‘ಹಾಲು ಉತ್ಪಾದಕರು ಸ್ವಚ್ಛತೆಯತ್ತ ಗಮನಹರಿಸಿ’

ಸೋಮವಾರ, ಜೂನ್ 17, 2019
27 °C
ಶಿಮುಲ್‌ನಿಂದ ವಿಶ್ವ ಹಾಲು ದಿನಾಚರಣೆ

‘ಹಾಲು ಉತ್ಪಾದಕರು ಸ್ವಚ್ಛತೆಯತ್ತ ಗಮನಹರಿಸಿ’

Published:
Updated:
Prajavani

ದಾವಣಗೆರೆ: ಹಾಲು ಅಮೃತಕ್ಕೆ ಸಮಾನ. ಆದರೆ ಇಂದು ಹಾಲನ್ನು ಹೆಚ್ಚು ಬಳಸುವುದನ್ನೇ ಜನರು ಮರೆತಿದ್ದಾರೆ. ಆರೋಗ್ಯಕ್ಕಾಗಿ ಹೆಚ್ಚು ಹೆಚ್ಚು ಹಾಲಿನ ಉತ್ಪನ್ನಗಳನ್ನು ಎಲ್ಲರೂ ಬಳಸಬೇಕು ಎಂದು ಶಿಮುಲ್ (ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ)ನ ನಿರ್ದೇಶಕ ಜಗದೀಶಪ್ಪ ಬಣಕಾರ ಹೇಳಿದರು.

ಇಲ್ಲಿನ ಕುವೆಂಪು ಕನ್ನಡ ಭವನದಲ್ಲಿ ಶಿಮುಲ್ ಹಾಗೂ ರಾಷ್ಟ್ರೀಯ ಹೈನು ಅಭಿವೃದ್ಧಿ ಮಂಡಳಿ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಿಶ್ವ ಹಾಲು ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಹಾಲು ಇಲ್ಲದೇ ಜೀವನವೇ ಇಲ್ಲ. ಆದರೆ ಇಂದು ಜನರು ಪರಿಪೂರ್ಣ ಆಹಾರವಾದ ಹಾಲಿನ ಬಗ್ಗೆ ತಿಳಿಯದೆ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಅರಿವು ಅಗತ್ಯ. ಎಲ್ಲರೂ ಹಾಲನ್ನು ಹೆಚ್ಚು ಉಪಯೋಗಿಸಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಹಾಲಿನ ದರ ಹೆಚ್ಚಿಸಬೇಕು ಎಂಬ ಹಾಲು ಉತ್ಪಾದಕರೊಬ್ಬರ ಮನವಿಗೆ ಪ್ರತಿಕ್ರಿಯಿಸಿದ ಅವರು, ‘ದರ ಹೆಚ್ಚಿಸುವ ನಿರ್ಧಾರಗಳನ್ನು ಏಕಪಕ್ಷೀಯವಾಗಿ ತೆಗೆದುಕೊಳ್ಳಲು ಬರುವುದಿಲ್ಲ. ಈ ಬಗ್ಗೆ ಮಂಡಳಿಯಲ್ಲಿ ಚರ್ಚಿಸಬೇಕು. ವಿವಿಧ ಹಂತದಲ್ಲಿ ಚರ್ಚೆ ನಡೆಯಬೇಕು. ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಶಿಮುಲ್‌ ಉಪಾಧ್ಯಕ್ಷ ಎಚ್‌.ಕೆ. ಬಸಪ್ಪ, ‘ದೇಶದಲ್ಲಿ 2017ರಿಂದ ವಿಶ್ವ ಹಾಲು ದಿನಾಚರಣೆ ಆಚರಿಸಲಾಗುತ್ತಿದೆ. ಪ್ರತಿ ವರ್ಷ ಜೂನ್‌ 1ರಂದು ಎಲ್ಲೆಡೆ ಹಾಲು ದಿನಾಚರಣೆ ಆಚರಿಸಲಾಗುತ್ತದೆ’ ಎಂದರು.

ಹಾಲಿನಿಂದ 54 ಉತ್ಪನ್ನಗಳನ್ನು ತಯಾರಿಸಲಾಗುತ್ತದೆ. ಹಾಲಿನ ಉತ್ಪನ್ನಗಳನ್ನು ಜನರು ಹೆಚ್ಚು ಬಳಸಬೇಕು. ನಂದಿನಿ ಹಾಲಿನಲ್ಲಿ ಯಾವುದೇ ಕಲಬೆರಕೆ ಇರುವುದಿಲ್ಲ. ಉತ್ಪಾದಕರು ನೀಡುವ ಹಾಲನ್ನು ಗುಣಮಟ್ಟ ಕಾಪಾಡಿಕೊಂಡು ಸಂಸ್ಕರಿಸಲಾಗುತ್ತದೆ. ಜನರು ನಂದಿನಿ ಹಾಲು ಹೆಚ್ಚು ಬಳಸಬೇಕು ಎಂದು ಮನವಿ ಮಾಡಿದರು.

‘ಹಾಲು ಉತ್ಪಾದಕರು ಸ್ವಚ್ಛತೆಯತ್ತ ಗಮನಹರಿಸಬೇಕು. ಡೈರಿಯಲ್ಲೂ ಸ್ವಚ್ಛತೆ ಕಾಪಾಡಬೇಕು ಎಂದು ಸಲಹೆ ನೀಡಿದ ಅವರು, ಗುಜರಾತ್‌ ರಾಜ್ಯದ ಡೈರಿಗಳಲ್ಲಿ ಸ್ವಚ್ಛತೆಯ ಬಗ್ಗೆ ಜನರಲ್ಲಿ ಅರಿವು ಮೂಡಿದೆ. ನಮ್ಮಲ್ಲೂ ಜಾಗೃತಿ ಮೂಡಬೇಕು’ ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಿಮುಲ್‌ ಹೆಚ್ಚುವರಿ ನಿರ್ದೇಶಕ ಕೆ.ಎಂ. ಲೋಹಿತೇಶ್ವರ, ‘60 ದೇಶಗಳಲ್ಲಿ ಹಾಲು ದಿನಾಚರಣೆ ಆಚರಿಸಲಾಗುತ್ತದೆ. ಹಾಲಿನ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಶಿಮುಲ್‌ನಿಂದ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ’ ಎಂದರು.

ಇಂದು ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದ್ದರೂ ಹಾಲಿನ ದರ ಹೆಚ್ಚಳವಾಗಿಲ್ಲ. ಆರೋಗ್ಯವನ್ನು ಹಾಳು ಮಾಡುವ ಮದ್ಯದ ಬೆಲೆ ಅತಿ ಹೆಚ್ಚಿದೆ. ಆದರೆ ಆರೋಗ್ಯ ಕಾಪಾಡುವ ಹಾಲಿನ ದರ ಕಡಿಮೆ ಇದೆ. ಅಧಿಕಾರಿಗಳು ಹಾಲಿನ ದರ ಹೆಚ್ಚಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಹಾಲು ಉತ್ಪಾದಕರನ್ನು ಅಧಿಕಾರಿಗಳು ಗೌರವಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಹೊನ್ನಾಳಿ ತಾಲ್ಲೂಕಿನ ಹಾಲಭಾವಿಯ ಹಾಲು ಉತ್ಪಾದಕ ಆನಂದಪ್ಪ ಒತ್ತಾಯಿಸಿದರು. ಅವರ ಒತ್ತಾಯಕ್ಕೆ ಹಾಲು ಉತ್ಪಾದಕರು ಸಹಮತ ವ್ಯಕ್ತಪಡಿಸಿದರು.

ಶಿಮುಲ್‌ ನಿರ್ದೇಶಕ ಕೆ.ಎನ್‌. ಸೋಮಶೇಖರಪ್ಪ ಮಾತನಾಡಿದರು. ಉಪವ್ಯವಸ್ಥಾಪಕ ಸುರೇಶ್‌ ಹುಳ್ಳಿ ಸ್ವಾಗತಿಸಿದರು. ಡಾ.ಎನ್‌. ಗುರುಶೇಖರ್‌ ನಿರೂಪಿಸಿದರು. ಕೆ.ಎಂ. ವಿಜಯಕುಮಾರ ವಂದಿಸಿದರು. ಹಾಲಿನ ಬಳಕೆ, ಉತ್ಪಾದನೆ ಕುರಿತು, ಉಪನ್ಯಾಸ, ಪ್ರಾತ್ಯಕ್ಷಿಕೆ ನಡೆಯಿತು. ಶಿಮುಲ್‌ ಸದಸ್ಯರು ಭಾಗವಹಿಸಿದ್ದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !