ಶುಕ್ರವಾರ, ಆಗಸ್ಟ್ 19, 2022
22 °C
ತಾಲ್ಲೂಕು ಮಟ್ಟದ ಜನಸಂಪರ್ಕ ಸಭೆ

ಕಾಡಾನೆಗಳ ನಿಯಂತ್ರಣಕ್ಕೆ ಅಗತ್ಯ ಕ್ರಮ: ಶಾಸಕ ಮಾಡಾಳ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚನ್ನಗಿರಿ: ಒಂದು ತಿಂಗಳಿಂದ ತಾಲ್ಲೂಕಿನ ಸಾರಥಿ, ಹೊಸಳ್ಳಿ, ಜೋಳದಹಾಳ್, ಹನುಮಂತನಗರ, ಗಾಣದಕಟ್ಟೆ, ಬಯಲು ದಿಬ್ಬ ಮುಂತಾದ ಕಾಡಂಚಿನ ಪ್ರದೇಶಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಆನೆ ಸೆರೆ ಕಾರ್ಯಾಚರಣೆ ಆರಂಭಿಸಬೇಕು ಎಂದು ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಮಟ್ಟದ ಜನಸಂಪರ್ಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಆನೆಗಳು ರೈತರ ಬೆಳೆಗಳನ್ನು ಹಾಳು ಮಾಡಿ ಹಾಕಿವೆ. ಈಗಾಗಲೇ ಒಂದು ಆನೆಯನ್ನು ಸೆರೆ ಹಿಡಿಯಲು ಸರ್ಕಾರದಿಂದ ಅನುಮತಿಯನ್ನು ಕೊಡಿಸಲಾಗಿದೆ. ಮಳೆಗಾಲದ ಕಾರಣದಿಂದ ಕಾರ್ಯಾಚರಣೆಯನ್ನು ಆರಂಭಿಸಿರುವುದಿಲ್ಲ. ಮಳೆ ಕಡಿಮೆಯಾದ ಕೂಡಲೇ ಕಾರ್ಯಾಚರಣೆಯನ್ನು ಆರಂಭಿಸಬೇಕು ಎಂದು ತಾಕೀತು ಮಾಡಿದರು.

‘ರೈತರ ಬೆಳೆ ಎಷ್ಟು ನಷ್ಟವಾಗಿದೆ ಎಂಬುದನ್ನು ಪರಿಶೀಲಿಸಿ, ಮೇಲಧಿಕಾರಿಗಳಿಗೆ ವರದಿಯನ್ನು ನೀಡಿ ಶೀಘ್ರದಲ್ಲಿ ಪರಿಹಾರವನ್ನು ನೀಡಲು ಅಧಿಕಾರಿಗಳು ಚುರುಕಿನಿಂದ ಕೆಲಸ ಮಾಡಬೇಕು. ಉಬ್ರಾಣಿ ಹೋಬಳಿಯಲ್ಲಿ ತೆಗೆದಿರುವ ಆನೆ ಕಂದಕದಲ್ಲಿ ಹೂಳು ತುಂಬಿದ್ದು, ಮಾವಿನಕಟ್ಟೆ ವಲಯದಲ್ಲಿ ಕಂದಕವನ್ನು ನಿರ್ಮಿಸಲು ಅಗತ್ಯ ಅನುದಾನಕ್ಕಾಗಿ ಅರಣ್ಯ ಸಚಿವರ ಚರ್ಚಿಸುತ್ತೇನೆ’ ಎಂದು ಹೇಳಿದರು.

ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಹಾಗೆಯೇ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಎಲ್ಲ ಇಲಾಖೆಗಳ ಅಧಿಕಾರಿಗಳು ಕಾಳಜಿ ವಹಿಸಿ, ಕಾಮಗಾರಿಗಳನ್ನು ಮಾಡಬೇಕು. ಸಾರ್ವಜನಿಕರನ್ನು ಪದೇ ಪದೇ ಕಚೇರಿಗಳಿಗೆ ಅಲೆದಾಡಿಸುವುದನ್ನು ಸಹಿಸುವುದಿಲ್ಲ. ಆದಷ್ಟು ಬೇಗ ಸಾರ್ವಜನಿಕರ ಕೆಲಸಗಳನ್ನು ಮಾಡಿಕೊಡಬೇಕು ಎಂದು ಸೂಚಿಸಿದರು.

ಬಂಜಾರ ಸಮಾಜ ಹಾಗೂ ಭೋವಿ ಸಮಾಜದ ಮುಖಂಡರು ನ್ಯಾ. ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರಕ್ಕೆ ರಾಜ್ಯ ಸರ್ಕಾರ ಶಿಫಾರಸು ಮಾಡಬಾರದು ಎಂದು‌ ಶಾಸಕರಿಗೆ ಮನವಿ ಸಲ್ಲಿಸಿದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ 10 ಫಲಾನುಭವಿಗಳಿಗೆ ಭಾಗ್ಯಲಕ್ಷ್ಮಿ ಬಾಂಡ್‍ ವಿತರಿಸಲಾಯಿತು. ಸಾರ್ವಜನಕರಿಂದ ಅರ್ಜಿಗಳನ್ನು ಸ್ವೀಕರಿಸಿ, ಸಂಬಂಧಪಟ್ಟ ಇಲಾಖೆಗೆ ವಿಲೇವಾರಿ ಮಾಡಲಾಯಿತು.

ತಹಶೀಲ್ದಾರ್ ಪಟ್ಟರಾಜಗೌಡ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಕೆಂಚಪ್ಪ, ಇಒ ಎಂ.ಆರ್. ಪ್ರಕಾಶ್, ಸಿಪಿಐ ಆರ್.ಆರ್. ಪಾಟೀಲ್ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು