ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಯಲ್ಲಿ ಮೀನು, ಜಾನುವಾರು ನಿಗೂಢ ಸಾವು

ಹಿರೇ ಅರಕೆರೆ: ಕೆರೆಗೆ ವಿಷಾನಿಲ ಸೇರಿರುವ ಸಾಧ್ಯತೆ, ಸಾಂಕ್ರಾಮಿಕ ರೋಗ ಭೀತಿ
Last Updated 17 ಡಿಸೆಂಬರ್ 2022, 4:54 IST
ಅಕ್ಷರ ಗಾತ್ರ

ಜಗಳೂರು:ಹಲವು ವರ್ಷಗಳ ನಂತರ ಭರ್ತಿಯಾಗಿರುವ ತಾಲ್ಲೂಕಿನ ಹಿರೇ ಅರಕೆರೆ ಗ್ರಾಮದ ಕೆರೆಯಲ್ಲಿ ಒಂದು ವಾರದಿಂದ ಸಹಸ್ರಾರು ಮೀನುಗಳು ಹಾಗೂ ಜಾನುವಾರುಗಳು ನಿಗೂಢವಾಗಿ ಮೃತಪಡುತ್ತಿದ್ದು, ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.

125 ಎಕೆರೆ ವಿಸ್ತೀರ್ಣದ ಕೆರೆಯಲ್ಲಿ ಕಾಟ್ಲಾ, ಗೌರಿ ಹಾಗೂ ರೋಹು ಜಾತಿಯ 3 ಲಕ್ಷಕ್ಕೂ ಹೆಚ್ಚು ಮೀನು ಮರಿಗಳನ್ನು ಬಿಡಲಾಗಿದೆ. ಪ್ರತಿ ಮೀನು ಅರ್ಧ ಕೆ.ಜಿ.ಗೂ ಹೆಚ್ಚು ತೂಕ ಹೊಂದಿದ್ದು, ಆರೇಳು ದಿನಗಳಿಂದ ರಾಶಿರಾಶಿ ಮೀನುಗಳ ಸತ್ತು ಕೆರೆಯಲ್ಲಿ ತೇಲುತ್ತಿವೆ. ಇದಕ್ಕೆ ಕಾರಣ ತಿಳಿದುಬಂದಿಲ್ಲ. ಕೆರೆಯ ಅಂಗಳದಲ್ಲಿ ಹಸುವಿನ ಕಳೇಬರ ಪತ್ತೆಯಾಗಿದೆ. ಮೀನುಗಳು ವ್ಯಾಪಕವಾಗಿ ಸಾಯುತ್ತಿರುವುದರಿಂದ ದುರ್ವಾಸನೆ ಬೀರುತ್ತಿದೆ.

ಕೆರೆಯಲ್ಲಿ ಮೀನುಗಾರಿಕೆಗೆ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನ ಸಮಿತಿಯಿಂದ ಟಿ.ಕೆ. ಬಸವರಾಜ್ ಅವರು ₹ 2.10 ಲಕ್ಷಕ್ಕೆ 3 ವರ್ಷಗಳ ಅವಧಿಗೆ ಬಹಿರಂಗ ಹರಾಜಿನಲ್ಲಿ ಬಿಡ್ ಮಾಡಿಕೊಂಡಿದ್ದಾರೆ. ಲಕ್ಷಗಟ್ಟಲೆ ಖರ್ಚು ಮಾಡಿ 3 ಲಕ್ಷ ಮೀನು ಮರಿ ಖರೀದಿಸಿ ತಂದು ಕೆರೆಯಲ್ಲಿ ಬಿಟ್ಟಿದ್ದು, ಈಗ ಸಾವನ್ನಪ್ಪುತ್ತಿವೆ. ದಿಕ್ಕು ತೋಚದಂತಾಗಿದೆ ಎಂದು ಬಸವರಾಜ್ ಅಳಲು ತೋಡಿಕೊಂಡರು.

₹ 6 ಲಕ್ಷ ಖರ್ಚು ಮಾಡಿ ಕೆರೆಯಲ್ಲಿ ಮೀನುಗಾರಿಕೆ ಮಾಡುತ್ತಿದ್ದೇನೆ. ಹಲವು ದಿನಗಳಿಂದ ಮೀನುಗಳು ಸಾವಿರಾರು ಸಂಖ್ಯೆಯಲ್ಲಿ ಸತ್ತು ತೇಲುತ್ತಿವೆ. ಈಗಾಗಲೇ 5 ಕ್ವಿಂಟಲ್‌ನಿಂದ 6 ಕ್ವಿಂಟಲ್ ಮೀನು ಸತ್ತು ಕೆರೆ ಏರಿಯ ಉದ್ದಕ್ಕೂ ತೇಲುತ್ತಿವೆ. ಯಾಕೆ ಎಂದು ಕಾರಣ ತಿಳಿಯುತ್ತಿಲ್ಲ. ಸಾಲ ಮಾಡಿ ಹಣ ಹಾಕಿದ್ದೇನೆ. ಮೀನುಗಾರಿಕೆ ಇಲಾಖೆ ಹಾಗೂ ಗುತ್ತಿದುರ್ಗ ಪಂಚಾಯಿತಿ ಅಧಿಕಾರಿಗಳು ಕೂಡಲೇ ಕೆರೆಗೆ ಭೇಟಿ ನೀಡಿ ಪರಿಶೀಲಿಸಿ ಎಂದು ಮನವಿ ಮಾಡಿದ್ದೇನೆ. ಇನ್ನೂ ಬಂದಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.

‘ಬಹಳ ವರ್ಷಗಳ ನಂತ ಕೆರೆ ತುಂಬಿದ್ದು, ಮೀನುಗಳು ವ್ಯಾಪಕವಾಗಿ ಸಾಯುತ್ತಿರುವುದನ್ನು ಪರೀಕ್ಷೆಯ ನಂತರ ತಿಳಿಯಬಹುದು. ರೋಹು, ಕಾಟ್ಲಾ ಹಾಗೂ ಗೌರಿ ತಳಿಯ ಮೀನುಗಳನ್ನು ಬಿಡಲಾಗಿದ್ದು, ಕಾಟ್ಲಾ ಮೀನುಗಳು ಮಾತ್ರ ಸತ್ತಿವೆ. ಹೊರಗಿನ ತ್ಯಾಜ್ಯ ಕೆರೆಗೆ ಹರಿದು ಬಂದಿದ್ದು, ತ್ಯಾಜ್ಯದಿಂದ ವಿಷಾನಿಲ ಉತ್ಪತ್ತಿಯಾಗಿರುವ ಸಾಧ್ಯತೆ ಇದೆ. ಇದರಿಂದ ನೀರಿನಾಳದಲ್ಲಿ ಆಮ್ಲಜನಕದ ಕೊರತೆಯಾಗಿ ಮೀನುಗಳ ಸಾವಿಗೆ ಕಾರಣವಾಗಿರಬಹುದು’ ಎಂದು ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.

ನಾಲ್ಕೈದು ದಶಕಗಳಲ್ಲೇ ಮೊದಲ ಬಾರಿ ತಾಲ್ಲೂಕಿನ 25ಕ್ಕೂ ಹೆಚ್ಚು ಕೆರೆಗಳು ಭರ್ತಿಯಾಗಿ ಎಲ್ಲಾ ಕೆರೆಗಳಲ್ಲಿ ಭಾರಿ ಪ್ರಮಾಣದಲ್ಲಿ ಮೀನುಗಾರಿಕೆ ಕೈಗೊಳ್ಳಲಾಗಿದೆ. ಅಲ್ಲದೆ, ಜಾನುವಾರುಗಳಿಗೆ ಕೆರೆಯ ನೀರನ್ನೇ ಬಳಸುತ್ತಿದ್ದು, ಎಲ್ಲಾ ಕೆರೆಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಮುಂಜಾಗ್ರತೆಯಿಂದ ಪರಿಶೀಲನೆ ನಡೆಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಕೆರೆಯ ನೀರನ್ನು ದಾವಣಗೆರೆಯ ತರಳಬಾಳು ಕೃಷಿ ವಿಜ್ಞಾನ ಕೇಂದ್ರಕ್ಕೆ ಪರೀಕ್ಷೆಗೆ ಕಳುಹಿಸಲಾಗಿದೆ. ಅಗತ್ಯ ಬಿದ್ದಲ್ಲಿ ಸತ್ತ ಮೀನುಗಳನ್ನು ಮಂಗಳೂರಿನ ಸೂಕ್ಷ್ಮಾಣು ಜೀವಿ ಪರೀಕ್ಷಾ ಕೇಂದ್ರಕ್ಕೆ ಕಳುಹಿಸಿ ವರದಿ ಪಡೆಯಲಾಗುವುದು.

–ಮಂಜುನಾಥ್, ಮೀನುಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT