ಮಂಗಳವಾರ, ಜನವರಿ 18, 2022
15 °C
ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ವಾಹನ ಸೌಲಭ್ಯ ಹಿಂಪಡೆಯಲು ಸೂಚನೆ

ನಷ್ಟದ ಹಣ ಆಯುಕ್ತರಿಂದ ವಸೂಲಿ ಮಾಡಲಿ- ಪಾಲಿಕೆ ವಿರೋಧ ಪಕ್ಷದ ನಾಯಕ ಎ. ನಾಗರಾಜ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಮಹಾನಗರ ಪಾಲಿಕೆಯ ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷರಿಗೆ ನಿಯಮಬಾಹಿರವಾಗಿ ವಾಹನ ಸೌಲಭ್ಯ ಕಲ್ಪಿಸಿರುವುದರಿಂದ ₹ 10 ಲಕ್ಷಕ್ಕೂ ಹೆಚ್ಚು ಹಣ ದುಂದುವೆಚ್ಚ ಮಾಡಲಾಗಿದೆ. ಇದಕ್ಕೆ ಆಸ್ಪದ ನೀಡಿದ ಪಾಲಿಕೆಯ ಆಯುಕ್ತರಿಂದಲೇ ಈ ನಷ್ಟದ ಹಣವನ್ನು ವಸೂಲಿ ಮಾಡಬೇಕು’ ಎಂದು ಪಾಲಿಕೆಯ ವಿರೋಧ ಪಕ್ಷದ ನಾಯಕ ಎ. ನಾಗರಾಜ್‌ ಒತ್ತಾಯಿಸಿದರು.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ವಾಹನ ಸೌಲಭ್ಯ ಕಲ್ಪಿಸುವುದಕ್ಕೆ ಸಾಮಾನ್ಯ ಸಭೆಯಲ್ಲಿ ನಾವು ವಿರೋಧ ವ್ಯಕ್ತಪಡಿಸಿದ್ದೆವು. ಮೈಸೂರು ಪಾಲಿಕೆಯ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ವಾಹನ ಸೌಲಭ್ಯ ಕಲ್ಪಿಸಿದಾಗ 2017ರಲ್ಲಿ ರಾಜ್ಯ ಸರ್ಕಾರವು ಮೇಯರ್‌ ಹಾಗೂ ಉಪಮೇಯರ್‌ ಹೊರತುಪಡಿಸಿ ಮತ್ತೆ ಯಾವುದೇ ಚುನಾಯಿತ ಜನಪ್ರತಿನಿಧಿಗಳಿಗೆ ವಾಹನ ಸೌಲಭ್ಯ ಕಲ್ಪಿಸಬಾರದು ಎಂದು ಆದೇಶ ಹೊರಡಿಸಿರುವುದನ್ನು ಗಮನಕ್ಕೆ ತಂದಿದ್ದೆವು. ಹೀಗಿದ್ದರೂ ಪ್ರತಿ ತಿಂಗಳು ಒಂದು ಕಾರಿಗೆ ₹ 30 ಸಾವಿರದಂತೆ ನಾಲ್ಕು ಸ್ಥಾಯಿ ಸಮಿತಿಗಳ ಅಧ್ಯಕ್ಷರಿಗೆ ವಾಹನ ಸೌಲಭ್ಯ ಕಲ್ಪಿಸಲು ತಿಂಗಳಿಗೆ ₹ 1.20 ಲಕ್ಷ ವೆಚ್ಚ ಮಾಡಲಾಗಿದೆ. ಎಂಟು ತಿಂಗಳಿಂದ ಸ್ಥಾಯಿ ಸಮಿತಿ ಸದಸ್ಯರು ಸಾರ್ವಜನಿಕರ ತೆರಿಗೆ ಹಣದಲ್ಲಿ ಮೆರೆಯುತ್ತಿದ್ದಾರೆ’ ಎಂದು ಆಕ್ಷೇಪಿಸಿದರು.

‘ನಿಯಮಬಾಹಿರವಾಗಿ ವಾಹನ ಸೌಲಭ್ಯ ಕಲ್ಪಿಸಿರುವ ಬಗ್ಗೆ ಸರ್ಕಾರಕ್ಕೆ ದೂರು ನೀಡಿದ್ದೆ. ಅದರಂತೆ ಕಳೆದ ಡಿಸೆಂಬರ್‌ 22ರಂದು ಪೌರಾಡಳಿತ ನಿರ್ದೇಶನಾಲಯವು ಪಾಲಿಕೆ ಆಯುಕ್ತರಿಗೆ ಪತ್ರವನ್ನು ಬರೆದು ಕೂಡಲೇ ವಾಹನ ಸೌಲಭ್ಯವನ್ನು ಹಿಂದಕ್ಕೆ ಪಡೆಯುವಂತೆ ನಿರ್ದೇಶನ ನೀಡಿದೆ. ಹೀಗಿದ್ದರೂ ಆಯುಕ್ತರು ವಾಹನ ಸೌಲಭ್ಯವನ್ನು ಇನ್ನೂ ಹಿಂದಕ್ಕೆ ಪಡೆದಿಲ್ಲ’ ಎಂದು ಆಗ್ರಹಿಸಿದರು.

ನೂತನ ಎಸ್‌.ಇ.ಗೆ ಆಕ್ಷೇಪ: ‘ಅಧೀಕ್ಷಕ ಎಂಜಿನಿಯರ್‌ ಹುದ್ದೆಯಲ್ಲಿ ಕಾರ್ಯನಿರ್ವಹಿಸುವ ಅರ್ಹತೆ ಇರುವವರು ಪಾಲಿಕೆಯಲ್ಲಿ ಮೂವರು ಎಂಜಿನಿಯರ್‌ಗಳಿದ್ದರೂ ಕರ್ನಾಟಕ ನಗರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಹಣಕಾಸು ನಿಗಮದ ಕಾರ್ಯಪಾಲಕ ಎಂಜಿನಿಯರ್‌ ಮಂಜುನಾಥ್‌ ಕೆ. ಅವರನ್ನು ಅಧೀಕ್ಷಕ ಎಂಜಿನಿಯರ್‌ ಆಗಿ ಪಾಲಿಕೆಗೆ ವರ್ಗಾವಣೆ ಮಾಡಿಸಿಕೊಂಡು ಬರಲಾಗಿದೆ. ಪಾಲಿಕೆಯಲ್ಲಿರುವ ಎಂಜಿನಿಯರ್‌ಗಳು ಅಕ್ರಮವಾಗಿ ಟೆಂಡರ್‌ ಕರೆಯಲು ಸಹಕಾರ ನೀಡುವುದಿಲ್ಲ ಎಂಬ ಕಾರಣಕ್ಕೆ ಆಯುಕ್ತರು ಬೇರೆ ಇಲಾಖೆಯ ಎಂಜಿನಿಯರ್‌ ಅನ್ನು ವರ್ಗ ಮಾಡಿಸಿಕೊಂಡು ಬಂದಿದ್ದಾರೆ. ಕೂಡಲೇ ಅವರನ್ನು ವಾಪಸ್‌ ಕಳುಹಿಸಿಕೊಡಬೇಕು’ ಎಂದು ನಾಗರಾಜ್‌ ಆಗ್ರಹಿಸಿದರು.

ಪಾಲಿಕೆಯಿಂದಲೇ ಕಸ ಸಂಗ್ರಹಿಸಲಿ: ‘ವಾಣಿಜ್ಯ ಮಳಿಗೆ ಕಸ ಸಂಗ್ರಹಿಸಲು ನಾಲ್ಕು ಪ್ಯಾಕೇಜ್‌ ಮಾಡಿ ಏಜೆನ್ಸಿಗಳಿಗೆ ಗುತ್ತಿಗೆ ನೀಡಲಾಗಿದೆ. ಈ ಏಜೆನ್ಸಿಗಳು ₹ 50 ಸಾವಿರ ಠೇವಣಿ ಹಣ ಕಟ್ಟಿಲ್ಲ. ಕಸ ಸಂಗ್ರಹಿಸುವುದರಿಂದ ಬಂದ ಶುಲ್ಕದ ಶೇ 30ರಷ್ಟನ್ನು ಪಾಲಿಕೆಗೆ ಸಂದಾಯ ಮಾಡಬೇಕಾಗಿತ್ತು. ಆ ಹಣವನ್ನೂ ಭರಿಸಿಲ್ಲ. ವಾಣಿಜ್ಯ ಮಳಿಗೆಯವರ ಮೇಲೆ ಏಜೆನ್ಸಿಯವರು ದಬ್ಬಾಳಿಕೆ ನಡೆಸುತ್ತಿದ್ದಾರೆ. ಹೀಗಾಗಿ ಏಜೆನ್ಸಿಗಳನ್ನು ರದ್ದುಗೊಳಿಸಬೇಕು. ಪಾಲಿಕೆಯ ಆಟೊಟಿಪ್ಪರ್‌ಗಳನ್ನು ಮಧ್ಯಾಹ್ನ 12 ಗಂಟೆಯ ಬಳಿಕ ವಾಣಿಜ್ಯ ಮಳಿಗೆಗಳಿಂದ ಕಸ ಸಂಗ್ರಹಿಸಲಿ’ ಎಂದು ನಾಗರಾಜ್‌ ಒತ್ತಾಯಿಸಿದರು.

ಪಾಲಿಕೆ ಸದಸ್ಯರಾದ ಕೆ.ಚಮನ್‌ ಸಾಬ್‌, ಅಬ್ದುಲ್‌ ಲತೀಫ್‌ ಹಾಜರಿದ್ದರು.

ವಿರೋಧ ಪಕ್ಷದ ನಾಯಕರು ಮಾಡಿರುವ ಆರೋಪಗಳಿಗೆ ಪ್ರತಿಕ್ರಿಯೆ ಪಡೆಯಲು ಆಯುಕ್ತ ವಿಶ್ವನಾಥ ಮುದಜ್ಜಿ ಅವರು ಮೊಬೈಲ್‌ಗೆ ಕರೆ ಮಾಡಿದರೂ ಅವರು ಸಂಪರ್ಕಕ್ಕೆ ಲಭ್ಯವಾಗಲಿಲ್ಲ.

*

ಪಾಲಿಕೆ ಆಯುಕ್ತರು ಸರ್ಕಾರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುವ ಬದಲು ಬಿಜೆಪಿಯ ಕಾರ್ಯಕರ್ತರಂತೆ ಕೆಲಸ ಮಾಡುತ್ತಿದ್ದಾರೆ.

– ಎ. ನಾಗರಾಜ್‌, ಪಾಲಿಕೆ ವಿರೋಧ ಪಕ್ಷದ ನಾಯಕ

*

23 ಆಟೊಟಿಪ್ಪರ್‌, 7 ಟ್ರ್ಯಾಕ್ಟರ್‌ ಪಾಲಿಕೆಗೆ ಬಂದು ಆರು ತಿಂಗಳಾದರೂ ಅವುಗಳನ್ನು ವಾರ್ಡ್‌ಗಳಿಗೆ ಮೇಯರ್‌ ಹಂಚಿಕೆ ಮಾಡಿಲ್ಲ. ಇದರಿಂದಾಗಿ ಕಸ ಸಂಗ್ರಹಿಸಲು ತೊಂದರೆಯಾಗುತ್ತಿದೆ.

– ಗಡಿಗುಡಾಳ್‌ ಮಂಜುನಾಥ್‌, ಪಾಲಿಕೆ ಸದಸ್ಯ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು