ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾನ್ಯ ನರೇಂದ್ರ ಅಸಾಮಾನ್ಯ ವಿವೇಕಾನಂದ ಆಗಿದ್ದನ್ನು ತಿಳಿಯಿರಿ

ಸ್ವಾಮಿ ವಿವೇಕಾನಂದರ 158ನೇ ಜಯಂತಿ ಕಾರ್ಯಕ್ರಮದಲ್ಲಿ ದಿನೇಶ್‌ ಅಮಿನ್‌ ಮಟ್ಟು
Last Updated 12 ಜನವರಿ 2021, 14:29 IST
ಅಕ್ಷರ ಗಾತ್ರ

ದಾವಣಗೆರೆ: ಸಾಮಾನ್ಯ ಮನುಷ್ಯನೊಬ್ಬ ಅಸಾಮಾನ್ಯನಾಗಿ ಪರಿವರ್ತನೆಗೊಳ್ಳಲು ಸಾಧ್ಯ. ಆದರೆ ಅಂಥವರನ್ನು ದೇವರು ಮಾಡುವ ಮಾಡುವ ಮೂಲಕ ಮನುಷ್ಯನ ಅನಂತ ಸಾಧ್ಯತೆಗಳನ್ನು ನಿರಾಕರಿಸಲಾಗುತ್ತದೆ. ಬಡತನ, ಹಸಿವು, ಅವಮಾನ, ನಿರ್ಲಕ್ಷ್ಯವನ್ನು ಅನುಭವಿಸಿದ್ದ ನರೇಂದ್ರ ಎಂಬ ಸಾಮಾನ್ಯ ಮನುಷ್ಯ ಆಮೇಲೆ ಸ್ವಾಮಿ ವಿವೇಕಾನಂದರಾಗಿ ಹೇಗೆ ಅಸಾಮಾನ್ಯರಾದರು ಎಂಬುದನ್ನು ತಿಳಿದುಕೊಂಡರೆ ಅದೇ ಸ್ಫೂರ್ತಿಯಾಗುತ್ತದೆ ಎಂದು ಹಿರಿಯ ಪತ್ರಕರ್ತ ದಿನೇಶ್‌ ಅಮಿನ್‌ ಮಟ್ಟು ಹೇಳಿದರು.

ಎನ್‌ಎಸ್‌ಯುಐ ಜಿಲ್ಲಾ ಘಟಕ, ಎ.ವಿ.ಕೆ. ಮಹಿಳಾ ಮಹಾ ವಿದ್ಯಾಲಯದ ವತಿಯಿಂದ ಎವಿಕೆ ಕಾಲೇಜಿನಲ್ಲಿ ಮಂಗಳವಾರ ನಡೆದ ಸ್ವಾಮಿ ವಿವೇಕಾನಂದರ 158ನೇ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ನಾವು ವರ್ಣಿಸುವ ರೀತಿಯಲ್ಲಿ ಬಲಿಷ್ಠ ಬಾಹುಗಳ ಸದೃಢ ದೇಹದ ಸ್ವಾಮಿ ವಿವೇಕಾನಂದರು ಇರಲಿಲ್ಲ. ಅವರು ಮುಂಡಾಸು ಇಟ್ಟು, ಕೈಕಟ್ಟಿ ನೋಡುತ್ತಿರುವ ಚಿತ್ರ ಅದು ಅಮೆರಿಕದಲ್ಲಿ ಸ್ಟುಡಿಯೊದಲ್ಲಿ ತೆಗೆದ ಫೋಟೊ. 30 ವರ್ಷದ ನಂತರದ ವಿವೇಕಾನಂದರನ್ನು ನೋಡಿದರೆ ಅವರು ನಲುಗಿ ಹೋಗಿದ್ದರು. ನಮಗೆ ಅವರ ಅಂಗಸೌಷ್ಠವ ಮುಖ್ಯವಾಗಬಾರದು. ಅವರ ಚಿಂತನೆಗಳು, ಅವರ ಬದುಕು ಮುಖ್ಯವಾಗಬೇಕು ಎಂದರು.

ವಿವೇಕಾನಂದರ ತಂದೆ ವಿಶ್ವನಾಥ ದತ್ತ ಶ್ರೀಮಂತ ವಕೀಲರಾಗಿದ್ದರೂ ಅವರು ಹಠಾತ್‌ ನಿಧನರಾಗಿದ್ದರಿಂದ ಒಮ್ಮೆಲೆ ಸಂಕಷ್ಟಗಳು ಎದುರಾದವರು. ಆಸ್ತಿ ವ್ಯಾಜ್ಯದಲ್ಲಿ ತಾಯಿ ಮಕ್ಕಳನ್ನು ಬೀದಿಗೆ ಹಾಕಲಾಗಿತ್ತು. ಊಟ ಬಿಡಿ, ಊಟ ಮಾಡುವ ತಟ್ಟೆ ಕೂಡ ಅವರಲ್ಲಿ ಇರಲಿಲ್ಲ. 10 ಮಕ್ಕಳಲ್ಲಿ ನಾಲ್ಕನೇಯವರಾಗಿದ್ದ ನರೇಂದ್ರದತ್ತ ಅವರು ಹಲವು ಬಾರಿ ಹೊರಗೆ ಹೋಗಿ ಬಂದು ಊಟ ಮಾಡಿದೆ ಎಂದು ಸುಳ್ಳು ಹೇಳುತ್ತಿದ್ದರು. ಇವೆಲ್ಲವು ಮುಂದೆ ಅನಾರೋಗ್ಯಕ್ಕೆ ಕಾರಣವಾಯಿತು. ಅವರು ಕಲಿಕೆಯಲ್ಲಿ ಭಾರಿ ಬುದ್ಧಿವಂತನಲ್ಲ. ಪಾಠ ಮಾಡಲು ಶಿಕ್ಷಕನಾಗಿ ಸೇರಿದಾಗಲೂ ಸರಿಯಾಗಿ ಪಾಠ ಮಾಡಲು ಬರುವುದಿಲ್ಲ ಎಂದು ಈಶ್ವರಚಂದ್ರ ವಿದ್ಯಾಸಾಗರ ಅವರ ವಿದ್ಯಾಸಂಸ್ಥೆಯಿಂದ ಹೊರ ಹಾಕಲಾಗಿತ್ತು. ಹೀಗೆ ಎಲ್ಲ ಅವಮಾನಗಳನ್ನು ಸಹಿಸಿಕೊಂಡು ಬೆಳೆದರು ಎಂದು ವಿವರಿಸಿದರು.

ಇಲ್ಲಿನ ಬಡವರಿಗೆ ಸಹಾಯ ಮಾಡಲು ಏನಾದರೂ ಮಾಡಬೇಕು ಎಂದು ಭಿಕ್ಷೆ ಬೇಡಿ ಹಣ ಸಂಗ್ರಹಿಸಿ ಅಮೆರಿಕಕ್ಕೆ ಮೊದಲ ಬಾರಿಗೆ ಹೋಗಿದ್ದರೇ ಹೊರತರು ಧರ್ಮ ಪ್ರಸಾರಕ್ಕಾಗಿ ಅಲ್ಲ. ಆದರೆ ಅಲ್ಲಿ ಧರ್ಮಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಿದ್ದರಿಂದ ಧರ್ಮ ಪ್ರಚಾರಕರಾದರು ಎಂದು ನೆನಪಿಸಿಕೊಂಡರು.

ಸನ್ಯಾಸಿಯಾಗಿ ಅಧ್ಯಾತ್ಮದ ಚಿಂತನೆಕ್ಕಿಂತ ಸಮಾಜದ ಬಗ್ಗೆ ಯೋಚನೆ ಮಾಡಿ ಸಮಾಜ ಸುಧಾರಕರಾದರು. ಅವರನ್ನು ಸೈದ್ಧಾಂತಿಕವಾಗಿ ವಿರೋಧಿಸಲಾಗದೇ ಅವರನ್ನು ಅಪೋಷನ ಮಾಡಿಕೊಂಡಿದ್ದಾರೆ. ಆದರೆ ಅವರು ಹೇಳಿದ ತತ್ವಗಳನ್ನು ಚಿಂತನೆಗಳನ್ನು ತಿಳಿಸದೇ ಬಚ್ಚಿಡಲಾಗುತ್ತಿದೆ. ವಿವೇಕಾನಂದರ ಚಿಂತನೆಗಳ ಕೃತಿಗಳನ್ನು ಓದುವ ಮೂಲಕ ಸತ್ಯ ತಿಳಿದುಕೊಳ್ಳಬೇಕು ಎಂದು ಸಲಹೆ ನೀಡಿದರು.

ಬದುಕಿನಲ್ಲಿ ಭದ್ರತೆ ಇರುವವರು ಮಹಾನ್‌ ಸಾಧಕರಾದುದು ಕಡಿಮೆ. ಅಭದ್ರತೆ ಇರುವವರೇ ಬೆಳೆದಿರುವುದನ್ನು ಇತಿಹಾಸದಲ್ಲಿ ಕಾಣಬಹುದು. ಅಂಬೇಡ್ಕರ್‌, ವಿವೇಕಾನಂದರ ಸಹಿತ ಅನೇಕರು ಇದಕ್ಕೆ ಉದಾಹರಣೆ ಎಂದರು.

ಹಿಂದೂ ಧರ್ಮದ ಪುನರುತ್ಥಾನ ಬಯಸುವವರೆಲ್ಲರೂ ಈ ಧರ್ಮದ ಹುಳುಕುಗಳನ್ನು ಗುರುತಿಸಿದ್ದಾರೆ. ಕೊಳೆಯನ್ನು ತೊಳೆಯಲು ಪ್ರಯತ್ನಿಸಿದ್ದಾರೆ. ಬಸವಣ್ಣ, ನಾರಾಯಣಗುರು, ವಿವೇಕಾನಂದರು ಅದೇ ಕೆಲಸವನ್ನು ಮಾಡಿದ್ದರು. ಅವರು ಹೇಳಿದ ರೀತಿಯ ಧರ್ಮ ನೆಲೆಗೊಂಡಿದ್ದರೆ ಹಿಂದೂ ಧರ್ಮ ಭಾರತ, ನೇಪಾಳಕ್ಕೆ ಸೀಮಿತಗೊಳ್ಳದೇ ವಿಶ್ವದಾದ್ಯಂತ ಪಸರಿಸುತ್ತಿತ್ತು ಎಂದರು.

ಕಾಲೇಜು ಪ್ರಿನ್ಸಿಪಾಲ್‌ ಡಾ. ಬಿ.ಪಿ. ಕುಮಾರ್‌ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಎ.ಬಿ. ಶಿವನಗೌಡ, ಕೆಪಿಸಿಸಿ ವಕ್ತಾರ ಡಿ. ಬಸವರಾಜ್‌, ಪಾಲಿಕೆ ಸದಸ್ಯ ಕೆ. ಚಮನ್‌ಸಾಬ್‌, ಹೋರಾಟಗಾರ ಅನಂತ ನಾಯ್ಕ್‌, ಕಾರ್ಯಕ್ರಮದ ಸಂಘಟಕ ರವಿ ಕುಮಾರ್‌ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT