ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ವರದಿ ಪರಿಣಾಮ: ಆಹಾರ ತಯಾರಿಕಾ ಘಟಕಕ್ಕೆ ಲೋಕಾಯುಕ್ತ ಎಸ್.ಪಿ. ಭೇಟಿ

Last Updated 24 ಸೆಪ್ಟೆಂಬರ್ 2022, 4:41 IST
ಅಕ್ಷರ ಗಾತ್ರ

ಜಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಆಹಾರ ಸಾಮಗ್ರಿ ಕಳವು ಹಾಗೂ ಅವ್ಯವಹಾರ ಆರೋಪದ ಕಾರಣ ಲೋಕಾಯುಕ್ತ ಜಿಲ್ಲಾ ಅಧೀಕ್ಷಕರಾದ ಎಂ.ಎಸ್. ಕೌಲಾಪುರೆ ಅವರು ಶುಕ್ರವಾರ ಪಟ್ಟಣದ ಮಹಿಳಾ ಮತ್ತು ಮಕ್ಕಳ ಪೌಷ್ಟಿಕ ಆಹಾರ ತಯಾರಿಕಾ ಘಟಕಕ್ಕೆ (ಎಂ.ಎಸ್.ಪಿ.ಸಿ) ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಎಂ.ಎಸ್.ಪಿ.ಸಿ ಘಟಕದಲ್ಲಿ ಹಣಕಾಸು ಅವ್ಯವಹಾರ, ಅಕ್ಕಿ ಮತ್ತು ಗೋಧಿ ಕಳವು ಕುರಿತು ಸೆ 19ರಂದು ‘ಪ್ರಜಾವಾಣಿ’ಯಲ್ಲಿ ‘100 ಕ್ವಿಂಟಲ್ ಅಕ್ಕಿ ಕಳವು, ಅನಾಮಿಕರಿಗೆ ಭಾರಿ ಮೊತ್ತ ಪಾವತಿ’ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟವಾಗಿತ್ತು.

ಆಹಾರ ತಯಾರಿಕಾ ಘಟಕಕ್ಕೆ ಅಧೀಕ್ಷಕರ ನೇತೃತ್ವದಲ್ಲಿ ಲೋಕಾಯುಕ್ತ ಸಿಬ್ಬಂದಿ ದಿಢೀರ್ ಭೇಟಿ ನೀಡಿ ಸಿಡಿಪಿಒ ಬೀರೇಂದ್ರ ಹಾಗೂ ಘಟಕದ ಸಿಬ್ಬಂದಿಯಿಂದ ಮಾಹಿತಿ ಪಡೆದರು.

ಆಹಾರ ತಯಾರಿಕಾ ಘಟಕದಲ್ಲಿ ಅವ್ಯವಸ್ಥೆಯ ಬಗ್ಗೆ ಸಿಡಿಪಿಒ ಬೀರೇಂದ್ರ ಅವರನ್ನು ಅಧೀಕ್ಷಕ ಎಂ.ಎಸ್. ಕೌಲಾಪುರೆ ಅವರು ತರಾಟೆಗೆ ತೆಗೆದುಕೊಂಡರು.

‘ತಾಲ್ಲೂಕಿನ ಅಂಗನವಾಡಿಗಳಿಗೆ ಪೂರೈಕೆ ಮಾಡಲಾಗುವ ಆಹಾರ ಪದಾರ್ಥಗಳ ಸಂಗ್ರಹಣಾ ಚೀಲಗಳ ಮೇಲೆ ಉತ್ಪಾದನಾ ದಿನಾಂಕ, ಪರಿಮಾಣದ ತೂಕ ಸೇರಿದಂತೆ ಯಾವುದೇ ಮಾಹಿತಿ ನಮೂದಿಸಿಲ್ಲ. ಇದರಿಂದ ಗುಣಾತ್ಮಕತೆ, ಬಳಕೆ ಮಾಡಲು ಇರುವ ನಿಗದಿತ ದಿನಾಂಕದ ಅವಧಿಯ ಬಗ್ಗೆ ಹೇಗೆ ಮಾಹಿತಿ ನೀಡುತ್ತೀರಿ’ ಎಂದು ಪ್ರಶ್ನಿಸಿದರು. ಆಹಾರ ಪದಾರ್ಥಗಳು ಹಾಗೂ ದಾಖಲಾತಿಗಳ ಬಗ್ಗೆ ವರದಿ ಸಲ್ಲಿಸಿ ಎಂದು ಸಿಡಿಪಿಒ ಅವರಿಗೆ ಸೂಚಿಸಿದರು.

ಅಕ್ಕಿ ಕಳವು ಪ್ರಕರಣದ ಬಗ್ಗೆ ಲೋಕಾಯುಕ್ತ ಅಧೀಕ್ಷಕರು ಸಿಡಿಪಿಒ ಬೀರೇಂದ್ರ ಅವರನ್ನು ಪ್ರಶ್ನಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ, ಬೀರೇಂದ್ರ, ‘ಕಳವು ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ. ಆ ಸಮಯದಲ್ಲಿ ನಾನು ಅಧಿಕಾರಿಯಾಗಿರಲಿಲ್ಲ. ಶಿವಕುಮಾರ್ ಹಾಗೂ ಶಾಂತಮ್ಮ ಎಂಬುವವರು ಅಧಿಕಾರಿಗಳಾಗಿದ್ದರು’ ಎಂದು ಉತ್ತರಿಸಿದರು.

ಆಹಾರ ಪದಾರ್ಥಗಳ ಉತ್ಪಾದನೆ ಮಾಡುವ 21 ಮಹಿಳಾ ಕಾರ್ಮಿಕರು, 4 ತಿಂಗಳಾದರೂ ವೇತನ ಆಗಿಲ್ಲ ಎಂದು ಅಳಲು ತೋಡಿಕೊಂಡರು. ಇದಕ್ಕೆ ಪ್ರತಿಕ್ರಿಯಿಸಿದ ಲೊಕಾಯುಕ್ತ ಎಸ್‌ಪಿ ಕೌಲಾಪುರೆ, ‘ಏಕೆ ಸಂಬಳ ಕೊಟ್ಟಿಲ್ಲ’ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸ್ತ್ರೀ ಶಕ್ತಿ ಸಂಘದ ಅಧ್ಯಕ್ಷೆ, ‘ಈ ಹಿಂದೆ ಇದ್ದ ಅಧ್ಯಕ್ಷರ ಅವಧಿಯಲ್ಲಿ ಸಮಸ್ಯೆ ಎದುರಾಗಿತ್ತು. ಆದ್ದರಿಂದ ನಾಲ್ಕು ತಿಂಗಳಿಂದ ಲಾಭಾಂಶ ಪಡೆದಿಲ್ಲ. ಯಂತ್ರೋಪಕರಣಗಳ ರಿಪೇರಿ, ಇತರ ಖರ್ಚು–ವೆಚ್ಚವಾಗಿದೆ. ಶೀಘ್ರದಲ್ಲಿ ಸಮಸ್ಯೆ ಬಗೆಹರಿಸುವೆವು’ ಎಂದು ಸಮಜಾಯಿಷಿ ನೀಡಿದರು.

‘ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಚರ್ಚಿಸಿ ಪರಿಶೀಲನೆ ನಡೆಸಲಾಗಿದೆ. ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ಲೋಕಾಯುಕ್ತ ಎಸ್.ಪಿ. ಕೌಲಾಪುರೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ಲೋಕಾಯುಕ್ತ ಇನ್‌ಸ್ಪೆಕ್ಟರ್ ಆಂಜನೇಯ, ಸಿಬ್ಬಂದಿ
ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT