ಮಂಗಳವಾರ, ಜೂನ್ 22, 2021
24 °C
ನಿಷೇಧಾಜ್ಞೆ ಮೀರಿದರೆ ಕಟ್ಟುನಿಟ್ಟಿನ ಕ್ರಮ: ಜಿಲ್ಲಾಧಿಕಾರಿ ಬೀಳಗಿ ಎಚ್ಚರಿಕೆ

ಕೊರೊನಾ ನಿಯಂತ್ರಣ ಹೊಸ ಮಾರ್ಗಸೂಚಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕೊರೊನಾ ಎರಡನೇ ಅಲೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಮೇ 10ರಿಂದ ಅನ್ವಯ ವಾಗುವಂತೆ ಹೊರಡಿಸಿರುವ ಹೊಸ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲಾಗುವುದು. ಮೇ 10 ರ ಬೆಳಿಗ್ಗೆ 6 ರಿಂದ ಮೇ 24ರ ಬೆಳಿಗ್ಗೆ 6 ಗಂಟೆವರೆಗೆ ಸಿಆರ್‌ಪಿಸಿ ಸೆಕ್ಷನ್ 144ರ ಅನ್ವಯ ಜಿಲ್ಲೆಯಾದ್ಯಂತ ನಾಲ್ಕಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶ ಹೊರಡಿಸಿದ್ದಾರೆ.

ರೈಲು ನಿಲ್ದಾಣ ಮತ್ತು ಕೋವಿಡ್ ಶಿಷ್ಟಾಚಾರ ಪಾಲನೆ ಹೊರತುಪಡಿಸಿ ಉಳೆದೆಲ್ಲೆಡೆ ಈ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಈ ನಿಷೇಧಾಜ್ಞೆಯನ್ನು ಉಲ್ಲಂಘಿಸಿದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005 ರ 51 ರಿಂದ 60 ಹಾಗೂ ಐಪಿಸಿ ಸೆಕ್ಷನ್ 188 ಮತ್ತು ಕರ್ನಾಟಕ ಎಂಪೆಡಿಮಿಕ್ ಡಿಸೀಸಸ್ ಆಕ್ಟ್ 2020 ರ ಸೆಕ್ಷನ್ 4, 5 ಮತ್ತು 10 ರಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಈ ಪರಿಷ್ಕೃತ ಮಾರ್ಗಸೂಚಿಗಳನ್ನು ಯಥಾವತ್ತಾಗಿ ಜಾರಿ ಗೊಳಿಸಲಾಗು ವುದು. ಜಿಲ್ಲಾ ಮಟ್ಟದ, ತಾಲ್ಲೂಕು ಮಟ್ಟದ ಪ್ರಾಧಿಕಾರಗಳು ಹಾಗೂ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ, ಸ್ಥಳೀಯ ಸಂಸ್ಥೆಗಳು, ಎಲ್ಲಾ ಇಲಾಖಾ ಮುಖ್ಯಸ್ಥರುಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ಪತ್ರಿಕೆ ವಿತರಕರಿಗೆ ಸಮಸ್ಯೆ ಇಲ್ಲ: ಎಸ್‌ಪಿ

ಪತ್ರಿಕೆಗಳನ್ನು ಓದುಗರಿಗೆ ತಲುಪಿಸುವ ವಿತರಕರ ವಾಹನಗಳನ್ನು ಪೊಲೀಸರು ತಡೆಯುವುದಿಲ್ಲ. ಪತ್ರಿಕೆ ವಿತರಣೆ ಮತ್ತು ಅದಕ್ಕೆ ಸಂಬಂಧಿಸಿದ ಕಾರ್ಯಗಳನ್ನು ಬಿಟ್ಟು ಅನಗತ್ಯವಾಗಿ ತಿರುಗಾಡಬಾರದು ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಸ್ಪಷ್ಟಪಡಿಸಿದ್ದಾರೆ.

‘ಪತ್ರಿಕಾ ವಾಹನಗಳನ್ನು ತಡೆಯದಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ’ ಎಂದು ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ

ಪತ್ರಕರ್ತರು, ಪತ್ರಿಕೆಗೆ ಸಂಬಂಧಿಸಿದ ಎಲ್ಲ ಉದ್ಯೋಗಿಗಳು ಎಂದಿನಂತೆ ಕೆಲಸ ಮಾಡಲು ಸಮಸ್ಯೆ ಇಲ್ಲ ಎಂದು ಜಿಲ್ಲಾ ವಾರ್ತಾಧಿಕಾರಿ ಅಶೋಕ್‌ ಮಾಹಿತಿ ನೀಡಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು