ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿದ ಬದುಕನ್ನು ಮುಚ್ಚುತ್ತಿದೆ ಮಾಸ್ಕ್

ಉದ್ಯೋಗ ಕಳೆದುಕೊಂಡವರಿಗೆ ವರದಾನವಾದ ಮುಖಗವಸು ಮಾರಾಟ
Last Updated 24 ಮೇ 2020, 19:45 IST
ಅಕ್ಷರ ಗಾತ್ರ

ದಾವಣಗೆರೆ: ಕೋವಿಡ್‌–19 ಬಂದಾಗಿನಿಂದ ಮಾಸ್ಕ್ ಬಳಕೆ ಕಡ್ಡಾಯವಾಗಿದೆ. ಅಗತ್ಯ ವಸ್ತುಗಳ ಕಾಯ್ದೆಯಡಿ ಮಾಸ್ಕ್
ಅನ್ನು ಅಗತ್ಯ ವಸ್ತು ಎಂದು ಗುರುತಿಸಲಾಗಿದೆ. ಈಗ ಮಾಸ್ಕ್ ಹಲವರ ಜೀವನಕ್ಕೆ ಆಧಾರವಾಗಿದೆ.

ಲಾಕ್‌ಡೌನ್‌ನಿಂದ ಉದ್ಯೋಗ ಕಳೆದುಕೊಂಡ ಕೆಲವು ಮಂದಿ ಮಾಸ್ಕ್ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಪೆಟ್ಟಿ ಹೋಟೆಲ್ ನಡೆಸುತ್ತಿದ್ದವರು, ಆಟೊ ಚಾಲಕರು ಹಾಗೂ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುವವರು, ಇನ್ನಿತರೆ ಕೆಲಸಗಾರರು ಮಾಸ್ಕ್‌ನಿಂದ ಬದುಕು ಕಂಡುಕೊಂಡಿದ್ದಾರೆ.

ರಸ್ತೆ ಬದಿಯಲ್ಲಿ ಹೆಲ್ಮೆಟ್, ಬೆಲ್ಟ್, ಕೂಲಿಂಗ್ ಗ್ಲಾಸ್ ಮಾರಾಟ ಮಾಡುವವರು, ಸಣ್ಣ ಅಂಗಡಿಗಳಲ್ಲಿ ಮಾಸ್ಕ್‌ಗಳನ್ನು ಎದ್ದು ಕಾಣುವಂತೆ ಜೋಡಿಸಿದ್ದಾರೆ. ವಿವಿಧ ಬಣ್ಣ–ವಿನ್ಯಾಸಗಳಲ್ಲಿ ಮಾಸ್ಕ್‌ಗಳು ಮಾರುಕಟ್ಟೆಗೆ ಬಂದಿವೆ. ಮಾಸ್ಕ್ಹಾಕುವುದನ್ನು ಕಡ್ಡಾಯ ಮಾಡಿರುವುದ
ರಿಂದ ಒಂದಿಷ್ಟು ಜನರ ತುತ್ತಿನ ಚೀಲಗಳೂ ತುಂಬುತ್ತಿವೆ. ಕೆಲವು ಟೈಲರ್‌ಗಳು ಮಾಸ್ಕ್‌ ಅನ್ನು ಹೊಲೆದು ತಂದು
ರಸ್ತೆಬದಿಯಲ್ಲಿ ಮಾರಾಟ ಮಾಡುತ್ತಿದ್ದಾರೆ.

ಮಾಗಾನಹಳ್ಳಿ ರಸ್ತೆಯಲ್ಲಿ ಮಾಸ್ಕ್ ಮಾರಾಟ ಮಾಡುತ್ತಿದ್ದ ಕಂಚಿಕೆರೆಯ ಶಂಕರ್ ಅವರಿಗೆ ಇಬ್ಬರು ತಂಗಿಯರು, ಇಬ್ಬರು ಮ‌ಕ್ಕಳಿದ್ದಾರೆ. ತಂಗಿಯರ ಮದುವೆ ಮಾಡುವ ಹೊಣೆ ಅವರ ಹೆಗಲ ಮೇಲಿದೆ. ಆರಂಭದಲ್ಲಿ ಸೂಟ್‌ಕೇಸ್‌ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಆಗ ತಿಂಗಳಿಗೆ ₹8 ಸಾವಿರ ಸಿಗುತ್ತಿದ್ದು, ಈಗ ಮಾಸ್ಕ್ ಮಾರಾಟ ಮಾಡುತ್ತಿದ್ದಾರೆ. ಅವರು ಒಂದು ದಿನಕ್ಕೆ ₹200 ಸಂಪಾದನೆ ಮಾಡುತ್ತಿದ್ದಾರೆ.

‘ಲಾಕ್‌ಡೌನ್‌ನಿಂದಾಗಿ ಅಂಗಡಿ ಮುಚ್ಚಿತು. ಜೀವನ ನಡೆಯಬೇಕಲ್ಲ. ಅದಕ್ಕೇ ಮಾರಾಟ ಮಾಡುತ್ತಿದ್ದೇನೆ. ಒಂದು ಮಾಸ್ಕ್‌ಗೆ ₹2 ಸಿಗುತ್ತದೆ. ದಿನಕ್ಕೆ 100ರಿಂದ 120 ಮಾಸ್ಕ್‌ಗಳು ಮಾರಾಟವಾಗುತ್ತಿವೆ. ಸದ್ಯಕ್ಕೆ ಜೀವನ ನಡೆದುಕೊಂಡು ಹೋಗುತ್ತಿದೆ’ ಎನ್ನುತ್ತಾರೆ ಶಂಕರ್.

ನಿಟುವಳ್ಳಿಯ ಠಾಕೂರ್‌ಸಿಂಗ್‌ ವೃತ್ತಿಯಲ್ಲಿ ಆಟೊ ಚಾಲಕ. ಆದರೆ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಆಟೊಗಳಿಗೆ ಬಾಡಿಗೆಗೆ ಯಾರೂ ಬರುತ್ತಿಲ್ಲ. ಜೀವನ ನಡೆಸುವುದಕ್ಕಾಗಿ ಮಾಸ್ಕ್ ಮಾರಾಟದ ಮೊರೆಹೋಗಿದ್ದಾರೆ.

‘ನನ್ನ ಬಳಿ ಎರಡು ಆಟೊಗಳಿವೆ. ಆದರೆ ಯಾರೊಬ್ಬರೂ ಬಾಡಿಗೆಗೆ ಬರುತ್ತಿಲ್ಲ. ಮಗಳು ಅಂಗವಿಕಲೆ. ಎರಡು ತಿಂಗಳಿನಿಂದ ಮನೆ ಬಾಡಿಗೆ ಕಟ್ಟಿಲ್ಲ. ಮಾಲೀಕ ಬಾಡಿಗೆ ಕೊಡಿ ಎಂದು ಪೀಡಿಸುತ್ತಿಲ್ಲ. ಆದರೆ ಮುಂದಿನ ದಿನಗಳಲ್ಲಾದರೂ ಬಾಡಿಗೆ ನೀಡಬೇಕಲ್ಲವೇ? ಒಂದು ಆಟೊವನ್ನು ಇಲ್ಲಿಯೇ ನಿಲ್ಲಿಸಿದ್ದೇನೆ’ ಎಂದು ಠಾಕೂರ್ ಸಿಂಗ್ ಆಟೊ ತೋರಿಸಿದರು.

‘ಈ ಹಿಂದೆ ಸಣ್ಣದೊಂದು ಪೆಟ್ಟಿ ಹೋಟೆಲ್ ನಡೆಸುತ್ತಿದ್ದೆ. ಲಾಕ್‌ಡೌನ್ ಆದ ಮೇಲೆ ಹೋಟೆಲ್ ಮುಚ್ಚಿಸಿದರು. ಎರಡು ತಿಂಗಳು ಮನೆಯಲ್ಲಿ ಇದ್ದೆ. ಈಗ ಹೋಟೆಲ್‌ನಲ್ಲಿ ಪಾರ್ಸೆಲ್ ತೆಗೆದುಕೊಂಡು ಹೋಗಲು ಅನುಮತಿ ನೀಡಿದ್ದಾರೆ. ನಮ್ಮ ಬಳಿ ಯಾರು ಬರ್ತಾರೆ ಸಾರ್, ಪಾರ್ಸೆಲ್ ತೆಗೆದುಕೊಂಡು ಹೋಗೋದಕ್ಕೆ’ ಎಂದು ವಿನೋಬನಗರದ ಮಂಜುನಾಥ್ ನೋವು ತೋಡಿಕೊಂಡರು.

‘ಕಿರಾಣಿ ಅಂಗಡಿಗೆ ಹೋಗುತ್ತಿದ್ದೆ. ಈಗ ಮಾಸ್ಕ್ ವ್ಯಾಪಾರ ಮಾಡುತ್ತಿದ್ದೇನೆ. ಅಂತರ ಕಾಯ್ದುಕೊಂಡು ಸ್ಯಾನಿಟೈಸರ್ ನೀಡಿಯೇ ಮಾಸ್ಕ್ ಮಾರಾಟ ಮಾಡುತ್ತೇನೆ. ಏಕೆಂದರೆ ಸುರಕ್ಷತೆ ಮುಖ್ಯ’ ಎಂಬುದು ಪಿ.ಬಿ. ರಸ್ತೆಯಲ್ಲಿ ಮಾಸ್ಕ್ ಮಾರಾಟ ಮಾಡುತ್ತಿದ್ದ ವ್ಯಾಪಾರಿಯ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT