಕಂದಾಯ ಇಲಾಖೆ ಮೂಲಗಳು ತಿಳಿಸಿವೆ.

120 ಎಕರೆ ಅರಣ್ಯ ಭೂಮಿ ವಶ: 

ನಾರಾಯಣಪುರ ಸರ್ವೆ ನಂಬರ್ 1ರಲ್ಲಿ ಅರಣ್ಯ ಇಲಾಖೆಗೆ ಸೇರಿದ್ದ 120 ಎಕರೆ ಭೂಮಿಯಲ್ಲಿ ರೈತರು ಉಳುಮೆಗೆ ಸಿದ್ಧತೆ ನಡೆಸಿದ್ದರು. ಅರಣ್ಯ ಇಲಾಖೆಯು ಕಂದಾಯ ಅಧಿಕಾರಿಗಳು ಮತ್ತು ಪೊಲೀಸ್ ರಕ್ಷಣೆ ಪಡೆದು ಭೂಮಿಯನ್ನು ವಶಪಡಿಸಿಕೊಂಡು ಅರಣ್ಯ
ಸಸಿಗಳನ್ನು ನೆಟ್ಟಿದೆ.

ಸರ್ಕಾರದ ಅರಣ್ಯ, ಹಳ್ಳ ಪರಂಪೋಕು, ಹುಲ್ಲುಗಾವಲು, ಈಚಲುವನ ಸೇರಿ ರೈತರು, ದಲಿತರು ಹೆಚ್ಚಿನ ಸಂಖ್ಯೆಯಲ್ಲಿ ಉಳುಮೆ ಮಾಡಿದ್ದು, ಹಕ್ಕುಪತ್ರಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ. ಅರಣ್ಯ ಹಕ್ಕು ಮಾನ್ಯತಾ ಕಾಯ್ದೆ ಅಡಿ ಹಕ್ಕುಪತ್ರ ನೀಡಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದು ದಲಿತ ಹಕ್ಕುಗಳ ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಭರಮಪ್ಪ ಎಚ್ಚರಿಸಿದ್ದಾರೆ.

ಕೋಟ್‌...

ಹುಲಿಕಟ್ಟೆ, ಹಾರಕನಾಳು ಭಾಗದ ವ್ಯಾಪ್ತಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೃಷಿ ಕಾರ್ಮಿಕರು ಸರ್ಕಾರದ ಭೂಮಿ ಉಳುಮೆ ಮಾಡಿದ್ದಾರೆ. ಭೂಮಾಪನ ಇಲಾಖೆ ಸರ್ವೆ ಮಾಡಿದ್ದು ಹಕ್ಕುಪತ್ರ ನೀಡಲು ಮುಂದಾಗಬೇಕು.

ರಹಮತ್ ಹುಲಿಕಟ್ಟೆ, ಕಾರ್ಮಿಕ ಮುಖಂಡ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು