ಬುಧವಾರ, ಏಪ್ರಿಲ್ 21, 2021
25 °C
ಬಿತ್ತನೆ ಸಮಯಕ್ಕೆ ನೀರಿನ ವ್ಯವಸ್ಥೆ ಇರುವವರಿಗೆ ಹೇಳಿ ಮಾಡಿಸಿದ ಕೃಷಿ

ದಾವಣಗೆರೆ: ವೆಚ್ಚ ಕಡಿಮೆ, ಸುಲಭ ಕೃಷಿ ಚೆಲ್ಲುಭತ್ತ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕಡಿಮೆ ವೆಚ್ಚ, ಸುಲಭ ಕೃಷಿಗೆ ಹೇಳಿ ಮಾಡಿಸಿದಂತಿರುವ ಚೆಲ್ಲುಭತ್ತ ಪದ್ಧತಿ ಜಿಲ್ಲೆಯಲ್ಲಿ ನಿಧಾನಕ್ಕೆ ಕಾಲೂರುತ್ತಿದೆ. ದಾವಣಗೆರೆ ಮತ್ತು ಹೊನ್ನಾಳಿ ತಾಲ್ಲೂಕುಗಳಲ್ಲಿ ನಾಟಿಭತ್ತಕ್ಕಿಂತ ಚೆಲ್ಲುಭತ್ತಕ್ಕೆ ರೈತರು ಪ್ರಾಮುಖ್ಯ ನೀಡುತ್ತಿದ್ದಾರೆ.

ನಾಟಿ ಭತ್ತಕ್ಕೆ ಸಸಿಮಡಿ ಮಾಡಬೇಕು. ಅದನ್ನು ಹೊಲ–ಗದ್ದೆಗಳಿಗೆ ಸಾಗಾಟ ಮಾಡಬೇಕು. ನಾಟಿ ಮಾಡಬೇಕು. ಆರಂಭದಲ್ಲೇ ಈ ಮೂರು ಖರ್ಚುಗಳೂ ಉಳಿಯುತ್ತವೆ. ನಾಟಿಗೆ ಕಾರ್ಮಿಕರು ಸಿಗುವುದಿಲ್ಲ ಎಂಬ ಕೊರಗೂ ಇರುವುದಿಲ್ಲ.

ಎರಡು ಮೂರು ಬಾರಿ ಉಳುಮೆ ಮಾಡಿಕೊಳ್ಳಬೇಕು. ಭತ್ತದ ಗದ್ದೆಯನ್ನು ಸರಿಯಾಗಿ ಮಟ್ಟ ಮಾಡಿ ಒಂದೇ ಸಮವಾಗಿ ನೀರು ನಿಲ್ಲುವಂತೆ ನೋಡಿಕೊಳ್ಳಬೇಕು. ಭತ್ತ ಚೆಲ್ಲುವ ಎರಡು ವಾರಕ್ಕಿಂತ ಮೊದಲು ಕೊಟ್ಟಿಗೆ ಗೊಬ್ಬರವನ್ನು ಭೂಮಿಗೆ ಸೇರಿಸಬೇಕು. ಬೀಜ ಚೆಲ್ಲುವ ಸಮಯದಲ್ಲಿ ಭೂಮಿಯನ್ನು ರೊಳ್ಳಿ ಹೊಡೆದು ಕೆಸರು ಗದ್ದೆಯಾಗಿ ಮಾಡಿ ನಂತರ ನೀರನ್ನು ಬಸಿದು ತೆಗೆಯಬೇಕು ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶ್ರೀನಿವಾಸ್‌ ಚಿಂತಾಲ್‌ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಬಿತ್ತನೆ ಬೀಜವನ್ನು ಒಂದು ದಿನ ನೆನೆಸಿಡಬೇಕು. ತೆಗೆದು ಮರುದಿನ ಮೊಳಕೆ ಕಟ್ಟಿದಾಗ ಗದ್ದೆಯಲ್ಲಿ ಸಮವಾಗಿ ಚೆಲ್ಲಬೇಕು. ಬಳಿಕ ತೇವ ಇರುವಂತೆ ನೋಡಿಕೊಳ್ಳಬೇಕು ಎಂದು ಸಹಾಯಕ ಕೃಷಿ ನಿರ್ದೇಶಕಿ (ಉಸ್ತುವಾರಿ ಮತ್ತು ಮೌಲ್ಯಮಾಪನ) ರೇಖಾ ಮಾಹಿತಿ ನೀಡಿದ್ದಾರೆ.

‘ನಾನು ಮೂರು ವರ್ಷಗಳಿಂದ ಚೆಲ್ಲುಭತ್ತ ಕೃಷಿ ಮಾಡುತ್ತಿದ್ದೇನೆ. ಎರಡು ವರ್ಷ ಸುಮಾರು 5 ಎಕರೆಯಲ್ಲಿ ಚೆಲ್ಲುಭತ್ತ ಕೃಷಿ ಮಾಡಿದರೆ ಈ ಬಾರಿ 15 ಎಕರೆಯಲ್ಲಿ ಬೀಜ ಚೆಲ್ಲಿದ್ದೇನೆ. ಸಸಿ ಮಡಿ, ನಾಟಿ ಮಾಡುವುದಷ್ಟೇ ಅಲ್ಲ. ಔಷಧ ಸಿಂಪಡಣೆ ಕೂಡ ಕಡಿಮೆ ಸಾಕಾಗುತ್ತದೆ. ನುಸಿಕಾಟ ಇರುವುದಿಲ್ಲ. ನಾಟಿ ಭತ್ತದಷ್ಟೇ ಇಳುವರಿ ಇಲ್ಲೂ ಸಿಗುತ್ತದೆ. ಉತ್ತಮ ವಾತಾವರಣ ಇದ್ದರೆ ಹೆಚ್ಚು ಇಳುವರಿ ಪಡೆಯಲು ಸಾಧ್ಯವಾಗುತ್ತದೆ. ಮಳೆಗಾಲದಲ್ಲಿ ಬೇರೆಯವರು ಎಕರೆಗೆ 28 ಚೀಲ ಮತ್ತು ಬೇಸಿಗೆಯಲ್ಲಿ 35ರಿಂದ 38 ಚೀಲ ಪಡೆದರೆ ನಾನು ಮಳೆಗಾದಲ್ಲಿ 30 ಚೀಲ, ಬೇಸಿಗೆಯಲ್ಲಿ 42 ಚೀಲ ಭತ್ತ ಬೆಳೆದಿದ್ದೇನೆ’ ಎಂದು ದಾವಣಗೆರೆ ತಾಲ್ಲೂಕಿನ ಮಾಳಗೊಂಡನಹಳ್ಳಿಯ (ಮಾಗಾನಹಳ್ಳಿ) ರೈತ ಪ್ರಸಾದ್‌ ಅನುಭವ ಹೇಳಿಕೊಂಡಿದ್ದಾರೆ.

‘ನಾನು ಕೀಟನಾಶಕ, ರೋಗನಾಶಕ ಮುಂತಾದ ರಾಸಾಯನಿಕ ಬಳಸುವುದಿಲ್ಲ. ಇದೀಗ ಎರಡನೇ ಬೆಳೆ ಚೆಲ್ಲುಭತ್ತ ಬೆಳೆಯುತ್ತಿದ್ದೇನೆ. ಮೊದಲನೇ ಬೆಳೆಯಲ್ಲಿ ನನಗೆ ಎಕರೆಗೆ 31 ಚೀಲ ಭತ್ತ ಬಂದಿತ್ತು. ನಮ್ಮ ಪಕ್ಕದ ಹೊಲದವರು ನಾಟಿಭತ್ತ ಮಾಡಿದ್ದು ಅವರಿಗೆ 25 ಚೀಲ ಬಂದಿದೆ. ಭತ್ತ ಬೆಳೆಯುವ ಖರ್ಚಿನಲ್ಲಿಯೇ ನಂಗೆ ₹ 4,300 ಉಳಿದಿದೆ. ಭತ್ತ ಚೆಲ್ಲುವಾಗ ನೀರು ಬೇಕು. ಬಳಿಕ ನೀರು ಕೂಡ ಕಡಿಮೆ ಸಾಕಾಗುತ್ತದೆ’ ಎಂದು ಪ್ರಗತಿಪರ ಕೃಷಿಕ ಹೊನ್ನಾಳಿ ತಾಲ್ಲೂಕು ಕೆಂಗಲಹಳ್ಳಿಯ ದೇವೇಂದ್ರಪ್ಪ ವಿವರ ನೀಡಿದ್ದಾರೆ.

ದಾವಣಗೆರೆ, ಹೊನ್ನಾಳಿ ತಾಲ್ಲೂಕುಗಳಿಗೆ ಸೀಮಿತವಾಗದೇ ಭತ್ತ ಹೆಚ್ಚು ಬೆಳೆಯುವ ಹರಿಹರ ತಾಲ್ಲೂಕಿನ ರೈತರೂ ಇತ್ತ ಗಮನಹರಿಸಬೇಕು. ರೈತರಿಗೆ ಲಾಭವಾಗುವ ಚೆಲ್ಲುಭತ್ತ ಬೆಳೆಸಬೇಕು ಎಂದು ಸಹಾಯಕ ಕೃಷಿ ಅಧಿಕಾರಿ ವಿ. ದುರುಗಪ್ಪ ಮನವಿ ಮಾಡಿಕೊಂಡಿದ್ದಾರೆ.

ಅಂಕಿ ಅಂಶ
300 ಎಕರೆ:
ಕಳೆದ ವರ್ಷ ಜಿಲ್ಲೆಯಲ್ಲಿ ಮಾಡಿದ ಚೆಲ್ಲುಭತ್ತ ಕೃಷಿ ಪ್ರಮಾಣ
500 ಎಕರೆ: ಈ ವರ್ಷ ಜಿಲ್ಲೆಯಲ್ಲಿ ಮಾಡಿದ ಚೆಲ್ಲುಭತ್ತ ಕೃಷಿ ಪ್ರಮಾಣ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು