ಬುಧವಾರ, ಜುಲೈ 28, 2021
29 °C
ಆಹಾರ ಒದಗಿಸುವ ಜವಾಬ್ದಾರಿ ಹೊತ್ತ ಗಂಗಪ್ಪ, ಸುರೇಶ್‌ ರೆಡ್ಡಿ, ಶಿವಾನಂದ್ ಕುಂಬಾರ್

ಹೊತ್ತಿಗೆ ಸಾವಿರ ಜನಕ್ಕೆ ಊಟ

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘30 ಮಂದಿಗೆ ಊಟ ಒದಗಿಸಲು ಆರಂಭಿಸಿದ ಪ್ರಕ್ರಿಯೆ ಒಂದು ಹಂತದಲ್ಲಿ ಹೊತ್ತಿಗೆ ಸಾವಿರ ಜನಕ್ಕೆ ನೀಡಬೇಕಾದ ಸನ್ನಿವೇಶ ಎದುರಾಯಿತು. ಎಲ್ಲೂ ತೊಂದರೆಯಾಗದಂತೆ ಊಟ ಪಾರ್ಸೆಲ್‌ ಮಾಡಿದೆವು. ಹಲವು ಜಿಲ್ಲೆಗಳಲ್ಲಿ ಅಡುಗೆ ಮಾಡುವವರಿಗೇ ಕೊರೊನಾ ಬಂದಿದೆ. ನಮ್ಮಲ್ಲಿ ಯಾರಿಗೂ ಬಂದಿಲ್ಲ. ಅಷ್ಟು ಎಚ್ಚರದಿಂದ ಅಡುಗೆ ತಯಾರಿಸಲಾಗಿತ್ತು’.

ಕ್ವಾರಂಟೈನ್‌ನಲ್ಲಿ ಇರುವವರಿಗೆ, ಕಂಟೈನ್‌ಮೆಂಟ್‌ ವಲಯದಲ್ಲಿ ಕೆಲಸ ಮಾಡುವ ಪೊಲೀಸರು, ಆಶಾ ಕಾರ್ಯಕರ್ತರು, ಆರೋಗ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿಗೆ, ಆಸ್ಪತ್ರೆಗೆ ನಿತ್ಯ ಊಟ ಒದಗಿಸುವ ಜವಾಬ್ದಾರಿಯನ್ನು ಹೊತ್ತಿರುವ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಸ್‌.ಆರ್‌. ಗಂಗಪ್ಪ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ಎಂ.ಎಚ್‌. ಸುರೇಶ್‌ ರೆಡ್ಡಿ, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶಿವಾನಂದ್ ಕುಂಬಾರ್ ಅವರ ಮಾತುಗಳಿವು.

‘ಜಿಲ್ಲಾಧಿಕಾರಿ ಸೂಚನೆಯಂತೆ ಹೆಚ್ಚುವರಿ ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ಏಪ್ರಿಲ್‌ 29ಕ್ಕೆ ಸಪ್ತಗಿರಿ ಬಳಿ ಇರುವ ವಸತಿ ನಿಲಯದಲ್ಲಿ ಅಡುಗೆ ಕಾರ್ಯ ಆರಂಭಿಸಿದೆವು. ಆಗ ಸುತ್ತಮುತ್ತಲಿನ ಜನರು ಬಂದು ವಿರೋಧಿಸಿದರು. ಇಲ್ಲಿ ಯಾರನ್ನೂ ಕ್ವಾರಂಟೈನ್‌ ಮಾಡವುದಿಲ್ಲ. ಅಡುಗೆಯಷ್ಟೇ ಎಂದು ಮನವೊಲಿಸಿ ಅವರನ್ನು ಕಳುಹಿಸಬೇಕಾಯಿತು’ ಎಂದು ನೆನಪಿಸಿಕೊಂಡರು.

‘ಅಡುಗೆ ಸಿಬ್ಬಂದಿ ಆರಂಭದಲ್ಲಿ ಹಿಂಜರಿದರು. ಜಿಲ್ಲಾಧಿಕಾರಿಯವರೇ ಬಂದು ಅವರಿಗೆ ಸ್ಥೈರ್ಯ ತುಂಬಿದರು. ಅಡುಗೆ ಮಾಡಿ ಪಾರ್ಸೆಲ್‌ ಕಟ್ಟುವುದಷ್ಟೇ ನಿಮ್ಮ ಕೆಲಸ ಒಯ್ಯುವವರು ಬೇರೆ. ಅವರು ಕೂಡ ಕ್ವಾರಂಟೈನ್‌ನ ಬಾಗಿಲ ಬಳಿಗೆ ಒಯ್ದು ಇಟ್ಟು ಬರುತ್ತಾರೆ. ಅಲ್ಲಿ ಕ್ವಾರಂಟೈನ್‌ ಉಸ್ತುವಾರಿಯವರು ಮುಂದಕ್ಕೆ ಒಯ್ಯುತ್ತಾರೆ ಎಂದು ತಿಳಿಸಿದ್ದರಿಂದ ಅಡುಗೆ ಸಿಬ್ಬಂದಿಗೆ ಧೈರ್ಯ ಬಂತು. ಎಡಿಸಿ ಪ್ರತಿದಿನ ಬಂದು ನೋಡಿಕೊಂಡು ಹೋಗುತ್ತಾರೆ. ಒಂದಿಬ್ಬರು ಕ್ವಾರಂಟೈನ್‌ನಿಂದ ಬಿಡುಗಡೆಗೊಳ್ಳುವುದಕ್ಕಾಗಿ ಊಟ ಸರಿ ಇಲ್ಲ ಎಂದು ಆರೋಪ ಮಾಡಿದಾಗ ಎಡಿಸಿ ವೀರಮಲ್ಲಪ್ಪ ಸ್ವತಃ ಊಟ ಮಾಡಿದರು. ಅಲ್ಲಿಂದ ಪ್ರತಿದಿನ ಊಟ ಹೇಗಿದೆ ಎಂದು ಅವರು ನೋಡುತ್ತಿದ್ದಾರೆ’ಎಂದು ತಿಳಿಸಿದರು.

ಎಷ್ಟು ಜನ ಕ್ವಾರಂಟೈನ್‌ ಆಗಿದ್ದಾರೆ. ಎಷ್ಟು ಊಟ ಬೇಕು ಎಂದು ಡಾ. ನಟರಾಜ್‌ ಪ್ರತಿದಿನ ಮಾಹಿತಿ ನೀಡುವರು. ಒಂದು ದಿನ ಅಡುಗೆ ಮುಗಿಸಿ ಪಾರ್ಸೆಲ್‌ ಕಾರ್ಯವನ್ನೂ ಮುಗಿಸಿ ಎಲ್ಲರು ಮನೆಗೆ ಹೋದಮೇಲೆ ರಾತ್ರಿ 10.30ಕ್ಕೆ ಮತ್ತಷ್ಟು ಮಂದಿಯನ್ನು ಕ್ವಾರಂಟೈನ್‌ ಮಾಡಲಾಗಿತ್ತು. ಅವರಿಗೆ ಕೊನೆಗೆ ಸಿಇಒ ಅವರ ಮನೆಯಲ್ಲಿ ಅಡುಗೆ ಮಾಡಿ ಒದಗಿಸಲಾಗಿತ್ತು.  ತುರ್ತು ಸಂದರ್ಭಕ್ಕೆ ಬೇಕಾಗುತ್ತದೆ ಎಂಬ ಕಾರಣದಿಂದ ಅಂದಿನಿಂದ ಅಡುಗೆಯವರು ಮನೆಗೆ ಹೋಗದೇ ಹಾಸ್ಟೆಲ್‌ನಲ್ಲೇ ಮಲಗುತ್ತಿದ್ದಾರೆ. ಐದಾರು ವಾರ್ಡನ್‌ಗಳೂ ಮನೆಗೆ ಹೋಗಿಲ್ಲ ಎಂದು ತಿಳಿಸಿದರು.

ಪ್ರತಿಯೊಬ್ಬರಿಗೆ ನಾಲ್ಕು ಲೀಟರ್‌ ನೀರು (ಎರಡು ಲೀಟರ್‌ನ ಎರಡು ಬಾಟಲಿ) ಒದಗಿಸುವ ಕೆಲಸವನ್ನು ಡಾ. ರುದ್ರಸ್ವಾಮಿ ಮಾಡಿದರು. ಸ್ಪಿರುಲಿನಾ ಚಿಕ್ಕಿ, ಮ್ಯಾಂಗೊಬಾರ್‌ ಸಿಎಫ್‌ಆರ್‌ಯಿಂದ ಜಿಲ್ಲಾಡಳಿತದ ಮೂಲಕ ಒದಗಿಸಲಾಯಿತು. ದಾನಿಗಳು ನೀಡಿದ್ದ ದವಸ ಧಾನ್ಯಗಳನ್ನು ಜಿಲ್ಲಾಧಿಕಾರಿ ಒದಗಿಸಿದರು. ತೋಟಗಾರಿಕೆ ಇಲಾಖೆಯವರು ತರಕಾರಿ, ಪಶುಸಂಗೋಪನಾ ಇಲಾಖೆಯವರು ಮೊಟ್ಟೆ, ಚಿಕನ್‌, ಮೀನುಗಾರಿಕೆ ಇಲಾಖೆಯವರು ಮೀನು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯವರು ಅಕ್ಕಿ, ಎಣ್ಣೆ, ಕಾಳು ಹೀಗೆ ವಿವಿಧ ಇಲಾಖೆಯವರು ಅಡುಗೆಗೆ ಬೇಕಾದ ವಸ್ತುಗಳನ್ನು ಪೂರೈಸಿದರು ಎಂದರು.

‘ಸುಮಾರು 80 ಮಂದಿ ಸಿಬ್ಬಂದಿ ಈ ಕಾರ್ಯದಲ್ಲಿ ತೊಡಗಿಸಿಕೊಂಡರು. ನಮ್ಮ ಇಲಾಖೆಯ ವಾಹನಗಳಲ್ಲದೇ ಬಾಡಿಗೆ ಆಟೋಗಳನ್ನು ಕೂಡ ಅವರಿಗೆ ತರಬೇತಿ ನೀಡಿ ಬಳಸಿಕೊಳ್ಳಬೇಕಾಯಿತು. ಮೇಲಧಿಕಾರಿಗಳು, ನಮ್ಮ ಇಲಾಖೆಯ ಸಿಬ್ಬಂದಿ ಪೂರ್ಣ ಸಹಕಾರ ನೀಡಿದರು’ ಎಂದು ಕೃತಜ್ಞತೆ ಸಲ್ಲಿಸಿದರು.

‘ಮನೆಯಲ್ಲಿ ಶತಾಯುಷಿ ತಂದೆ’

ಚಿತ್ರದುರ್ಗದ ಎಮ್ಮೆಹಟ್ಟಿಯಲ್ಲಿರುವ ನಮ್ಮ ಮನೆಯಲ್ಲಿ 102 ವರ್ಷದ ತಂದೆ, 90 ವರ್ಷದ ತಾಯಿ ಇದ್ದಾರೆ. ಹಾಗಾಗಿ ಕೊರೊನಾ ವಿಪರೀತ ಇದ್ದ ಎರಡು ತಿಂಗಳು ಮನೆಗೇ ಹೋಗಿಲ್ಲ. ಪತ್ನಿ, ಇಬ್ಬರು ಮಕ್ಕಳು ಪೂರ್ಣ ಸಹಕಾರ ನೀಡಿದರು ಎಂದು ಎಸ್‌.ಆರ್‌. ಗಂಗಪ್ಪ ತಿಳಿಸಿದರು.

‘ಕುಟುಂಬ ಬೇರೆ ಕಡೆ ಇದೆ. ದಾವಣಗೆರೆಯಲ್ಲಿ ಒಬ್ಬನೇ ಇರುವುದರಿಂದ ಸಮಸ್ಯೆಯಾಗಲಿಲ್ಲ’ ಎಂದು ಸುರೇಶ್‌ ರೆಡ್ಡಿ ಹೇಳಿದರು.

‘ತಂದೆ ತಾಯಿ ಊರಲ್ಲಿದ್ದಾರೆ. ಮನೆಯಲ್ಲಿ ಪತ್ನಿ ಮತ್ತು ಸಣ್ಣ ಮಗು ಇರುವ ಕಾರಣದಿಂದ ಬಹಳ ಎಚ್ಚರಿಕೆಯಿಂದ ಮನೆಗೆ ಹೋಗಿ ಬರುತ್ತಿದ್ದೆ’ ಎಂದು ಶಿವಾನಂದ ಕುಂಬಾರ್‌ ವೈಯಕ್ತಿಕ ಜೀವನ ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.