ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏತ ನೀರಾವರಿ ಯೋಜನೆ ಭೂಸ್ವಾಧೀನ ಶೀಘ್ರ ಮಾಡಿ

ವಿವಿಧ ನೀರಾವರಿ ಯೋಜನೆಗಳ ಪರಿಶೀಲನಾ ಸಭೆಯಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ
Last Updated 23 ಏಪ್ರಿಲ್ 2021, 5:01 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಪಂಪ್‍ಹೌಸ್‍, ಡೆಲವರಿ ಚೇಂಬರ್‌, ಎಲೆಕ್ಟ್ರಿಕಲ್ ಸಬ್‍ಸ್ಟೇಷನ್‍ಗಳಿಗೆ ಸಂಪರ್ಕಕ್ಕಾಗಿ ವಿದ್ಯುತ್‌ ಟವರ್‌ಗಳನ್ನು ನಿರ್ಮಿಸಬೇಕಿದೆ. ಅದಕ್ಕೆ ಅಗತ್ಯವಿರುವ ಎಲ್ಲ ಭೂಸ್ವಾಧೀನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಬೇಕು ಎಂದು ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಾಸ್ವೆಹಳ್ಳಿ ಸೇರಿ ವಿವಿಧ ಏತ ನೀರಾವರಿ ಯೋಜನೆಗಳ ಕುರಿತು ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಸಾಸ್ವೆಹಳ್ಳಿ ಯೋಜನೆಗೆ ಹೊನ್ನಾಳಿ ತಾಲ್ಲೂಕಿನಲ್ಲಿ 6 ಎಕರೆ 3 ಗುಂಟೆ ಹಾಗೂ ಚನ್ನಗಿರಿ ತಾಲ್ಲೂಕಿನಲ್ಲಿ 9 ಎಕರೆ 14 ಗುಂಟೆ ಭೂಸ್ವಾಧೀನ ಮಾಡಿಕೊಳ್ಳಲಾಗುತ್ತದೆ. ಈಗಾಗಲೇ ಸಾಸ್ವೆಹಳ್ಳಿ ಗ್ರಾಮದಲ್ಲಿ 3 ಎಕರೆ 3 ಗುಂಟೆಗೆ ಸಂಬಂಧಿಸಿದಂತೆ ಭೂಮಿ ಕಳೆದುಕೊಳ್ಳುವ ರೈತರಿಗೆ ಶೇ 50ರಷ್ಟು ಪರಿಹಾರ ಹಣ ಪಾವತಿಸಲಾಗಿದೆ. ಚನ್ನಗಿರಿ ತಾಲ್ಲೂಕು ಚಕ್ಕಲಿ ಗ್ರಾಮ ಬಳಿ ಪಂಪ್‍ಹೌಸ್, ಎಲೆಕ್ಟ್ರಿಕಲ್ ಸಬ್‍ಸ್ಟೇಷನ್, ಕೂಡುವ ರಸ್ತೆಗೆ ಅಗತ್ಯವಿರುವ ಒಟ್ಟು 7 ಎಕರೆ ಭೂಮಿಗೆ ಸಂಬಂಧಿಸಿದಂತೆ ಶೇ 50 ರಷ್ಟು ಪರಿಹಾರ ಹಣ ಪಾವತಿಸಲಾಗಿದೆ‌ ಎಂದು ತಿಳಿಸಿದರು.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಮುತ್ತಗದೂರು ಬಲಿ ಪಂಪ್‍ಹೌಸ್ ಹಾಗೂ ವಿದ್ಯುತ್ ಸಬ್‍ಸ್ಟೇಷನ್, ಚಿತ್ರದುರ್ಗ ತಾಲ್ಲೂಕು ಮದಕರಿ ಮತ್ತು ದೊಡ್ಡಿಗನಾಳ್ ಗ್ರಾಮ ಬಳಿ ಭೂಸ್ವಾಧೀನ ಪ್ರಕ್ರಿಯೆಯನ್ನು ತ್ವರಿತವಾಗಿ ಪೂರ್ಣಗೊಳಿಸಿ ನಿಗಮಕ್ಕೆ ಹಸ್ತಾಂತರ ಮಾಡಬೇಕು ಎಂದು ಸೂಚಿಸಿದರು.

ಹೊನ್ನಾಳಿ ತಾಲ್ಲೂಕಿನಲ್ಲಿ ಪಂಪ್‍ಹೌಸ್-1 ರ ಬಳಿ ನಿರ್ಮಿಸಲು ಉದ್ದೇಶಿಸಿರುವ ಎಲೆಕ್ಟ್ರಿಕಲ್ ಸಬ್‍ಸ್ಟೇಷನ್‍ಗೆ ವಿದ್ಯುತ್ ಸಂಪರ್ಕಕ್ಕಾಗಿ ದಿಡಗೂರು, ಬೀರಗೊಂಡನಹಳ್ಳಿ, ಚಿಕ್ಕಬಾಸೂರು, ಉಜ್ಜನೀಪುರ, ಹೊಟ್ಯಾಪುರ, ಸದಾಶಿವಪುರ, ಸಾಸ್ವೆಹಳ್ಳಿ, ಮಾವಿನಕೋಟೆ ಗ್ರಾಮ ವ್ಯಾಪ್ತಿಯಲ್ಲಿ ಒಟ್ಟು 49 ವಿದ್ಯುತ್ ಟವರ್‌ಗಳನ್ನು ನಿರ್ಮಿಸಬೇಕಿದೆ. 48 ಎಕರೆ ಭೂಮಿಯನ್ನು ಗುರುತಿಸಲಾಗಿದೆ. ಇದಕ್ಕಾಗಿ ಅಗತ್ಯ ಜಾಗ ಮತ್ತು ಕಾರಿಡಾರ್ ಹಾದುಹೋಗುವ ಮಾರ್ಗದ ಸರ್ವೆ ನಕ್ಷೆ ಹಾಗೂ ಬಾಧಿತರಾಗುವ ರೈತರ ಭೂಮಿಯ ಸರ್ವೆ ನಂಬರ್‌ಗಳೊಂದಿಗೆ ಸರ್ವೆ ಕಾರ್ಯ ಪೂರ್ಣಗೊಂಡಿದೆ. ಪರಿಹಾರ ಮೊತ್ತ ನಿಗದಿಪಡಿಸುವುದು ಬಾಕಿ ಇದೆ. ಹೊಳಲ್ಕೆರೆ ತಾಲ್ಲೂಕು ಸಾಸಲು ಗ್ರಾಮ ಬಳಿಯ ಸಬ್‍ಸ್ಟೇಷನ್‍ಗೆ 20 ಟವರ್‌ಗಳ ನಿರ್ಮಾಣಕ್ಕೆ ಸರ್ವೆ ಪೂರ್ಣಗೊಂಡಿದೆ. ಕೆರೆಬಿಳಚಿ ಗ್ರಾಮ ಬಳಿ ವಿದ್ಯುತ್ ಸಬ್‍ಸ್ಟೇಷನ್‍ಗೆ ವಿದ್ಯುತ್ ಸಂಪರ್ಕಿಸಲು 4.5 ಕಿ.ಮೀ. ಮಾರ್ಗದಲ್ಲಿ 20 ವಿದ್ಯುತ್ ಟವರ್ ನಿರ್ಮಾಣಕ್ಕೆ ಜಕ್ಕಲಿ, ಸೋಮಲಾಪುರ, ಕೆರೆಬಿಳಚಿ ಗ್ರಾಮಗಳ ಸರ್ವೆ ಕಾರ್ಯವನ್ನು ಚನ್ನಗಿರಿ ತಹಸಿಲ್ದಾರರು ತ್ವರಿತವಾಗಿ ಮಾಡಿಸಬೇಕು ಎಂದರು.

ಪರಿಹಾರ ಮೊತ್ತದ ದರವನ್ನು ಒಂದು ವಾರದೊಳಗೆ ನಿಗದಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಭರವಸೆ ನೀಡಿದರು. ‌

ರಾಜನಹಳ್ಳಿ ಏತನೀರಾವರಿ: ಜಿಲ್ಲೆಯ ಜಗಳೂರು ತಾಲ್ಲೂಕಿನ 3 ಮತ್ತು ದಾವಣಗೆರೆ ತಾಲ್ಲೂಕಿನ 19 ಸೇರಿದಂತೆ ಒಟ್ಟು 22 ಕೆರೆಗಳಿಗೆ ನೀರು ತುಂಬಿಸಲು ರಾಜನಹಳ್ಳಿ ಏತ ನೀರಾವರಿ ಯೋಜನೆ ಜಾರಿಯಲ್ಲಿದೆ. ಮೊದಲನೇ ಹಂತದಲ್ಲಿ ಹರಿಹರ ತಾಲ್ಲೂಕಿನ ಹಲಸಬಾಳು ಗ್ರಾಮ ಬಳಿ ತುಂಗಭದ್ರಾ ನದಿಯಿಂದ ನೀರೆತ್ತಿ 28 ಕಿ.ಮೀ. ದೂರದಲ್ಲಿರುವ ದಾವಣಗೆರೆ ತಾಲ್ಲೂಕಿನ ಮಲ್ಲಶೆಟ್ಟಿಹಳ್ಳಿ ಗ್ರಾಮದ ಹತ್ತಿರದ ಎರಡನೇ ಹಂತಕ್ಕೆ ನೀರೊದಗಿಸಲಾಗುವುದು. ಎರಡನೆ ಹಂತದಲ್ಲಿ 22 ಕೆರೆಗಳಿಗೆ 150 ಕಿ.ಮೀ. ಪೈಪ್‍ಲೈನ್ ಮುಖಾಂತರ ನೀರೊದಗಿಸುವ ಯೋಜನೆ ಇದಾಗಿದೆ ಎಂದು ಯೋಜನೆಯ ಕಾರ್ಯಪಾಲಕ ಎಂಜಿನಿಯರ್‌ ಮಲ್ಲಪ್ಪ ಹೇಳಿದರು.

ಹಳಸಬಾಳು ಪಂಪ್‍ಹೌಸ್‍ಗೆ ಸಂಪರ್ಕಿಸುವ 225 ಮೀ. ಉದ್ದ ಹಾಗೂ ಮಲ್ಲಶೆಟ್ಟಿಹಳ್ಳಿ ಬಳಿಯ 50 ಮೀ. ಉದ್ದದ ಇಂಟೆಕ್ ಚಾನಲ್‍ನ ಹೂಳನ್ನು ತೆಗೆಸಲು ಸೂಚನೆ ನೀಡಲಾಗಿದ್ದು, ಸದ್ಯ ಇಂಟೇಕ್‍ಚಾನಲ್‍ನಲ್ಲಿ ನೀರು ಖಾಲಿಯಿದ್ದು, ಮಳೆಗಾಲ ಪ್ರಾರಂಭವಾಗುವುದರ ಒಳಗಾಗಿ ಹೂಳು ತೆಗೆಸಬೇಕು ಎಂದು ಸಂಸದರು ಸೂಚನೆ ನೀಡಿದರು.

ಏತನೀರಾವರಿ ಯೋಜನೆಯ ರಾಷ್ಟ್ರೀಯ ಹೆದ್ದಾರಿ 4 ರ ಪಕ್ಕದಲ್ಲಿರುವ ಪೈಪ್‍ಲೈನ್‍ಅನ್ನು ಸ್ಥಳಾಂತರಿಸುವ ಕಾಮಗಾರಿ ತ್ವರಿತವಾಗಿ ಕೈಗೊಳ್ಳದಿರುವುದಕ್ಕೆ ಸಂಸದರು ಅಸಮಾಧಾನ ವ್ಯಕ್ತಪಡಿಸಿದರು.

ದಾವಣಗೆರೆಯಿಂದ ಹಾವೇರಿವರೆಗಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಫ್ಲೈಓವರ್‌ಳ ಬಳಿ ಹಾಗೂ ಕೆಳ ಸೇತುವೆ ಬಳಿ ಮಳೆ ನೀರು ರಸ್ತೆಯ ಮೇಲೆಯೇ ನಿಲ್ಲುತ್ತಿದೆ. ಅದರನ್ನು ಸರಿಪಡಿಸಬೇಕು ಎಂದು ಸಲಹೆ ನೀಡಿದರು.

ಮಾಯಕೊಂಡ ಕ್ಷೇತ್ರದ ಶಾಸಕ ಪ್ರೊ. ಲಿಂಗಣ್ಣ, ಕರ್ನಾಟಕ ನೀರಾವರಿ ನಿಗಮ ತುಂಗಾ ಮೇಲ್ದಂಡೆ ಯೋಜನಾ ವಲಯದ ಮುಖ್ಯ ಎಂಜಿನಿಯರ್ ಯತೀಶ್‍ಚಂದ್ರ, ಉಪ ವಿಭಾಗಾಧಿಕಾರಿ ಮಮತಾ ಹೊಸಗೌಡರ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT