ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ ಜಿಲ್ಲೆಯಲ್ಲಿ ಮಕರ ಸಂಕ್ರಾಂತಿ ಸಂಭ್ರಮ

ಹೊಳೆಯಲ್ಲಿ ಸ್ನಾನ* ಉದ್ಯಾನದಲ್ಲಿ ಸಾಮೂಹಿಕ ಭೋಜನ
Published 15 ಜನವರಿ 2024, 16:18 IST
Last Updated 15 ಜನವರಿ 2024, 16:18 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಮಕರ ಸಂಕ್ರಾಂತಿಯನ್ನು ಜನರು ಸಡಗರ ಸಂಭ್ರಮದಿಂದ ಆಚರಿಸಿದರು. ಹೊಳೆಯಲ್ಲಿ ಸ್ನಾನ ಮಾಡಿ ಬುತ್ತಿಯೂಟ ಸವಿದರು.

ಮಳೆಯ ಕೊರತೆಯಿಂದಾಗಿ ಭೀಕರ ಬರ ಆವರಿಸಿದ್ದು, ಸುಗ್ಗಿಯ ಸಂಭ್ರಮ ಕಾಣದಿದ್ದರೂ ಇದ್ದುದರಲ್ಲೇ ಸಂಭ್ರಮಿಸಿದರು.

ನಗರದ ವಿಶ್ವೇಶ್ವರಯ್ಯ ಪಾರ್ಕ್‌, ಕಾಸಲ್‌ ಶೆಟ್ಟಿ ಪಾರ್ಕ್‌, ಡಾಂಗೆ ಪಾರ್ಕ್‌, ಮಾತೃಛಾಯಾ ಉದ್ಯಾನ, ಗಂಗೂಬಾಯಿ ಹಾನಗಲ್ ಪಾರ್ಕ್‌, ವಿದ್ಯಾನಗರದ ಮಕ್ಕಳ ಪಾರ್ಕ್, ಹಿರಿಯ ನಾಗರಿಕರ ಪಾರ್ಕ್, ಜಯನಗರದ ಕದಂಬ ಪಾರ್ಕ್‌ಗಳು ಜನರು ಹಾಗೂ ಮಕ್ಕಳಿಂದ ತುಂಬಿ ಹೋಗಿದ್ದವು. ಮಕ್ಕಳು ಆಟವಾಡಿ ಪೋಷಕರ ಜೊತೆ ಊಟ ಸವಿದರು.

ಇವುಗಳಲ್ಲದೇ ಕುಂದುವಾಡ ಕೆರೆ, ಕೊಂಡಜ್ಜಿ ಕೆರೆ, ದೇವರಬೆಳಕೆರೆ ಪಿಕ್‌ ಅಪ್‌ಗಳಿಗೂ ಭಾರಿ ಸಂಖ್ಯೆಯಲ್ಲಿ ಜನರು ಕುಟುಂಬ ಸಮೇತ ತೆರಳಿ ಹಬ್ಬದ ಊಟವನ್ನು ಮಾಡಿದರು. ದಾವಣಗೆರೆ ತಾಲ್ಲೂಕಿನ ಆನಗೋಡು, ಬಾತಿ ಗುಡ್ಡ ಇತರೆಡೆ ಸಾವಿರಾರು ಜನರು ಸಂಕ್ರಾಂತಿ ಆಚರಿಸಿದರು.  ಗಾಜಿನ ಮನೆಗೂ ಜನರು ತೆರಳಿದ್ದರು.

ಮನೆಗಳಲ್ಲಿ ಕಬ್ಬಿನ ತುಂಡು, ಎಳ್ಳು-ಬೆಲ್ಲ, ಸಕ್ಕರೆ ಅಚ್ಚುಗಳನ್ನು ದೇವರ ಮುಂದೆ ಇಟ್ಟು ವಿಶೇಷ ಪೂಜೆ ಮಾಡಿದರು. ಬಳಿಕ ಮನೆಯ ಮಂದಿ, ಸಂಬಂಧಿಕರು ಹಾಗೂ ಸ್ನೇಹಿತರಿಗೆ ನೀಡಿ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ಒಣ ಕೊಬ್ಬರಿ, ಶೇಂಗಾ, ಹುರಿಗಡಲೆ, ಬೆಲ್ಲದ ಅಚ್ಚುಗಳನ್ನು ಮಿಶ್ರಣವನ್ನು ಮೆಲ್ಲುತ್ತಾ ‘ಎಳ್ಳು-ಬೆಲ್ಲ ತಿಂದು ಒಳ್ಳೊಳ್ಳೆ ಮಾತನಾಡಿ’ ಎಂದು ಕೋರಿದರು.

ಮಹಿಳೆಯರು, ಹೆಣ್ಣು ಮಕ್ಕಳು ನಸುಕಿನಲ್ಲೇ ಎದ್ದು ಮನೆಯ ಅಂಗಳವನ್ನು ತೊಳೆದು ಸುಂದರ ರಂಗೋಲಿಗಳನ್ನು ಹಾಕಿ ಹಬ್ಬದ ಸಂಭ್ರಮಕ್ಕೆ ಮೆರುಗು ತಂದರು.

ಸಂಕ್ರಾಂತಿಯ ಹಬ್ಬದ ವಿಶೇಷ ರೊಟ್ಟಿ, ಬುತ್ತಿ, ವಿವಿಧ ಬಗೆಯ ಪಲ್ಯ, ಚಟ್ನಿ, ಹಾಲು, ಮೊಸರು, ತುಪ್ಪ, ಸಿಹಿ ಖಾದ್ಯಗಳ ಸಾಮೂಹಿಕ ಭೋಜನ ಎಲ್ಲೆಡೆ ಕಂಡು ಬಂದಿತು. ಕುಟುಂಬದವರು, ಆಪ್ತರು, ಸಂಬಂಧಿಕರು, ಗೆಳೆಯರು ಸೇರಿ ಸಾಮೂಹಿಕ ಭೋಜನ ಸವಿದರು. ಭೋಜನದ ನಂತರ ಗ್ರಾಮೀಣ, ನಗರ ಪ್ರದೇಶಗಳ ಆಟೋಟವೂ ಕಂಡು ಬಂದಿತು.

ದಾವಣಗೆರೆಯ ಭಾರತ್ ಕಾಲೊನಿ, ಅಣ್ಣಾನಗರ, ಶೇಖರಪ್ಪ ನಗರ ಇತರೆಡೆ ವಾಸವಾಗಿರುವ ತಮಿಳು ಮೂಲದ ಜನರು ಪೊಂಗಲ್ ಆಚರಿಸಿದರು. ದಾವಣಗೆರೆ ತಾಲ್ಲೂಕಿನ ಗುಡಾಳ್- ಗುಮ್ಮನೂರು ಗ್ರಾಮದಲ್ಲಿ ಧಾನ್ಯಗಳ ರಾಶಿ, ವಿಶೇಷ ಪೂಜೆ, ಸಿಂಗಾರಗೊಂಡ ಎತ್ತಿನ ಗಾಡಿಗಳ ಮೆರವಣಿಗೆ ಕಂಡು ಬಂದಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT