ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಮಹಿಳಾ ನಿಲಯದಲ್ಲಿ ಮದುವೆ ಸಂಭ್ರಮ

Published 21 ಫೆಬ್ರುವರಿ 2024, 7:09 IST
Last Updated 21 ಫೆಬ್ರುವರಿ 2024, 7:09 IST
ಅಕ್ಷರ ಗಾತ್ರ

ದಾವಣಗೆರೆ: ಮಧುಮಗಳಿಗೆ ಅರಿಶಿನ ಶಾಸ್ತ್ರ, ಬಳೆ ಶಾಸ್ತ್ರ ನೆರವೇರಿಸುತ್ತಿರುವ ಮಹಿಳೆಯರು, ಕೈಗಳಿಗೆ ಮೆಹಂದಿ ಹಾಕಿಸಿಕೊಂಡು ಸಂಭ್ರಮದಲ್ಲಿ ಓಡಾಡುತ್ತಿರುವ ಯುವತಿಯರು, ‘ಕಲ್ಯಾಣ’ದ ಕೊನೆಯ ಹಂತದ ಸಿದ್ಧತೆಯಲ್ಲಿ ತೊಡಗಿರುವ ಮಹಿಳಾ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು..

ನಗರ ಹೊರವಲಯದ ಶ್ರೀರಾಮನಗರ ಬಳಿಯ ಕೈಗಾರಿಕಾ ಪ್ರದೇಶದಲ್ಲಿರುವ ರಾಜ್ಯ ಮಹಿಳಾ ನಿಲಯದಲ್ಲಿ ಮಂಗಳವಾರ ಕಂಡುಬಂದ ದೃಶ್ಯವಿದು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ರಾಜ್ಯ ಮಹಿಳಾ ನಿಲಯದಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಮದುವೆ ಸಮಾರಂಭ ನಡೆಯುತ್ತಿದೆ. ನಿಲಯದ ನಿವಾಸಿ ದಿವ್ಯಾ ಎಂ. ಅವರ ವಿವಾಹವು, ಚಿತ್ರದುರ್ಗ ಜಿಲ್ಲೆಯ ಮುದ್ದಾಪುರ ಗ್ರಾಮದ ನಾಗರಾಜ್‌ ಟಿ. ಅವರೊಂದಿಗೆ ನೆರವೇರುತ್ತಿದೆ. ಫೆಬ್ರುವರಿ 21ರಂದು (ಬುಧವಾರ) ಬೆಳಿಗ್ಗೆ 11 ಗಂಟೆಗೆ ಮಂತ್ರಮಾಂಗಲ್ಯದ ಮೂಲಕ ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿರಿಸಲಿದೆ.

ಮದುವೆ ಹಿನ್ನೆಲೆಯಲ್ಲಿ ಮಹಿಳಾ ನಿಲಯದಲ್ಲಿ ಸಂಭ್ರಮ ಮನೆ ಮಾಡಿದೆ. ನಿಲಯದಲ್ಲಿರುವ ಯುವತಿಯರು, ಮಹಿಳೆಯರು ‘ಸಹೋದರಿ’ಯ ಕಲ್ಯಾಣಕ್ಕೆ ಖುಷಿಯಿಂದಲೇ ಸಿದ್ಧತೆಯಲ್ಲಿ ತೊಡಗಿದ್ದಾರೆ. ಲಗ್ನಪತ್ರಿಕೆ ಹಂಚುವುದು, ಅಗತ್ಯ ಸಾಮಗ್ರಿ ಖರೀದಿ ಸೇರಿದಂತೆ ಬಹುತೇಕ ಎಲ್ಲ ಕಾರ್ಯಗಳನ್ನು ವಾರದ ಹಿಂದೆಯೇ ಮುಗಿಸಿದ್ದು, ‘ಮನೆಮಗಳ’ ಮದುವೆ ಮಾಡಿ, ಶುಭ ಹಾರೈಸುವ ಕಾತರದಲ್ಲಿದ್ದಾರೆ. 

ಈ ಹಿಂದೆ ನಿಲಯದಲ್ಲಿದ್ದು, ಮದುವೆಯಾಗಿ ಗಂಡನ ಮನೆ ಸೇರಿರುವ ಮಹಿಳೆಯರು ತಮ್ಮ ಸಹೋದರಿಯ ಮದುವೆಗೆ ಆಗಮಿಸಿದ್ದಾರೆ. ‘ಗಂಡನ ಒಪ್ಪಿಗೆ ಪಡೆದು ಒಂದು ದಿನ ಮುಂಚೆಯೇ ಮದುವೆಗೆ ಬಂದಿದ್ದೇನೆ. ಮದುವೆ ದಿನ ಪತಿಯೂ ಮದುವೆಯಲ್ಲಿ ಭಾಗವಹಿಸಲಿದ್ದಾರೆ’ ಎಂದು ದೇವರಬೆಳೆಕೆರೆಯಿಂದ ಬಂದಿದ್ದ ವಿನೋದಾ ತಿಳಿಸಿದರು.

ವಸತಿ ನಿಲಯದ ಅಧೀಕ್ಷಕಿ ಶಕುಂತಲಾ ಬಿ. ಕೋಳೂರ, ಎಫ್‌ಡಿಎ ಸಿಂಧೂಜಾ, ಎಸ್‌ಡಿಎ ನಾಗವೇಣಿ ಸಿ., ಕಂಪ್ಯೂಟರ್ ಆಪರೇಟರ್‌ ಶೀಲಾ, ನರ್ಸಿಂಗ್‌ ಆಫೀಸರ್ ಕವಿತಾ ಎಸ್‌., ಸಿಬ್ಬಂದಿಯಾದ ಮಹಾದೇವಮ್ಮ, ಸುನಂದಮ್ಮ, ಸವಿತಮ್ಮ ಹಾಗೂ ಕವಿತಾ ಅವರು ಮದುವೆ ಕಾರ್ಯಗಳಲ್ಲಿ ತಲ್ಲೀನರಾಗಿರುವುದು ಕಂಡುಬಂತು.

43ನೇ ವಿವಾಹ:

1977ರಲ್ಲಿ ಪ್ರಾರಂಭಗೊಂಡ ಮಹಿಳಾ ನಿಲಯದಲ್ಲಿ ಸದ್ಯ 18 ವರ್ಷ ಮೇಲ್ಪಟ್ಟ 55 ಮಹಿಳೆಯರು ಆಶ್ರಯ ಪಡೆದಿದ್ದಾರೆ. ಮಹಿಳೆಯರ ಜೊತೆಗೆ ತಮ್ಮ 6 ವರ್ಷದ ಒಳಗಿನ ಮಕ್ಕಳಿಗೂ ಸಂಸ್ಥೆಯಲ್ಲಿ ಪೋಷಣೆ ನೀಡಲಾಗುತ್ತಿದೆ. ಇದುವರೆಗೂ 42 ವಿವಾಹಗಳು ನಡೆದಿದ್ದು, ಬುಧವಾರ 43ನೇ ವಿವಾಹ ಸಂಭ್ರಮಕ್ಕೆ ಮಹಿಳಾ ನಿಲಯ ಸಾಕ್ಷಿಯಾಗಲಿದೆ. 2020ರ ಒಂದೇ ವರ್ಷದಲ್ಲಿ ನಿಲಯದ 6 ಯುವತಿಯರ ಮದುವೆ ನಡೆಸಿದ್ದು, ದಾಖಲೆಯಾಗಿ ಉಳಿದಿದೆ.

ಅನಾಥ ಯುವತಿಯರು, ಸಮಾಜದಲ್ಲಿ ನಾನಾ ಕಾರಣಗಳಿಂದ ದೌರ್ಜನ್ಯಕ್ಕೊಳಗಾದ, ಅತ್ಯಾಚಾರಕ್ಕೊಳಗಾದ, ಲೈಂಗಿಕ ಶೋಷಣೆಗೊಳಗಾದ ಅಥವಾ ಇನ್ನಿತರ ಯಾವುದೇ ಕಾರಣಗಳಿಂದಾಗಿ ದೈಹಿಕವಾಗಿ, ಮಾನಸಿಕವಾಗಿ ತೊಂದರೆಯಲ್ಲಿರುವ ಮಹಿಳೆಯರಿಗೆ ಈ ನಿಲಯದಲ್ಲಿ ಆಶ್ರಯ ನೀಡಲಾಗುತ್ತಿದೆ. ಮಾತ್ರವಲ್ಲದೇ ಅವರು ಸ್ವಾವಲಂಬಿ ಜೀವನ ಕಟ್ಟಿಕೊಳ್ಳಲು ಪೂರಕ ವಾತಾವರಣವನ್ನೂ ಸೃಷ್ಟಿಸಲಾಗುತ್ತಿದೆ.

₹ 15,000 ಬಾಂಡ್‌:

ಮದುವೆಯ ದಿನ ಮಧುಮಗಳ ಹೆಸರಿನಲ್ಲಿ ₹ 15,000 ಮೊತ್ತದ ಬಾಂಡ್‌ ಬರೆಸಲಾಗುತ್ತದೆ. 3 ವರ್ಷಗಳ ನಂತರ ದಂಪತಿಗೆ   ಬಡ್ಡಿ ಸಮೇತ ಬಾಂಡ್‌ ಮೊತ್ತವನ್ನು ನೀಡಲಾಗುತ್ತದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮದುವೆಯ ನಂತರವೂ ನಿಲಯದ ಮಹಿಳೆಯರ ಕುಟುಂಬವನ್ನು ಗಮನಿಸುತ್ತದೆ. ಜಿಲ್ಲಾ ಪರಿವೀಕ್ಷಣಾ ಅಧಿಕಾರಿಗಳು ಮಹಿಳೆಯ ಮನೆಗೆ ನಿಗದಿತ ಅವಧಿಗೊಮ್ಮೆ ಭೇಟಿ ನೀಡಿ, ಯಾವುದೇ ದೌರ್ಜನ್ಯ ನಡೆಯುತ್ತಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳುತ್ತದೆ.

2019ರಿಂದ ಈ ಮಹಿಳಾ ನಿಲಯದಲ್ಲಿದ್ದೇನೆ. ‘ನಿಲಯದ ಕುಟುಂಬ’ದವರೆಲ್ಲರೂ ಅತ್ಯಂತ ಪ್ರೀತಿಯಿಂದ ಮದುವೆ ಕಾರ್ಯ ನಡೆಸುತ್ತಿರುವುದು ಖುಷಿ ನೀಡಿದೆ. ಮದುವೆ ನಂತರವೂ ಈ ‘ತವರು ಮನೆ’ಯೊಂದಿಗೆ ನಂಟು ಇರುತ್ತದೆ
- ದಿವ್ಯಾ ಎಂ., ವಧು ಮಹಿಳಾ ನಿಲಯ
ನನಗೂ ಅಪ್ಪ ಅಮ್ಮ ಇಲ್ಲ. ಚಿಕ್ಕಂದಿನಿಂದ ಅಜ್ಜ– ಅಜ್ಜಿಯ ಆಶ್ರಯದಲ್ಲಿ ಬೆಳೆದೆ. ಅಜ್ಜಿಯೂ ತೀರಿಕೊಂಡಿದ್ದು ಅಜ್ಜನೊಂದಿಗೆ ವಾಸವಿದ್ದೇನೆ. ಉತ್ತಮ ಬದುಕು ಕಟ್ಟಿಕೊಳ್ಳುವ ಕನಸಿದೆ
- ನಾಗರಾಜ್ ಟಿ. ವರ ಮುದ್ದಾಪುರ ಚಿತ್ರದುರ್ಗ

ಇಂದು ಏನೆಲ್ಲಾ?

ಬೆಳಿಗ್ಗೆ 8 ಗಂಟೆಗೆ ಉಪಾಹಾರ 9 ಗಂಟೆಗೆ ಬೀಗರನ್ನು (ವರನ ಕಡೆಯವರು) ಬರ ಮಾಡಿಕೊಳ್ಳುವುದು 9 ಗಂಟೆಗೆ ಅರಿಶಿನ ಶಾಸ್ತ್ರ ಅಕ್ಕಿ ಕಾಳು ಶಾಸ್ತ್ರ ಬಾಸಿಂಗ ಕಟ್ಟುವ ಶಾಸ್ತ್ರ ನಡೆಯಲಿದೆ. 11 ಗಂಟೆಗೆ ಮಂತ್ರಮಾಂಗಲ್ಯ ನೆರವೇರಲಿದೆ. ಬಳಿಕ ಭೋಜನ ನಡೆಯಲಿದ್ದು ಗೋಧಿ ಹುಗ್ಗಿ ಜಿಲೇಬಿ ಕೋಸಂಬರಿ ಪೂರಿ ಪನೀರ್ ಮಸಾಲ ಅನ್ನ ಸಾಂಬಾರು ಉಣಬಡಿಸಲಾಗುತ್ತದೆ. ಆ ಬಳಿಕ ಮಧ್ಯಾಹ್ನ 2 ಗಂಟೆಗೆ ವಿವಾಹ ನೋಂದಣಿ ಕಚೇರಿಗೆ ತೆರಳಿ ವಿವಾಹ ನೋಂದಣಿ ಮಾಡಿಸಲಾಗುತ್ತದೆ. ನಂತರ ಮಹಿಳಾ ನಿಲಯದಲ್ಲಿ ದಾಖಲೆಗಳಿಗೆ ಸಹಿ ಮಾಡಿಸಿ ವಧುವನ್ನು ವರನೊಂದಿಗೆ ಕಳಿಸಲಾಗುತ್ತದೆ ಎಂದು ನಿಲಯದ ಅಧೀಕ್ಷಕಿ ಶಕುಂತಲಾ ಬಿ. ಕೋಳೂರ ‘ಪ್ರಜಾವಾಣಿ’ಗೆ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT