ಮಂಗಳವಾರ, ಸೆಪ್ಟೆಂಬರ್ 28, 2021
23 °C
ಪರಿಷ್ಕೃತ ಪ್ರಯಾಣ ದರ ಜಾರಿಗೆ ಸೂಚನೆ

ಸೆ.1ರಿಂದ ಆಟೊಗಳಿಗೆ ಮೀಟರ್ ಕಡ್ಡಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಸೆಪ್ಟೆಂಬರ್ 1ರಿಂದ ಆಟೊಗಳಿಗೆ ಕಡ್ಡಾಯವಾಗಿ ಮೀಟರ್ ಅಳವಡಿಸುವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶ ಹೊರಡಿಸಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿ ಶ್ರೀಧರ್ ಕೆ. ಮಲ್ಲಾಡ್‌ ಹಾಗೂ ತಾಲ್ಲೂಕು ಫೆಡರೇಷನ್ ಆಫ್ ಕರ್ನಾಟಕ ಆಟೊ ಯೂನಿಯನ್ (ಸಿಐಟಿಯು) ಅಧ್ಯಕ್ಷ ಅಣ್ಣಪ್ಪಸ್ವಾಮಿ ಹಾಗೂ ಆಟೋರಿಕ್ಷಾ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.‌ 

ಪೆಟ್ರೋಲ್, ಡೀಸೆಲ್, ಎಲ್‌ಪಿಜಿ ಸಿಲಿಂಡರ್, ಗ್ರೀಸ್ ಆಯಿಲ್ ಹಾಗೂ ವಾಹನದ ಬಿಡಿ ಭಾಗಗಳು ಹಾಗೂ ಟೈರ್ ಬೆಲೆ ಹೆಚ್ಚಳವಾಗಿರುವುದರಿಂದ ದರ ಪರಿಷ್ಕರಣೆಗೆ ಆಟೊ ಚಾಲಕರು ಸಲ್ಲಿಸಿದ್ದ ಮನವಿಯ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ. 

ಆಟೊ ಪ್ರಯಾಣ ದರವನ್ನು ಮೊದಲ 2 ಕಿ.ಮೀಗೆ ಕನಿಷ್ಠ ದರ ₹ 30 (ಮೂವರು ಪ್ರಯಾಣಿಕರಿಗೆ) ತದನಂತರ ಪ್ರತಿ 1ಕಿ.ಮೀಗೆ ₹ 15ಕ್ಕೆ ನಿಗದಿಪಡಿಸಲಾಯಿತು. ಸೆ.1ರಿಂದಲೇ ಪರಿಷ್ಕೃತ ಪ್ರಯಾಣ ದರ ಜಾರಿಗೆ ಬರಲಿದೆ.

ರಾತ್ರಿ 10ರಿಂದ ಬೆಳಿಗ್ಗೆ 5ಗಂಟೆಯವರೆಗೆ ದರದ ಒಂದೂವರೆ ಪಟ್ಟು ಹಣ ನೀಡಬೇಕು. ಮೊದಲ 15 ನಿಮಿಷ ಕಾಯುವಿಕೆಗೆ ಯಾವುದೇ ದರ ಇರುವುದಿಲ್ಲ. ನಂತರದ 15 ನಿಮಿಷಗಳವರೆಗೆ ₹ 5 ಹಾಗೂ 20 ಕೆ.ಜಿ. ಲಗ್ಗೇಜು ಉಚಿತ. ನಂತರದ 20 ಕೆಜಿಗೆ ₹ 5 ಅನ್ನು ಪ್ರಾದೇಶಿಕ ಸಾರಿಗೆ ಪ್ರಾಧಿಕಾರ ನಿಗದಿಪಡಿಸಲಾಗಿದೆ.

ಜಿಲ್ಲೆಯ ಎಲ್ಲಾ ಆಟೊ ಚಾಲಕ, ಮಾಲೀಕರು ತಮ್ಮ ಆಟೊಗಳಿಗೆ ಅನುಮತಿ ಇರುವ ಫ್ಲಾಗ್ ಮೀಟರ್‌ಗಳನ್ನು ಅಳವಡಿಸಿಕೊಂಡು ಮೇಲಿನ ದರಕ್ಕೆ ಅನುಗುಣವಾಗಿ ಕಾನೂನು ಮಾಪನ ಶಾಸ್ತ್ರ ಇಲಾಖೆಯಿಂದ ಆಗಸ್ಟ್ 31ರೊಳಗೆ ರಿಕ್ಯಾಲಿಬರೇಷನ್ ಹಾಗೂ ಸೀಲ್ ಮಾಡಿಸಿಕೊಂಡು ಸೆಪ್ಟೆಂಬರ್ 1ರಿಂದ ಪರಿಷ್ಕರಿಸಿದ ಮೀಟರ್‌ ದರವನ್ನು ಪ್ರಯಾಣಿಕರಿಂದ ಪಡೆಯಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ.

ಆಟೊ ಚಾಲಕರು, ಮಾಲೀಕರು ಮತ್ತು ಮಾಲೀಕರು ನಾಗರಿಕರಿಗೆ ಉತ್ತಮ ಸೇವೆ ಒದಗಿಸಬೇಕು ಹಾಗೂ ಪ್ರಯಾಣಿಕರನ್ನು ಗೌರವದಿಂದ ಕಾಣಬೇಕು. ನಿಗದಿತ ದರಕ್ಕಿಂತ ಹೆಚ್ಚಿಗೆ ಪಡೆದವರಿಗೆ, ಅನಧಿಕೃತ ಇಂಧನ (ಗ್ಯಾಸ್, ಸಿಲಿಂಡರ್, ಸೀಮೆಎಣ್ಣೆ) ಬಳಸುವವರಿಗೆ ದಂಡ ವಿಧಿಸಬೇಕು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಪೊಲೀಸರಿಗೆ ಎಚ್ಚರಿಗೆ ನೀಡಿದರು.

ಆಟೊರಿಕ್ಷಾ ಮಾಲೀಕರು, ಚಾಲಕರು ಡಿಎಲ್, ವಾಹನದ ನೋಂದಣಿ, ಅರ್ಹತಾ ಪತ್ರ, ವಿಮಾ ಪತ್ರ, ವಾಯುಮಾಲಿನ್ಯ ಪ್ರಮಾಣ ಪತ್ರಗಳನ್ನು ರಿಕ್ಞಾದ ಚಾಲಕರ ಆಸನದ ಹಿಂಭಾಗ ಕಡ್ಡಾಯವಾಗಿ ನಮೂದಿಸಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

ಆಟೊ ಪ್ರಯಾಣ ದರ ವಿವರ (₹ ಗಳಲ್ಲಿ)

ದೂರ (ಕಿ.ಮೀಗಳಲ್ಲಿ); ಹಿಂದಿನ ದರ; ಪರಿಷ್ಕೃತ ದರ 

2; 26;30

3;39;45

4;52;60

5;65;75

6;78;90

7;63.90;105

8;72.90;120

9;81.90;135

10;90;150

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು