ಶುಕ್ರವಾರ, ಸೆಪ್ಟೆಂಬರ್ 17, 2021
22 °C
ಮತ್ತೇ ಎದ್ದಿದೆ ಕೂಗು; ಬೆಂಗಳೂರಿನಲ್ಲಿ ಜಿಲ್ಲೆಯ ಶಾಸಕರ ಒಗ್ಗಟ್ಟು ಪ್ರದರ್ಶನ

ದಾವಣಗೆರೆ: ಜಿಲ್ಲೆಯವರಿಗೆ ಉಸ್ತುವಾರಿ ಪಟ್ಟ ಸಿಗಲಿ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಿಲ್ಲೆಯಲ್ಲಿ ಬಿಜೆಪಿಯಿಂದ ಗೆದ್ದಿರುವ ಐವರು ಶಾಸಕರು ಇದ್ದಾರೆ. ಹಾಗಾಗಿ ಜಿಲ್ಲೆಯವರೇ ಉಸ್ತುವಾರಿ ಸಚಿವರಾಗಬೇಕು ಎಂಬ ಕೂಗಿಗೆ ಮತ್ತೆ ಬಲ ಬಂದಿದೆ.

ದಾವಣಗೆರೆ ಉತ್ತರ ಶಾಸಕ, ಬಿಜೆಪಿಯ ಹಿರಿಯರಾದ ಎಸ್‌.ಎ. ರವೀಂದ್ರನಾಥ್‌, ಚನ್ನಗಿರಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ, ಹೊನ್ನಾಳಿ ಶಾಸಕ ಎಂ.ಪಿ. ರೇಣುಕಾಚಾರ್ಯ, ಜಗಳೂರು ಶಾಸಕ ಎಸ್‌.ವಿ. ರಾಮಚಂದ್ರ, ಮಾಯಕೊಂಡ ಶಾಸಕ ಪ್ರೊ.ಎನ್‌.ಲಿಂಗಣ್ಣ ಎಲ್ಲರೂ ಒಟ್ಟಾಗಿ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿ, ಸನ್ಮಾನಿಸಿ ಶುಭ ಹಾರೈಸಿದ್ದಾರೆ. ಜತೆಗೆ ಜಿಲ್ಲೆಯ ಯಾರನ್ನಾದರೂ ಸಚಿವರನ್ನಾಗಿ ಮಾಡಿ ಎಂದು ಬೇಡಿಕೆ ಇಟ್ಟಿದ್ದಾರೆ.

‘ನಮ್ಮ ಬೇಡಿಕೆಗೆ ಸಕಾರಾತ್ಮಕವಾಗಿ ಮುಖ್ಯಮಂತ್ರಿ ಪ್ರತಿಕ್ರಿಯಿಸಿದ್ದಾರೆ. ನಮ್ಮ ಐವರಲ್ಲಿ ಯಾರನ್ನೂ ಮಾಡಿದರೂ ಸಂತೋಷ’ ಎಂದು ಬಳಿಕ ಸುದ್ದಿಗಾರರಿಗೆ ಶಾಸಕರ ದಂಡು ಪ್ರತಿಕ್ರಿಯಿಸಿದೆ.

ಶಾಮನೂರು ಶಿವಶಂಕರಪ್ಪ, ಬಳಿಕ ಎಸ್‌.ಎಸ್‌. ಮಲ್ಲಿಕಾರ್ಜುನ ಅವರು 2013ರಿಂದ 18ರವರೆಗೆ ತೋಟಗಾರಿಕಾ ಸಚಿವರಾಗಿದ್ದರು. ಸಹಜವಾಗಿಯೇ ಜಿಲ್ಲಾ ಉಸ್ತುವಾರಿ ಸಚಿವರಾದರು. 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರ ಹೋಗಿ ಜೆಡಿಎಸ್‌–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಶಾಮನೂರು ಶಿವಶಂಕರಪ್ಪ ಮತ್ತು ಎಸ್‌.ರಾಮಪ್ಪ ಕಾಂಗ್ರೆಸ್‌ನಿಂದ ಗೆದ್ದಿದ್ದರು. ಆದರೆ ಯಾರಿಗೂ ಸಚಿವ ಸ್ಥಾನ ಸಿಕ್ಕಿರಲಿಲ್ಲ. ತುಮಕೂರು ಜಿಲ್ಲೆಯ ಗುಬ್ಬಿ ಕ್ಷೇತ್ರದಿಂದ ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ಎಸ್‌.ಆರ್‌. ಶ್ರೀನಿವಾಸ್‌ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರು.

2018ರ ಆಗಸ್ಟ್‌ 1ರಿಂದ 13 ತಿಂಗಳು ಉಸ್ತುವಾರಿ ಸಚಿವರಾಗಿ ದ್ದರೂ ಜಿಲ್ಲೆಗೆ ಅಪರೂಪದ ಅತಿಥಿ ಯಾಗಿದ್ದರು. ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವಕ್ಕಷ್ಟೇ ಹಾಜರಾ ಗುತ್ತಾರೆ ಎಂಬ ಆರೋಪ ಕೇಳಿಬಂದಿತ್ತು. ಬಳಿಕ ಸಮ್ಮಿಶ್ರ ಸರ್ಕಾರ ಬಿದ್ದು ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂತು. 2019ರ ಸೆಪ್ಟೆಂಬರ್‌ 16ರಿಂದ 2020ರ ಏಪ್ರಿಲ್‌ 8ರವರೆಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಉಸ್ತುವಾರಿ ಸಚಿವರಾದರು. ಶಿವಮೊಗ್ಗಕ್ಕೂ ಅವರೇ ಉಸ್ತುವಾರಿ ಆಗಿದ್ದರಿಂದ ದಾವಣಗೆರೆ ಕಡೆಗೆ ನಿರಂತರ ಬರಲು ಅವರಿಂದಲೂ ಆಗಿರಲಿಲ್ಲ. ‘ಈಶ್ವರಪ್ಪ ಎಲ್ಲಿದ್ದೀಯಪ್ಪ’ ಎಂದು ಜಿಲ್ಲೆಯಲ್ಲಿ ವಿರೋಧ ಪಕ್ಷಗಳು ಪ್ರತಿಭಟನೆಗಳನ್ನು ಮಾಡಿದ್ದವು.

ಸರಿಯಾಗಿ ಕೊರೊನಾ ಕಾಲದಲ್ಲಿ ಅಂದರೆ 2020ರ ಏಪ್ರಿಲ್‌ 9ರಿಂದ ಬೈರತಿ ಬಸವರಾಜ ಜಿಲ್ಲಾ ಉಸ್ತುವಾರಿ ಸಚಿವರಾದರು. ಬೇರೆ ಜಿಲ್ಲೆಯವರಾದರೆ ಜಿಲ್ಲೆ ಕಡೆಗೆ ಗಮನ ಕಡಿಮೆಯಾಗುತ್ತದೆ ಎಂಬುದನ್ನು ಸುಳ್ಳು ಮಾಡುವಂತೆ ನಿರಂತರವಾಗಿ ಜಿಲ್ಲೆಗೆ ಭೇಟಿ ನೀಡಿದ್ದರು. ಆದರೂ ಜಿಲ್ಲೆಯವರೇ ಸಚಿವರಾಗಬೇಕು ಎಂಬ ಕೂಗು ಇತ್ತು.

ಇದೀಗ ಹೊಸ ಮುಖ್ಯಮಂತ್ರಿ ಆಯ್ಕೆಯಾಗುತ್ತಿದ್ದಂತೆ ಈಗ ಮತ್ತೆ ಹೊಸ ಮುಖ್ಯಮಂತ್ರಿಯಾಗುತ್ತಿದ್ದಂತೆ ಮತ್ತೆ ಈ ಬಗ್ಗೆ ಒತ್ತಾಯ ಆರಂಭವಾಗಿದೆ.

‘ಮುಂದೆ ಚುನಾವಣೆಗಳು ಸಾಲು ಸಾಲು ಇರುವುದರಿಂದ ಜಿಲ್ಲೆಯವರೇ ಉಸ್ತುವಾರಿ ಸಚಿವರಾಗುವುದು ಒಳ್ಳೆಯದು. ಜಿಲ್ಲೆಯಲ್ಲಿ ಆಡಳಿತ ಸುಧಾರಣೆಯೂ ಆಗುತ್ತದೆ. ಪಕ್ಷ ಬಲಪಡಿಸುವುದಕ್ಕೂ ಅನುಕೂಲ ಆಗುತ್ತದೆ’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್‌ ಹನಗವಾಡಿ ಪ್ರತಿಕ್ರಿಯಿಸಿದ್ದಾರೆ.

*
ಜಿಲ್ಲೆಯಲ್ಲಿರುವ ಐವರು ಶಾಸಕರಲ್ಲಿ ಒಬ್ಬರಷ್ಟೇ ಮೊದಲ ಬಾರಿ ಶಾಸಕರು. ಉಳಿದ ಎಲ್ಲರೂ ಅನುಭವಸ್ಥರು. ಯಾರನ್ನಾದರೂ ಒಬ್ಬರನ್ನು ಸಚಿವರನ್ನಾಗಿ ಮಾಡಬೇಕು.
-ವೀರೇಶ್‌ ಹನಗವಾಡಿ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.