ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ಹಸ್ತಕ್ಷೇಪಕ್ಕೆ ಸದಸ್ಯರ ಆಕ್ಷೇಪ

ಚೀಲೂರಿಗೆ ಮಂಜೂರಾಗಿದ್ದ ಒಳಾಂಗಣ ಕ್ರೀಡಾಂಗಣ ಹೊನ್ನಾಳಿಗೆ ವರ್ಗಾವಣೆ
Last Updated 28 ಮೇ 2020, 15:06 IST
ಅಕ್ಷರ ಗಾತ್ರ

ದಾವಣಗೆರೆ: ‘ಗ್ರಾಮೀಣಾಭಿವೃದ್ಧಿ ಸಚಿವರ ಮೂಲಕ ನನ್ನ ಕ್ಷೇತ್ರಕ್ಕೆ ಮಂಜೂರು ಮಾಡಿಸಿಕೊಂಡು ಬಂದಿದ್ದ ₹ 12 ಕೋಟಿಯ ಕಾಮಗಾರಿಗಳಿಗೆ ಸ್ಥಳೀಯ ಶಾಸಕರು ಅಡ್ಡಿಪಡಿಸುತ್ತಿದ್ದಾರೆ. ಶಾಸಕರು ಅನುದಾನವನ್ನು ಬೇರೆ ಕ್ಷೇತ್ರಕ್ಕೆ ತೆಗೆದುಕೊಂಡು ಹೋಗಲು ಯತ್ನಿಸುತ್ತಿದ್ದಾರೆ’ ಎಂದು ಜಿಲ್ಲಾ ಪಂಚಾಯಿತಿಯ ಕಾಂಗ್ರೆಸ್‌ ಸದಸ್ಯ ಡಿ.ಜಿ. ವಿಶ್ವನಾಥ ಆಕ್ಷೇಪಿಸಿದರು.

‘₹ 3 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿಗಳನ್ನು ಪರಿಶಿಷ್ಟ ಜಾತಿಯ ಗುತ್ತಿಗೆದಾರರ ಮೂಲಕ ಆರಂಭಿಸಲಾಗಿತ್ತು. ಆದರೆ, ಶಾಸಕರು ಮಧ್ಯಪ್ರವೇಶಿಸಿ ಕೆಲಸವನ್ನು ನಿಲ್ಲಿಸಿ, ತಮ್ಮ ಚೇಲಾಗಳಿಗೆ ಅನುಕೂಲ ಮಾಡಿಕೊಡಲು ಲ್ಯಾಂಡ್‌ ಆರ್ಮಿಗೆ ಕೆಲಸ ವಹಿಸಿದ್ದಾರೆ. ಅರ್ಧ ಕೆಲಸ ಮಾಡಿದ ಗುತ್ತಿಗೆದಾರರಿಗೆ ಅನ್ಯಾಯವಾಗಿದೆ’ ಎಂದು ವಿಶ್ವನಾಥ ದೂರಿದರು. ಇದರಿಂದ ಕೆರಳಿದ ಆಡಳಿತ ಪಕ್ಷದ ಸದಸ್ಯರಾದ ವಾಗೀಶ ಸ್ವಾಮಿ, ಎಂ.ಆರ್‌. ಮಹೇಶ್‌ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕೆಲ ಕಾಲ ಗದ್ದಲ ಉಂಟಾಯಿತು.

‘ಚೀಲೂರು ಕ್ಷೇತ್ರದಲ್ಲಿ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಲಿದೆ ಎಂದು ₹ 1 ಕೋಟಿ ವೆಚ್ಚದಲ್ಲಿ ಒಳಗಾಂಗಣ ಕ್ರೀಡಾಂಗಣ ನಿರ್ಮಿಸಲು ಅನುದಾನ ತಂದಿದ್ದೆ. ಇದರ ಉದ್ಘಾಟನೆ ಮಾಡಬೇಕಾಗಿತ್ತು. ಆದರೆ, ಶಾಸಕರು ತಾಲ್ಲೂಕು ಕೇಂದ್ರಕ್ಕೆ ಕ್ರೀಡಾಂಗಣವನ್ನು ತೆಗೆದುಕೊಂಡು ಹೋಗಲು ಮುಂದಾಗಿದ್ದಾರೆ. ಚೀಲೂರು ಹಳ್ಳದಿಂದ 8 ಕೆರೆಗಳನ್ನು ತುಂಬಿಸಲು ಮಂಜೂರಾಗಿದ್ದ ಕಾಮಗಾರಿಗಳ ಟೆಂಡರ್‌ ಅನ್ನೂ ತಡೆ ಹಿಡಿಯಲಾಗಿದೆ’ ಎಂದು ವಿಶ್ವನಾಥ ಅಸಮಾಧಾನ ವ್ಯಕ್ತಪಡಿಸಿದರು.

ಆಡಳಿತ ಪಕ್ಷದ ಸದಸ್ಯ ಲೋಕೇಶ್ವರ, ‘ನಮ್ಮ ಕ್ಷೇತ್ರದಲ್ಲೂ ಈ ರೀತಿ ಕಾಮಗಾರಿಗಳು ಬದಲಾಗಿವೆ. ನೀವು ಅನುದಾನ ತಂದಿರುವ ಬಗ್ಗೆ ಶಾಸಕರಿಗೆ ಮೊದಲೇ ತಿಳಿಸಬೇಕಾಗಿತ್ತು’ ಎಂದರು. ಸದಸ್ಯರಾದ ಸುರೇಂದ್ರ ನಾಯ್ಕ, ಮಂಜುಳಾ ಟಿ.ವಿ.ರಾಜು ಅವರೂ ‘ಶಾಸಕರ ಬಳಿ ಹೋಗಿ ಸಮಸ್ಯೆ ಬಗೆಹರಿಸಿಕೊಳ್ಳಿ’ ಎಂದು ಸಲಹೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ತೇಜಸ್ವಿ ಪಟೇಲ್‌, ‘ಜಿಲ್ಲಾ ಪಂಚಾಯಿತಿ ಸದಸ್ಯರ ಅಧಿಕಾರದಲ್ಲಿ ಶಾಸಕರು ಹಸ್ತಕ್ಷೇಪ ಮಾಡಬಾರದು. ಶಾಸಕರನ್ನು ಕೇಳಿಯೇ ಅಭಿವೃದ್ಧಿ ಕೆಲಸ ಮಾಡಬೇಕು ಎಂಬುದನ್ನು ನಾವು ಒಪ್ಪುವುದಿಲ್ಲ. ಗ್ರಾಮ ಪಂಚಾಯಿತಿ ಸದಸ್ಯರಿಂದ ಸಂಸದರವರೆಗೂ ಎಲ್ಲರೂ ಜನರಿಂದಲೇ ಆಯ್ಕೆಯಾಗಿದ್ದಾರೆ. ನಾಳೆ ಬೇರೆ ಸದಸ್ಯರಿಗೂ ಇದೇ ಸಮಸ್ಯೆ ಬರಲಿದೆ. ಹೀಗಾಗಿ ಅಧ್ಯಕ್ಷರು ಮತ್ತು ಸಿಇಒ ಶಾಸಕರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಬೇಕು’ ಎಂದು ಸಲಹೆ ನೀಡಿದರು.

ಬಿಲ್‌ ಹಣ ಲ್ಯಾಪ್ಸ್‌: ‘ಪಿಆರ್‌ಡಿಯಿಂದ ಕೈಗೊಳ್ಳಲಾದ ಕಾಮಗಾರಿ ಜನವರಿ ಒಳಗೇ ಪೂರ್ಣಗೊಂಡಿದ್ದು, ಬಿಲ್‌ ಸಲ್ಲಿಸಲಾಗಿದೆ. ಆದರೆ, ಏಪ್ರಿಲ್‌ವರೆಗೂ ಹಣ ಪಾವತಿಸಿಲ್ಲ. ಖಜಾನೆ ಮೊದಲೇ ಲಾಕ್‌ ಆಗಿತ್ತು ಎಂದು ಈಗ ಹೇಳುತ್ತಿದ್ದಾರೆ. ಹಣ ವಾಪಸ್‌ ಹೋಗಿದೆ. ಕೆಲಸ ಮಾಡಿದವರಿಗೆ ಯಾರು ಹಣ ಪಾವತಿಸುತ್ತಾರೆ’ ಎಂದು ಸದಸ್ಯ ಎಸ್.ಕೆ. ಮಂಜುನಾಥ್‌ ಪ್ರಶ್ನಿಸಿದರು.

‘ನರೇಗಾ ಕಳ್ಳರ ಸಂತೆ’:‘ಜಗಳೂರು ತಾಲ್ಲೂಕಿನಲ್ಲಿ ನರೇಗಾದಡಿ ವೆಂಡರ್‌ಗಳು ₹ 8 ಕೋಟಿ ಮಟಿರಿಯಲ್‌ಗಳ ಬಿಲ್‌ ಡ್ರಾ ಮಾಡಿಕೊಂಡಿದ್ದಾರೆ. ಪಿಡಿಒಗಳ ಮೇಲೆ ಏಕೆ ಇನ್ನೂ ಕ್ರಮ ಕೈಗೊಂಡಿಲ್ಲ’ ಎಂದು ಸದಸ್ಯ ಎಸ್.ಕೆ. ಮಂಜುನಾಥ್‌ ಪ್ರಶ್ನಿಸಿದರು.

ಇದಕ್ಕೆ ಧ್ವನಿಗೂಡಿಸಿದ ವಾಗೀಶ ಸ್ವಾಮಿ, ‘ಉದ್ಯೋಗ ಖಾತ್ರಿ ಎಂಬುದು ಕಳ್ಳರ ಸಂತೆಯಾಗಿದೆ. ಇದನ್ನು ತನಿಖೆ ಮಾಡಲು ಬಂದ ತನಿಖಾಧಿಕಾರಿಗಳೂ ಹಾಗೆಯೇ ಇದ್ದಾರೆ. ಪಿಡಿಒಗಳು ಕೋಟ್ಯಧಿಪತಿಗಳಾಗಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸದಸ್ಯೆ ಜೆ.ಸವಿತಾ ‘ಇನ್ನು ಮುಂದೆ ಕೂಲಿ ಕಾರ್ಮಿಕರಿಗೆ ಮಾತ್ರ ಕೆಲಸ ನೀಡಿ’ ಎಂದು ಹೇಳಿದರು.

ಸಿಇಒ ಪದ್ಮ ಬಸವಂತಪ್ಪ, ‘ವೆಂಡರ್‌ಗಳಿಗೆ ಬಿಲ್ ಡ್ರಾ ಮಾಡಲು ಯಾವುದೇ ಮಿತಿ ಇಲ್ಲ. ಜಗಳೂರಿನಲ್ಲಿ ನರೇಗಾ ಯೋಜನೆಯಡಿ ನಡೆದಿದ್ದ ಹಗರಣಕ್ಕೆ ಸಂಬಂಧಿಸಿದಂತೆ ಒಂಬತ್ತು ಪಿಡಿಒ ಹಾಗೂ ಒಬ್ಬ ಕಾರ್ಯದರ್ಶಿಯನ್ನು ಅಮಾನತುಗೊಳಿಸಲಾಗಿದೆ’ ಎಂದು ಮಾಹಿತಿ ನೀಡಿದರು.ಅವ್ಯವಹಾರದಲ್ಲಿ ಭಾಗಿಯಾದವರಿಗೆ ಜೈಲು ಶಿಕ್ಷೆಯಾಗಬೇಕು ಎಂದು ವಾಗೀಶ ಸ್ವಾಮಿ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT