ಭಾನುವಾರ, ಜುಲೈ 3, 2022
24 °C
ಮೇಯರ್ ಬಿ.ಜಿ.ಅಜಯ್‌ಕುಮಾರ್ ಸ್ಪಷ್ಟನೆ

ಎಂಎಲ್‌ಸಿಗಳ ಹೆಸರು ಸೇರ್ಪಡೆ ಹಿಂದೆ ಬಿಜೆಪಿ ಪಾತ್ರವಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಚುನಾವಣಾ ಆಯೋಗ ಕಾನೂನು ರೀತಿ ವಿಧಾನ ಪರಿಷತ್ ಸದಸ್ಯ ಚಿದಾನಂದಗೌಡ ಹಾಗೂ ಆರ್. ಶಂಕರ್ ಅವರ ಹೆಸರನ್ನು ಸೇರ್ಪಡೆಗೊಳಿಸಿದೆಯೇ ಹೊರತು ಇದರಲ್ಲಿ ಬಿಜೆಪಿಯ ಪಾಲಿಕೆ ಸದಸ್ಯರ ಅಥವಾ ಮುಖಂಡರ ಪಾತ್ರವಿಲ್ಲ’ ಎಂದು ಮೇಯರ್ ಬಿ.ಜಿ.ಅಜಯ್‌ಕುಮಾರ್ ಸ್ಪಷ್ಟಪಡಿಸಿದರು.

‘ಮೇಯರ್‌ ಚುನಾವಣೆ ಸಂಬಂಧ ಈ ಇಬ್ಬರ ಹೆಸರನ್ನು ಅನಧಿಕೃತವಾಗಿ ಸೇರಿಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್‌ನವರು ಪ್ರತಿಭಟನೆ ನಡೆಸುತ್ತಿದ್ದಾರೆ. ಮಹಾನಗರ ಪಾಲಿಕೆಯು ಸ್ಥಾಯಿ ಸಮಿತಿ, ಸದಸ್ಯರಿಗೆ ಸಂಬಂಧಪಟ್ಟ ವಿಷಯವಲ್ಲ. ಕಾನೂನಿನ ಚೌಕಟ್ಟಿನಲ್ಲಿ ಯಾರೂ ಎಲ್ಲಿ ಬೇಕಾದರೂ ವಾಸ ಮಾಡಲು ಹಕ್ಕಿದೆ ಎಂಬುದನ್ನು ಅವರು ಪ್ರತಿಭಟಿಸುವ ಮುನ್ನ ಯೋಚಿಸಬೇಕಿತ್ತು. ಒಳ್ಳೆಯದಕ್ಕೂ, ಕೆಟ್ಟದಕ್ಕೂ ವಿರೋಧ ಮಾಡುವುದು ಹಿಂದಿನಿಂದಲೂ ಕಾಂಗ್ರೆಸ್ ಸಂಸ್ಕೃತಿ’ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಎಂದು ಟೀಕಿಸಿದರು.

‘ಕಾಂಗ್ರೆಸ್‌ನ ಎಂಎಲ್‌ಸಿಗಳಾದ ರಘು ಆಚಾರ್, ಎಚ್.ಎಂ. ರೇವಣ್ಣ, ಕೆ.ಸಿ. ಕೊಂಡಯ್ಯ ಹಾಗೂ ಕೊಂಡಜ್ಜಿ ಮೋಹನ್ ಅವರ ಹೆಸರುಗಳನ್ನು ಸೇರಿಸಿದ್ದು, ಅವರೆಲ್ಲ ಇಲ್ಲಿ ವಾಸವಾಗಿದ್ದಾರಾ? ಯಾವುದೋ ಮನೆ ವಿಳಾಸ ಕೊಟ್ಟು ಸೇರಿಸಿದ್ದಾರೆ. ಅವರೇ ತಪ್ಪು ಮಾಡಿ ನಮ್ಮ ಮೇಲೆ ಹೊರಿಸುತ್ತಿದ್ದಾರೆ. ದಾವಣಗೆರೆಯಲ್ಲಿಯೇ ಮನೆ ಮಾಡಿ ಜನರ ಋಣ ತೀರಿಸುತ್ತೇನೆ ಎಂದು ಚಿದಾನಂದಗೌಡರು ಚುನಾವಣೆಗೂ ಮುಂಚೆ ಹಾಗೂ ಗೆದ್ದ ನಂತರವೂ ಹೇಳಿಕೆ ಕೊಟ್ಟಿದ್ದರು. ಆರ್. ಶಂಕರ್ ಪುತ್ರ ಕೂಡ ಇಲ್ಲೇ ವ್ಯಾಸಂಗ ಮಾಡುತ್ತಿದ್ದ ಕಾರಣ ಅವರು ಇಲ್ಲಿಯೇ ಮನೆ ಮಾಡಿದ್ದಾರೆ’ ಎಂದು ಸಮರ್ಥಿಸಿಕೊಂಡರು.

‘ಚುನಾವಣಾ ಆಯೋಗದಲ್ಲಿ ಪ್ರತಿದಿನ ಹೊಸ ಅಪ್ಲಿಕೇಷನ್ ಅಪ್‍ಡೇಟ್ ಆಗುತ್ತವೆ. ಇವತ್ತಿನ ದಿನಾಂಕಕ್ಕೆ ಅಧಿಕೃತ ದಾಖಲೆ ಇರಬೇಕು. ಆದರೆ, ಕಾಂಗ್ರೆಸ್‌ನವರು ಜನವರಿ 18ರಂದು ಇದ್ದ ಕರಡು ಪ್ರತಿಯನ್ನು ನೀಡಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ. ಚುನಾವಣೆಯ ಮತದಾರರ ಪಟ್ಟಿಯಲ್ಲಿ ವಿಧಾನ ಪರಿಷತ್ ಸದಸ್ಯರ ಹೆಸರುಗಳನ್ನು ಸೇರ್ಪಡೆಗೊಳಿಸುವ ಅವಕಾಶ ಕಾನೂನಿನಲ್ಲಿದೆ ಎಂಬುದನ್ನು 2015ರ ಬಿಬಿಎಂಪಿ ಚುನಾವಣೆಯಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ತೋರಿಸಿದ್ದಾರೆ. ಅಂದು ಬಹುಮತ ಇಲ್ಲವಾದರೂ ನಾಲ್ಕು ವರ್ಷ ಆಡಳಿತ ಮಾಡಿದ್ದರು. ಅಧಿಕಾರ ಅನುಭವಿಸಿದ್ದ ಕಾಂಗ್ರೆಸ್‍ನವರಿಗೆ ಆಗ ಈ ಪ್ರಶ್ನೆ ಮೂಡಿರಲಿಲ್ಲವೇ’ ಎಂದು ಪ್ರಶ್ನಿಸಿದರು.

‘ಎಂಎಲ್‌ಸಿಗಳ ಹೆಸರು ಸೇರ್ಪಡೆ ಹಿಂದೆ ಸಂಸದ ಜಿ.ಎಂ.ಸಿದ್ದೇಶ್ವರ ಅವರ ಕೈವಾಡವಿದೆ ಎಂದು ಬಿಂಬಿಸಲಾಗುತ್ತಿದೆ. ಸುಮ್ಮನೇ ತೇಜೋವಧೆ ಮಾಡಬಾರದು. ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆಗೊಳಿಸುವುದು ಚುನಾವಣಾ ಆಯೋಗವೇ ಹೊರತು ಮತ್ತೊಬ್ಬರಲ್ಲ. ನಗರಪಾಲಿಕೆ ಆಯುಕ್ತರ ಪಾತ್ರವೂ ಇಲ್ಲ’ ಎಂದು ಹೇಳಿದರು.

ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್.ಟಿ. ವೀರೇಶ್‌, ಲೆಕ್ಕಪತ್ರ ಸ್ಥಾಯಿ ಸಮಿತಿ ಅಧ್ಯಕ್ಷೆ ಗೌರಮ್ಮ ಗಿರೀಶ್, ಸದಸ್ಯರಾದ ರೇಣುಕಾ ಶ್ರೀನಿವಾಸ್ ಗಾಯತ್ರಿಬಾಯಿ, ಸೋಗಿ ಶಾಂತಕುಮಾರ್, ಯಶೋದಾ, ವೀಣಾ ನಂಜಪ್ಪ, ಶಿಲ್ಪಾ ಪತ್ರಿಕಾಗೋಷ್ಠಿಯಲ್ಲಿ ಇದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು