ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣು ಉಳಿಯದೇ ಮನುಕುಲ ಉಳಿಯದು

ಇಂದು ವಿಶ್ವ ಮಣ್ಣುದಿನ: ರಸಗೊಬ್ಬರದಿಂದ ದೂರವಾಗುತ್ತಿದೆ ಭೂಮಿಯ ಫಲವತ್ತತೆ
Last Updated 5 ಡಿಸೆಂಬರ್ 2022, 5:38 IST
ಅಕ್ಷರ ಗಾತ್ರ

ದಾವಣಗೆರೆ: ಫಲವತ್ತಾದ ಮಣ್ಣು ಉಳಿಯದೇ ಮನುಕುಲ ಉಳಿಯುವುದಿಲ್ಲ. ರಾಸಾಯನಿಕ ಗೊಬ್ಬರಗಳ ಅತಿ ಬಳಕೆಯಿಂದ ಫಲವತ್ತತೆ ಕಳೆದುಕೊಳ್ಳುತ್ತಿದೆ. ಡಿ.5ರಂದು ‘ವಿಶ್ವ ಮಣ್ಣು ದಿನ’ ಆಚರಿಸಲಾಗುತ್ತಿದೆ. ಮಣ್ಣು ಸಾಯದಂತೆ ನೋಡಿಕೊಂಡರೆ ಈ ದಿನಾಚರಣೆಗೆ ಅರ್ಥ ಬರಲಿದೆ. ಈ ಹಿನ್ನೆಲೆಯಲ್ಲೇ ಮೈಕ್ರೋಬಿ ಫೌಂಡೇಶನ್‌ ಕೆಲಸ ಮಾಡುತ್ತಿದೆ.

ಮಣ್ಣಲ್ಲಿ ಕೋಟ್ಯಾನುಕೋಟಿ ಸೂಕ್ಷ್ಮಜೀವಿಗಳಿವೆ. ಅವು ಕಾರ್ಮಿಕರಂತೆ ಕೆಲಸ ಮಾಡುತ್ತಿರುತ್ತವೆ. ರಸಗೊಬ್ಬರ, ಕೀಟನಾಶಕ, ಕಳೆನಾಶಕ ವಿಪರೀತ ಬಳಸಿದಾಗ ಈ ಸೂಕ್ಷ್ಮಾಣು ಜೀವಿಗಳು ನಾಶವಾಗುತ್ತವೆ. ಮಣ್ಣಿನ ಭೌತಿಕ, ಜೈವಿಕ, ರಾಸಾಯನಿಕ ರೂಪ ಹಾಳಾಗುತ್ತದೆ. ಅವುಗಳ ಜತೆಗೆ ರೈತನಂತೆ ಉಳುಮೆ ಕೆಲಸ ಮಾಡುವ ಎರೆಹುಳುಗಳೂ ನಾಶವಾಗುತ್ತವೆ. ಪ್ರಕೃತಿ ಪೂರಕ ಕೃಷಿಗೆ ಮರಳುವುದೊಂದೇ ದಾರಿ.

ರಾಸಾಯನಿಕ ಕೃಷಿಯಿಂದ ಒಮ್ಮೆಲೇ ಸಹಜ ಕೃಷಿಯತ್ತ ಬರುವುದು ಕಷ್ಟ. ಅದಕ್ಕಾಗಿ ಸಾವಯವ ಕೃಷಿ ಮತ್ತು ಜೈವಿಕ ಕೃಷಿಯನ್ನು ಮಾಡಬೇಕಾಗುತ್ತದೆ. ಜೀವಾಮೃತ, ಹಟ್ಟಿಗೊಬ್ಬರ, ಹಸಿರೆಲೆ ಗೊಬ್ಬರ, ಮಾರುಕಟ್ಟೆಯಲ್ಲಿ ಸಿಗುವ ಜೈವಿಕ ಗೊಬ್ಬರ ಬಳಸಿದರೆ ಮಣ್ಣು ಫಲವತ್ತಗೊಳ್ಳುತ್ತದೆ. ಎರೆಹುಳು ಸೃಷ್ಟಿಸುವ ಗೊಬ್ಬರಕ್ಕಿಂತ ಶ್ರೇಷ್ಠವಾದ ಗೊಬ್ಬರ ಇನ್ನೊಂದಿಲ್ಲ. ಅದಕ್ಕೆ ಪೂರಕವಾದ ಮಣ್ಣನ್ನು ತಯಾರು ಮಾಡಬೇಕು. ಅದಕ್ಕಾಗಿ ರೈತರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಫೌಂಡೇಶನ್‌ ಮಾಡುತ್ತಾ ಬಂದಿದೆ ಎಂದು ಮೈಕ್ರೋಬಿ ಫೌಂಡೇಶನ್‌ನ ಜಿಲ್ಲಾ ಸಂಚಾಲಕ ‌ಮಹಾದೇವಪ್ಪ ದಿದ್ದಿಗೆ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮಣ್ಣು ಜೀವಿಸಲಿ ಅಭಿಯಾನ’, ‘ಮಣ್ಣಿಗೆ ಮರುಜೀವ’, ‘ಸಾವಯವ ತ್ಯಾಜ್ಯಗಳ ನಿರ್ವಹಣೆ’, ‘ಸಾವಯವ ತ್ಯಾಜ್ಯಗಳ ಕಳಿಯುವಿಕೆ’ ಮುಂತಾದ ಅಭಿಯಾನಗಳನ್ನು ಮಾಡಿ ರೈತರಿಗೆ ಮಣ್ಣಿನ ಮಹತ್ವವನ್ನೂ, ರಸಗೊಬ್ಬರಗಳ ಅಪಾಯವನ್ನೂ ತಿಳಿಸುತ್ತಾ ಬರಲಾಗಿದೆ. ಭೌತಿಕವಾಗಿ ಮಣ್ಣು ಸರಿ ಇದ್ದಾಗ ಮೆದು ಇರುತ್ತದೆ. ಬೇರುಗಳು ಸುಲಭವಾಗಿ ಹರಡುತ್ತವೆ. ಬಿಳಿ ಬೇರುಗಳು ಹೆಚ್ಚು ಇದ್ದಷ್ಟು ಗಿಡ, ಮರಗಳು ಆರೋಗ್ಯವಾಗಿರುತ್ತವೆ. ಮಣ್ಣು ಮೆದು ಇದ್ದಾಗ ಗಾಳಿ ಅಲ್ಲಾಡುತ್ತದೆ. ಮಣ್ಣು ಗಟ್ಟಿಯಾಗಿದ್ದರೆ ಅಲ್ಲಿ ಗಾಳಿ ಅಲ್ಲಾಡುವುದಿಲ್ಲ. ಸೂಕ್ಷ್ಮ ಜೀವಿಗಳು ಸೃಷ್ಟಿಯಾಗುವುದಿಲ್ಲ ಎಂದು ವಿವರಿಸಿದರು.

ಹಟ್ಟಿಗೊಬ್ಬರ, ತರಗೆಲೆಗಳು ಕಳಿಯುವುದು (ಕೊಳೆಯವುದು ಅಲ್ಲ) ಜೈವಿಕ ರೂಪ. ಒಂದು ಗುಂಟೆಯಲ್ಲಿ 10.ಕೆ.ಜಿ. ಎರೆಹುಳು ಇದ್ದರೆ ದಿನಕ್ಕೆ 50 ಕೆ.ಜಿ. ಗೊಬ್ಬರ ಉತ್ಪತ್ತಿಯಾಗುತ್ತದೆ. ಎರೆಹುಳುಗಳು 8 ಅಡಿಗೂ ಹೆಚ್ಚು ಆಳಕ್ಕೆ ಹೋಗಿ ಬರುತ್ತಿರುತ್ತವೆ. ಹೋಗುವ ದಾರಿಯಲ್ಲಿ ಬಾರದೇ ಬೇರೆ ದಾರಿಯಲ್ಲೇ ಬರುವುದರಿಂದ ಮಣ್ಣು ಉಳುಮೆ ಮಾಡಿದಂತಾಗುತ್ತದೆ. ಎರೆಹುಳುವಿನ ಮೇಲೆ ಇರುವ ಎರೆಜಲವು ಈ ಮಣ್ಣಿಗೆ ಅಂಟಿಕೊಳ್ಳುತ್ತದೆ. ಇದರಲ್ಲಿ ಜಿಂಕ್‌, ಬೋರಾನ್‌ ಸಹಿತ ಎಲ್ಲ ಖನೀಜಾಂಶಗಳು ಇರುತ್ತವೆ ಎನ್ನುವುದು ಅವರ ವಾದವಾಗಿದೆ.

‘ಹಾಲು ಉತ್ಪಾದಕ ಯಂತ್ರದಂತಿರುವ ಹೈಬ್ರೀಡ್‌ ತಳಿಯ ಹಸುಗಳ ಬದಲು ಪ್ರತಿ ರೈತರು ದೇಸಿ ಹಸುವನ್ನು ಸಾಕಬೇಕು. ಒಂದು ದೇಸಿ ಹಸು ಇದ್ದರೆ ಅದು 5 ಎಕರೆ ಭೂಮಿ ಕೃಷಿ ಮಾಡಲು ಗೊಬ್ಬರ ಒದಗಿಸುತ್ತದೆ. ಮಣ್ಣಿನ ಫಲವತ್ತದೆ ಸಹಿತ ಯಾವುದೇ ಮಾಹಿತಿಯನ್ನು ನಾವು ‘ದಾತು’ ಆ್ಯಪ್‌ ಮೂಲಕ ನೀಡುತ್ತಿದ್ದೇವೆ. ಇದರ ಪ್ರಯೋಜನವನ್ನು ರೈತರು ಪಡೆಯಬಹುದು’ ಎಂದು ಮಹಾದೇವಪ್ಪ (ಸಂಪರ್ಕ ಸಂಖ್ಯೆ 99726 99813) ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT