ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಷ್ಯನ ಏಟಿಗೆ ಪ್ರಕೃತಿಯ ಎದಿರೇಟೇ ವಿಕೋಪ: ಶಿವಮೂರ್ತಿ ಮುರುಘಾ ಶರಣರು

ಶರಣ ಸಂಗಮ ಕಾರ್ಯಕ್ರಮ
Last Updated 4 ಫೆಬ್ರುವರಿ 2020, 9:09 IST
ಅಕ್ಷರ ಗಾತ್ರ

ದಾವಣಗೆರೆ: ನಿಸರ್ಗಕ್ಕೆ ಮನುಷ್ಯ ಏಟು ನೀಡಿದರೆ, ನಿಸರ್ಗ ಎದಿರೇಟು ನೀಡುತ್ತದೆ. ಅದರಿಂದಾಗಿ ಅನಾವೃಷ್ಟಿ, ಅತಿವೃಷ್ಟಿ ಮುಂತಾದ ವಿಕೋಪಗಳು ಉಂಟಾಗುತ್ತವೆ ಎಂದು ಚಿತ್ರದುರ್ಗ ಬೃಹನ್ಮಠದ ಶಿವಮೂರ್ತಿ ಮುರುಘಾ ಶರಣರು ಪ್ರತಿಪಾದಿಸಿದರು.

ವಿರಕ್ತಮಠದಿಂದ ಇಲ್ಲಿನ ಶಿವಯೋಗಾಶ್ರಮದಲ್ಲಿ ಸೋಮವಾರ ನಡೆದ ‘ವ್ಯಕ್ತಿಯ ತಾಪ, ನಿಸರ್ಗದ ಕೋಪ’ ಬಗೆಗಿನ ಶರಣ ಸಂಗಮ ಕಾರ್ಯಕ್ರಮ ತ್ತು ಅಸಂಖ್ಯ ಪ್ರಮಥಗಣಮೇಳದ ಪ್ರಚಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ನಿಸರ್ಗದ ನಿಯಮವನ್ನು ಮೀರಲು ಯಾರಿಂದಲೂ ಸಾಧ್ಯವಿಲ್ಲ. ಅದಕ್ಕೆ ಹೊಂದಿಕೊಂಡು ನಾವು ಬದುಕಬೇಕು. ನಮಗೆ ಪ್ರಕೃತಿ ಹೊಂದಿಕೊಳ್ಳಬೇಕು ಎಂದು ಬಯಸಿದರೆ ಉಳಿಗಾಲವಿಲ್ಲ. ಮಾನವನ ಅತಿವರ್ತನೆಯಿಂದ ಅಸಮಾತೋಲನ ಕಳೆದುಕೊಂಡು ವಿಕೋಪಗಳು ಉಂಟಾಗುತ್ತವೆ. ಮನುಷ್ಯ ಸ್ವಾರ್ಥಕ್ಕಾಗಿ ಕಾಡು ಕಡಿಯುತ್ತಾನೆ. ಬೆಟ್ಟ, ಗುಡ್ಡಗಳ ಅಗೆಯುತ್ತಾನೆ. ಭೂಮಿ ಬಗೆಯುತ್ತಾನೆ. ಇದುವೆ ಕಾರಣ ಎಂದು ತಿಳಿಸಿದರು.

ಅನನುಕೂಲ, ಅವಘಡ, ಅನಾಹುತ, ಏರುಪೇರುಗಳು ಪದೇಪದೇ ಉಂಟಾದರೆ, ಮಳೆ–ಬೆಳೆ ಬಾರದೇ ಇದ್ದರೆ ಅದಕ್ಕೆ ದೇವರ ಕಾಟ, ಅಮ್ಮನ ಶಾಪ ಎಂದು ತಿಳಿಯುವವರು, ಜಾತ್ರೆ ಸರಿಯಾಗಿ ನಡೆದಿಲ್ಲ ಎನ್ನುವವರು ಜಾಸ್ತಿ. ಹೊಂಬಾಳೆ, ಬೇವು ಹಿಡಿದ ಪೂಜಾರಪ್ಪನ ಮೇಲೆ ಅಮ್ಮ ಬಂದು ಚೀರಾಟ, ಕೂಗಾಟ ಮಾಡಿ ಅದನ್ನೇ ಪೂಜಾರಪ್ಪ ಹೇಳುತ್ತಾನೆ. ಅಮ್ಮನನ್ನು ರಮಿಸಿ ಪರಿಹಾರ ಕೇಳಿ ಈ ಬಾರಿ ದೊಡ್ಡ ಕೋಣ ಕಡಿಯುವುದಾಗಿ ತಿಳಿಸಿ ಸಮಾಧಾನ ಮಾಡಲಾಗುತ್ತದೆ. ನಿಜವಾಗಿ ಕಾರಣ ಏನು ಎಂದು ತಿಳಿಯಲು ಹೊರಟರೆ ಅದು ಪ್ರಕೃತಿಯ ಶಾಪ ಅರ್ಥಾತ್‌ ಕೋಪ ಎಂಬುದು ತಿಳಿಯುತ್ತದೆ. ಅದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ವಿವರಿಸಿದರು.

ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ‘12ನೇ ಶತಮಾನದಲ್ಲಿ ಬಸವಣ್ಣನ ನೇತೃತ್ವದಲ್ಲಿ ಪ್ರಮಥಗಣಮೇಳ ನಡೆದಿತ್ತು. ಅದರಲ್ಲಿ ಎಲ್ಲ ಸಮುದಾಯಗಳ 1.96 ಲಕ್ಷ ಜನ ಭಾಗವಹಿಸಿದ್ದರು. 900 ವರ್ಷಗಳ ಬಳಿಕ ಈಗ ಮತ್ತೆ ಲಿಮ್ಕಾ ಬುಕ್‌ನಲ್ಲಿ ದಾಖಲಾಗುವ ರೀತಿಯಲ್ಲಿ ಪ್ರಮಥಗಣಮೇಳ ಫೆ.16ರಂದು ಬೆಂಗಳೂರಿನಲ್ಲಿ ನಡೆಯುತ್ತಿದೆ. ಬೌದ್ಧರು, ಕ್ರಿಶ್ಚಿಯನ್ನರು, ಮುಸ್ಲಿಮರು, ವಿವಿಧ ಮಠಾಧಿಪತಿಗಲು ಎಲ್ಲರೂ ಭಾಗವಹಿಸುತ್ತಿದ್ದಾರೆ’ ಎಂದು ತಿಳಿಸಿದರು.

ಚಿತ್ರದುರ್ಗದಿಂದ ಸುಮಾರು 30 ಸಾವಿರ ಜನ ಈ ಮೇಳದಲ್ಲಿ ಭಾಗವಹಿಸುವುದಾಗಿ ಹೆಸರು ನೋಂದಾಯಿಸಿದ್ದಾರೆ.ತುಮಕೂರಿನಿಂದಲೂ ಅಷ್ಟೇ ಜನರು ಬರಲಿದ್ದಾರೆ. ದಾವಣಗೆರೆಯಲ್ಲಿ ಶಿವಯೋಗಾಶ್ರಮದ ನೇತೃತ್ವದಲ್ಲಿ ನೋಂದಣಿ ಕಾರ್ಯ ಆರಂಭಗೊಂಡಿದೆ. ಬಸ್‌ಗಳ ವ್ಯವಸ್ಥೆ ಮಾಡಲಾಗಿದೆ ಎಂದು ವಿವರಿಸಿದರು.

ಬಕ್ಕೇಶ್ವರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಈಶಾನಾಯ್ಕ ಕೆ. ಉಪನ್ಯಾಸ ನೀಡಿದರು. ಪಾಲಿಕೆ ಸದಸ್ಯ ಎಸ್‌.ಟಿ. ವೀರೇಶ್‌, ಮಾಜಿ ಶಾಸಕ ಯಜಮಾನ್‌ ಮೋತಿ ವೀರಪ್ಪ, ನಾಗರತ್ನಮ್ಮ ಹರಳಹಳ್ಳಿ ಉಪಸ್ಥಿತರಿದ್ದರು.

‘ಸಿದ್ಧಾಂತ ಕೇಂದ್ರಿತ ಸಮ್ಮೇಳನ’

ಬೆಂಗಳೂರಿನಲ್ಲಿ ನಡೆಯಲಿರುವ ಅಸಂಖ್ಯ ಪ್ರಮಥಮೇಳ ಯಾವುದೇ ಜಾತಿ ಕೇಂದ್ರಿತ, ರಾಜಕೀಯ ಪ್ರೇರಿತ ಸಮ್ಮೇಳನ ಅಲ್ಲ. ಸಿದ್ಧಾಂತ ಕೇಂದ್ರಿತ, ತತ್ವ ಕೇಂದ್ರಿತ ವೈಚಾರಿಕ ಹಬ್ಬ ಎಂದು ಶಿವಮೂರ್ತಿ ಮುರುಘಾ ಶರಣರು ಹೇಳಿದರು.

ಇದು ಜನಜಂಗುಳಿ ಜಾತ್ರೆಯೂ ಅಲ್ಲ. ಅಲ್ಲಿ ಯಾವುದೇ ತೇರು, ಸಿಡಿ, ಪಲ್ಲಕ್ಕಿ ಉತ್ಸವಗಳು ಇರುವುದಿಲ್ಲ. ಬಹುತ್ವದ, ಬಹುಜನರ ಈ ಕಾರ್ಯಕ್ರಮದ ಸಾಕ್ಷಿಗಳಾಗಳು ನೀವೆಲ್ಲ ಬರಬೇಕು ಎಂದು ಆಹ್ವಾನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT