ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಯಕ ಸಮಾಜದಲ್ಲಿ ನಾಯಕತ್ವ ಬೆಳೆಯಲಿ: ಶಾಸಕ ರವೀಂದ್ರನಾಥ್‌

ಪ್ರತಿಭಾ ಪುರಸ್ಕಾರ, ಸನ್ಮಾನ ಸಮಾರಂಭ
Last Updated 8 ಸೆಪ್ಟೆಂಬರ್ 2018, 11:37 IST
ಅಕ್ಷರ ಗಾತ್ರ

ದಾವಣಗೆರೆ: ಮುಖಂಡರು ಒಗ್ಗಟ್ಟಾಗಿ ಕೆಲಸ ಮಾಡಿದರೆ ಸಮಾಜದ ಸಂಘಟನೆ ಗಟ್ಟಿಯಾಗುತ್ತದೆ. ಇದರಿಂದ ನಾಯಕ ಸಮಾಜದಲ್ಲಿ ನಾಯಕತ್ವ ಬೆಳೆಯುತ್ತದೆ ಎಂದು ಶಾಸಕ ಎಸ್.ಎ. ರವೀಂದ್ರನಾಥ್‌ ಹೇಳಿದರು.

ನಗರದ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ಕರ್ನಾಟಕ ರಾಜ್ಯ ಪರಿಶಿಷ್ಟ ಪಂಗಡಗಳ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಲ್‌.ಜಿ. ಹಾವನೂರು ಅವರಂಥ ಮುಖಂಡರು ನಾಯಕ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ನಾಯಕ ಸಮಾಜವನ್ನು ಪರಿಶಿಷ್ಟ ಪಂಗಡ ಗುಂಪಿಗೆ ಸೇರಿಸಲು ನಡೆದ ಹೋರಾಟದಲ್ಲಿ ಅವರು ಮುಂಚೂಣಿಯಲ್ಲಿದ್ದರು. ಅವರಂಥ ನಾಯಕರು ಬೆಳೆಯಬೇಕು ಎಂದರು.

ಎಲ್‌.ಜಿ. ಹಾವನೂರು ಅವರ ಭಾವಚಿತ್ರ ಅನಾವರಣಗೊಳಿಸಿದ ನಾಯಕ ವಿದ್ಯಾರ್ಥಿ ನಿಲಯದ ಅಧ್ಯಕ್ಷ ಎಚ್.ಕೆ. ರಾಮಚಂದ್ರಪ್ಪ, ‘ನಾಯಕ ಸಮಾಜ ಯಾವುದರಲ್ಲೂ ಕಡಿಮೆಯಿಲ್ಲ. ಪುರೋಹಿತಶಾಹಿಗಳನ್ನೂ ಮೀರಿಸುವಷ್ಟು ಪ್ರತಿಭೆ ನಮ್ಮ ಸಮಾಜದ ಮಕ್ಕಳಲ್ಲೂ ಇದೆ. ನಮ್ಮ ಸಾಮರ್ಥ್ಯದ ಬಗ್ಗೆ ಹೆಮ್ಮೆ ಪಡೋಣ. ಓದುವುದರಲ್ಲೂ ನಾಯಕ ಸಮಾಜ ಮುಂದೆ ಬರುತ್ತಿದೆ. ಆದರೆ, ಶಿಕ್ಷಣ ಪಡೆದವರಿಗೆ ಕೆಲಸ ಸಿಗುತ್ತಿಲ್ಲ. ಹೀಗಾಗಿ, ಸರ್ಕಾರ ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ 7.5ಕ್ಕೆ ಹೆಚ್ಚಿಸಬೇಕು’ ಎಂದು ಆಗ್ರಹಿಸಿದರು.

ನಾಯಕ ಸಮಾಜದ ಜನಸಂಖ್ಯೆಗೆ ಅನುಗುಣವಾಗಿ ಉದ್ಯೋಗಾವಕಾಶಗಳು ಸಿಗುತ್ತಿಲ್ಲ. ಡಿ–ದರ್ಜೆ ಉದ್ಯೋಗಗಳು ಮಾತ್ರ ಭರ್ತಿಯಾಗಿವೆ. ಆದರೆ, ಸಿ–ದರ್ಜೆ ಮತ್ತು ಅದಕ್ಕೂ ಮೇಲ್ದರ್ಜೆ ಉದ್ಯೋಗಗಳ ಬ್ಯಾಕ್‌ಲಾಗ್‌ ಹುದ್ದೆಗಳನ್ನು ಭರ್ತಿ ಮಾಡಲಾಗಿಲ್ಲ. ಇದರಿಂದ ನಾಯಕ ಸಮಾಜದವರು ಉದ್ಯೋಗ ವಂಚಿತರಾಗುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಒಡಕು ಮೂಡಿಸುವವರ ವಿರುದ್ಧ ಹೋರಾಡೋಣ

ಒಳ ಮೀಸಲಾತಿ ಹೆಸರಿನಲ್ಲಿ ಪರಿಶಿಷ ಸಮುದಾಯಗಳ ನಡುವೆ ಒಡಕು ಮೂಡಿಸುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ. ಈ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸಿ, ಹೋರಾಟ ನಡೆಸಬೇಕಿದೆ ಎಂದು ರಾಮಚಂದ್ರಪ್ಪ ಕರೆ ನೀಡಿದರು.

ಸಂಘದ ಸಂಘಟನಾ ಕಾರ್ಯದರ್ಶಿ ಶಂಕರ್‌ ಜಾಲಿಹಾಳ್‌ ಮಾತನಾಡಿ, ‘ಬಡ್ತಿ ಮೀಸಲಾತಿಯನ್ನು ಕೂಡಲೇ ಅನುಷ್ಠಾನಕ್ಕೆ ತರಬೇಕು. ಬಡ್ತಿ ಮೀಸಲಾತಿ ರದ್ದುಪಡಿಸುವ ಕ್ರಮದಿಂದ ಅನ್ಯಾಯಕ್ಕೆ ಒಳಗಾಗಿರುವವರಿಗೆ ನ್ಯಾಯ ದೊರಕಿಸಿಕೊಡಬೇಕು’ ಎಂದು ಆಗ್ರಹಿಸಿದರು.

ಹರಿಹರದ ಎಸ್‌.ಜೆ.ವಿ.ಪಿ. ಕಾಲೇಜಿನ ಉಪನ್ಯಾಸಕ ಎ.ಬಿ. ರಾಮಚಂದ್ರಪ್ಪ ಉಪನ್ಯಾಸ ನೀಡಿದರು.

ಕಾರ್ಯಕ್ರಮದಲ್ಲಿ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು.

ಸಮಾಜದ ಮುಖಂಡ ಟಿ. ದಾಸಕರಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಘದ ರಾಜ್ಯ ಅಧ್ಯಕ್ಷ ಎ.ಸಿ. ತಿಪ್ಪೇಸ್ವಾಮಿ, ಪ್ರಧಾನ ಕಾರ್ಯದರ್ಶಿ ರಾಜಶೇಖರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ. ರಾಮಚಂದ್ರಪ್ಪ ಹಂಚಿನಮನೆ, ಜೆಡಿಎಸ್‌ ಎಸ್‌ಟಿ ಘಟಕದ ರಾಜ್ಯ ಅಧ್ಯಕ್ಷ ಹೊದಿಗೆರೆ ರಮೇಶ್‌, ಜಿಲ್ಲಾ ಪಂಚಾಯಿತಿ ಅರಸೀಕೆರೆ ಕ್ಷೇತ್ರದ ಸದಸ್ಯೆ ವೈ. ಸುಶೀಲಮ್ಮ ದೇವೇಂದ್ರಪ್ಪ, ಮುಖಂಡರಾದ ಪ್ರವೀಣ್‌ ಹುಲ್ಲುಮನೆ, ಸಿ.ವಿ. ತಾರಾ, ಜಿ. ರಂಗನಾಥ, ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹಾಲೇಶಪ್ಪ, ಸಿಪಿಐ ಉಮೇಶ್, ನಟ ಅಂಜನ್‌, ಸಂತೋಷ್‌ ದೊಡ್ಡಮನಿ ಅವರೂ ಇದ್ದರು.

‘ಹೆಸರು ಸಂಪಾದಿಸಿ’

‘ನನ್ನ ವಿರುದ್ಧ ನಾಯಕ ಸಮಾಜದ ಹೂವಿನಮಡು ಚಂದ್ರಪ್ಪ, ಶೇಖರಪ್ಪ, ಉಚ್ಚಂಗೆಪ್ಪ ಚುನಾವಣೆಗೆ ಸ್ಪರ್ಧಿಸಿದ್ದರು. ನಾಯಕ ಸಮಾಜದವರು ಒರಟು ಸ್ವಭಾವದರು ಎಂಬ ಭಾವನೆಯಿಂದಾಗಿ ಅವರಿಗೆ ಸೋಲಾಯಿತು. ನಾಯಕ ಸಮಾಜದವರು ಒಳ್ಳೆಯ ಹೆಸರು ಸಂಪಾದಿಸಲಿ’ ಎಂದು ಶಾಸಕ ಎಸ್.ಎ. ರವೀಂದ್ರನಾಥ್‌ ಹೇಳಿದರು.

‘ಕಳೆದ ಚುನಾವಣೆಯಲ್ಲಿ ನಾಯಕ ಸಮಾಜದವರು ನನಗೆ ಬೆಂಬಲ ನೀಡಿದರು. ಸಮಾಜಕ್ಕೆ ಅಭಿನಂದನೆ ಸಲ್ಲಿಸುವೆ’ ಎಂದು ಅವರು, ‘ಹಾವನೂರು ಅವರೊಂದಿಗೆ ಒಂದು ದಿನ ಕಳೆದಿದ್ದೆ. ಅವರ ಪ್ರತಿಭೆ, ಬುದ್ಧಿವಂತಿಕೆ ಸೆಳೆಯುವಂತಹದ್ದು’ ಎಂದು ನೆನಪು ಮಾಡಿಕೊಂಡರು.

‘ನಾನೇ ಹೆಚ್ಚು ಮತ ಪಡೆದಿದ್ದೆ’

‘ಎಸ್‌.ಎ. ರವೀಂದ್ರನಾಥ್‌ ವಿರುದ್ಧ ವಿಧಾನಸಭೆ ಚುನಾವಣೆಯಲ್ಲಿ ನಾನೇ ಹೆಚ್ಚು ಮತ ಪಡೆದಿದ್ದೆ’ ಎಂದು ಎಚ್‌.ಕೆ. ರಾಮಚಂದ್ರಪ್ಪ ತಿರುಗೇಟು ನೀಡಿದರು.

‘ಮಾಯಕೊಂಡ ಕ್ಷೇತ್ರದಲ್ಲಿ ನಡೆದ ಚುನಾವಣೆಯೊಂದರಲ್ಲಿ ರವೀಂದ್ರನಾಥ್‌ 3,500 ಮತಗಳನ್ನು ಪಡೆದಿದ್ದರು. ನಾನು 12,500 ಮತಗಳನ್ನು ಪಡೆದಿದ್ದೆ. ಆನಂತರ ನನಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಆಗಲಿಲ್ಲ. ಅವರು ಮೂರು ಬಾರಿ ಗೆದ್ದರು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT