ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಸೇವಾ ಪ್ರಾಧಿಕಾರದಿಂದ ಕಾನೂನು ಅರಿವು, ನೆರವು ಸಿಗಲಿದೆ: ಟಿ.ಎಂ. ನಿವೇದಿತಾ

Last Updated 16 ನವೆಂಬರ್ 2021, 6:09 IST
ಅಕ್ಷರ ಗಾತ್ರ

ಸಂತೇಬೆನ್ನೂರು: ‘ಸರ್ವರಿಗೂ ಕಾನೂನು ಅರಿವು ಹಾಗೂ ನೆರವನ್ನು ನೀಡುವುದು ಮುಖ್ಯ ಕಾನೂನು ಸೇವಾ ಪ್ರಾಧಿಕಾರದ ಉದ್ದೇಶ. ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ತಾಲ್ಲೂಕಿನ ಹಲವು ಗ್ರಾಮ ಹಾಗೂ ಶಾಲೆಗಳಲ್ಲಿ ಕಾನೂನು ಅರಿವು ಕಾರ್ಯಕ್ರಮ ಯಶಸ್ವಿಯಾಗಿ ನಡೆಸಿದ್ದೇವೆ’ ಎಂದು ಸಿವಿಲ್ ಹಾಗೂ ಜೆಎಂಎಫ್‌ಸಿ ನ್ಯಾಯಧೀಶರಾದ ಟಿ.ಎಂ. ನಿವೇದಿತಾ ಹರ್ಷ ವ್ಯಕ್ತಪಡಿಸಿದರು.

ಇಲ್ಲಿನ ಎಸ್‌ಎಸ್‌ ಜೆವಿಪಿ ಕರ್ನಾಟಕ ಪಬ್ಲಿಕ್ ಸ್ಕೂಲ್‌ನಲ್ಲಿ ಸೋಮವಾರ ತಾಲ್ಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಸರ್ಕಾರಿ ಇಲಾಖೆಗಳ ಆಶ್ರಯದಲ್ಲಿ ನಡೆದ ಆಜಾದ್ ಕಾ ಅಮೃತ್ ಮಹೋತ್ಸವ ಕಾನೂನು ಅರಿವು ಕಾರ್ಯಕ್ರಮದ ಸಮಾರೋಪಲ್ಲಿ ಅವರು ಮಾತನಾಡಿದರು.

ಮಕ್ಕಳ ಹಕ್ಕುಗಳ, ಕಾನೂನು ಬಾಹಿರ ಚಟುವಟಿಕೆ ಬಗ್ಗೆ ಪೊಲೀಸ್ ಠಾಣೆ ಹಾಗೂ ನ್ಯಾಯಾಲಯದಲ್ಲಿ ದೂರು ದಾಖಲಿಸಬಹುದು. ನ್ಯಾಯಾಲಯದ ಶುಲ್ಕ ಕಟ್ಟಲು ಆಗದಿದ್ದಲ್ಲಿ ಉಚಿತ ಕಾನೂನು ನೆರವು ನೀಡಲಾಗುವುದು. ಮಕ್ಕಳನ್ನು ಖಿನ್ನತೆಗೆ ಒಳಗಾಗದಂತೆ ಕಾಪಾಡಬೇಕು. ಪರೀಕ್ಷೆಯಲ್ಲಿ ಅಂಕಗಳು ಮುಖ್ಯ ಅಲ್ಲ. ಸಾಧನೆಗೆ ಛಲ ಇರಲಿ ಎಂದು ತಿಳಿಸಿದರು.

ಇಂದು 14 ಹಾಗೂ 15 ವರ್ಷದ ಮಕ್ಕಳು ಆರೋಪಿಗಳಾಗುತ್ತಿದ್ದಾರೆ. ಶಿಕ್ಷಕರ ವರ್ತನೆ ಬಗ್ಗೆ ಅರಿವು ಇರಲಿ. ಒಳ್ಳೆ ಸ್ಪರ್ಶ, ಕೆಟ್ಟ ಸ್ಪರ್ಶದ ಎಚ್ಚರಿಕೆ ಇರಲಿ. ಶಾಲೆ ಬಿಟ್ಟ ಮಕ್ಕಳ ಸಂಖ್ಯೆ ಹೆಚ್ಚುತ್ತಿದೆ. ನ.18 ರಂದು ಚನ್ನಗಿರಿಯಲ್ಲಿ ಲೋಕ ಅದಾಲತ್ ನಡೆಯಲಿದೆ ಎಂದು ಮಾಹಿತಿ ನೀಡಿದರು.

ವಕೀಲರ ಸಂಘದ ಅಧ್ಯಕ್ಷ ಬಿ.ರುದ್ರಪ್ಪ, ‘ಬಿಟ್ ಕಾಯಿನ್ ಹಗರಣ ಆರ್ಥಿಕ ವ್ಯವಸ್ಥೆಯನ್ನೆ ಅಲ್ಲಾಡಿಸಿದೆ. ಕಿಂಗ್ ಪಿನ್ ಶ್ರೀಕಿ ತನ್ನ ಬುದ್ಧಿವಂತಿಕೆಯನ್ನು ಅಪರಾಧ ಕೃತ್ಯದಲ್ಲಿ ಬಳಸಿದ್ದಾನೆ. ಜನಸಾಮಾನ್ಯರು ಮುಗ್ಧರು. ಕಾನೂನು ಅರಿವಿನಿಂದ ಸ್ವಾಭಿಮಾನ ವೃದ್ಧಿಸಿಕೊಳಿ. ನಮ್ಮ ದೇಶದ ಶ್ರೇಷ್ಠ ಗ್ರಂಥ ಸಂವಿಧಾನ’ ಎಂದು ಪ್ರತಿಪಾದಿಸಿದರು.

ಸಿಪಿಐ ಮಧು, ‘ಸರ್ಕಾರಿ ಶಾಲೆಯಲ್ಲಿ ಓದಿ. ಮೊಬೈಲ್ ಬಳಕೆ ಕಡಿಮೆ ಮಾಡಿ, ವಾಹನ ಚಾಲನೆ ಲೈಸನ್ಸ್, ವಿಮೆ ಕಡ್ಡಾಯವಾಗಿ ಮಾಡಿಸಲು ತಿಳಿಸಿ. ದುರಭ್ಯಾಸಗಳಿಂದ ದೂರವಿರಿ’ ಎಂದ ಸಲಹೆ ನೀಡಿದರು.

ಸಿಡಿಪಿಒ ಸದಾನಂದ, ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಮಂಜುನಾಥ್, ಎಸ್‌ಐ ಶಿವರುದ್ರಪ್ಪ ಮೇಟಿ. ವಕೀಲ ಎಸ್.ಆರ್. ರುದ್ರಪ್ಪ ಮಾತನಾಡಿದರು. ಪ್ರಧಾನ ಸಿವಿಲ್ ಹಾಗೂ ಜೆಎಂಎಫ್ ಸಿ ನ್ಯಾಯಾಧೀಶರಾದ ಎಂ.ಎಸ್.ಕನ್ನಿಕಾ, ಸಹಾಯಕ ಸರ್ಕಾರ ಅಭಿಯೋಜಕರಾದ ಸರಿತಾ, ಮಂಜುನಾಥ್, ವಕೀಲರ ಸಂಘದ ಉಪಾಧ್ಯಕ್ಷ ಸೋಮಶೇಖರಪ್ಪ, ಎಸ್‌ಡಿಎಂಸಿ ಉಪಾಧ್ಯಕ್ಷ ಬಿ.ಆರ್. ಸ್ವಾಮಿ, ಉಪಪ್ರಾಚಾರ್ಯ ಜಯಣ್ಣ, ವಕೀಲ ಮಹೇಂದ್ರ ಮೂರ್ತಿ ಇದ್ದರು.

ವಿದ್ಯಾರ್ಥಿಗಳಾದ ಮಾನಸ , ಸಂಜನಾ, ಸಂಗೀತಾ ಸಂವಿಧಾನದ ಬಗ್ಗೆ ಮಾತನಾಡಿದರು. ಫೈಜ್ನಟ್ರಾಜ್ ಪ್ರಾರ್ಥಿಸಿದರು. ಎ.ವಿ. ಮಲ್ಲಿಕಾರ್ಜುನ್ ಸ್ವಾಗತಿಸಿದರು. ಎಂ.ಬಿ.ನಾಗರಾಜ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT