ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಜಿಲ್ಲೆಯಲ್ಲಿ ಶೇ 95ರಷ್ಟು ಮೆಕ್ಕೆಜೋಳ ಬಿತ್ತನೆ

Published 2 ಆಗಸ್ಟ್ 2023, 5:58 IST
Last Updated 2 ಆಗಸ್ಟ್ 2023, 5:58 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ 1.39 ಲಕ್ಷ ಹೆಕ್ಟೇರ್‌ಗಳಲ್ಲಿ ಬಿತ್ತನೆಯಾಗಿದ್ದು, ಶೇ 57ರಷ್ಟು ಬಿತ್ತನೆಯಾಗಿದೆ. ಅದರಲ್ಲಿ ಮೆಕ್ಕೆಜೋಳ ಶೇ 95ಕ್ಕಿಂತ ಹೆಚ್ಚು ಬಿತ್ತನೆಯಾಗಿದೆ.

2.41 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಇತ್ತು. ಅದರಲ್ಲಿ 1.26 ಲಕ್ಷ ಹೆಕ್ಟೇರ್‌ನಲ್ಲಿ ಮೆಕ್ಕೆಜೋಳ ಬಿತ್ತನೆ ನಿಗದಿಯಾಗಿದ್ದು, 1.16 ಲಕ್ಷ ಹೆಕ್ಟೇರ್‌ಗಿಂತಲೂ ಹೆಚ್ಚು ಬಿತ್ತನೆಯಾಗಿದೆ. ಜಿಲ್ಲೆಯಲ್ಲಿ ನ್ಯಾಮತಿಯಲ್ಲಿ ಶೇ 75ರಷ್ಟು ಅತಿ ಹೆಚ್ಚು ಬಿತ್ತನೆಯಾದರೆ, ಹರಿಹರದಲ್ಲಿ ಶೇ 21ರಷ್ಟು ಬಿತ್ತನೆಯಾಗಿದ್ದು, ಕಡಿಮೆಯಾಗಿದೆ.

ಎರಡು ವಾರ ಮಳೆ ಬಿದ್ದಿರುವುದರಿಂದ ಮೆಕ್ಕೆಜೋಳದಲ್ಲಿ ಕಳೆ ಜಾಸ್ತಿಯಾಗಿದ್ದು, ರೈತರು ಅವುಗಳನ್ನು ತೆಗೆಯುತ್ತಿದ್ದಾರೆ. ಅಲ್ಲದೇ ಒಣಗಿರುವ ಜಮೀನುಗಳಲ್ಲಿ ಎಡೆಕುಂಟೆ ಹೊಡೆಯುವ ಕೆಲಸದಲ್ಲಿ ನಿರತರಾಗಿದ್ದಾರೆ. ಅಲ್ಲಲ್ಲಿ ಔಷಧ ಸಿಂಪಡಣೆ ಮಾಡುತ್ತಿದ್ದಾರೆ. ನೀರು ಜಾಸ್ತಿಯಾಗಿ ಸಾರಜನಕ ಕೊರತೆಯಿಂದ ಬೆಳೆ ಹಳದಿ ಬಣ್ಣಕ್ಕೆ ತಿರುಗಿದ್ದು, ಯೂರಿಯಾ, ಡಿಎಪಿ ಹಾಗೂ ಕಾಂಪ್ಲೆಕ್ಸ್‌ ಗೊಬ್ಬರಗಳನ್ನು ಹಾಕುತ್ತಿದ್ದು, ಈ ಎರಡು ಗೊಬ್ಬರಗಳಿಗೆ ಬೇಡಿಕೆ ಇದೆ ಎಂದು ಜಂಟಿ ನಿರ್ದೇಶಕರ ಕಚೇರಿಯ ಕೃಷಿ ಅಧಿಕಾರಿ ರಾಘವೇಂದ್ರ ಹಾವನೂರು ತಿಳಿಸಿದ್ದಾರೆ.

ಭತ್ತದ ನಾಟಿಗೆ ಸಿದ್ಧತೆ: ಈಗಾಗಲೇ ಕೊಳವೆ ಬಾವಿ ಹಾಗೂ ಬೇರೆ ಮೂಲಗಳಿಂದ ಕೆಲವು ರೈತರು ಭತ್ತದ ನಾಟಿ ಮಾಡಿದ್ದಾರೆ. ಮತ್ತೆ ಕೆಲವು ಭಾಗಗಳಲ್ಲಿ ರೈತರು ನಾಟಿಗೆ ಸಿಸಿಮಡಿಗಳನ್ನು ಸಿದ್ಧತೆ ಮಾಡಿಕೊಂಡಿದ್ದು, ಭದ್ರಾ ಜಲಾಶಯದಿಂದ ನೀರು ಹರಿಸುವುದನ್ನು ಎದುರು ನೋಡುತ್ತಿದ್ದಾರೆ.

ಈ ಬಾರಿ 65,847 ಹೆಕ್ಟೇರ್‌ಗಳಲ್ಲಿ ಭತ್ತ ಬಿತ್ತನೆ ಗುರಿ ಇದ್ದು, 1,330 ಹೆಕ್ಟೇರ್‌ಗಳಲ್ಲಿ ಬಿತ್ತನೆಯಾಗಿದೆ. ಶೇ 2ರಷ್ಟು ಮಾತ್ರ ಬಿತ್ತನೆಯಾಗಿದೆ. ಭದ್ರಾ ಜಲಾಶಯದ ಮಟ್ಟ 160 ಅಡಿಗೆ ತಲುಪಿದ್ದು, ಶೀಘ್ರದಲ್ಲೇ ನೀರು ಬಿಡುವ ನಿರೀಕ್ಷೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

2,400 ಹೆಕ್ಟೇರ್‌ಗಳಲ್ಲಿ ಜೋಳದ ಬಿತ್ತನೆ ಗುರಿ ಇದ್ದು, 115 ಹೆಕ್ಟೇರ್‌ಗಳಲ್ಲಿ ಬಿತ್ತನೆಯಾಗಿದೆ. 7,295 ಹೆಕ್ಟೇರ್‌ಗಳಲ್ಲಿ ರಾಗಿ ಬಿತ್ತನೆ ಗುರಿ ಇದ್ದು, 1952 ಹೆಕ್ಟೇರ್‌ಗಳಲ್ಲಿ ಬಿತ್ತನೆಯಾಗಿದೆ. ತೊಗರಿ 13,500 ಹೆಕ್ಟೇರ್‌ನಲ್ಲಿ ಬೆಳೆಯುವ ಗುರಿ ಇದ್ದು, 10,075 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡುವ ಮೂಲಕ ಶೇ 75ರಷ್ಟು ಗುರಿ ತಲುಪಿದೆ. ಒಟ್ಟಾರೆ 11,141 ಹೆಕ್ಟೇರ್‌ಗಳಲ್ಲಿ ದ್ವಿದಳ ಧಾನ್ಯಗಳ ಬಿತ್ತನೆಯಾಗಿದೆ.

17,356 ಎಣ್ಣೆಕಾಳುಗಳ ಬಿತ್ತನೆ ಗುರಿ ಇದ್ದು, 7,072 ಹೆಕ್ಟೇರ್‌ಗಳಲ್ಲಿ ಬಿತ್ತನೆಯಾಗಿದೆ. ವಾಣಿಜ್ಯ ಬೆಳೆಗಳಲ್ಲಿ 1629 ಹೆಕ್ಟೇರ್‌ನಲ್ಲಿ ಹತ್ತಿ, 90 ಹೆಕ್ಟೇರ್‌ಗಳಲ್ಲಿ ಕಬ್ಬು ನೆಡಲಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬಿಡುವು ನೀಡಿದ ಮಳೆ: ಬಿರುಸಿನಿಂದ ಸಾಗಿದ ಎಡೆಕುಂಟೆ ಕಾರ್ಯ

ಚನ್ನಗಿರಿ: ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ 1 ವಾರ ಸುರಿದ ಮಳೆಯಿಂದಾಗಿ ಕೃಷಿ ಚಟುವಟಿಕೆಗಳು ಕುಂಠಿತವಾಗಿ ಸಾಗಿದ್ದವು. ಮೂರು ದಿನಗಳಿಂದ ತಾಲ್ಲೂಕಿನಲ್ಲಿ ಮಳೆರಾಯ ವಿರಾಮ ನೀಡಿದ್ದು ರೈತರು ತಮ್ಮ ಜಮೀನುಗಳಲ್ಲಿ ಬೆಳೆಗಳ ಎಡೆಕುಂಟೆ ಹೊಡೆಯುವ ಕಾರ್ಯವನ್ನು ಬಿರುಸಿನಿಂದ ಮಾಡುತ್ತಿದ್ದಾರೆ.

ಇದುವರೆಗೆ ತಾಲ್ಲೂಕಿನಲ್ಲಿ ಶೇ 82ರಷ್ಟು ಬಿತ್ತನೆ ಕಾರ್ಯವಾಗಿದ್ದು ಒಟ್ಟಾರೆ 22160 ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ರಾಗಿ ಅಲಸಂದೆ ತೊಗರಿ ಮುಂತಾದ ಬೆಳೆಗಳನ್ನು ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ್ದಾರೆ. ಈಗಾಗಲೇ 1 ತಿಂಗಳ ಹಿಂದೆ ಬಿತ್ತನೆ ಮಾಡಿದ್ದ ಬೆಳೆಗಳು ಎಡೆಕುಂಟೆ ಹೊಡೆಯುವ ಹಂತವನ್ನು ತಲುಪಿವೆ.

ನಿರಂತರವಾಗಿ ಜಡಿಮಳೆಯ ಕಾರಣದಿಂದಾಗಿ ಎಡೆಕುಂಟೆ ಹೊಡೆಯಲು ರೈತರಿಗೆ ಸಾಧ್ಯವಾಗಿರಲಿಲ್ಲ. ಆಗಾಗಿ ಬೆಳೆಗಳ ಜತೆಗೆ ಕಳೆಯೂ ಕೂಡಾ ಹೆಚ್ಚಾಗಿ ಬೆಳೆದಿದ್ದು ಬೆಳೆಗಳ ಬೆಳವಣಿಗೆಗೆ ಕಳೆ ಅಡ್ಡಿಯಾಗಿತ್ತು. ಎಡೆಕುಂಟೆ ಹೊಡೆಯುವುದರಿಂದ ಅರ್ಧಕ್ಕಿಂತ ಹೆಚ್ಚು ಭಾಗ ಕಳೆ ನಾಶವಾಗುತ್ತದೆ.

ಕಳೆ ನಾಶವಾಗುವುದರಿಂದ ಬೆಳೆಗಳು ಉತ್ತಮ ರೀತಿಯಲ್ಲಿ ಬೆಳವಣಿಗೆಯಾಗಲು ಸಹಕಾರಿಯಾಗುತ್ತದೆ. ಅಡಿಕೆ ಬಿಟ್ಟರೆ ತಾಲ್ಲೂಕಿನಲ್ಲಿ ಹೆಚ್ಚಿನ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆಯನ್ನು ಬೆಳೆಯಲಾಗುತ್ತದೆ. ಇದುವರೆಗೆ ತಾಲ್ಲೂಕಿನಲ್ಲಿ 22 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬಿತ್ತನೆ ಕಾರ್ಯವಾಗಿದೆ.

ಜಿಲ್ಲೆಯಲ್ಲಿ ಬೆಳೆಗೆ ಆರೈಕೆ ಮಾಡಿದರೆ ಉತ್ತಮ ಇಳುವರಿ ಬರುವ ನಿರೀಕ್ಷೆ ಇದೆ. ಕಳೆದ ಬಾರಿ ಕ್ವಿಂಟಲ್‌ಗೆ ₹2700 ದರ ಬಂದಿತ್ತು. ಈ ಬಾರಿಯೂ ಉತ್ತಮ ಬೆಲೆ ನಿರೀಕ್ಷಿಸಬಹುದು
-ಶ್ರೀನಿವಾಸ್ ಚಿಂತಾಲ್ ಜಂಟಿ ಕೃಷಿ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT