ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ | ರಕ್ತದಾನ ಜೀವದಾನದಷ್ಟೇ ಶ್ರೇಷ್ಠ: ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ
Last Updated 1 ಅಕ್ಟೋಬರ್ 2021, 12:35 IST
ಅಕ್ಷರ ಗಾತ್ರ

ದಾವಣಗೆರೆ: ‘ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡುವುದು, ಒಬ್ಬ ವ್ಯಕ್ತಿಗೆ ಜೀವದಾನ ನೀಡಿದಷ್ಟೇ ಶ್ರೇಷ್ಠ ಕಾರ್ಯವಾಗಿದೆ’ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ರಕ್ತ ಭಂಡಾರ, ಚಿಗಟೇರಿ ಜಿಲ್ಲಾ ಆಸ್ಪತ್ರೆ, ರೆಡ್ ರಿಬ್ಬನ್‌ ಕ್ಲಬ್, ಎನ್‌.ಸಿ.ಸಿ, ಎನ್‌.ಎಸ್‌.ಎಸ್‌ ಹಾಗೂ ವಿವಿಧ ರಕ್ತನಿಧಿ ಕೇಂದ್ರ ಆಶ್ರಯದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ಸ್ವಯಂ ಪ್ರೇರಿತ ರಕ್ತದಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ರಕ್ತದಾನಕ್ಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಮಹತ್ವ ಬಂದಿದೆ. ರಕ್ತದಾನ ಮಾಡಿದಷ್ಟೂ ಆರೋಗ್ಯಕ್ಕೆ ಉತ್ತಮ. ಜಿಲ್ಲೆಯಲ್ಲಿ ಏಪ್ರಿಲ್‌ನಿಂದ ಆಗಸ್ಟ್‌ವರೆಗೆ 7,340 ಜನ ರಕ್ತದಾನ ಮಾಡಿದ್ದಾರೆ. ಒಟ್ಟು 7,919 ಯುನಿಟ್‌ ರಕ್ತ ಸಂಗ್ರಹಿಸಲಾಗಿದೆ. ಸೆಪ್ಟೆಂಬರ್‌ 17ರಿಂದ 30ರವರೆಗೆ ಏಳು ಕೇಂದ್ರಗಳಲ್ಲಿ ಹಮ್ಮಿಕೊಂಡಿದ್ದ ಮೆಗಾ ಸ್ವಯಂ ಪ್ರೇರಿತ ರಕ್ತದಾನ ಶಿಬಿರಗಳಲ್ಲಿ ಒಟ್ಟು 1,051 ಯೂನಿಟ್‌ ರಕ್ತ ಸಂಗ್ರಹಿಸಲಾಗಿದೆ. ಸಂಗ್ರಹಿಸಿದ ರಕ್ತವನ್ನು ಶೇಖರಿಸಲು ಹಾಗೂ ಪ್ಲಾಸ್ಮಾ, ಕೆಂಪು ರಕ್ತ ಕಣ, ಪ್ಲೇಟ್‌ಲೆಟ್‌ ಪ್ರತ್ಯೇಕಿಸಿ, ಅಗತ್ಯವಿರುವವರಿಗೆ ಒದಗಿಸುವ ಸುವ್ಯವಸ್ಥೆ ಜಿಲ್ಲೆಯಲ್ಲಿ ಲಭ್ಯವಿದೆ’ ಎಂದು ಮಾಹಿತಿ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ವಿಜಯ ಮಹಾಂತೇಶ್ ದಾನಮ್ಮನರ್‌, ‘ಭಾರತ ದೇಶ ದಾನ ನೀಡುವುದರಲ್ಲಿ ಒಂದು ಕೈ ಮೇಲಿದೆ. ರಕ್ತದಾನದ ಜೊತೆಗೆ ಇತ್ತೀಚಿನ ದಿನಗಳಲ್ಲಿ ಅಂಗಾಂಗ ದಾನ ಕೂಡ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತಿದೆ. ಜಿಲ್ಲೆಯಲ್ಲಿ ರಕ್ತ ಸಂಗ್ರಹಿಸಲು ಸುಸಜ್ಜಿತ ವಾಹನದ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿಗಳಲ್ಲಿ ರಕ್ತದಾನಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಶಿಬಿರ ಏರ್ಪಡಿಸುವಂತಾಗಲು ಕಾರ್ಯಕ್ರಮ ರೂಪಿಸಿ, ಆರೋಗ್ಯ ಇಲಾಖೆ ಅಧಿಕಾರಿಗಳೊಂದಿಗೆ ಅನುಷ್ಠಾನಗೊಳಿಸಲಾಗುವುದು’ ಎಂದು ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ನಾಗರಾಜ್, ‘ರಕ್ತದಾನದ ಮಹತ್ವವನ್ನು ಪ್ರತಿಪಾದಿಸಿದ ಚಂಡೀಗಢದ ರಕ್ತನಿಧಿ ಸೊಸೈಟಿಯ ಸಂಸ್ಥಾಪಕ ಡಾ. ಜೈ ಗೋಪಾಲ್ ಜೊಲ್ಲಿ ಅವರ ಹುಟ್ಟುಹಬ್ಬದ ಸ್ಮರಣಾರ್ಥ 1975ರಿಂದಲೂ ಪ್ರತಿ ವರ್ಷ ಅಕ್ಟೋಬರ್ 1ರಂದು ರಕ್ತದಾನ ದಿನವನ್ನು ಆಚರಿಸಲಾಗುತ್ತಿದೆ. ಮಾನವ ತಂತ್ರಜ್ಞಾನದಲ್ಲಿ ಎಷ್ಟೇ ಮುಂದುವರಿದರೂ ಕೃತಕವಾಗಿ ರಕ್ತ ಉತ್ಪಾದಿಸಲು ಸಾಧ್ಯವಾಗಿಲ್ಲ. ಈ ವರ್ಷ ರಕ್ತ ನೀಡಿ ಜಗತ್ತನ್ನು ಗೆಲ್ಲಿಸಿ ಎಂಬ ಘೋಷಣೆಯೊಂದಿಗೆ ಆಚರಿಸಲಾಗುತ್ತಿದೆ’ ಎಂದು ಹೇಳಿದರು.

ಹೆಚ್ಚು ಬಾರಿ ರಕ್ತದಾನ ಮಾಡಿದ ಉಮಾ, ಸಂತೋಷ್ ಪಿ.ಎನ್. ಹಾಗೂ ಪತ್ರಕರ್ತ ತಾರಾನಾಥ್ ಅವರನ್ನು ಇದೇ ಸಂದರ್ಭದಲ್ಲಿ ಗೌರವಿಸಲಾಯಿತು. ಫ್ಲೋರೆನ್ಸ್ ನೈಟಿಂಗೇಲ್ ರಾಷ್ಟ್ರೀಯ ಪ್ರಶಸ್ತಿ ಪಡೆದ ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಕೆ. ಗಾಯತ್ರಿದೇವಿ ದಂಪತಿ ಹಾಗೂ ರಾಜ್ಯ ಮಟ್ಟದ ಪ್ರಶಸ್ತಿ ಪಡೆದ ಹೊನ್ನಾಳಿಯಲ್ಲಿ ಕ್ಷಯರೋಗ ಚಿಕಿತ್ಸಾ ಮೇಲ್ವಿಚಾರಕರಾಗಿ ಕಾರ್ಯನಿರ್ವಹಿಸುತ್ತಿರುವ ಮಹಾಲಿಂಗಪ್ಪ ಅವರನ್ನು ಸನ್ಮಾನಿಸಲಾಯಿತು.

ಚಿಗಟೇರಿ ಜಿಲ್ಲಾ ಆಸ್ಪತ್ರೆಯ ಅಧೀಕ್ಷಕ ಡಾ.ಎನ್.ಜಯಪ್ರಕಾಶ, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಅಧೀಕ್ಷಕ ಡಾ.ನೀಲಕಂಠ ಜೆ.ಬಿ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದ ಅಧಿಕಾರಿ ಕೆ.ಎಚ್. ಗಂಗಾಧರ, ಜಿಲ್ಲಾ ಆಸ್ಪತ್ರೆಯ ರಕ್ತ ಭಂಡಾರ ವೈದ್ಯಾಧಿಕಾರಿ ಡಾ.ಡಿ.ಎಚ್. ಗೀತಾ, ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳಾದ ಡಾ.ನಟರಾಜ್, ಡಾ.ಮುರಳಿ, ಡಾ.ರೇಣುಕಾರಾಧ್ಯ, ಡಾ.ಮೀನಾಕ್ಷಿ, ಡಾ.ರಾಘವನ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT