ಬುಧವಾರ, 22 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಬೇಕಿದೆ: ವಿನಯಕುಮಾರ್

Published 25 ಏಪ್ರಿಲ್ 2024, 5:09 IST
Last Updated 25 ಏಪ್ರಿಲ್ 2024, 5:09 IST
ಅಕ್ಷರ ಗಾತ್ರ

ಜಗಳೂರು: ‘ದಾವಣಗೆರೆ ಲೋಕಸಭಾ ಕ್ಷೇತ್ರ ಕೇವಲ ಎರಡು ಕುಟುಂಬಗಳಿಗೆ ಸೀಮಿತವಾಗಿದ್ದು, ಜಿಲ್ಲೆಯಲ್ಲಿ ಕುಟುಂಬ ರಾಜಕಾರಣಕ್ಕೆ ಅಂತ್ಯ ಹಾಡಬೇಕಿದೆ’ ಎಂದು ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯಕುಮಾರ್ ಹೇಳಿದರು.

ಪಟ್ಟಣದಲ್ಲಿ ಬುಧವಾರ ನಡೆದ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.

‘30 ವರ್ಷಗಳಿಂದ ಜಿಲ್ಲೆಯಲ್ಲಿ ಕುಟುಂಬ ರಾಜಕಾರಣ ನಡೆಯುತ್ತಿದ್ದು, ಸಂಸದ ಸ್ಥಾನ ಎನ್ನುವುದು ಎರಡು ಕುಟುಂಬಗಳ ನಡುವಿನ ವ್ಯವಹಾರವಾಗಿ ಹೋಗಿದೆ. ಅಧಿಕಾರವನ್ನು ಸ್ವಂತದ ಅಭಿವೃದ್ಧಿಗೆ ಬಳಸಿಕೊಂಡು ಅವರು ಶ್ರೀಮಂತರಾಗುತ್ತಲೇ ಇದ್ದಾರೆ. ನಾವು ಬಡವರಾಗಿಯೇ ಇದ್ದೇವೆ. ಅವರು ಚುನಾವಣೆಗೆ ಸ್ಪರ್ಧೆ ಮಾಡುವುದು ಅವರು ಅಕ್ರಮವಾಗಿ ಮಾಡಿಕೊಂಡಿರುವ ಆಸ್ತಿಯನ್ನು ಕಾಪಾಡಲಿಕ್ಕೆ ಹೊರತು ಜನರು ಮತ್ತು ಕ್ಷೇತ್ರದ ಅಭಿವೃದ್ದಿಗಾಗಿ ಅಲ್ಲ’ ಎಂದು ವಾಗ್ದಾಳಿ ನಡೆಸಿದರು.

‘ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಎಷ್ಟು ಸರ್ಕಾರಿ ಶಾಲಾ, ಕಾಲೇಜುಗಳಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆಗಳನ್ನು ಆಲಿಸಿದ್ದಾರೆ. ನಾನು ಕಳೆದ ಒಂದು ವರ್ಷದಲ್ಲಿ ನೂರಾರು ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಯೋಗಕ್ಷೇಮ ಕೇಳಿದ್ದೇನೆ. ಜಿಲ್ಲೆಯಲ್ಲಿ ಹಿಂದುಳಿದವರು ಮತ್ತು ಬಡವರ ಮಕ್ಕಳಿಗೆ ಉನ್ನತ ಶಿಕ್ಷಣ ದೊರೆಯದಂತಾಗಿದೆ ಉಳ್ಳವರ ಮಕ್ಕಳಿಗೆ ಮಾತ್ರ ಉನ್ನತ ಶಿಕ್ಷಣ ಎನ್ನುವಂತಾಗಿದೆ’ ಎಂದು ದೂರಿದರು.

‘ನಾನು ಹಣ ಮಾಡಲು ರಾಜಕೀಯಕ್ಕೆ ಬಂದವನಲ್ಲ. ಬಡವರ ಏಳ್ಗೆಗಾಗಿ ಈ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡೆ. ನನಗೆ ಇಷ್ಟೊಂದು ಬೆಂಬಲ ದೊರೆಯುತ್ತಿರುವುದು ನನ್ನ ಸೌಭಾಗ್ಯ’ ಎಂದರು.

‘ಅಂಬೇಡ್ಕರ್ ಅವರ ಸಂವಿಧಾನದ ಆಶಯಗಳು ಮತ್ತು ಜಿಲ್ಲಾ ರಾಜಕಾರಣದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕಾದರೆ ಮತದಾರರು ನನಗೆ ಮತ ನೀಡಬೇಕು. ನಾನು ಗೆದ್ದು ಬಂದಲ್ಲಿ ಜಲ್ಲೆಯ ಸಮಸ್ತ ಜನರ ಧ್ವನಿಯಾಗಿ ಕೆಲಸ ಮಾಡುತ್ತೇನೆ’ ಎಂದು ಮನವಿ ಮಾಡಿದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮರೇನಹಳ್ಳಿ ಬಸವರಾಜ್, ಯಾದವ ಸಮುದಾಯದ ತಾಲ್ಲೂಕು ಅಧ್ಯಕ್ಷ ಕೃಷ್ಣಮೂರ್ತಿ, ವಕೀಲರಾದ ಮಾಳಮ್ಮನಹಳ್ಳಿ ರಂಗನಾಥ, ದೇವಿಕೆರೆ ಶಿವಪ್ರಕಾಶ್, ಚಂದು ಬಸವಂತಪ್ಪ, ನಾಯಕ ಸಮಾಜದ ಮುಖಂಡ ಪ್ರಸನ್ನಕುಮಾರ, ಯುವ ಮುಖಂಡ ಮಹಾಲಿಂಗಪ್ಪ ಹಿರೇಮಲ್ಲನಹೊಳೆ, ಹೇಮಾರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT