ಮಂಗಳವಾರ, ಮಾರ್ಚ್ 28, 2023
23 °C
ರಸ್ತೆಗಳ ಮೇಲೆಯೇ ವ್ಯಾಪಾರ, ಶೌಚಾಲಯ ಮತ್ತು ಕುಡಿಯುವ ನೀರಿಗಾಗಿ ಪರದಾಟ

ದಾವಣಗೆರೆ: ವಾರದ ಸಂತೆಗೆ ಸೌಲಭ್ಯಗಳು ಮರೀಚಿಕೆ

ಎಚ್‌. ಅನಿತಾ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಸುತ್ತಲಿನ ಗ್ರಾಮಗಳಲ್ಲಿ ಬೆಳೆದ ತರಕಾರಿ, ಪಡಿತರ ಹಾಗೂ ಅಗತ್ಯ ವಸ್ತುಗಳ ಮಾರಾಟಕ್ಕೆ ಸಂತೆ ಉತ್ತಮ ವೇದಿಕೆ. ಸ್ಥಳೀಯರ ಬೇಡಿಕೆಗಳ ಪೂರೈಕೆ ಜತೆಗೆ ಸಣ್ಣ ವ್ಯಾಪಾರಿಗಳ ಆರ್ಥಿಕ ಅಭಿವೃದ್ಧಿಗೆ ಪೂರಕವಾದ ಸಾಂಪ್ರದಾಯಿಕ ವ್ಯವಸ್ಥೆ. ಆದರೆ, ಸಂತೆ ನಡೆಯುವ ಬಹುತೇಕ ಕಡೆಗಳಲ್ಲಿ ಸಂತೆಕಟ್ಟೆಯೇ ಇಲ್ಲದ ಕಾರಣ ರಸ್ತೆಗಳಲ್ಲಿಯೇ ವ್ಯಾಪಾರ ನಡೆಸಬೇಕಾದ ಸ್ಥಿತಿ ಇದೆ. ಇಲ್ಲಿ ಮೂಲಸೌಲಭ್ಯಗಳು ಮರೀಚಿಕೆಯಾಗಿವೆ. 

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳು, ಉಪ ಮಾರುಕಟ್ಟೆಗಳಿರುವ ಮಾಯಕೊಂಡ, ಮಲೇಬೆನ್ನೂರು, ನ್ಯಾಮತಿ, ಸಂತೇಬೆನ್ನೂರು, ಬಸವಾಪಟ್ಟಣ ಹಾಗೂ ವಿವಿಧ ಗ್ರಾಮಗಳಲ್ಲಿ ವಾರದ ಸಂತೆಗಳು ನಡೆಯುತ್ತವೆ. ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಆರ್‌ಐಡಿಎಫ್‌) ಅಡಿ ಸಮಿತಿಯು ದಾವಣಗೆರೆಯ ಹುಚ್ಚವ್ವನಹಳ್ಳಿ, ಕುಕ್ಕವಾಡ, ಬೆಳವನೂರು, ಹರಿಹರದ ಮಲೇಬೆನ್ನೂರು, ಬನ್ನಿಕೋಡು, ಹೊನ್ನಾಳಿಯ ಕುಂದೂರು, ಒಡೆಯರ ಹತ್ತೂರು, ಚನ್ನಗಿರಿಯ ಸೋಮ್ಲಾಪುರ, ದೇವರಹಳ್ಳಿ, ನಲ್ಲೂರು ಮತ್ತು ಜಗಳೂರಿನ ಕಲ್ಲೇದೇವರಪುರ, ಪಲ್ಲಾಗಟ್ಟೆಯಲ್ಲಿ ಸಂತೆಕಟ್ಟೆಗಳನ್ನು ನಿರ್ಮಿಸಿ ಸ್ಥಳೀಯ ಗ್ರಾಮ ಪಂಚಾಯಿತಿಗಳಿಗೆ ಹಸ್ತಾಂತರಿಸಿದೆ. ಆದರೆ, ಸ್ಥಳೀಯ ಆಡಳಿತದಿಂದ ನಿರ್ವಹಣೆ ಕೊರತೆ ಎದ್ದುಕಾಣುತ್ತದೆ.

ಭಾನುವಾರದ ಸಂತೆ ವಿವಾದ: ರೈತರು ತಾವು ಬೆಳೆಯುವ ತಾಜಾ ಉತ್ಪನ್ನಗಳನ್ನು ತೆಗೆದುಕೊಂಡು ಬಂದು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಲು ಅನುವು ಮಾಡಿಕೊಡುವ ಉದ್ದೇಶದಿಂದ ದಾವಣಗೆರೆ ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಲ್ಲಿ ಭಾನುವಾರದ ಸಂತೆಗಾಗಿ ₹ 50 ಲಕ್ಷ ವೆಚ್ಚದಲ್ಲಿ 10X10 ಅಳತೆಯಲ್ಲಿ 54 ಸಂತೆಕಟ್ಟೆಗಳನ್ನು 2017ರಲ್ಲಿ ನಿರ್ಮಿಸಲಾಗಿತ್ತು. ಮೂರು ವರ್ಷಗಳಿಂದ ಯಾವುದೇ ರೈತರು ವ್ಯಾಪಾರಕ್ಕೆ ಬರುತ್ತಿಲ್ಲವೆಂದು ವ್ಯಾಪಾರ ಪರವಾನಗಿ ಹೊಂದಿರುವ ವರ್ತಕರಿಗೆ 30 ಸಂತೆಕಟ್ಟೆಗಳನ್ನು ಬಾಡಿಗೆಗೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

ರೈತರಿಗೆ ಮಾಹಿತಿ ನೀಡದೆ ವರ್ತಕರಿಗೆ ಬಾಡಿಗೆಗೆ ನೀಡಿರುವುದು ರೈತ ವಿರೋಧಿ ನೀತಿ. ಮೂಲ ಬಾಡಿಗೆದಾರರು ಅವುಗಳಲ್ಲಿ ವ್ಯಾಪಾರ ನಡೆಸುತ್ತಿಲ್ಲ. ಅವರು ಮತ್ತೊಬ್ಬರಿಗೆ ಹೆಚ್ಚಿನ ಹಣಕ್ಕೆ ಲೀಜ್‌ಗೆ ನೀಡಿ ಅಕ್ರಮ ಎಸಗಿದ್ದಾರೆ. ಅಕ್ರಮವಾಗಿ ನೀಡಿರುವ ಮಳಿಗೆಗಳನ್ನು ಕೂಡಲೇ ತೆರವುಗೊಳಿಸಿ ರೈತ ಉತ್ಪಾದಕ ಸಂಘಗಳು ಹಾಗೂ ತರಕಾರಿ ಬೆಳೆಗಾರರಿಗೆ ಕಾಯ್ದಿರಿಸಬೇಕು ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್‌ ಆಗ್ರಹಿಸಿದ್ದಾರೆ.

‘ಇಪ್ಪತ್ತು–ಮೂವತ್ತು ವರ್ಷಗಳಿಂದ ಎಪಿಎಂಸಿ ಆವರಣದಲ್ಲಿ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಸಂತೆಕಟ್ಟೆ ನಿರ್ಮಾಣವಾದ ನಂತರದಲ್ಲಿ ಒಂದು ಬದಿಯಲ್ಲಿ ಕುಳಿತು ವ್ಯಾಪಾರ ಮಾಡಲು ಅನುಕೂಲವಾಗಿತ್ತು. ಇದೀಗ ಸಂತೆಕಟ್ಟೆಗಳನ್ನು ವರ್ತಕರಿಗೆ ಬಾಡಿಗೆಗೆ ನೀಡಿರುವುದರಿಂದ ನಮಗೆ ಸ್ಥಳವಿಲ್ಲದಂತಾಗಿದೆ. ರಸ್ತೆ ಮೇಲೆ ಕುಳಿತರೆ ಸಂಚಾರಕ್ಕೆ ತೊಂದರೆಯಾಗುತ್ತದೆ ಎಂದು ಒಕ್ಕಲೆಬ್ಬಿಸುತ್ತಾರೆ. ನಾವು ಎಲ್ಲಿಗೆ ಹೋಗಬೇಕು? ನಮಗೂ ಇಲ್ಲಿಯೇ ಸ್ಥಳಾವಕಾಶ ನೀಡಬೇಕು. ಇಲ್ಲದಿದ್ದರೆ ನಮ್ಮ ಕುಟುಂಬಗಳು ಬೀದಿಪಾಲಾಗುತ್ತವೆ’ ಎಂದು ಹೇಳುತ್ತಾರೆ ಗೀತಮ್ಮ, ಶಂಕರಿಬಾಯಿ, ಶಾರದಮ್ಮ.

____

ಆಧುನಿಕ ಮಾರುಕಟ್ಟೆಗೆ ಕ್ರಿಯಾಯೋಜನೆ

ವಿಶ್ವನಾಥ ಡಿ.

ಹರಪನಹಳ್ಳಿ: ಲಾಕ್‌ಡೌನ್‌ ಸಡಿಲಗೊಳಿಸಿದ ನಂತರದಲ್ಲಿ ತಾಲ್ಲೂಕಿನಲ್ಲಿ ಪಟ್ಟಣ ಒಳಗೊಂಡು ಗ್ರಾಮಾಂತರ ಪ್ರದೇಶದಲ್ಲಿ ವಿವಿಧ ಸಂತೆಗಳಿಗೆ ಚಾಲನೆ ದೊರೆತಿದೆ. ಗ್ರಾಮೀಣ ಪ್ರದೇಶದ ಬಹುತೇಕ ಹಳ್ಳಿಗಳಲ್ಲಿ ಸಂತೆಗೆ ಪ್ರತ್ಯೇಕ ಸ್ಥಳಾವಕಾಶವಿಲ್ಲ.

ಹೋಬಳಿ ಕೇಂದ್ರವಾದ ಚಿಗಟೇರಿಯಲ್ಲಿ ಎಪಿಎಂಸಿ ತೆರೆದ ಗೋದಾಮಿನಲ್ಲಿ ನಡೆಯುತ್ತಿದ್ದು, ಮೂಲಸೌಕರ್ಯವಿಲ್ಲ. ತೆಲಿಗಿ ಹೋಬಳಿ ಕೇಂದ್ರದಲ್ಲಿ ರಾಗಿಮಸಲವಾಡಕ್ಕೆ ಹೋಗುವ ರಸ್ತೆಯಲ್ಲಿಯೇ ಸಂತೆ ನಡೆಯುತ್ತದೆ. ಅರಸೀಕೆರೆ, ಉಚ್ಚಂಗಿದುರ್ಗದಲ್ಲಿ ಪ್ರತ್ಯೇಕ ಜಾಗವಿದ್ದರೂ ರಸ್ತೆವರೆಗೂ ವ್ಯಾಪಾರಸ್ಥರು ಚಾಚಿಕೊಂಡಿರುತ್ತಾರೆ. ಬಾಗಳಿಯಲ್ಲಿ ಪ್ರತ್ಯೇಕ ಸ್ಥಳವಿದೆ.

ಪಟ್ಟಣದ ಕೊಟ್ಟೂರು ರಸ್ತೆಯ ರಾಜ್ಯ ಹೆದ್ದಾರಿ ಪಕ್ಕದಲ್ಲಿ ಕುರಿ ಸಂತೆಗೆ ಕೋಟ್ಯಂತರ ರೂಪಾಯಿ ವ್ಯಯಿಸಿ ವೈಜ್ಞಾನಿಕ ಕುರಿ ಮಾರುಕಟ್ಟೆ ನಿರ್ಮಿಸಲಾಗಿದೆ. ಆದರೆ, ಆಧುನಿಕ ಉಪಕರಣಗಳಿಲ್ಲ. ವಾಹನಗಳ ಪಾರ್ಕಿಂಗ್‌ಗೆ ಸ್ಥಳವಿಲ್ಲದ ಕಾರಣ ಪ್ರತಿ ಸೋಮವಾರ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ ಓಡಾಡಲು ಕಿರಿಕಿರಿ ಉಂಟಾಗುತ್ತದೆ.

ದುಗ್ಗಾವತಿ ಗ್ರಾಮದಲ್ಲಿಯೂ ರಾಜ್ಯ ಹೆದ್ದಾರಿ ಪಕ್ಕದಲ್ಲಿಯೇ ಕುರಿ ಸಂತೆ ನಡೆಯುತ್ತದೆ. ಕುಡಿಯುವ ನೀರು ಸೇರಿ ಮೂಲಸೌಕರ್ಯಗಳಿಲ್ಲ. ಮಳೆ ಬಂದರೆ ಕೆಸರಿನ ಗದ್ದೆಯಾಗುತ್ತದೆ. ಕುರಿ ಸಂತೆ ದಿನ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು ಎಂದು ಬೀರೇಶ್ವರ ಕುರಿ ಮತ್ತು ಉಣ್ಣೆ ನೇಕಾರರ ಉತ್ಪನ್ನಗಳ ಸಹಕಾರ ಸಂಘದ ಅಧ್ಯಕ್ಷ ಇದ್ಲಿ ರಾಮಪ್ಪ ಮನವಿ ಮಾಡಿದ್ದಾರೆ.

ಹರಪನಹಳ್ಳಿ ಪಟ್ಟಣದಲ್ಲಿ ದಿನದ ಸಂತೆಗೆ ಆಧುನಿಕ ಮಾರುಕಟ್ಟೆ ನಿರ್ಮಾಣಕ್ಕೆ ಶಾಸಕ ಜಿ.ಕರುಣಾಕರ ರೆಡ್ಡಿ ಅವರ ಸೂಚನೆ ಮೇರೆಗೆ ₹ 2.70 ಕೋಟಿ ಕ್ರಿಯಾ ಯೋಜನೆ ತಯಾರಿಸಿ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಪುರಸಭೆ ಅಧ್ಯಕ್ಷ ಇಜಂತಕರ್ ಮಂಜುನಾಥ್ ತಿಳಿಸಿದ್ದಾರೆ.

____

ಮಹಿಳಾ ವ್ಯಾಪಾರಿಗಳ ಸ್ಥಿತಿ ಶೋಚನೀಯ

ಡಿ. ಶ್ರೀನಿವಾಸ್

ಜಗಳೂರು: ಪಟ್ಟಣ ಸೇರಿ ತಾಲ್ಲೂಕಿನಲ್ಲಿ ಕಲ್ಲೇದೇವರಪುರ, ಬಿದರಕೆರೆ, ಪಲ್ಲಾಗಟ್ಟೆ, ಸೊಕ್ಕೆ, ಹುಚ್ಚಂಗಿಪುರ, ಮುಸ್ಟೂರು, ಅಸಗೋಡು, ಹೊಸಕೆರೆ, ಅಣಬೂರು ಹಾಗೂ ಬಿಳಿಚೋಡು ಗ್ರಾಮಗಳಲ್ಲಿ ವಾರದ ವಿವಿಧ ದಿನಗಳಲ್ಲಿ ಸಂತೆ ನಡೆಸಲಾಗುತ್ತಿದೆ.

ಪಟ್ಟಣದ ಮಿನಿ ವಿಧಾನಸೌಧದ ಪಕ್ಕದಲ್ಲಿರುವ ತೆರೆದ ಮೈದಾನದಲ್ಲಿ ನಡೆಯುವ ಸಂತೆಗೆ ವಿವಿಧ ಜಿಲ್ಲೆಗಳಿಂದ ವ್ಯಾಪಾರಿಗಳು ಬರುತ್ತಾರೆ. ಬಿಸಿಲು, ಮಳೆ ಗಾಳಿಯಿಂದ ರಕ್ಷಣೆ ಪಡೆಯಲು ಚಿಕ್ಕ ಬಿಡಾರಗಳನ್ನು ತಾವೇ ಹಾಕಿಕೊಳ್ಳುತ್ತಾರೆ. ಸಣ್ಣ ವ್ಯಾಪಾರಸ್ಥರು ಬಯಲಿನಲ್ಲಿಯೇ ಇಡೀ ದಿನ ವ್ಯಾಪಾರ ನಡೆಸುತ್ತಾರೆ. ಕುಡಿಯಲು ನೀರು, ಶೌಚಾಲಯ ಅಥವಾ ನೆರಳಿನ ವ್ಯವಸ್ಥೆ ಇಲ್ಲ. ಮಹಿಳಾ ವ್ಯಾಪಾರಿಗಳ ಸ್ಥಿತಿ ಶೋಚನೀಯ.

ತಾಲ್ಲೂಕು ಎಪಿಎಂಸಿ ವತಿಯಿಂದ ತಾಲ್ಲೂಕಿನ ಕಲ್ಲೇದೇವಪುರ ಹಾಗೂ ಪಲ್ಲಾಗಟ್ಟೆ ಗ್ರಾಮದಲ್ಲಿ ಸಂತೆಕಟ್ಟೆ ನಿರ್ಮಿಸಿದ್ದರೂ ಬಳಕೆಯಾಗುತ್ತಿಲ್ಲ. ಯಾವುದೇ ಮೂಲಸೌಕರ್ಯಗಳಿಲ್ಲ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎಸ್.ಕೆ. ಮಂಜುನಾಥ್ ತಿಳಿಸಿದ್ದಾರೆ.

_____

ಸುಂಕವುಂಟು, ಸೌಲಭ್ಯ ಇಲ್ಲ

ಎನ್‌.ಕೆ. ಆಂಜನೇಯ

ಹೊನ್ನಾಳಿ: ಹೊನ್ನಾಳಿ ನಗರದಲ್ಲಿ ಪ್ರತಿ ಬುಧವಾರ ಸೊಪ್ಪು, ತರಕಾರಿ ಮತ್ತು ಬೃಹತ್ ಪ್ರಮಾಣದಲ್ಲಿ ಜಾನುವಾರು ಹಾಗೂ ಕುರಿ ಕೋಳಿ ಸಂತೆ ನಡೆಯುತ್ತದೆ. ಉಳಿದಂತೆ ಅವಳಿ ತಾಲ್ಲೂಕಿನ 6 ಹೋಬಳಿಗಳ ವ್ಯಾಪ್ತಿಯಲ್ಲಿ ತರಕಾರಿ, ಸೊಪ್ಪು ಮತ್ತು ದಿನಸಿ ಸಂತೆಗಳು ನಡೆಯುತ್ತವೆ.

ಹೊನ್ನಾಳಿ ನಗರದಲ್ಲಿ 2009–10ನೇ ಸಾಲಿನಲ್ಲಿ ₹ 49 ಲಕ್ಷ ವೆಚ್ಚದಲ್ಲಿ ಬೃಹತ್ ಸಂತೆ ಮಾರುಕಟ್ಟೆ ನಿರ್ಮಿಸಲಾಗಿದೆ. ಆದರೆ, ಮೂಲಸೌಲಭ್ಯಗಳ ಕೊರತೆ ಇದೆ. ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ಕುಡಿಯಲು ನೀರು, ಶೌಚಾಲಯ ವ್ಯವಸ್ಥೆ ಇಲ್ಲ. ಸಾರ್ವಜನಿಕರು ಓಡಾಡುವ ರಸ್ತೆ ಕಳಪೆಯಾಗಿದೆ. ಮಳೆನೀರು ಸರಾಗವಾಗಿ ಹರಿಯುವುದಿಲ್ಲ.

ಕುರಿ–ಕೋಳಿ ಸಂತೆ: ಖಾಸಗಿ ಬಸ್‌ ನಿಲ್ದಾಣದ ಪಕ್ಕದ ಮೈದಾನದಲ್ಲಿರುವ ಕುರಿ ಪೇಟೆಯಲ್ಲಿ ಕುರಿ, ಮೇಕೆ ಸಂತೆ ನಡೆಯುತ್ತದೆ. ಇಲ್ಲಿ ಕೂಡ ಯಾವುದೇ ಸೌಲಭ್ಯಗಳನ್ನು ಕಲ್ಪಿಸಿಲ್ಲ. ಆದರೆ, ವ್ಯಾಪಾರಿಗಳಿಂದ ಸುಂಕವನ್ನು ಮಾತ್ರ ಕಡ್ಡಾಯವಾಗಿ ವಸೂಲಿ ಮಾಡಲಾಗುತ್ತಿದೆ.

ಪ್ರಸಿದ್ಧ ದನದ ಸಂತೆ: ತಾಲ್ಲೂಕಿನ ರಾಂಪುರ ದನದ ಜಾತ್ರೆಗೆ ಹೆಸರಾಗಿತ್ತು. ಈಗ ಇತಿಹಾಸದ ಪುಟ ಸೇರಿದೆ. ಹೊನ್ನಾಳಿ ನಗರದಲ್ಲಿ ಬಹುದೊಡ್ಡ ದನದ ಸಂತೆ ನಡೆಯುತ್ತದೆ. ಲಕ್ಷಾಂತರ ರೂಪಾಯಿಗಳವರೆಗೂ ಜೋಡಿ ಎತ್ತುಗಳ ಬಿಕರಿ ನಡೆಯುತ್ತದೆ. ಇಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ದನಗಳಿಗೆ ನೀರು ಕುಡಿಸಲು ಸಂತೆಯ ಪಕ್ಕದಲ್ಲಿ ಹರಿಯುವ ತುಂಗಭದ್ರಾ ನದಿಗೆ ಹೊಡೆದುಕೊಂಡು ಹೋಗಬೇಕಾದ ಅನಿವಾರ್ಯವಿದೆ.

____

ಚನ್ನಗಿರಿ ತಾಲ್ಲೂಕಿನಲ್ಲಿ ಸಂತೆಯದೇ ಚಿಂತೆ

ಎಚ್.ವಿ. ನಟರಾಜ್

ಚನ್ನಗಿರಿ: ಪಟ್ಟಣ ಸೇರಿ ತಾಲ್ಲೂಕಿನ ಹಲವಾರು ಗ್ರಾಮಗಳಲ್ಲಿ ವಾರದ ವಿವಿಧ ದಿನ ಸಂತೆ ನಡೆಯುತ್ತದೆ. ಬಹುತೇಕ ಗ್ರಾಮಗಳಲ್ಲಿ ಸಂತೆ ನಡೆಸಲು ವ್ಯವಸ್ಥಿತವಾದ ಜಾಗವಿಲ್ಲ.

ಚನ್ನಗಿರಿ, ಸಂತೇಬೆನ್ನೂರು, ಬಸವಾಪಟ್ಟಣ, ಕೆರೆಬಿಳಚಿ, ತ್ಯಾವಣಿಗೆ, ತಾವರೆಕೆರೆ, ನಲ್ಲೂರು ದೊಡ್ಡ ಗ್ರಾಮಗಳಾಗಿದ್ದು, ಪ್ರತಿ ವಾರ ಸಂತೆ ನಡೆಯುತ್ತದೆ. ಪಟ್ಟಣದಲ್ಲಿ ಮಾತ್ರವೇ ಸಂತೆ ನಡೆಸಲು ಜಾಗವಿದೆ. ಮೂಲಸೌಕರ್ಯಗಳ ಕೊರತೆ ಇದೆ. ಮಳೆಗಾಲದಲ್ಲಿ ಪರಿಸ್ಥಿತಿ ಹೇಳತೀರದು. ಗ್ರಾಮ ಪಂಚಾಯಿತಿಗಳು ಪ್ರತಿವರ್ಷ ಸಂತೆ ಹರಾಜು ನಡೆಸಿ ₹ 1.50 ಲಕ್ಷದಿಂದ ₹ 2 ಲಕ್ಷದವರೆಗೂ ಆದಾಯ ಪಡೆಯುತ್ತವೆ. ಆದರೆ, ಸಮಸ್ಯೆಗಳಿಗೆ ಕಿವಿಗೊಡುತ್ತಿಲ್ಲ. ಪಟ್ಟಣದಲ್ಲಿ ಸಂತೆ ಮಾರುಕಟ್ಟೆ ನಿರ್ಮಿಸಲು ಎಪಿಎಂಸಿ ವತಿಯಿಂದ ₹ 2.90 ಕೋಟಿ ಅನುದಾನ ಬಿಡುಗಡೆಯಾಗಿದೆ. ಕಾಮಗಾರಿ ಆರಂಭವಾಗಬೇಕಾಗಿದೆ ಎಂದು ಮಾಹಿತಿ ನೀಡುತ್ತಾರೆ ತಾಲ್ಲೂಕು ಪಂಚಾಯಿತಿ ಇಒ ಎಂ.ಆರ್. ಪ್ರಕಾಶ್.

____

ಸಂತೆಗಳನ್ನು ಕಾಪಿಟ್ಟುಕೊಳ್ಳಲು ಸಲಹೆ

ಆರ್‌. ರಾಘವೇಂದ್ರ

ಹರಿಹರ: ಸಂತೆಗಳು ಸುವ್ಯವಸ್ಥಿತವಾಗಿ ನಡೆಯುವಂತೆ ವ್ಯವಸ‍್ಥೆ ಕಲ್ಪಿಸುವುದು ಸ್ಥಳೀಯ ಆಡಳಿತದ ಹೊಣೆಯಾಗಿದೆ. ಆದರೆ, ನಗರ ಸೇರಿ ತಾಲ್ಲೂಕಿನ ಯಾವುದೇ ಗ್ರಾಮದಲ್ಲಿ ಸಂತೆಗಳನ್ನು ನಡೆಸಲು ಸಮರ್ಪಕ ವ್ಯವಸ್ಥೆಗಳನ್ನು ಕಲ್ಪಿಸಿಲ್ಲ.

ನಗರದಲ್ಲಿ ಪ್ರತಿ ಮಂಗಳವಾರ ಪಕ್ಕೀರ ಸ್ವಾಮಿ ಮಠದ ಮುಂಭಾಗದಲ್ಲಿ ಸಂತೆ ನಡೆಯುತ್ತದೆ. ನಗರಸಭೆಯು ಹರಾಜು
ಪ್ರಕ್ರಿಯೆ ನಡೆಸಿ ಸಂತೆಗೆ ಬರುವ ವ್ಯಾಪಾರಿಗಳಿಂದ ಸುಂಕ ಸಂಗ್ರಹಿಸುತ್ತದೆ. ಆದರೆ, ವ್ಯವಸ್ಥೆಗಳು ಇಲ್ಲ. ಮಳೆಗಾಲದಲ್ಲಿ ವ್ಯಾಪಾರ ನಡೆಸಲು ಕಷ್ಟವಾಗುತ್ತದೆ ಎಂದು ಸೊಪ್ಪಿನ ವ್ಯಾಪಾರಿ ರತ್ನಮ್ಮ ಅಳಲು ತೋಡಿಕೊಂಡರು.

ಸಂತೆಗಳು ಪ್ರಾದೇಶಿಕ ಆರ್ಥಿಕ ವ್ಯವಸ್ಥೆಯ ಹೂರಣವಾಗಿವೆ. ರೈತರು, ಸಣ್ಣ ವ್ಯಾಪಾರಿಗಳು, ಗುಡಿ ಕೈಗಾರಿಕೆಗಳ ಪಾಲಿನ ಜೀವಾಳವಾಗಿವೆ. ಸಂತೆ ನಮ್ಮ ನೆಲದ ಸೊಗಡು. ಮಾಲ್‍ಗಳ ಭರಾಟೆಯಲ್ಲಿ ಸಂತೆಗಳು ಕಳೆಕುಂದದಂತೆ ಕಾಪಾಡಿಕೊಳ್ಳುವುದು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿ ಎಂದು ಎನ್‌.ಎಚ್‌. ಶ್ರೀನಿವಾಸ್‌ ಅಭಿಪ್ರಾಯಪಟ್ಟರು.

ಸಾಮಾನ್ಯ ಸಭೆಯಲ್ಲಿ ಸಂತೆಗೆ ಜಮೀನು ನಿಗದಿ ಹಾಗೂ ಮಾರುಕಟ್ಟೆ ಸ್ಥಾಪನೆ ಸಂಬಂಧ ಸಾಮಾನ್ಯ ಸಭೆಯಲ್ಲಿ ವಿಷಯ ಮಂಡಿಸಲಾಗುವುದು ಎಂದು ಪೌರಾಯುಕ್ತೆ ಎಸ್‌. ಲಕ್ಷ್ಮೀ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು