ಸೋಮವಾರ, ಆಗಸ್ಟ್ 8, 2022
22 °C
ಜಲಸಿರಿ ಕಾಮಗಾರಿ ವಿಳಂಬ: ಗುತ್ತಿಗೆದಾರರಿಗೆ ಸಂಸದ ತರಾಟೆ

ಲಾಕ್‌ಡೌನ್ ನೆಪ: ಕಾಮಗಾರಿ ವಿಳಂಬ ಮಾಡದಿರಿ- ಸಂಸದ ಜಿ.ಎಂ. ಸಿದ್ದೇಶ್ವರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ನಗರಕ್ಕೆ ದಿನದ 24 ಗಂಟೆಯೂ ಶುದ್ಧ ಕುಡಿಯುವ ನೀರು ಸರಬರಾಜು ಮಾಡುವ ‘ಜಲಸಿರಿ’ಯ ಕಾಮಗಾರಿ ಆಮೆಗತಿಯಲ್ಲಿ ಸಾಗಿರುವುದಕ್ಕೆ ಸಂಸದ ಜಿ.ಎಂ. ಸಿದ್ದೇಶ್ವರ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು.

ಸ್ಮಾರ್ಟ್ ಸಿಟಿ ಯೋಜನೆಯಡಿ ₹78 ಕೋಟಿ ಅನುದಾನದಲ್ಲಿ ನಡೆಯುತ್ತಿರುವ ಬ್ಯಾರೇಜ್ ನಿರ್ಮಾಣ ಕಾಮಗಾರಿಯನ್ನು ಜಿಲ್ಲಾಧಿಕಾರಿ ಹಾಗೂ ಸ್ಮಾರ್ಟ್‌ಸಿಟಿ ಅಧಿಕಾರಿಗಳೊಂದಿಗೆ ಶುಕ್ರವಾರ ವೀಕ್ಷಿಸಿ ಅವರು ಮಾತನಾಡಿದರು.

‘ಈ ಯೋಜನೆಗೆ ತುಂಗಭದ್ರಾ ನದಿಯಿಂದ ನೀರೆತ್ತಲು ಸಮಗ್ರ ಯೋಜನಾ ವರದಿಯಲ್ಲಿ ಅವಕಾಶ ಕಲ್ಪಿಸಿದ್ದು, ರಾಜನಹಳ್ಳಿ ಹಾಗೂ ಮಾಕನೂರು ಮಧ್ಯೆ ತುಂಗಾ ಭದ್ರಾ ನದಿಗೆ ಅಡ್ಡಲಾಗಿ ಬ್ಯಾರೇಜ್ ನಿರ್ಮಾಣ ಮಾಡಿ ಸರ್ವ ಋತುಗಳಲ್ಲೂ ನೀರು ಲಭ್ಯವಾಗುವಂತೆ ಯೋಜನೆ ರೂಪಿಸಲಾಗಿದೆ, ಲಾಕ್‌ಡೌನ್ ನೆಪ ಹೇಳಬೇಡಿ. ಜೂನ್ ತಿಂಗಳಲ್ಲಿ ಕಾಮಗಾರಿ ಮುಗಿಸಲು ಒಪ್ಪಂದ ಮಾಡಿಕೊಳ್ಳಲಾಗಿತ್ತು, ಆದರೆ ಈವರೆಗೆ ಶೇ 60ರಷ್ಟೂ ಕಾಮಗಾರಿ ಪೂರ್ಣಗೊಂಡಿಲ್ಲ, ಹೀಗಾದರೆ ನೀವು ಕಾಮಗಾರಿ ಮುಗಿಸುವುದು ಯಾವಾಗ’ ಎಂದು ಗುತ್ತಿಗೆದಾರರನ್ನು ತರಾಟೆಗೆ ತಗೆದುಕೊಂಡರು.

‘ಎರಡು ತಿಂಗಳ ಹಿಂದೆ ಲಾಕ್‌ಡೌನ್ ಆದರೂ ಕಾಮಗಾರಿಗಳನ್ನು ಕೈಗೊಳ್ಳಲು ನಿಮಗೆ ಯಾರೂ ಅಡ್ಡಿಪಡಿಸಿಲ್ಲ. ಆದರೂ ನೀವು ಕಾಮಗಾರಿಯನ್ನು ನಿಗದಿತ ವೇಗದಲ್ಲಿ ಕೊಂಡೊಯ್ದಿಲ್ಲ. ಇದು ನಿಮ್ಮ ಬೇಜವ್ದಾರಿತನ ತೋರಿಸುತ್ತದೆ’ ಎಂದರು.

ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕ ರವೀಂದ್ರ ಮಲ್ಲಾಪುರ, ‘ರಾಜನಹಳ್ಳಿ ಹಾಗೂ ಮಾಕನೂರು ಕಡೆಗಳಿಂದ ಜಮೀನು ಭೂಸ್ವಾಧೀನಕ್ಕೆ ರೈತರು ಅಸಹಕಾರ ವ್ಯಕ್ತಪಡಿಸುತ್ತಿರುವುದರಿಂದ ಕಾಮಗಾರಿಗೆ ಅಡಚಣೆಯಾಗಿದೆ’ ಎಂಬ ವಿಷಯವನ್ನು ಸಂಸದರ ಗಮನಕ್ಕೆ ತಂದರು.

‘ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ‘ಸ್ಮಾರ್ಟ್ ಸಿಟಿ ಅಧಿಕಾರಿಗಳು ನಾಳೆಯೇ ಕನ್ಸಲ್ಟೆಂಟ್‍ಗಳನ್ನು ಕರೆದುಕೊಂಡು ಬಂದು ರೈತರ ಸಮಸ್ಯೆಗಳನ್ನು ಆಲಿಸಿ ಅವರನ್ನು ಮನವೊಲಿಸಿ. ಯಾವುದೇ ಕಾರಣಕ್ಕೂ ವಿಳಂಬವಾಗಬಾರದು’ ಎಂದರು. ಸಂಸದರೂ ಇದೇ ಸಲಹೆಯನ್ನು ನೀಡಿದರು.

‘ಬ್ಯಾರೇಜ್‍ನಲ್ಲಿ 0.2 ಟಿ.ಎಂ.ಸಿ. ನೀರು ಸಂಗ್ರಹಕ್ಕೆ ಅವಕಾಶವಿದ್ದು, 2.1 ಮೀಟರ್ ಎತ್ತರದವರೆಗೆ ನೀರು ನಿಲ್ಲುತ್ತದೆ. ಅದರ ಮೇಲೆ ನೀರಿನ ಹರಿವು ಹೆಚ್ಚಾದರೆ ಸ್ವಯಂಚಾಲಿತ ಗೇಟುಗಳು ನೀರು ಸರಾಗವಾಗಿ ಹರಿದುಹೋಗಲು ಅನುವು ಮಾಡಿಕೊಡುತ್ತವೆ’ ಎನ್ನುವ ವಿಷಯವನ್ನು ಮುಖ್ಯ ಎಂಜಿನಿಯರ್ ಸತೀಶ್ ಅವರು ಸಂಸದರ ಗಮನಕ್ಕೆ ತಂದರು.

‘21 ತಿಂಗಳಿನಲ್ಲಿ ಕಾಮಗಾರಿ ಮುಕ್ತಾಯವಾಗಬೇಕು ಎಂದು ಒಪ್ಪಂದ ಮಾಡಿಕೊಂಡರೂ ಕಾಮಗಾರಿ ವೇಗವನ್ನು ಹೆಚ್ಚಿಸಲು ಗುತ್ತಿಗೆದಾರರಿಂದ ಸಾಧ್ಯವಾಗಿಲ್ಲ, ಯಾವುದೇ ಕಾರಣಕ್ಕೂ ವಿಳಂಬವನ್ನು ಸಹಿಸುವುದಿಲ್ಲ. ಪ್ರತಿದಿನ 100 ಹೆಚ್ಚು ಜನ ಕಾರ್ಮಿಕರು ಇಲ್ಲಿ ಕೆಲಸ ಮಾಡಬೇಕು. ಆದರೆ ನೀವು ಕೊರೊನಾ ಕಾರಣವನ್ನು ಹೇಳುತ್ತಿದ್ದೀರಿ ಇದನ್ನು ನಾನು ಸಹಿಸುವುದಿಲ್ಲ’ ಎಂದು ಸಂಸದರು ಅಸಹನೆ ವ್ಯಕ್ತಪಡಿಸಿದರು.

‘ಇನ್ನು ಮುಂದೆ ಯಾವುದೇ ಕಾರಣಕ್ಕೂ ಕಾಮಗಾರಿಯ ವೇಗ ಕುಂಠಿತಗೊಳ್ಳಲು ಬಿಡುವುದಿಲ್ಲ. ಡಿಸೆಂಬರ್ ವೇಳೆಗೆ ಬ್ಯಾರೇಜ್ ಕಾಮಗಾರಿಯನ್ನು ಪೂರ್ಣಗೊಳಿಸಿಕೊಡುತ್ತೇನೆ’ ಎಂದು ಗುತ್ತಿಗೆದಾರರು ಭರವಸೆ ನೀಡಿದರು.

ಮೇಯರ್ ಎಸ್.ಟಿ. ವೀರೇಶ್, ಪಾಲಿಕೆ ಆಯುಕ್ತ ವಿಶ್ವನಾಥ ಮುದ್ದಜ್ಜಿ, ಧೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್‌ ಹನಗವಾಡಿ, ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾಪ್ರಕಾಶ್, ಧೂಡಾ ಸದಸ್ಯ ರಾಜು ರೋಖಡೆ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು