ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾವೈಕ್ಯದಿಂದ ಬಾಳುವುದೇ ನಿಜವಾದ ಮಾನವ ಧರ್ಮ: ಈಶ್ವರಾನಂದಪುರಿ ಸ್ವಾಮೀಜಿ 

ದೇವನಾಯಕನಹಳ್ಳಿಯಲ್ಲಿ ದುರ್ಗಮ್ಮ ದೇವಿ, ಮರಿಯಮ್ಮ ದೇವಿ ದೇವಸ್ಥಾನದ ಗೃಹಪ್ರವೇಶ
Last Updated 25 ಜನವರಿ 2023, 6:28 IST
ಅಕ್ಷರ ಗಾತ್ರ

ಹೊನ್ನಾಳಿ: ಸಮಾಜದಲ್ಲಿ ಎಲ್ಲರೂ ಭಾವೈಕ್ಯದಿಂದ ಬಾಳುವುದೇ ನಿಜವಾದ ಮಾನವ ಧರ್ಮ ಎಂದು ಕಾಗಿನೆಲೆ ಕನಕ ಗುರುಪೀಠದ ಹೊಸದುರ್ಗ ಶಾಖಾಮಠದ ಈಶ್ವರಾನಂದಪುರಿ ಸ್ವಾಮೀಜಿ ಹೇಳಿದರು.

ದೇವನಾಯಕನಹಳ್ಳಿಯಲ್ಲಿ ನಿರ್ಮಿಸಿರುವ ದುರ್ಗಮ್ಮ ದೇವಿ, ಮರಿಯಮ್ಮ ದೇವಿ ಮತ್ತು ಗಾಳಿದುರ್ಗಮ್ಮ ದೇವಿ ದೇವಸ್ಥಾನದ ಗೃಹ ಪ್ರವೇಶ, ಮೂರ್ತಿಗಳ ಪ್ರತಿಷ್ಠಾಪನೆ, ಗೋಪುರ ಕಳಸಾರೋಹಣ ಹಾಗೂ ಕುಂಬಾಭಿಷೇಕ ಹಾಗೂ ಧರ್ಮಸಭೆಯನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

‘ಧರ್ಮ, ಧರ್ಮಗಳ ನಡುವೆ ಬೆಂಕಿ ಹಚ್ಚುವವರನ್ನು ಕ್ಷಮಿಸಬಾರದು. ಜಗತ್ತಿನಲ್ಲಿ ಮಾನವ ಧರ್ಮಕ್ಕಿಂತ ದೊಡ್ಡ ಧರ್ಮ ಬೇರೊಂದಿಲ್ಲ. ನಾಡಿನ ಅನೇಕ ಕಡೆಗಳಲ್ಲಿ ಮಂದಿರ, ಮಸೀದಿಗಳು ಅಕ್ಕಪಕ್ಕದಲ್ಲಿರುವ ಉದಾಹರಣೆಗಳಿವೆ. ಅದರಂತೆ ಈ ದೇವಸ್ಥಾನದ ಸಮೀಪದಲ್ಲಿಯೇ ಮಸೀದಿ ಇದ್ದು, ಇದು ಭಾವೈಕ್ಯತೆಗೆ ಶ್ರೇಷ್ಠ ಉದಾಹರಣೆಯಾಗಿದೆ. ಇದು ಎಲ್ಲರಿಗೂ ಮಾದರಿಯಾಗಬೇಕು’ ಎಂದರು.

ಮಾಜಿ ಶಾಸಕ ಡಿ.ಜಿ. ಶಾಂತನಗೌಡ ಮಾತನಾಡಿ, ‘ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಅನೇಕ ದೇವಸ್ಥಾನಗಳ ಉದ್ಘಾಟನೆ ಇರುವುದನ್ನು ಗಮನಿಸಿದರೆ, ಭಕ್ತರಿಗೆ, ಭಕ್ತಿಗೆ ಬರಗಾಲವಿಲ್ಲ’ ಎಂದು ಹೇಳಿದರು.

‘ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಬಿ. ಮಂಜಪ್ಪ ಮಾತನಾಡಿ, ‘ಕೇವಲ 14 ತಿಂಗಳಲ್ಲಿ ಭಕ್ತರು ಭಕ್ತಿ, ಉತ್ಸಾಹ ಮತ್ತು ಸೇವಾ ಮನೋಭಾವನೆಯಿಂದ ಈ ಸುಂದರ ದೇವಾಲಯವನ್ನು ನಿರ್ಮಿಸಿದ್ದಾರೆ’ ಎಂದರು.

ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಗಾಳಿ ರವಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ದೇವಸ್ಥಾನ ನಿರ್ಮಾಣದ ಉಸ್ತುವಾರಿಗಳಾದ ತೆಂಗಿನಮರದ ಮಾದಪ್ಪ, ಎಚ್.ಬಿ. ಗಿಡ್ಡಪ್ಪ, ಯಜಮಾನರಾದ ಪರಸಣ್ಣಾರ ನರಸಿಂಹಪ್ಪ, ಗೌಡ್ರು ನರಸಪ್ಪ, ಅಡಿಗಣ್ಣಾರ್ ಆನಂದಪ್ಪ, ಪುರಸಭೆ ಅಧ್ಯಕ್ಷ ರಂಗನಾಥ್, ಗಣಮಕ್ಕಳಾದ ಗುಡ್ಡಜ್ಜಿ ಅಣ್ಣಪ್ಪ, ಪ್ರಭು ದ್ಯಾಮಜ್ಜಿ, ಎಚ್.ಡಿ. ವಿಜೇಂದ್ರಪ್ಪ, ಹೊನ್ನಾಳಿ ತಾಲ್ಲೂಕು ಕುರುಬ ಸಮಾಜದ ಅಧ್ಯಕ್ಷ ಎಂ.ಎಸ್. ಫಾಲಾಕ್ಷಪ್ಪ, ಎಸ್.ಎಸ್. ಬೀರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಆರ್. ಮಹೇಶ್, ಮಾಜಿ ಸೈನಿಕ ಎಂ. ವಾಸಪ್ಪ, ನಿವೃತ್ತ ದೈಹಿಕ ಶಿಕ್ಷಣಾಧಿಕಾರಿ ಗಾಳಿ ನಾಗರಾಜ್, ಜಾಮೀಯಾ ಮಸೀದಿ ಅಧ್ಯಕ್ಷ ನಯಾಜ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT