ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕಡರನಾಯ್ಕನಹಳ್ಳಿ | ಅಡಿಕೆ ತೋಟ: ಹಲವು ರೋಗಗಳ ಕಾಟ

Published 25 ಜೂನ್ 2024, 6:37 IST
Last Updated 25 ಜೂನ್ 2024, 6:37 IST
ಅಕ್ಷರ ಗಾತ್ರ

ಕಡರನಾಯ್ಕನಹಳ್ಳಿ: ಅಡಿಕೆ ಬೆಳೆಯು ಕೃಷಿಯ ಬಹುಪಾಲು ಪ್ರದೇಶಗಳನ್ನು ಆಕ್ರಮಿಸಿದೆ. ಈಗ ಅಡಿಕೆ ಗಿಡ ರಕ್ಷಣೆಯೂ ಕಷ್ಟದಾಯಕವಾಗಿದೆ. ಎಲೆಚುಕ್ಕಿ ರೋಗ, ಬುಡ ಕೊಳೆ ರೋಗ, ಬಿಸಿಲಿನ ಝಳದಿಂದ ರಕ್ಷಣೆಗಾಗಿ ಅಡಿಕೆ ಬೆಳೆಗಾರರು ಕಷ್ಟ ಪಡುವಂತಾಗಿದೆ.

ಬಿಸಿಲಿನ ತಾಪದಿಂದ ಅಡಿಕೆ ಮರಗಳು ಅರ್ಧಕ್ಕೆ ಮುರಿದು ಬೀಳು ತ್ತಿವೆ. ಇಳುವರಿ ಕಡಿಮೆಯಾಗುತ್ತಿದೆ. ಇದರಿಂದ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ.

ಕಡರನಾಯ್ಕನಹಳ್ಳಿ ಸಮೀಪದ ವಾಸನ ಗ್ರಾಮದ ಗದಿಗೆಪ್ಪ ಗಂಟೇರ ಅವರು ಒಂದು ಎಕರೆ ಪ್ರದೇಶದಲ್ಲಿ ಅಡಿಕೆ ತೋಟ ಮಾಡಿದ್ದು, ಸುಮಾರು 9 ಅಡಿಕೆ ಗಿಡಗಳು ಮುರಿದು ಬಿದ್ದಿವೆ.

ಬೇಸಿಗೆ ಬಿಸಿಲಿನ ಝಳಕ್ಕೆ ಅಡಿಕೆ ಗಿಡದ ಕಾಂಡಗಳು ಹಾನಿಯಾಗುತ್ತವೆ. ಮಳೆಗಾಲದಲ್ಲಿ ಮಳೆನೀರು ಹಾನಿಗೊಂಡ ಕಾಂಡಗಳ ಆಳಕ್ಕೆ ಇಳಿದು ಕಾಂಡ ಕೊಳೆಯುತ್ತದೆ. ಗಾಳಿ ಬೀಸಿದಾಗ ಮುರಿದು ಬೀಳುತ್ತದೆ.

ಅಡಿಕೆ ಮರಗಳ ಕಾಂಡಕ್ಕೆ ಶೆಡ್‌ ನೆಟ್ ಅಳವಡಿಸಬೇಕು ಅಥವಾ ಸುಣ್ಣದ ಲೇಪನ ಮಾಡಬೇಕು. ಆಗ ಬಿಸಿಲಿನ ಝಳದಿಂದ ಕಾಂಡಗಳನ್ನು ರಕ್ಷಿಸಬಹುದು. ಹಲವು ರೈತರು ಈ ಕ್ರಮ ಅನುಸರಿಸಿದರೂ ಕೆಲ ಗಿಡಗಳ ಬುಡ ಕೊಳೆತಂತೆ ಕಂಡುಬಂದಿವೆ. ಕೆಲವು ಮುರಿದು ಬಿದ್ದಿವೆ. ಇನ್ನೂ ಅನೇಕ ಗಿಡಗಳು ಮುರಿದು ಬೀಳುವ ಹಂತದಲ್ಲಿವೆ. ಇದು ಬೆಳೆಗಾರರ  ಆತಂಕಕ್ಕೆ ಕಾರಣವಾಗಿದೆ.

ಇದು ಬುಡ ಕೊಳೆಯುವ ರೋಗ ಇರಬಹುದು ಎಂದು ಶಂಕಿಸಿರುವ ರೈತರು, ಸುಣ್ಣದ ಲೇಪನ ಮಾಡಿದ ಮೇಲೆ ಈ ರೀತಿ ಆಗಬಾರದಿತ್ತು ಎಂದು ಅಭಿಪ್ರಾಯಪಡುತ್ತಾರೆ.

ದೀರ್ಘಾವಧಿ ಮತ್ತು ಲಾಭದಾಯಕ ಬೆಳೆಯಾದ ಅಡಿಕೆ ಬೆಳೆಯುವತ್ತ ರೈತರು ಮಾರುಹೋಗಿದ್ದಾರೆ. ಈ ರೀತಿ ರೋಗ– ರುಜಿನಗಳಿಗೆ ಹಾನಿಗೊಂಡ ಸ್ಥಳದಲ್ಲಿ ಪುನಃ ಅಡಿಕೆ ಗಿಡಗಳನ್ನು ನೆಟ್ಟರೂ ಅವು ಬೆಳೆಯುವುದಿಲ್ಲ. ಬಿಸಿಲಿನ ತಾಪ ಮತ್ತು ಅಸಮರ್ಪಕ ನೀರು ಸರಬರಾಜು, ಮಳೆಯ ಅಭಾವದಿಂದ ಅಡಿಕೆ ತೋಟಗಳಿಗೆ ಹಾನಿಯಾಗಿದೆ. ಟ್ಯಾಂಕರ್ ಮೂಲಕ ನೀರುಣಿಸಿದ್ದರೂ ಬಹುತೇಕ ರೈತರಿಗೆ ಅಡಿಕೆ ತೋಟ ಸಂಪೂರ್ಣ ಉಳಿಸಿಕೊಳ್ಳಲಾಗಿಲ್ಲ.

ಹೊಳೆ ಸಿರಿಗೆರೆ, ಕಡರನಾಯ್ಕನಹಳ್ಳಿ, ಹೊಸಪಾಳ್ಯ, ವಾಸನ, ಯಲವಟ್ಟಿ, ಕೊಕ್ಕನೂರು ಮುಂತಾದ ಕಡೆಗಳಲ್ಲಿ ಇದೆ ಪರಿಸ್ಥಿತಿ ಇದೆ. ಅಂದಾಜು ಐವತ್ತು ಎಕರೆಗಳಲ್ಲಿ ಅಡಿಕೆ ಮರಗಳು ಭಾಗಶಃ ಹಾನಿಗೊಳಗಾಗಿವೆ. ಈ ಬಾರಿ ಅಡಿಕೆ ಫಸಲಿನ ಇಳುವರಿ ತುಂಬಾ ಕಡಿಮೆ ಆಗಿದೆ ಎನ್ನುತ್ತಾರೆ ರೈತರು.

ಶೆಡ್‌ ನೆಟ್‌ ಅಳವಡಿಸಿ

ಅಡಿಕೆ ಮರಗಳ ಕಾಂಡಕ್ಕೆ ಶೆಡ್‌ ನೆಟ್ ಅಳವಡಿಸಬೇಕು ಅಥವಾ ಕಾಂಡಕ್ಕೆ ಉತ್ತಮ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ 4ರಿಂದ 5 ಅಡಿ ಎತ್ತರದವರೆಗೆ ಸ್ವಾಭಾವಿಕವಾಗಿ ಸುಟ್ಟ ಸುಣ್ಣವನ್ನೇ ಲೇಪನ ಮಾಡಬೇಕು. ಸುಣ್ಣ ಲೇಪನದಿಂದ ಮರಗಳು ಮೃದುವಾಗುತ್ತವೆ. ಸುಣ್ಣದ ನೀರಿನೊಂದಿಗೆ ಹದಕ್ಕೆ ತಕ್ಕಷ್ಟು ಮೈದಾ ಹಿಟ್ಟು, ಹರಳೆಣ್ಣೆ, ಕುದಿಸಿ ಆರಿಸಿದ ಬೆಲ್ಲದ ಪಾನಕವನ್ನು ಮಿಶ್ರಣ ಮಾಡಿ ಪ್ರತಿ ಮರಕ್ಕೆ ಲೇಪನ ಮಾಡಬೇಕು.

ಎಚ್.ಎನ್.ಶಶಿಧರ್ ಸ್ವಾಮಿ, ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ, ಹರಿಹರ

7–8 ಅಡಿಯಲ್ಲಿ ಸಸಿ ನಾಟಿ ಮಾಡಿ

ಹರಿಹರ ತಾಲ್ಲೂಕಿನಲ್ಲಿ ಒಟ್ಟು 12,377 ಎಕರೆಯಲ್ಲಿ ಅಡಿಕೆ ಬೆಳೆಯಲಾಗಿದೆ. ಗಿಡದಿಂದ ಗಿಡಕ್ಕೆ 6– 8, ಮತ್ತು 7–8 ಅಡಿದಲ್ಲಿ ಅಡಿಕೆ ಸಸಿಗಳನ್ನು ನಾಟಿ ಮಾಡಬೇಕು. ಇದರಿಂದ ಕಾಂಡಗಳ ಮೇಲೆ ನೆರಳು ಬೀಳುತ್ತದೆ. ಆದರೆ 9–9 ಮತ್ತು 8.5–9 ಅಡಿಯಲ್ಲಿ ಬಹುಪಾಲು ರೈತರು ತೋಟ ಮಾಡಿದ್ದಾರೆ. ಆದರೂ ಶೆಡ್‌ ನೆಟ್ ಮತ್ತು ಸರಿಯಾದ ಪ್ರಮಾಣದಲ್ಲಿ ಸುಣ್ಣದ ಲೇಪನ ಮಾಡಿ ಅಡಿಕೆ ತೋಟಗಳನ್ನು ರಕ್ಷಿಸಿಕೊಳ್ಳಬಹುದು.

ಸಂತೋಷ್, ಸಹ ನಿರ್ದೇಶಕ, ತೋಟಗಾರಿಕೆ ಇಲಾಖೆ, ಹರಿಹರ

ಮರಗಳುನಾಲ್ಕು ವರ್ಷದ ಅಡಿಕೆ ಗಿಡಗಳು ಮುರಿದು ಬಿದ್ದಿವೆ. ತೋಟಗಾರಿಕೆ ಇಲಾಖೆಯಿಂದ ರಿಯಾಯಿತಿ ದರದಲ್ಲಿ ಶೆಡ್‌ ನೆಟ್ ಒದಗಿಸಬೇಕು. ಔಷಧೋಪಚಾರದ ಅವಶ್ಯಕತೆ ಇದ್ದಲ್ಲಿ ರೈತರಿಗೆ ಪ್ರಾತ್ಯಕ್ಷಿಕೆ ಮೂಲಕ ತಿಳಿಸಬೇಕು.
ಗಂಟೇರ ಗದಿಗೆಪ್ಪ, ರೈತ, ವಾಸನ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT