ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲು ಶೌಚಮುಕ್ತ ಜಿಲ್ಲೆಗೆ ಮಲ ಸಂಸ್ಕರಣೆಯದ್ದೇ ಸಮಸ್ಯೆ

Last Updated 31 ಅಕ್ಟೋಬರ್ 2022, 6:16 IST
ಅಕ್ಷರ ಗಾತ್ರ

ದಾವಣಗೆರೆ: ಕೇಂದ್ರ ಸರ್ಕಾರದ ‘ಸ್ವಚ್ಛ ಭಾರತ ಮಿಷನ್‌’ ಅಡಿ ವೈಯಕ್ತಿಕ ಶೌಚಾಲಯ ನಿರ್ಮಾಣದಲ್ಲಿ ಗುರಿ ಸಾಧಿಸುವ ಮೂಲಕ ದಾವಣಗೆರೆಯು ‘ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆ’ ಎಂದು ಐದು ವರ್ಷಗಳ ಹಿಂದೆಯೇ ಘೋಷಣೆಯಾಗಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಸರಿಯಾಗಿ ಶೌಚಾಲಯಗಳನ್ನು ಬಳಸದೇ ಇರುವುದು ಹಾಗೂ ಶೌಚಾಲಯಗಳ ಗುಂಡಿಯಲ್ಲಿ ತುಂಬಿಕೊಂಡ ಮಲದ ವಿಲೇವಾರಿ ಸಮರ್ಪಕವಾಗಿ ಆಗದಿರುವುದರಿಂದ ಸ್ವಚ್ಛ ಭಾರತ ಮಿಷನ್‌ನ ಆಶಯಕ್ಕೆ ಧಕ್ಕೆ ಬರುತ್ತಿದೆ.

ಜಿಲ್ಲಾ ಪಂಚಾಯಿತಿ ನೀಡುವ ಮಾಹಿತಿ ಪ್ರಕಾರ ದಾವಣಗೆರೆ ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ ಒಟ್ಟು 2.26 ಲಕ್ಷ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ, ಗ್ರಾಮೀಣ ಪ್ರದೇಶಗಳಲ್ಲಿ ಕೆಲವೆಡೆ ನೀರಿನ ಸಮಸ್ಯೆ ಕಾರಣಕ್ಕೆ ಜನ ಇನ್ನೂ ಶೌಚಾಲಯ ಬಳಸಲು ಹಿಂದೇಟು ಹಾಕುತ್ತಿದ್ದು, ಬಹಿರ್ದೆಸೆಗೆ ಬಯಲನ್ನೇ ಆಶ್ರಯಿಸುತ್ತಿದ್ದಾರೆ. ಇನ್ನೊಂದೆಡೆ ಬಳಸುತ್ತಿರುವ ಶೌಚಾಲಯದ ಮಲಗುಂಡಿ ತುಂಬಿಕೊಂಡಾಗ ಅದನ್ನು ಸ್ವಚ್ಛಗೊಳಿಸುವುದು ಹಳ್ಳಿಯ ಜನರಿಗೆ ತಲೆನೋವಾಗಿ ಪರಿಣಮಿಸುತ್ತಿದೆ.

ಅಮಾನವೀಯವಾಗಿರುವ ‘ ಮಲ ಹೊರುವ ಪದ್ಧತಿ’ (ಮ್ಯಾನುವಲ್‌ ಸ್ಕ್ಯಾವೆಂಜರ್‌) ಯನ್ನು ಸರ್ಕಾರ ನಿಷೇಧಿಸಿದ್ದು, ಯಂತ್ರದ ಮೂಲಕವೇ ಮಲಗುಂಡಿಯನ್ನು ಸ್ವಚ್ಛಗೊಳಿಸಬೇಕು ಎಂದು ಆದೇಶಿಸಿದೆ. ಹಲವೆಡೆ ಹಳ್ಳಿಯಲ್ಲಿ ಇಕ್ಕಟ್ಟಾದ ರಸ್ತೆಗಳಲ್ಲಿ ಸಕ್ಕಿಂಗ್‌ ಯಂತ್ರಗಳಿರುವ ಬೃಹತ್‌ ವಾಹನಗಳು ಬಂದು ಮಲಗುಂಡಿಯನ್ನು ಸ್ವಚ್ಛಗೊಳಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಕಡೆ ಕೆಲ ದಿನಗಳ ಕಾಲ ಶೌಚಾಲಯ ಬಳಸದೆ ಮಲಗುಂಡಿಯನ್ನು ಒಣಗಲು ಬಿಟ್ಟು ಬಳಿಕ ಸ್ಥಳೀಯ ಸ್ವಚ್ಛತಾ ಕಾರ್ಮಿಕರನ್ನೇ ಬಳಸಿಕೊಂಡು ಸ್ವಚ್ಛ ಮಾಡಬೇಕಾಗುತ್ತಿದೆ. ಪಟ್ಟಣದಿಂದ ಸಕ್ಕಿಂಗ್‌ ಯಂತ್ರವನ್ನು ತರಿಸಿಕೊಂಡರೆ ಅದಕ್ಕೆ ₹3,000ಕ್ಕಿಂತಲೂ ಹೆಚ್ಚು ಶುಲ್ಕವನ್ನು ಪಾವತಿಸಬೇಕಾಗುತ್ತಿರುವುದು ಹೊರೆಯಾಗಿ ಪರಿಣಮಿಸಿದೆ ಎಂದು ಗ್ರಾಮೀಣ ಪ್ರದೇಶದ ನಾಗರಿಕರು ಅಳಲು ತೋಡಿಕೊಳ್ಳುತ್ತಾರೆ.

‘ಸ್ವಚ್ಛ ಭಾರತ ಮಿಷನ್‌ ಅಡಿ ಸುಮಾರು ಹತ್ತು ವರ್ಷಗಳಿಂದ ಜಿಲ್ಲೆಯ ಗ್ರಾಮೀಣ ಪ್ರದೇಶಗಳ ಬಹುತೇಕ ಮನೆಗಳಲ್ಲಿ ಶೌಚಾಲಯ ನಿರ್ಮಿಸಲಾಗಿದೆ. ಹಳ್ಳಿಗಳಲ್ಲಿ ಒಳಚರಂಡಿ (ಯುಜಿಡಿ) ವ್ಯವಸ್ಥೆ ಇಲ್ಲದಿರುವುದರಿಂದ ಬಹುತೇಕ ಶೌಚಾಲಯಗಳಿಗೆ ಮಲಗುಂಡಿ (ಸೆಪ್ಟಿಕ್‌ ಟ್ಯಾಂಕ್‌) ನಿರ್ಮಿಸಲಾಗಿದೆ. ಇತ್ತೀಚೆಗೆ ಮಲಗುಂಡಿಗಳು ತುಂಬುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಪಟ್ಟಣದಿಂದ ಸಕ್ಕಿಂಗ್‌ ಯಂತ್ರ ತರಿಸಿ ಮಲಗುಂಡಿ ಸ್ವಚ್ಛ ಮಾಡಲಾಗುತ್ತಿದೆಯಾದರೂ ಬಳಿಕ ಟ್ಯಾಂಕ್‌ನಲ್ಲಿರುವ ಮಲವನ್ನು ಸಮೀಪದ ಹಳ್ಳಗಳಿಗೆ ಅಥವಾ ಪಾಳು ಭೂಮಿಗೆ ಹರಿದು ಬಿಡಲಾಗುತ್ತಿದೆ. ಇದರಿಂದ ಸುತ್ತಲೂ ದುರ್ವಾಸನೆ ಬರುತ್ತದೆ. ಮಲವನ್ನು ಎಲ್ಲೆಂದರಲ್ಲಿ ವಿಲೇವಾರಿ ಮಾಡುವುದು ಅಪಾಯಕಾರಿ ಸಂಗತಿ. ಹೀಗಾಗಿ ಸರ್ಕಾರವು ಗ್ರಾಮೀಣ ಭಾಗದಲ್ಲೇ ಮಲ ಸಂಸ್ಕರಣಾ ಘಟಕ ನಿರ್ಮಿಸಲು ಮುಂದಾಗುತ್ತಿದೆ’ ಎಂದು ಜಿಲ್ಲಾ ಪಂಚಾಯಿತಿಯ ಸ್ವಚ್ಛ ಭಾರತ ಮಿಷನ್‌ನ ವಿಭಾಗದ ಅಧಿಕಾರಿಗಳು ಮಾಹಿತಿ ನೀಡುತ್ತಾರೆ.

‘ಹರಿಹರ ಭಾಗದಲ್ಲಿ ಅಂತರ್ಜಲ ಮಟ್ಟ ಮೇಲಿರುವುದರಿಂದ ಆ ಭಾಗದಲ್ಲಿ ಶೌಚಾಲಯದ ಮಲಗುಂಡಿ ಬೇಗನೆ ತುಂಬುವ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ದಾವಣಗೆರೆಗೆ ತಾಲ್ಲೂಕಿನ ಹಲವು ಗ್ರಾಮ ಪಂಚಾಯಿತಿಗಳಲ್ಲಿ ಈಗಾಗಲೇ ಯುಜಿಡಿ ಸೌಲಭ್ಯ ಕಲ್ಪಿಸಲಾಗಿದ್ದು, ಉಳಿದ ಕಡೆಯೂ ಕೆಲಸ ನಡೆಯುತ್ತಿದೆ. ಮಲ ಸಂಸ್ಕರಣಾ ಘಟಕ ನಿರ್ಮಾಣಗೊಂಡರೆ ಮೌಲಗುಂಡಿಯ ಸಮಸ್ಯೆಗೆ ತಕ್ಕಮಟ್ಟಿಗೆ ಪರಿಹಾರ ಸಿಗಲಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಎ. ಚನ್ನಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಕೊಡಗನೂರು, ಪಲ್ಲಾಗಟ್ಟೆಯಲ್ಲಿ ಮಲ ಸಂಸ್ಕರಣಾ ಘಟಕ

‘10–12 ಗ್ರಾಮ ಪಂಚಾಯಿತಿಗಳನ್ನು ಒಳಗೊಂಡಂತೆ ಹೋಬಳಿ ಮಟ್ಟದಲ್ಲಿ ಮಲ ಸಂಸ್ಕರಣಾ ಘಟಕ ನಿರ್ಮಿಸಲು ಸರ್ಕಾರ ಯೋಚಿಸುತ್ತಿದೆ. ಇದರ ಭಾಗವಾಗಿ ದಾವಣಗೆರೆ ತಾಲ್ಲೂಕಿನ ಕೊಡಗನೂರು ಹಾಗೂ ಜಗಳೂರು ತಾಲ್ಲೂಕಿನ ಪಲ್ಲಾಗಟ್ಟೆ ಪಂಚಾಯಿತಿಯಲ್ಲಿ ತಲಾ ₹ 90 ಲಕ್ಷ ವೆಚ್ಚದಲ್ಲಿ ಪ್ರಾಯೋಗಿಕವಾಗಿ ಮಲ ಸಂಸ್ಕರಣಾ ಘಟಕ ನಿರ್ಮಿಸಲು ಸಮಗ್ರ ಕ್ರಿಯಾ ಯೋಜನೆ (ಡಿಪಿಆರ್‌) ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಅಧಿಕಾರಿಗಳು ಮಾಹಿತಿ ನೀಡಿದರು.

ಮಲ ಸಂಸ್ಕರಣಾ ಘಟಕದಲ್ಲಿ ತೊಟ್ಟಿ ನಿರ್ಮಿಸಲಾಗುತ್ತದೆ. ಈ ಘಟಕದಲ್ಲಿರುವ ಸಕ್ಕಿಂಗ್‌ ಯಂತ್ರವು ಶೌಚಾಲಯದ ಗುಂಡಿಯಿಂದ ತುಂಬಿಕೊಂಡು ಬಂದ ಮಲವನ್ನು ತಂದು ತೊಟ್ಟಿಗೆ ಹಾಕುತ್ತದೆ. ಈ ತೊಟ್ಟಿಯಲ್ಲಿರುವ ನೀರು ಪೈಪ್‌ ಮೂಲಕ ಹೊರಗೆ ಬರುತ್ತದೆ. ಆ ನೀರನ್ನು ಸಂಸ್ಕರಣೆ ಮಾಡಿ ಉದ್ಯಾನ ಬೆಳೆಸಲು ಬಳಸಿಕೊಳ್ಳಲಾಗುತ್ತದೆ. ತೊಟ್ಟಿಯಲ್ಲಿರುವ ಮಲವು ಮೂರು ತಿಂಗಳಲ್ಲಿ ಒಣಗಿ ಗೊಬ್ಬರವಾಗಲಿದೆ ಎಂದು ತಿಳಿಸಿದರು.

ಹರಿಹರ: ಧೂಳು ಹಿಡಿದ ಸಕ್ಕಿಂಗ್ ಯಂತ್ರ

ಇನಾಯತ್‌ ಉಲ್ಲಾ ಟಿ.

ಹರಿಹರ: ತಾಲ್ಲೂಕಿನಾದ್ಯಂತ ಬಹುತೇಕ ಮನೆಗಳಿಗೆ ಸೆಪ್ಟಿಕ್‌ ಟ್ಯಾಂಕ್‌ ಸಹಿತ ಶೌಚಾಲಯ ನಿರ್ಮಿಸಲಾಗಿದೆ. ಸಕ್ಕಿಂಗ್‌ ಯಂತ್ರದ ಮೂಲಕವೇ ಸೆಪ್ಟಿಕ್‌ ಟ್ಯಾಂಕ್‌ನ ಮಲ ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ.

ಏಳೆಂಟು ವರ್ಷಗಳ ಹಿಂದೆ ಇಲ್ಲಿನ ತಾಲ್ಲೂಕು ಪಂಚಾಯಿತಿಗೆ ₹ 8 ಲಕ್ಷ ಮೌಲ್ಯದ ಸಕ್ಕಿಂಗ್ ಯಂತ್ರ ಬಂದಿತ್ತು. ಕೆಲವು ತಿಂಗಳು ಕಾರ್ಯ ನಿರ್ವಹಣೆ ಮಾಡಿತ್ತು. ಈಗ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಜಂಗು ಹಿಡಿಯುತ್ತಾ ನಿಂತಿದೆ. ಯಾವುದಾದರೂ ದೊಡ್ಡ ಗ್ರಾಮ ಪಂಚಾಯಿತಿಗೆ ಇದನ್ನು ನೀಡಿದ್ದರೆ ಬಳಕೆಯಾಗುತ್ತಿತ್ತು.

ನಗರಸಭೆಯಲ್ಲಿ ಒಂದು ಸಕ್ಕಿಂಗ್‌ ಯಂತ್ರ ಇದೆ. ನಗರದ ಸೆಪ್ಟಿಕ್ ಟ್ಯಾಂಕ್ ಸ್ವಚ್ಛತೆಗೆ ₹ 3,000 ಹಾಗೂ ಗ್ರಾಮೀಣ ಭಾಗದ ಟ್ಯಾಂಕ್‌ಗೆ ₹ 4,000 ಮತ್ತು ಧಾರ್ಮಿಕ ಹಾಗೂ ಸರ್ಕಾರಿ ಕಚೇರಿಗಳಿಗೆ ರಿಯಾಯಿತಿ ದರ ನಿಗದಿಪಡಿಸಲಾಗಿದೆ. ಖಾಸಗಿ ಸಕ್ಕಿಂಗ್ ಯಂತ್ರಗಳನ್ನೂ ಗ್ರಾಮೀಣ ಭಾಗದ ಜನ ಬಳಸಿಕೊಳ್ಳುತ್ತಿದ್ದಾರೆ.

ಸ್ಟೋರ್‌ ರೂಮ್‌ಗಳಾಗುತ್ತಿರುವ ಶೌಚಾಲಯ

ಮಂಜುನಾಥ ಎಸ್‌.ಎಂ.

ಮಾಯಕೊಂಡ: ಹಳ್ಳಿಗಳಲ್ಲಿ ‘ಬಯಲು ಬಹಿರ್ದೆಸೆ ಮುಕ್ತ’ ಎಂಬ ಘೋಷಣೆ ಈಗ ಅಪ್ರಸ್ತುತವಾಗುತ್ತಿದೆ. ಗ್ರಾಮಗಳಲ್ಲಿ ಯುಜಿಡಿ ವ್ಯವಸ್ಥೆ ಇಲ್ಲ. ಮಲಗುಂಡಿ ತುಂಬಿದರೆ ನಿರ್ವಹಣೆ ಮಾಡುವುದು ಹೇಗೆ ಎಂಬ ಆತಂಕ ಜನರನ್ನು ಕಾಡುತ್ತಿದೆ. ಗ್ರಾಮಗಳಲ್ಲಿ ವಾರಕ್ಕೆ ಅಥವಾ ಹತ್ತು ದಿನಗಳಿಗೆ ಒಮ್ಮೆ ನೀರು ಸರಬರಾಜು ಮಾಡುವುದರಿಂದಲೂ ಜನ ಬಹಿರ್ದೆಸೆಗೆ ಬಯಲಿಗೆ ಹೋಗುತ್ತಿದ್ದಾರೆ.

ಕೆಲವು ಹಳ್ಳಿಗಳಲ್ಲಿ ನಾಮಕಾವಸ್ತೆ ಎಂಬಂತೆ ಶೌಚಾಲಯ ನಿರ್ಮಿಸಿಕೊಡಲಾಗಿದೆ. ಮಲಗುಂಡಿಗಳ ಮೇಲೆ ಮುಚ್ಚಳ ಹಾಕದೇ ಹಾಗೆಯೇ ಬಿಡಲಾಗಿದೆ. ಮಳೆ ನೀರು ಹಾಗೂ ಇತರೆ ನೀರಿನಿಂದ ಮಲಗುಂಡಿ ತುಂಬಿ ಹೋಗಿದೆ. ಮಕ್ಕಳು, ಪ್ರಾಣಿಗಳು ಇದರಲ್ಲಿ ಬಿದ್ದರೆ ಜೀವಕ್ಕೆ ಕಂಟಕವಾಗಲಿದೆ. ದಿಂಡದಹಳ್ಳಿ ಗ್ರಾಮದಲ್ಲಿ ನೂರಾರು ಶೌಚಾಲಯಗಳನ್ನು ನಿರ್ಮಿಸಿದ್ದರೂ ಅವುಗಳನ್ನು ಕಟ್ಟಿಗೆ, ಬೆಂಡು, ಸೌದೆಗಳನ್ನು ಸಂಗ್ರಹಿಸಿಡುವ ಸ್ಟೋರ್‌ ರೂಮ್‌ಗಳನ್ನಾಗಿ ಮಾಡಿಕೊಳ್ಳಲಾಗಿದೆ.

‘ಶೌಚಾಲಯ ಬಳಸಿ ಆರೋಗ್ಯ ಪಾಕಾಡಿಕೊಳ್ಳಬೇಕು. ನೀರಿನ ಸಮಸ್ಯೆಯಿಂದ ಶೌಚಾಲಯ ಬಳಸದೇ ಇರುವವರು ಮನವಿ ಸಲ್ಲಿಸಿದರೆ ನೀರಿನ ವ್ಯವಸ್ಥೆ ಕಲ್ಪಿಸಲಾಗುವುದು’ ಎಂದು ಕೊಡಗನೂರು ಗ್ರಾಮ ಪಂಚಾಯಿತಿ ಪಿಡಿಒ ರೂಪಾ ಪ್ರತಿಕ್ರಿಯಿಸಿದರು.

61 ಗ್ರಾ.ಪಂ.ಗಳಿಗೆ ಒಂದೇ ಸಕ್ಕಿಂಗ್‌ ‌ವಾಹನ

ಎಚ್.ವಿ. ನಟರಾಜ್

ಚನ್ನಗಿರಿ: ತಾಲ್ಲೂಕಿನಲ್ಲಿ 61 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 376 ಹಳ್ಳಿಗಳಿದ್ದು, ಮಲಗುಂಡಿಗಳು ತುಂಬಿದರೆ ಸ್ವಚ್ಛಗೊಳಿಸಲು ತಾಲ್ಲೂಕು ಪಂಚಾಯಿತಿಯಲ್ಲಿ ಒಂದು ಸಕ್ಕಿಂಗ್‌ ಯಂತ್ರವಿರುವ ‌ವಾಹನ ಮಾತ್ರ ಇದೆ.

ಗ್ರಾಮ ಪಂಚಾಯಿತಿಯವರು ಕರೆ ಮಾಡಿದಾಗ ಸಕ್ಕಿಂಗ್‌ ವಾಹನ ಆ ಗ್ರಾಮಕ್ಕೆ ಹೋಗಿ ಮಲಗುಂಡಿಗಳನ್ನು ಸ್ವಚ್ಛಗೊಳಿಸಿ ಬರುತ್ತದೆ. ಹೆಚ್ಚುವರಿಯಾಗಿ 3 ವಾಹನ ಮಂಜೂರು ಮಾಡಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ತಾಲ್ಲೂಕು ಪಂಚಾಯಿತಿ ಇ.ಒ ಎಂ.ಆರ್. ಪ್ರಕಾಶ್ ಮಾಹಿತಿ ನೀಡಿದರು.

ತಾಲ್ಲೂಕಿನಲ್ಲಿ ಮೂರು ಖಾಸಗಿ ಸಕ್ಕಿಂಗ್‌ ವಾಹನಗಳೂ ಇವೆ. ಮಲಗುಂಡಿಗಳು ತುಂಬಿದಾಗ ಜನ ಖಾಸಗಿ ವಾಹನ ತರಿಸಿಕೊಂಡು ಸ್ವಚ್ಛ ಮಾಡಿಸಿಕೊಳ್ಳುತ್ತಿದ್ದಾರೆ.

ಸಂತೇಬೆನ್ನೂರು ಗ್ರಾಮದ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯವು ನಿರ್ವಹಣೆ ಕೊರತೆಯಿಂದಾಗಿ ಗಬ್ಬು ನಾರುತ್ತಿದೆ. ಇಲ್ಲಿರುವ ಮಲಗುಂಡಿಗಳನ್ನು ಸ್ವಚ್ಛಗೊಳಿಸದೇ ಎಷ್ಟೋ ತಿಂಗಳುಗಳಾಗಿವೆ. ಒಳಗೆ ಕಾಲಿಡಲು ಸಾಧ್ಯವಾಗದೇ ಪ್ರಯಾಣಿಕರು ಬಸ್ ನಿಲ್ದಾಣದ ಮೂಲೆಗಳಲ್ಲಿ ಮಲ, ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಗ್ರಾಮ ಪಂಚಾಯಿತಿಯವರು ಶೌಚಾಲಯ ಸ್ವಚ್ಛಗೊಳಿಸಬೇಕು ಎನ್ನುತ್ತಾರೆ ಗ್ರಾಮದ ನಾಗರಾಜ್.

ಸಕ್ಕಿಂಗ್‌ ಯಂತ್ರದ ಸೇವೆ ಲಭ್ಯ

ಎನ್‌.ಕೆ. ಆಂಜನೇಯ/ ಡಿ.ಎಂ. ಹಾಲಾರಾಧ್ಯ

ಹೊನ್ನಾಳಿ/ ನ್ಯಾಮತಿ: ಗ್ರಾಮೀಣ ಪ್ರದೇಶಗಳಲ್ಲಿ ಮಲಗುಂಡಿಗಳನ್ನು ಸ್ವಚ್ಛಗೊಳಿಸಲು ಹತ್ತು ವರ್ಷಗಳ ಹಿಂದೆಯೇ ಹೊನ್ನಾಳಿ ತಾಲ್ಲೂಕಿಗೆ ಒಂದು ಸಕಿಂಗ್‌ ಯಂತ್ರ ಮಂಜೂರು ಮಾಡಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಮಲಗುಂಡಿ ತುಂಬಿದ ಪ್ರಕರಣಗಳ ಸಂಖ್ಯೆ ತೀರಾ ಕಡಿಮೆ ಎಂದು ಹೊನ್ನಾಳಿ ತಾಲ್ಲೂಕು ಪಂಚಾಯಿತಿ ವ್ಯವಸ್ಥಾಪಕ ಶಂಭುಲಿಂಗಯ್ಯ ಪ್ರತಿಕ್ರಿಯಿಸಿದರು.

ಇತ್ತೀಚೆಗೆ ಸುರಿದ ಧಾರಾಕಾರ ಮಳೆಯಿಂದಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕೆಲವೆಡೆ ಶೌಚಗುಂಡಿಗಳು ತುಂಬಿರುವ ಸಾಧ್ಯತೆ ಇದೆ. ಗ್ರಾಮೀಣ ಪ್ರದೇಶಗಳಲ್ಲಿ ತುಂಬಿರುವ ಶೌಚಗುಂಡಿಗಳನ್ನು ಖಾಲಿ ಮಾಡಲು ಸಕ್ಕಿಂಗ್‌ ಯಂತ್ರ ನಮ್ಮಲ್ಲಿ ಲಭ್ಯವಿದೆ. ಶೌಚಗುಂಡಿಗಳು ತುಂಬಿದರೆ ಸಕ್ಕಿಂಗ್‌ ಯಂತ್ರದ ಸೇವೆಯನ್ನು ಸಾರ್ವಜನಿಕರು ಪಡೆದುಕೊಳ್ಳಬಹುದು ಎನ್ನುತ್ತಾರೆ ಹೊನ್ನಾಳಿ ತಾಲ್ಲೂಕು ಪಂಚಾಯಿತಿ ಇ.ಒ ರಾಮಾ ಭೋವಿ.

‘ಈ ಹಿಂದೆ ಕಾರ್ಮಿಕರಿಂದ ಮಲಗುಂಡಿ ಸ್ವಚ್ಛ ಮಾಡಿಸಿಕೊಳ್ಳಲಾಗುತ್ತಿತ್ತು. ಕೈಯಿಂದ ಮಲಗುಂಡಿ ಸ್ವಚ್ಛಗೊಳಿಸುವುದನ್ನು ನಿಷೇಧಿಸಿರುವುದರಿಂದ ನಾವೇ ಮಲಗುಂಡಿಗೆ ಉಪ್ಪು ಸುರಿದು, ಅದು ಒಣಗಿ ಪುಡಿಯಾಗುವ ತನಕ ಪರ್ಯಾಯ ಶೌಚಾಲಯ ಬಳಸುತ್ತೇವೆ’ ಎಂದು ನಾಟಿವೈದ್ಯ ಗುಂಡೂರು ಮಲ್ಲೇಶಪ್ಪ ಹೇಳುತ್ತಾರೆ.

‘ಹೊಸದಾಗಿ ನಿರ್ಮಿಸುತ್ತಿರುವ ಮನೆಗಳಲ್ಲಿ ಸೆಪ್ಟಿಕ್‌ ಟ್ಯಾಂಕ್‌ಗೆ ಪೈಪ್‌ಗಳನ್ನು ಅಳವಡಿಸಲಾಗುತ್ತಿದೆ. ಟ್ಯಾಂಕ್‌ ಭರ್ತಿಯಾದಾಗ ಸಕ್ಕಿಂಗ್‌ ಯಂತ್ರ ಬಳಸಿ ಸ್ವಚ್ಛಗೊಳಿಸಲು ಅನುಕೂಲವಾಗಲಿದೆ. ನ್ಯಾಮತಿ ಪಟ್ಟಣ ಪಂಚಾಯಿತಿ ಆದಷ್ಟು ಬೇಗನೆ ಸಕ್ಕಿಂಗ್‌ ಯಂತ್ರವನ್ನು ತರಿಸಬೇಕು’ ಎಂದು ಕನ್ನಡ ಸಾಹಿತ್ಯ ಪರಿಷತ್ತು ಕೋಶಾಧ್ಯಕ್ಷ ಕೆ.ಎಂ. ಬಸವರಾಜ ಆಗ್ರಹಿಸುತ್ತಾರೆ.

ಜಗಳೂರು: ಶೌಚಾಲಯ ಬಳಕೆಯೇ ವಿರಳ

ಡಿ. ಶ್ರೀನಿವಾಸ್

ಜಗಳೂರು: ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ಭಾಗಶಃ ಶೌಚಾಲಯಗಳು ನಿರ್ಮಾಣವಾಗಿದ್ದರೂ ಹಲವು ಗ್ರಾಮಗಳಲ್ಲಿ ಸಮರ್ಪಕವಾಗಿ ಬಳಕೆ ಮಾಡದೆ ಬಹಿರ್ದೆಸೆಗೆ ಬಯಲನ್ನೇ ಆಶ್ರಯಿಸಿದ್ದಾರೆ.

ಬಹುತೇಕ ಮನೆಗಳಲ್ಲಿ ಮಹಿಳೆಯರು ಮಾತ್ರ ಶೌಚಾಲಯ ಬಳಸುತ್ತಿದ್ದಾರೆ. ಕೆಲವು ಮನೆಗಳಲ್ಲಿ ಮೇಕೆ–ಕುರಿ ಕಟ್ಟಲು, ಕಟ್ಟಿಗೆ ದಾಸ್ತಾನು ಮಾಡಲು ಹಾಗೂ ಸ್ನಾನಕ್ಕಾಗಿ ಬಳಸುತ್ತಿದ್ದಾರೆ. ಗ್ರಾಮಿಣ ಪ್ರದೇಶದಲ್ಲಿರುವ ಬಹುತೇಕ ಶೌಚಾಲಯಗಳ ಗುಂಡಿಗಳು ಭರ್ತಿಯಾಗಿಲ್ಲ. ಹೀಗಾಗಿ ಮಲ ವಿಲೇವಾರಿ ಸಮಸ್ಯೆ ಇನ್ನೂ ಕಾಣಿಸಿಕೊಂಡಿಲ್ಲ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹೇಳುತ್ತಾರೆ.

ಕೋಟ್‌...

ಕೆಲ ಗ್ರಾಮ ಪಂಚಾಯಿತಿಗಳು ಒಳಗೊಳ್ಳುವಂತೆ ಮಲ ಸಂಸ್ಕರಣಾ ಘಟಕ ಸ್ಥಾಪಿಸಲು ಡಿಪಿಆರ್‌ ತಯಾರಿಸಲಾಗಿದೆ. ಮಲಗುಂಡಿಗಳು ತುಂಬಿದಾಗ ಪಂಚಾಯಿತಿ ಗಮನಕ್ಕೆ ತಂದರೆ ಸಕ್ಕಿಂಗ್‌ ಯಂತ್ರ ತರಿಸಿ ಸ್ವಚ್ಛಗೊಳಿಸಲು ವ್ಯವಸ್ಥೆ ಮಾಡಲಾಗುವುದು.

ಎ. ಚನ್ನಪ್ಪ, ಜಿಲ್ಲಾ ಪಂಚಾಯಿತಿ ಸಿಇಒ

ಪಂಚಾಯಿತಿಯಿಂದ ಶೌಚಾಲಯ ಕಟ್ಟಿಸಿಕೊಟ್ಟಿದ್ದರು. ಮಲಗುಂಡಿಗೆ ಮುಚ್ಚಳ ಹಾಕಿಲ್ಲ. ನೀರಿನ ಸಮಸ್ಯೆಯೂ ಇದೆ. ಹೀಗಾಗಿ ಶೌಚಾಲಯ ಬಳಸುವುದನ್ನು ನಿಲ್ಲಿಸಿದ್ದೇವೆ.

ರೇಣುಕಮ್ಮ, ದಿಂಡದಹಳ್ಳಿ ಗ್ರಾಮ

ಮಲಗುಂಡಿಗಳು ತುಂಬಿದ ಮಾಹಿತಿ ನೀಡಿದರೆ ಸಕ್ಕಿಂಗ್‌ ಯಂತ್ರ ತರಿಸಿ ತ್ಯಾಜ್ಯ ವಿಲೇವಾರಿ ಮಾಡಿಸುತ್ತೇವೆ. ಅವರ ಆರ್ಥಿಕ ಸ್ಥಿತಿಗೆ ಅನುಗುಣವಾಗಿ ಯಂತ್ರದ ಬಾಡಿಗೆಯನ್ನು ಪಂಚಾಯಿತಿಯಿಂದಲೇ ನೀಡಲು ಅವಕಾಶವಿದೆ. ನಾಗರಾಜ್, ಮಾಯಕೊಂಡ ಪಿಡಿಒ

ಮಲಗುಂಡಿ ಭರ್ತಿಯಾದಾಗ ಹರಿಹರ, ಶಿವಮೊಗ್ಗದಿಂದ ಸಕ್ಕಿಂಗ್‌ ಯಂತ್ರ ತರಿಸಿಕೊಳ್ಳಬೇಕಾಗುತ್ತಿದೆ. ಇದಕ್ಕೆ ಸುಮಾರು ₹ 5,000 ಖರ್ಚು ಬರುತ್ತದೆ. ಸ್ಥಳೀಯವಾಗಿ ಯಂತ್ರ ಸಿಗುವಂತಾಗಬೇಕು.

ಪುರುವಂತರ ಪರಮೇಶ್ವರಪ್ಪ, ಸಾಮಾಜಿಕ ಕಾರ್ಯಕರ್ತ, ಚೀಲೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT