ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ವಯಸ್ಸಾದರೂ ಕುಗ್ಗದ ಮೆಹಬೂಬ್‌ ಪೀರ್‌ ಕಾಯಕ ಪ್ರೇಮ

ಚಂದ್ರಶೇಖರ ಆರ್.
Published 11 ಫೆಬ್ರುವರಿ 2024, 5:58 IST
Last Updated 11 ಫೆಬ್ರುವರಿ 2024, 5:58 IST
ಅಕ್ಷರ ಗಾತ್ರ

ದಾವಣಗೆರೆ: ಸರಿಸುಮಾರು 50 ವರ್ಷಗಳಿಂದಲೂ ಪಂಕ್ಚರ್‌ ಆದ ಚಕ್ರಗಳ ದುರಸ್ತಿ, ವಾಹನಗಳ ಎಂಜಿನ್‌ ಕೂಲ್‌ ಮಾಡುವುದೇ ಕೆಲಸ. ಇದು ಪರಿಶ್ರಮ ಬೇಡುವಂಥದ್ದು. ವಯಸ್ಸಾಗಿದ್ದರಿಂದ ದೇಹ ಸ್ಪಂದಿಸುತ್ತಿಲ್ಲ. ಆದರೂ ಕೆಲಸ ಮಾಡುವ ಉತ್ಸಾಹ ಕುಗ್ಗಿಲ್ಲ...

ಹೀಗೆ ಹೇಳುವಾಗ ಶೇಖ್‌ ಮೆಹಬೂಬ್‌ ಪೀರ್‌ ಅವರಲ್ಲಿನ ಜೀವನೋತ್ಸಾಹ ಪುಟಿದೇಳುತ್ತಿತ್ತು. ಇಳಿ ವಯಸ್ಸಿನಲ್ಲೂ ಯುವಕರು ನಾಚುವಂತಹ ಉತ್ಸಾಹ ಅವರದು.

ಇಲ್ಲಿನ ಪಿ.ಬಿ.ರಸ್ತೆಯ ಹೊಸ ಬಸ್‌ ನಿಲ್ದಾಣದ ಬಳಿ ತಳ್ಳುಗಾಡಿ ಮಾದರಿಯ ಚಿಕ್ಕ ಅಂಗಡಿಯೊಂದರಲ್ಲಿ ಇದೇ ಕೆಲಸ ಮಾಡುತ್ತಿರುವ ಇವರು, ವಾಹನಗಳ ಇತರೆ ಚಿಕ್ಕಪುಟ್ಟ ದುರಸ್ತಿ ಕೆಲಸವನ್ನೂ ಮಾಡುತ್ತಾರೆ.

ಪಂಕ್ಚರ್‌ ತಿದ್ದುವ ಕೆಲಸ ಇಲ್ಲದಿದ್ದರೆ ತಮ್ಮ ಕೆಲಸಕ್ಕೆ ಬೇಕಾಗುವ ಪರಿಕರಗಳನ್ನು ಸಾಣೆ ಹಿಡಿಯುವ, ಇಲ್ಲವೇ ಜೋಡಿಸುವ ಕೆಲಸದಲ್ಲಿ ನಿರತರಾಗುತ್ತಾರೆ. ಒಂದು ನಿಮಿಷವೂ ಸುಮ್ಮನಿರದೇ ಏನಾದರೊಂದು ಚಟುವಟಿಕೆಯಲ್ಲಿ ತಲ್ಲೀನರಾಗುವ ಅವರೊಂದಿಗೆ ಮಾತನಾಡುತ್ತಿದ್ದರೆ ಎಂತಹವರಲ್ಲೂ ಜೀವನೋತ್ಸಾಹ ಪುಟಿಯುತ್ತದೆ.

5ನೇ ತರಗತಿ ಓದಿರುವ 75 ದಾಟಿರುವ ಅವರಿಗೆ ವಯಸ್ಸಿನ ಪರಿವಿಲ್ಲ. ನಾಲ್ವರು ಮೊಮ್ಮಕ್ಕಳನ್ನು ಕಂಡಿರುವ ಅವರಿಗೆ, ‘ಎಷ್ಟು ವರ್ಷವಾಗಿದೆ ಎಂದರೆ ಆಗಿದೆ ಸುಮಾರು. 1970ರಲ್ಲಿ ಅಂಗಡಿ ಶುರು ಮಾಡಿದೆ. ನೀವೇ ಲೆಕ್ಕ ಹಾಕಿ’ ಎನ್ನುತ್ತಾರೆ.

ಆಂಧ್ರಪ್ರದೇಶದಿಂದ ದಶಕಗಳ ಹಿಂದೆ ವಲಸೆ ಬಂದಿರುವ ಅವರು ದಾವಣಗೆರೆಯಲ್ಲೇ ಬದುಕು ಕಟ್ಟಿಕೊಂಡಿದ್ದಾರೆ. ಇದೇ ವೃತ್ತಿಯಿಂದ ತಮ್ಮ ಐವರು ಮಕ್ಕಳಿಗೂ ಉತ್ತಮ ಶಿಕ್ಷಣ ನೀಡಿದ ಸಾರ್ಥಕಭಾವ ಅವರದು. 

‘ಹಲವು ಖಾಸಗಿ ಬಸ್‌ಗಳ ಚಾಲಕರು ಈಗಲೂ ಹುಡುಕಿಕೊಂಡು ಬರುತ್ತಾರೆ. ಆದರೆ ಮೈಯಲ್ಲಿ ಶಕ್ತಿ ಕಡಿಮೆಯಾದ ಕಾರಣ ಕೆಲವೊಂದು ಸಾರಿ ನನ್ನ ಸ್ನೇಹಿತರ ಅಂಗಡಿಗೆ ಕಳುಹಿಸುತ್ತೇನೆ. ಕೆಲಸ ಮಾಡಿದರೆ ಸಂಪಾದನೆ ಹೆಚ್ಚಿರುತ್ತದೆ. ಆದರೆ ಈಗ ಆಗುತ್ತಿಲ್ಲ. ದಿನಕ್ಕೆ ಹೆಚ್ಚೆಂದರೆ ₹ 300ರಿಂದ ₹ 400 ದುಡಿಯಬಹುದು’ ಎಂದರು.

‘ಎಲ್ಲ ಬಗೆಯ ವಾಹನಗಳಿಗೆ ಪಂಕ್ಚರ್‌ ಹಾಗೂ ಎಂಜಿನ್‌ ಕೂಲ್‌ ಮಾಡುವ ಕೆಲಸ ಮಾಡುತ್ತಾರೆ. ದೊಡ್ಡ ದೊಡ್ಡ ವಾಹನಗಳ ಟೈರ್‌ಗಳನ್ನು ಬಿಚ್ಚಿ ಕೆಲಸ ಮಾಡುವುದನ್ನು ಕಂಡರೆ ಆಶ್ಚರ್ಯವಾಗುತ್ತದೆ. ಈಗಿನ ತಲೆಮಾರಿನ ಸಾಮಾನ್ಯರಿಗೆ ಇದು ಸಾಧ್ಯವಿಲ್ಲ. ಅಜ್ಜ ಈ ವಯಸ್ಸಿನಲ್ಲೂ ಕೆಲಸ ಮಾಡುವುದನ್ನು ಮೆಚ್ಚಬೇಕು’ ಎಂದು ಮಾತು ಸೇರಿಸಿದರು ಪಕ್ಕದ ಅಂಗಡಿಯ ರಾಮಣ್ಣ ಶೆಟ್ಟಿ.

‘ಕಾಯಕವೇ ಕೈಲಾಸ’ ಎನ್ನುವ ಬಸವಣ್ಣನ ಮಾತನ್ನು ಅಕ್ಷರ ಪಾಲಿಸುವ ಅವರು, ‘ದೇವರು ಎಲ್ಲಿಯವರೆಗ ಕೆಲಸ ಮಾಡು ಎನ್ನುತ್ತಾನೋ ಅಲ್ಲಿಯವರೆಗೆ ಮಾಡುವೆ. ಕೆಲಸ ಮಾಡುತ್ತಿದ್ದರೆ ಮನಸ್ಸಿಗೆ ಸಮಾಧಾನ. ಸುಮ್ಮನೆ ಕುಳಿತರೆ ಏನು ಬಂತು, ನೀವೇ ಹೇಳಿ’ ಎನ್ನುತ್ತಾರೆ.

ಹಲವರು ಈ ವಯಸ್ಸಿನಲ್ಲಿ ಕೆಲಸ ಮಾಡುವುದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಆಗ ಸಾರ್ಥಕ ಭಾವ ಮೂಡುತ್ತದೆ. ಇನ್ನೇನು ಬೇಕು ಎಂದು ಸಂತಸದಿಂದಲೇ ಪ್ರಶ್ನಿಸುತ್ತಾರೆ ಮೆಹಬೂಬ್‌ ಪೀರ್.

ಪಿ.ಬಿ. ರಸ್ತೆಯ ಅಭಿವೃದ್ಧಿಯನ್ನು ಹತ್ತಿರದಿಂದ ಕಂಡಿರುವ ಅವರು, ಅಲ್ಲಿನ ಹಳೆಯ ಮೆಕ್ಯಾನಿಕಲ್ ಅಂಗಡಿಗಳ ಸ್ಥಳಾಂತರಕ್ಕೂ ಸಾಕ್ಷಿಯಾಗಿದ್ದಾರೆ.

‘ದಾವಣಗೆರೆಯ ಹಲವು ಗಲಭೆಗಳಿಗೂ ಸಾಕ್ಷಿಯಾಗಿದ್ದೇನೆ. ಜಾತಿ, ಧರ್ಮ ಏಕೆ? ಎಲ್ಲ ಒಂದಾಗಿ ಬಾಳಬೇಕು’ ಎಂಬುದು ಅವರ ಮನದಾಸೆ.

ಮಕ್ಕಳಿಗೆ ಶಿಕ್ಷಣ ಮದುವೆ ಮಾಡಿಸಿದ ಸಾರ್ಥಕತೆ
ಪಂಕ್ಚರ್‌ ತಿದ್ದುವ ಕೆಲಸದಿಂದಲೇ ತಮ್ಮ ಐವರು ಮಕ್ಕಳಿಗೂ ಮೆಹಬೂಬ್‌ ಪೀರ್‌ ಉತ್ತಮ ಶಿಕ್ಷಣ ಕೊಡಿಸಿದ್ದಾರೆ. ‘ಮೂವರು ಹೆಣ್ಣು ಮಕ್ಕಳಲ್ಲಿ ಇಬ್ಬರನ್ನು ಮದುವೆ ಮಾಡಿಕೊಟ್ಟಿದ್ದೇನೆ. ಕೊನೆಯ ಮಗಳಿಗೆ ವರನನ್ನು ಹುಡುಕುತ್ತಿದ್ದೇನೆ. ಇಬ್ಬರು ಗಂಡು ಮಕ್ಕಳೂ ಕೆಲಸ ಮಾಡುತ್ತಿದ್ದಾರೆ’ ಎಂದು ಸಂತಸದಿಂದಲೇ ಹೇಳಿದರು. ‘ಹೆಣ್ಣು ಮಕ್ಕಳಿಬ್ಬರು ಚೆನ್ನಾಗಿಯೇ ಓದಿದ್ದಾರೆ. ಎಷ್ಟು ಎಂದು ನಿಖರವಾಗಿ ಹೇಳಲು ಗೊತ್ತಾಗುವುದಿಲ್ಲ. ಸದ್ಯ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯರಾಗಿ ಕೆಲಸ ಮಾಡುತ್ತಾರೆ’ ಎಂದು ಖುಷಿಯಿಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT