ಬುಧವಾರ, ನವೆಂಬರ್ 30, 2022
16 °C
ಅಪರಿಚಿತ ಶವಗಳ ಅಂತ್ಯಸಂಸ್ಕಾರಗಳನ್ನು ನೆರವೇರಿಸುವ ರೈಲ್ವೆ ಪೊಲೀಸರು

ರೈಲಿನಡಿ ಬಿದ್ದು ಸಾಯುವವರಲ್ಲಿ ಪುರುಷರೇ ಹೆಚ್ಚು

ಬಾಲಕೃಷ್ಣ ಪಿ.ಎಚ್‌. Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ರೈಲಿನಡಿ ಬಿದ್ದು ಸಾಯುವವರಲ್ಲಿ ಪುರುಷರೇ ಶೇ 90ಕ್ಕೂ ಅಧಿಕ ಸಂಖ್ಯೆಯವರಾಗಿದ್ದಾರೆ. ಒಟ್ಟು ಸಾವಿನಲ್ಲಿ ಶೇ 20ರಷ್ಟು ಮಂದಿಯ ಗುರುತು ಪತ್ತೆಯಾಗುತ್ತಿಲ್ಲ. ಅಂಥವರ ಅಂತ್ಯಸಂಸ್ಕಾರವನ್ನು ರೈಲ್ವೆ ಪೊಲೀಸರೇ ನೆರವೇರಿಸುತ್ತಾರೆ.

ದಾವಣಗೆರೆ ರೈಲ್ವೆ ಪೊಲೀಸ್‌ ವ್ಯಾಪ್ತಿಗೆ ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು ಹಾಗೂ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಬರುತ್ತದೆ. ದಾವಣಗೆರೆ ಮತ್ತು ರಾಣೆಬೆನ್ನೂರು ವ್ಯಾಪ್ತಿಯಲ್ಲಿ ಹಳಿಯಲ್ಲಿ ಮೃತದೇಹ ಸಿಕ್ಕಿದರೆ ದಾವಣಗೆರೆಗೆ ತರಲಾಗುತ್ತದೆ. ಚಿತ್ರದುರ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ಮೃತದೇಹ ಪತ್ತೆಯಾದರೆ, ಅಲ್ಲಿಯ ಉಪಠಾಣೆಗಳಲ್ಲಿ ಪ್ರಕರಣ ದಾಖಲಿಸಿಕೊಂಡು ಆಯಾ ಜಿಲ್ಲಾ ಕೇಂದ್ರಗಳ ಆಸ್ಪತ್ರೆಗೆ ಒಯ್ಯಲಾಗುತ್ತದೆ.

2020ರಲ್ಲಿ 46 ಮಂದಿ ರೈಲಿನಡಿ ಸಿಲುಕಿ ಸತ್ತಿದ್ದರು. ಅದರಲ್ಲಿ 42 ಮಂದಿ ಪುರುಷರು, 4 ಮಂದಿ ಮಹಿಳೆಯರಾಗಿದ್ದರು. 11 ಮಂದಿ ಪುರುಷರು ಮತ್ತು ಒಬ್ಬ ಮಹಿಳೆಯ ಗುರುತು ಪತ್ತೆಯಾಗಿರಲಿಲ್ಲ. 2021ರಲ್ಲಿ ಐವರು ಮಹಿಳೆಯರು ಮತ್ತು 61 ಪುರುಷರು ಮೃತಪಟ್ಟಿದ್ದರು. ಅದರಲ್ಲಿ ಒಬ್ಬ ಮಹಿಳೆ ಮತ್ತು 11 ಪುರುಷರ ಗುರುತು ಸಿಕ್ಕಿರಲಿಲ್ಲ. 2022ರಲ್ಲಿ ಈವರೆಗೆ 41 ಪುರುಷರು ಮತ್ತು ಒಬ್ಬರು ಮಹಿಳೆ ಮೃತಪಟ್ಟಿದ್ದು, 8 ಪುರುಷರ ಗುರುತು ಪತ್ತೆಯಾಗಿಲ್ಲ.

‘ಗುರುತು ಪತ್ತೆಯಾಗದ ಮೃತದೇಹಗಳನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರದಲ್ಲಿ 8ರಿಂದ 10 ದಿನಗಳ ಕಾಲ ಇಡುತ್ತೇವೆ. ಪ್ರಕಟಣೆ ನೀಡುತ್ತೇವೆ. ಯಾರೂ ಬಾರದೇ ಇದ್ದರೆ ಮರಣೋತ್ತರ ಪರೀಕ್ಷೆ ಮಾಡಿಸಿ, ಪಾಲಿಕೆಯ ನೆರವು ಪಡೆದು ದಫನ್ ಮಾಡುತ್ತೇವೆ. ಮೃತದೇಹದಲ್ಲಿ ಯಾವ ಧರ್ಮ ಎಂಬುದರ ಬಗ್ಗೆ ಕುರುಹು ಪತ್ತೆಯಾದರೆ, ಆಯಾ ಧರ್ಮದ ಧಾರ್ಮಿಕ ವ್ಯಕ್ತಿಗಳನ್ನು, ಪ್ರಮುಖರನ್ನು ಕರೆಸಿ ನಮನ ಸಲ್ಲಿಸಿ ದಫನ್  ಮಾಡಲಾಗುತ್ತದೆ’ ಎಂದು ರೈಲ್ವೆ ಪೊಲೀಸ್‌ ಇನ್‌ಸ್ಪೆಕ್ಟರ್‌ ಮುಸ್ತಾಕ್‌ ಅಹ್ಮದ್‌ ಡಿ. ಶೇಖ್‌ ಮಾಹಿತಿ ನೀಡಿದರು.

ದಾವಣಗೆರೆಯಲ್ಲಿ ಶಾಮನೂರು ರುದ್ರಭೂಮಿಯಲ್ಲಿಯೇ ಎಲ್ಲ ಅಪರಿಚಿತ ಶವಗಳನ್ನು ದಫನ್ ಮಾಡಲಾಗುತ್ತದೆ. ಚಿತ್ರದುರ್ಗದಲ್ಲಿ ಹೊಳಲ್ಕೆರೆ ರಸ್ತೆಯಲ್ಲಿರುವ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಯುತ್ತದೆ ಎಂದು ವಿವರಿಸಿದರು.

‘ಅಂಗಿಯಲ್ಲಿ ಟೇಲರ್‌ ಹೆಸರು ಇದ್ದರೆ, ಜೇಬಲ್ಲಿ ಯಾವುದಾದರೂ ಗುರುತಿನ ಚೀಟಿ ಇದ್ದರೆ, ಮೊಬೈಲ್‌, ಸಿಮ್‌ ಸಿಕ್ಕಿದರೆ ಗುರುತು ಪತ್ತೆ ಸುಲಭವಾಗುತ್ತದೆ. ರೈಲಿನಡಿಗೆ ಬಿದ್ದು ಸಾಯುವವರಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ. ಮಹಿಳೆಯರ ಮೃತದೇಹ ಪತ್ತೆಯಾದರೆ ಬಹುತೇಕ ಎರಡು ಮೂರು ದಿನಗಳ ಒಳಗೆ ಗುರುತು ಪತ್ತೆಯಾಗುತ್ತದೆ. ಪುರುಷರ ಮೃತದೇಹದ ಗುರುತು ಪತ್ತೆಯೇ ಸಮಸ್ಯೆ’ ಎನ್ನುವುದು ರೈಲ್ವೆ ಪೊಲೀಸ್‌ ರಾಘವೇಂದ್ರ ಅವರ ಅಭಿಪ್ರಾಯ.


ಅಗತ್ಯ ಬಿದ್ದರೆ ತೆಗೆಯುವಂತಿರಬೇಕು ಎಂಬ ಕಾರಣಕ್ಕೆ ಯಾವುದೇ ಅಪರಿಚಿತ ದೇಹವನ್ನು ನಾವು ದಹನ ಮಾಡಲ್ಲ. ಮುಂದೆ ಜೆಸಿಬಿಯಲ್ಲಿ ಗುಂಡಿತೋಡಿ ಅಂತ್ಯಸಂಸ್ಕಾರ ಮಾಡುತ್ತೇವೆ.
- ಮುಸ್ತಾಕ್‌ ಅಹ್ಮದ್‌ ಡಿ. ಶೇಖ್‌, ರೈಲ್ವೆ ಪೊಲೀಸ್‌ ಇನ್‌ಸ್ಪೆಕ್ಟರ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು