ಗುರುವಾರ , ಜುಲೈ 29, 2021
20 °C
ಎಸ್‍ಬಿಐ ಮೊಬೈಲ್ ಎಟಿಎಂಗೆ ಜಿಲ್ಲಾಧಿಕಾರಿಗಳಿಂದ ಚಾಲನೆ

ದಾವಣಗೆರೆ | ಕಂಟೈನ್‌ಮೆಂಟ್ ವಲಯಗಳ ಜನರಿಗೆ ಹಣ ಸಲೀಸು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಜಿಲ್ಲೆಯಲ್ಲಿ ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿರುವ ಕಂಟೈನ್‍ಮೆಂಟ್ ವಲಯಗಳಲ್ಲಿ ಹಣದ ಅಗತ್ಯವುಳ್ಳವರ ಸಹಾಯಕ್ಕಾಗಿ ಪಿ.ಬಿ. ರಸ್ತೆಯಲ್ಲಿರುವ ಎಸ್‍ಬಿಐ ಶಾಖೆಯಿಂದ ವ್ಯವಸ್ಥೆ ಮಾಡಲಾಗಿರುವ ಮೊಬೈಲ್ ಎಟಿಎಂ ವಾಹನ ಸಂಚಾರಕ್ಕೆ ಜಿಲ್ಲಾಧಿಕಾರಿ ಮಾಹಂತೇಶ ಬೀಳಗಿ ಬುಧವಾರ ಚಾಲನೆ ನೀಡಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿ, ‘ಕೊರೊನಾ ಮಾಹಾಮಾರಿ ಪರಿಣಾಮದಿಂದಾಗಿ ಸೀಲ್‍ಡೌನ್ ಪ್ರದೇಶಗಳಲ್ಲಿ ದೈನಂದಿನ ಹಣಕಾಸಿನ ವ್ಯವಹಾರಕ್ಕೆ ತೊಂದರೆ ಆಗಬಾರದು ಎಂದು ಕಂಟೈನ್‍ಮೆಂಟ್ ವಲಯಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಸೇವೆ ಒದಗಿಸಲಾಗಿದೆ. ಇದರ ಸದುಪಯೋಗವನ್ನು ಅಗತ್ಯವುಳ್ಳವರು ಪಡೆದುಕೊಳ್ಳಬೇಕು. ಮೊಬೈಲ್ ಎಟಿಎಂ ಬ್ಯಾಂಕ್‍ಗೆ ಬಹಳಷ್ಟು ಬೇಡಿಕೆ ಇಟ್ಟಿದ್ದೆವು. ಇದೀಗ ಸೇವೆ ಒದಗಿದೆ ಎಂದರು.

‘ಕೆಟಿಜೆ ನಗರದ ಕಂಟೈನ್‍ಮೆಂಟ್ ವಲಯದಲ್ಲಿ 28 ದಿನಗಳಿಂದ ಒಂದೂ ಪ್ರಕರಣ ದಾಖಲಾಗದ ಹಿನ್ನೆಲೆ ನಿಯಮಾನುಸಾರ ಡಿನೋಟಿಫೈ ಮಾಡಲಾಗಿದೆ. ಪ್ರಕರಣದ ಸಂಪರ್ಕದ ಕೊಂಡಿಗಳನ್ನು ಬೇರ್ಪಡಿಸುವ ಕೆಲಸ ಮಾಡಲಾಗುತ್ತಿದ್ದರೂ ಜಿಲ್ಲೆಯಲ್ಲಿ ಅಲ್ಲೊಂದು ಇಲ್ಲೊಂದು ಪ್ರಕರಣ ಕಂಡುಬರುತ್ತಿದೆ. ಜಿಲ್ಲಾ ಸರ್ವೇಕ್ಷಣಾ ತಂಡವು ಉತ್ತಮವಾಗಿ ಕೆಲಸ ಮಾಡುತ್ತಿದೆ. ಕೊರೊನಾ ನಿಯಂತ್ರಿಸಲು ಇನ್ನೂ ಉತ್ತಮ ರೀತಿಯಲ್ಲಿ ಕೆಲಸ ನಿರ್ವಹಿಸಬೇಕು’ ಎಂದರು.

ಅತೀ ಹೆಚ್ಚು ಪ್ರಕರಣಗಳು ಜಾಲಿನಗರ ಹಾಗೂ ಬಾಷಾ ನಗರಕ್ಕೆ ಸಂಬಂಧಿಸಿವೆ. ರೋಗಿ ಸಂಖ್ಯೆ-533 ಮತ್ತು 556 ಇವರಿಗೆ ಸಂಬಂಧಪಟ್ಟ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿದವರನ್ನು 300ರಿಂದ 400 ಜನರನ್ನು ಕ್ವಾರಂಟೈನ್ ಮಾಡಲಾಗಿತ್ತು. ಇದೀಗ ಅವರಿಗೆ ಸಂಬಂಧಪಟ್ಟ ದ್ವಿತೀಯ ಸಂಪರ್ಕದವರಿಗೆ ಕೊರೊನಾ ಪ್ರಕರಣ ಕಂಡು ಬರುತ್ತಿದೆ. ಅದು ಬಿಟ್ಟರೆ ಅಲ್ಲೊಂದು ಇಲ್ಲೊಂದು ಕೇಸ್ ಪತ್ತೆಯಾಗುತ್ತಿವೆ ಎಂದರು.

‘ಇದೀಗ ಜಿಲ್ಲೆಯಲ್ಲಿ ಕೊರೊನಾಗೆ ಸಂಬಂಧಪಟ್ಟಂತೆ ಪರಿಸ್ಥಿತಿ ಸುಧಾರಿಸಿದೆ. ಆದಷ್ಟು ಪ್ರಕರಣಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುತ್ತಿದ್ದು, ಅವರೆಲ್ಲರಿಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಉತ್ತಮವಾದ ಆಹಾರ ಹಾಗೂ ಆಯುಷ್ ಇಲಾಖೆಯ ಉತ್ಪನ್ನಗಳನ್ನು ನೀಡಲಾಗುತ್ತಿದೆ’ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಜಿಲ್ಲಾ ಕೋವಿಡ್ ನೋಡಲ್ ಅಧಿಕಾರಿ ಪ್ರಮೋದ್ ನಾಯಕ್ ಹಾಗೂ ಎಸ್‍ಬಿಐ ಬ್ಯಾಂಕ್ ಮ್ಯಾನೇಜರ್ ಸೇರಿ ಸಿಬ್ಬಂದಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು