ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Lok Sabha Elections 2024 | ಮಹಿಳೆಯರ ಸ್ಪರ್ಧಾ ಕಣವಾಗಲಿದೆಯೇ ದಾವಣಗೆರೆ?

ಸಂಸದ ಸಿದ್ದೇಶ್ವರ ಕುಟುಂಬಕ್ಕೇ ಬಿಜೆಪಿ ಟಿಕೆಟ್‌ ಘೋಷಣೆ
Published 14 ಮಾರ್ಚ್ 2024, 6:55 IST
Last Updated 14 ಮಾರ್ಚ್ 2024, 6:55 IST
ಅಕ್ಷರ ಗಾತ್ರ

ದಾವಣಗೆರೆ: ‘ದಾವಣಗೆರೆ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಯಾರಾಗಲಿದ್ದಾರೆ?’ ಎಂಬ ಪ್ರಶ್ನೆಗೆ ಬುಧವಾರ ಸಂಜೆ ಉತ್ತರ ದೊರೆತಿದೆ.‌ ಹಾಲಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಅವರಿಗೆ ಪಕ್ಷವು ‘ಅಚ್ಚರಿಯ ಅಭ್ಯರ್ಥಿ’ ಎಂಬಂತೆ ಟಿಕೆಟ್‌ ಘೋಷಿಸುವ ಮೂಲಕ ಈ ಕುರಿತ ಕುತೂಹಲಕ್ಕೂ ತೆರೆ ಎಳೆದಿದೆ.

ಇನ್ನು ಕಾಂಗ್ರೆಸ್‌ ಪಕ್ಷದ ಟಿಕೆಟ್‌ ಘೋಷಣೆ ಬಾಕಿ ಇದ್ದು, ಶಾಸಕ ಶಾಮನೂರು ಶಿವಶಂಕರಪ್ಪ ಅವರ ಸೊಸೆ, ಸಚಿವ ಎಸ್‌.ಎಸ್‌. ಮಲ್ಲಿಕಾರ್ಜುನ್ ಅವರ ಪತ್ನಿ ಡಾ.ಪ್ರಭಾ ಮಲ್ಲಿಕಾರ್ಜುನ ಅವರ ಹೆಸರೂ ಮುಂಚೂಣಿಯಲ್ಲಿದೆ.

ಡಾ.ಪ್ರಭಾ ಅವರು ಎಸ್‌.ಎಸ್‌. ಕೇರ್‌ ಟ್ರಸ್ಟ್‌ ಮೂಲಕ ಕಳೆದೊಂದು ವರ್ಷದಿಂದ ಅನೇಕ ಆರೋಗ್ಯ ಸಂಬಂಧಿ ಚಟುವಟಿಕೆ ಹಮ್ಮಿಕೊಳ್ಳುತ್ತಿದ್ದು, ಇದೇ 15ರಂದು ಅವರ ಜನ್ಮದಿನಾಚರಣೆ ನಡೆಯಲಿದೆ. ಇದೇ ಮೊದಲ ಬಾರಿಗೆ ಅವರ ಜನ್ಮದಿನ ಕಾರ್ಯಕ್ರಮದ ಕುರಿತು ನಗರ ಸೇರಿದಂತೆ ಕ್ಷೇತ್ರ ವ್ಯಾಪ್ತಿಯ ವಿವಿಧೆಡೆ ಬ್ಯಾನರ್‌ ಅಳವಡಿಸಲಾಗಿದೆ. ಇದೂ ಸಹ ಶಾಮನೂರು ಕುಟುಂಬ ಅವರನ್ನು ಚುನಾವಣೆಯ ಕಣಕ್ಕಿಳಿಸುವ ಕುರಿತ ಮುನ್ಸೂಚನೆ ನೀಡಿದೆ.

ಅತ್ತ, ಇನ್‌ಸೈಟ್ಸ್‌ ಐಎಎಸ್‌ ಸಂಸ್ಥೆಯ ಸಂಸ್ಥಾಪಕ ಜಿ.ಬಿ. ವಿನಯಕುಮಾರ್ ಅವರೂ ಕಾಂಗ್ರೆಸ್‌ ಟಿಕೆಟ್‌ನ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ‌ಪಾದಯಾತ್ರೆ, ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಮತದಾರರ ಹತ್ತಿರ ಹೋಗುತ್ತಿದ್ದಾರೆ. ಕಾಂಗ್ರೆಸ್‌ ಟಿಕೆಟ್‌ ಯಾರ ಪಾಲಾಗಲಿದೆ ಎಂಬ ಕುತೂಹಲ ಉಳಿದುಕೊಂಡಿದ್ದು, ಒಂದೆರಡು ದಿನಗಳಲ್ಲಿ ಅದಕ್ಕೆ ಉತ್ತರ ದೊರೆಯಲಿದೆ.

ಒಂದೊಮ್ಮೆ ಪಕ್ಷವು ಶಾಮನೂರು ಕುಟುಂಬಕ್ಕೆ ಒತ್ತು ನೀಡಿ ಡಾ.ಪ್ರಭಾ ಅವರಿಗೆ ಟಿಕೆಟ್‌ ನೀಡಿದ್ದೇ ಆದಲ್ಲಿ, ಮಧ್ಯ ಕರ್ನಾಟಕದ ಪ್ರಮುಖ ಕ್ಷೇತ್ರವಾದ ದಾವಣಗೆರೆ ಮಹಿಳೆಯರ ಸ್ಪರ್ಧಾ ಕಣವಾಗಲಿದೆ.

ಈ ಹಿಂದೆ 1991 ಮತ್ತು 1996ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಭರಮಸಾಗರದ ಪೀಕಿ ಬಾಯಿ ಅವರು ಕ್ಷೇತ್ರದಿಂದ ಕಣಕ್ಕಿಳಿದಿದ್ದ ಮಹಿಳೆ. ಎರಡೂ ಬಾರಿ ಅವರು ಪರಾಜಯಗೊಂಡಿದ್ದರು. ಅವರನ್ನು ಹೊರತುಪಡಿಸಿ ಇದುವರೆಗೆ ಯಾರೂ ಸ್ಪರ್ಧಿಸಿರಲಿಲ್ಲ.

‘ಈ ಬಾರಿ ಜಿ.ಎಂ. ಸಿದ್ದೇಶ್ವರ ಅವರಿಗೆ ಟಿಕೆಟ್‌ ನೀಡಕೂಡದು’ ಎಂದು ಬಿಜೆಪಿಯ ಕೆಲವರು ಸಭೆ ನಡೆಸಿ, ಬೆಂಗಳೂರು ಮತ್ತು ನವದೆಹಲಿಯಲ್ಲಿ ವರಿಷ್ಠರಲ್ಲಿ ಮನವಿ ಮಾಡಿದ್ದರು. ಮಾಜಿ ಸಚಿವ, ಹೊನ್ನಾಳಿಯ ಎಂ.ಪಿ. ರೇಣುಕಾಚಾರ್ಯ ತಾವೂ ಪ್ರಬಲ ಆಕಾಂಕ್ಷಿ ಎಂದು ಬಹಿರಂಗವಾಗಿಯೇ ಘೋಷಿಸಿದ್ದಲ್ಲದೆ, ಸಿದ್ದೇಶ್ವರ ವಿರುದ್ಧ ಟೀಕೆ ಮಾಡಿದ್ದರು. ‘ಪಕ್ಷ ಒಂದು ಕುಟುಂಬಕ್ಕೇ ಟಿಕೆಟ್‌ ನೀಡಬಾರದು’ ಎಂದೂ ಕೋರಿದ್ದರು.

ಏತನ್ಮಧ್ಯೆ, ‘ನನಗೆ ಟಿಕೆಟ್‌ ನೀಡದಿದ್ದರೂ ಪಕ್ಷವು ನಮ್ಮ ಕುಟುಂಬದ ಸದಸ್ಯರಿಗೇ ಟಿಕೆಟ್‌ ನೀಡಲಿದೆ’ ಎಂದು ಸಂಸದ ಸಿದ್ದೇಶ್ವರ ಕಳೆದ ಒಂದು ವಾರದಿಂದ ಹೇಳಿದ್ದರು. ಮಂಗಳವಾರವಷ್ಟೇ ದಾವಣಗೆರೆ ರೈಲು ನಿಲ್ದಾಣದಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ಅವರ ಪತ್ನಿ ಗಾಯತ್ರಿ ಅವರೂ ನನಗೆ ಟಿಕೆಟ್‌ ಕೊಟ್ಟರೆ ಸ್ಪರ್ಧಿಸುವೆ’ ಎಂದು ಸುದ್ದಿಗಾರರಿಗೆ ತಿಳಿಸುವ ಮೂಲಕ ಟಿಕೆಟ್‌ ದೊರೆಯುವ ಬಗ್ಗೆ ಸುಳಿವು ನೀಡಿದ್ದರು.

ಆದರೆ, ಗಾಯತ್ರಿ ಅವರಿಗೇ ಟಿಕೆಟ್‌ ಸಿಗಬಹುದು ಎಂಬ ನಿರೀಕ್ಷೆ ಪಕ್ಷದ ಕಾರ್ಯಕರ್ತರಲ್ಲಿ, ಕುಟುಂಬ ಸದಸ್ಯರಲ್ಲಿ ಇರಲಿಲ್ಲ. ಸಿದ್ದೇಶ್ವರ ಬದಲಿಗೆ, ಅವರ ಪುತ್ರ ಅನಿತ್‌ ಕುಮಾರ್ ಅಥವಾ ಸೋದರ ಜಿ.ಎಂ. ಲಿಂಗರಾಜು ಅವರತ್ತ ಪಕ್ಷ ಒಲವು ತೋರಬಹುದು ಎಂದೇ ನಂಬಲಾಗಿತ್ತು. ಅತ್ತ ಕಾಂಗ್ರೆಸ್‌ ಪಕ್ಷವು ಡಾ.ಪ್ರಭಾ ಅವರತ್ತಲೇ ಒಲವು ತೋರಿದ್ದೇ ಆದಲ್ಲಿ ಮಹಿಳೆಯರ ನಡುವೆಯೇ ಸ್ಪರ್ಧೆ ಏರ್ಪಡಲಿ ಎಂದು ಬಿಜೆಪಿಯೂ ಮಹಿಳಾ ಅಭ್ಯರ್ಥಿಯತ್ತಲೇ ಗಮನ ಹರಿಸಿ ಟಿಕೆಟ್‌ ಘೋಷಿಸಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.

ಪ್ರಭಾ ಮಲ್ಲಿಕಾರ್ಜುನ
ಪ್ರಭಾ ಮಲ್ಲಿಕಾರ್ಜುನ

ಬಂಡಾಯ ಸಾಧ್ಯತೆ

ವಿರೋಧದ ನಡುವೆಯೂ ಸಿದ್ದೇಶ್ವರ ಅವರ ಕುಟುಂಬಕ್ಕೇ ಬಿಜೆಪಿ ಟಿಕೆಟ್‌ ಘೋಷಣೆಯಾಗಿದೆ. ಅತ್ತ ಕಾಂಗ್ರೆಸ್‌ನಲ್ಲೂ ಪ್ರಬಲರ ನಡುವೆ ಟಿಕೆಟ್‌ಗಾಗಿ ಸ‌್ಪರ್ಧೆ ಏರ್ಪಟ್ಟಿದೆ. ಯಾರಿಗೇ ಟಿಕೆಟ್‌ ಘೋಷಣೆಯಾದರೂ ಅಸಮಾಧಾನ ಕಂಡುಬರಲಿದೆ. ಅಂತೆಯೇ ಉಭಯ ಪಕ್ಷಗಳಲ್ಲೂ ಸಹಜವಾಗಿಯೇ ಬಂಡಾಯ ಎದುರಾಗುವ ಸಾಧ್ಯತೆ ಇದ್ದೇ ಇದೆ. ಆರಂಭಿಕ ಹಂತದಲ್ಲಿ ಎದುರಾಗುವ ಬಂಡಾಯ ಮತದಾನದ ದಿನ ಸಮೀಪಿಸುತ್ತಿದ್ದಂತೆಯೇ ತಣ್ಣಗಾಗುವ ಸಾಧ್ಯತೆಗಳೂ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT