ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಯಲ್ಲಿದ್ದೇನೆ ಎಂದು ಎದೆ ಬಗೆದು ತೋರಿಸಬೇಕೇ: ಎಂ.ಪಿ.ರೇಣುಕಾಚಾರ್ಯ ಆಕ್ರೋಶ

Published 7 ನವೆಂಬರ್ 2023, 6:33 IST
Last Updated 7 ನವೆಂಬರ್ 2023, 6:33 IST
ಅಕ್ಷರ ಗಾತ್ರ

ಹೊನ್ನಾಳಿ: ‘ನಾನು ಬಿಜೆಪಿಯಲ್ಲೇ ಇದ್ದೇನೆ ಎಂಬುದನ್ನು ಹನುಮಂತನ ರೀತಿಯಲ್ಲಿ ಎದೆ ಬಗೆದು ತೋರಿಸಬೇಕೇ’ ಎಂದು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.

ಹೊನ್ನಾಳಿ ಮತ್ತು ನ್ಯಾಮತಿ ತಾಲ್ಲೂಕು ಬಿಜೆಪಿ ಘಟಕದ ಅಧ್ಯಕ್ಷರ ನೇತೃತ್ವದಲ್ಲಿ ಸೋಮವಾರ ಎಚ್.ಕಡದಕಟ್ಟೆ, ಅರಬಗಟ್ಟೆ, ಸೊರಟೂರು, ಮಾದನಬಾವಿ ಗ್ರಾಮಗಳಲ್ಲಿ ಮೂರನೇ ದಿನದ ಬರ ಅಧ್ಯಯನ ಪ್ರವಾಸ ಮಾಡಿದ ವೇಳೆ ಅವರು ಮಾತನಾಡಿದರು.

‘2019ರಲ್ಲಿ ನನಗೆ 15 ಜಿಲ್ಲೆಗಳ ಬರ ಅಧ್ಯಯನಕ್ಕೆ ಅವಕಾಶ ಮಾಡಿಕೊಟ್ಟಿದ್ದರು. ಆದರೆ ಈಗ ನನ್ನನ್ನು ಬರ ಪ್ರವಾಸದ ತಂಡದಿಂದ ಏಕೆ ಹೊರಗಿಡಲಾಗಿದೆ. ನನ್ನ ಕಣ್ಣು, ಕೈಕಾಲುಗಳು ಬಿದ್ದು ಹೋಗಿವೆಯೇ’ ಎಂದು ಪ್ರಶ್ನಿಸಿದರು.

‘ಇದರಿಂದ ನನಗೇನೂ ನಷ್ಟವಿಲ್ಲ, ಬಿಜೆಪಿಗೇ ನಷ್ಟ. ತಂಡದಿಂದ ನಮ್ಮವರೇ ನನ್ನನ್ನು ಹೊರಗಿಟ್ಟಿದ್ದಾರೆ. ನಾನು ಇದಕ್ಕೆ ಬಗ್ಗುವುದಿಲ್ಲ ಮತ್ತು ಕುಗ್ಗುವುದೂ ಇಲ್ಲ. ಬರಪಟ್ಟಿ ಸಿದ್ಧಪಡಿಸಿದವರು ಸೂಜಿ ದಾರದಂತೆ ಕೆಲಸ ಮಾಡಬೇಕೇ ಹೊರತು ಕತ್ತರಿಯಂತೆ ಕೆಲಸ ಮಾಡಬಾರದು’ ಎಂದರು. 

‘ಅವಳಿ ತಾಲ್ಲೂಕುಗಳನ್ನು ಬರಪಟ್ಟಿಗೆ ಸೇರಿಸುವಂತೆ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗೆ ಮನವಿ ಮಾಡಿದ್ದನ್ನೇ ನೆಪವಾಗಿಟ್ಟುಕೊಂಡ ನಮ್ಮ ಪೈಕಿ ಕೆಲವರು, ನಾನು ಕಾಂಗ್ರೆಸ್‌ಗೆ ಹೋಗಿದ್ದೇನೆ ಎಂದು ಅಪಪ್ರಚಾರ ಮಾಡಿದರು’ ಎಂದು ರೇಣುಕಾಚಾರ್ಯ ಆರೋಪಿಸಿದರು. 

‘ಕಾಗೇರಿ ಅವರ ಬಗ್ಗೆ ನನಗೆ ಗೌರವವಿದೆ. ತಂಡದಿಂದ ನನ್ನನ್ನು ಹೊರಗಿಟ್ಟಿದ್ದರೂ ಹಾರ ತುರಾಯಿ ಇಟ್ಟುಕೊಂಡು ಅವರಿಗೆ ಕಾಯಬೇಕೇ’ ಎಂದು ಪ್ರಶ್ನಿಸಿದ ಅವರು, ‘ಹೊನ್ನಾಳಿಗೆ ಬರುತ್ತೇವೆ. ತಾವು ಇರಬೇಕು ಎಂದು ಹರಿಹರ ಶಾಸಕರು, ಜಿಲ್ಲಾ ಕಾರ್ಯದರ್ಶಿಗಳು ಕರೆ ಮಾಡಿ ತಿಳಿಸಿದ್ದರು. ನನ್ನನ್ನು ಪಟ್ಟಿಯಿಂದ ಬಿಟ್ಟ ಮೇಲೆ, ನಾನು ಹಮಾಲಿ ಮಾಡಲು ಇರಬೇಕೇ’ ಎಂದು ಪ್ರಶ್ನಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಜೆ.ಕೆ.ಸುರೇಶ್, ಜಿಲ್ಲಾ ಘಟಕದ ಉಪಾಧ್ಯಕ್ಷ ನೆಲಹೊನ್ನೆ ಮಂಜುನಾಥ್, ಜಿಲ್ಲಾ ಕಾರ್ಯದರ್ಶಿ ಅರಕೆರೆ ನಾಗರಾಜ್, ಮುಖಂಡರಾದ ಸುರೇಂದ್ರನಾಯ್ಕ, ಹನುಮಂತಪ್ಪ, ಬಗರ್ ಹುಕುಂ ಸಮಿತಿ ಮಾಜಿ ಅಧ್ಯಕ್ಷ ಮಾದೇನಹಳ್ಳಿ ನಾಗರಾಜ್, ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ರಮೇಶ್, ಎಸ್.ಎಸ್. ಬೀರಪ್ಪ, ದಿಡಗೂರು ಫಾಲಾಕ್ಷಪ್ಪ, ಪುರಸಭೆ ಮಾಜಿ ಅಧ್ಯಕ್ಷ ರಂಗನಾಥ್ ಸೇರಿದಂತೆ ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT