ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಲೆ ಏರಿಕೆ ಖಂಡಿಸಿ ಜೆಡಿಎಸ್‌ ಪ್ರತಿಭಟನೆ

Last Updated 13 ಏಪ್ರಿಲ್ 2022, 4:16 IST
ಅಕ್ಷರ ಗಾತ್ರ

ದಾವಣಗೆರೆ: ಪೆಟ್ರೋಲ್‌, ಡೀಸೆಲ್‌, ಅನಿಲ, ಔಷಧ ಸಹಿತ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಆರೋಪಿಸಿ ಸರ್ಕಾರಗಳ ವಿರುದ್ಧ ಜೆಡಿಎಸ್‌ ವತಿಯಿಂದ ಮಂಗಳವಾರ ನಗರದ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸತತ 2 ವರ್ಷ ಕಾಡಿದ ಕೊರೊನಾ ಜನರ ಜೀವ, ಬದುಕು, ನೆಮ್ಮದಿ, ಆರೋಗ್ಯವನ್ನೇ ಕಸಿದುಕೊಂಡಿತು. ಈಗ ಅದರ ಮೇಲೆ ಬರೆ ಎಳೆಯುವಂತೆ ಎಲ್ಲ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ಜನ ಜೀವನ ನಿರ್ವಹಣೆಯೇ ಕಷ್ಟವಾಗಿದೆ ಎಂದುಜೆಡಿಎಸ್‌ ಮುಖಂಡ ಎಚ್.ಎಸ್. ಶಿವಶಂಕರ ತಿಳಿಸಿದರು.

ದೇಶದ ಜನಸಂಖ್ಯೆಯ ಶೇ 70ರಷ್ಟು ಗ್ರಾಮೀಣರು, ಬಡ ವರ್ಗದ ಜನರಿದ್ದಾರೆ. ದುಡಿಯುವ ಬಹುಪಾಲು ಮೊತ್ತ ಮಕ್ಕಳ ಓದು, ಆಸ್ಪತ್ರೆ ಖರ್ಚು, ಮನೆ ಬಾಡಿಗೆಗೆ ಸಾಲ ಮಾಡುವ ಸ್ಥಿತಿ ಇದೆ. ಬೆಲೆ ಏರಿಕೆಯಿಂದಾಗಿ ಜನರ ಬದುಕು ನಾಶವಾಗುತ್ತಿದೆ. ಸರ್ಕಾರಿ ನೌಕರ ಆದವರೂ ಸಹ ಸಂಸಾರ ಸರಿದೂಗಿಸಲು ಕಷ್ಟವಾಗುವ ಸ್ಥಿತಿ ಬಂದೊದಗಿದೆ. ಸರ್ಕಾರಕ್ಕೆ ಬಡವರು, ಕಡು ಬಡವರು, ಬಡ ಮಧ್ಯಮ ವರ್ಗದ ಜನರು ಕಾಣುತ್ತಿಲ್ಲ. ಅಗತ್ಯ ವಸ್ತುಗಳ ಬೆಲೆ ಇಳಿಸದಿದ್ದರೆ, ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಜೆಡಿಎಸ್ ಪಕ್ಷವು ರಾಜ್ಯವ್ಯಾಪಿ ಹೋರಾಟ ನಡೆಸಲಿದೆ ಎಂದು ಎಚ್ಚರಿಸಿದರು.

ಜೆ.ಅಮಾನುಲ್ಲಾ ಖಾನ್ ಮಾತನಾಡಿ, ‘ರಾಜ್ಯದಲ್ಲಿ ಹಿಜಾಬ್-ಕೇಸರಿ ಶಾಲು, ಮುಸ್ಲಿಮರ ವ್ಯಾಪಾರಕ್ಕೆ ಬಹಿಷ್ಕಾರ, ಹಲಾಲ್ ಕಟ್-ಜಟ್ಕಾ ಕಟ್ ಎಂದೆಲ್ಲ ಧರ್ಮ–ಧರ್ಮಗಳ ಮಧ್ಯೆ ವಿಷ ಬೀಜ ಬಿತ್ತುವ ಕೆಲಸ ನಡೆಯುತ್ತಿದೆ. ಇದನ್ನೆಲ್ಲ ನೋಡಿದರೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸುಮ್ಮನಿರುವುದನ್ನು ಗಮನಿಸಿದರೆ, ಚುನಾವಣೆ ಸೀಸನ್‍ಗೆ ಕೆಲ ಸ್ವಯಂ ಘೋಷಿತ ಹಿಂದುತ್ವವಾದಿಗಳು ಗಲಭೆ ಮಾಡಿಸಲು ಸಿದ್ಧತೆ ನಡೆಸಿದ್ದಾರೆಂಬ ಅನುಮಾನ ಕಾಡುತ್ತಿದೆ’ ಎಂದರು.

ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಬಿಜೆಪಿಯ ಕೆಲ ಶಾಸಕರು, ಮಂತ್ರಿಗಳು ಸಹ ಸಾಥ್ ನೀಡುತ್ತಾ, ಆಡಳಿತ ಯಂತ್ರವನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಈ ಸ್ಥಿತಿಯಲ್ಲಿ ಶಾಂತಿ, ಸಾಮರಸ್ಯ ಕಾಪಾಡಲು ಮುಂದಾಗಬೇಕಿದ್ದ ಸರ್ಕಾರ ಜಾಣ ಕಿವುಡು ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಿ. ಚಿದಾನಂದಪ್ಪ, ಮುಖಂಡರಾದ ಟಿ. ಗಣೇಶ ದಾಸಕರಿಯಪ್ಪ, ಯು.ಎಂ. ಮನ್ಸೂರ್ ಅಲಿ, ಸಿ. ಅಂಜಿನಪ್ಪ ಕಡತಿ, ಟಿ. ಅಸ್ಗರ್, ಜೆ.ಎಸ್. ಶೀಲಾ ಕುಮಾರ, ಬ್ಯಾಟರಿ ಜಬೀವುಲ್ಲಾ, ಜಮೀರ್ ಅಹಮ್ಮದ್, ಉಜ್ಜಿನಿ ಹುಸೇನ್, ಎಂ.ಪಿ.ವೀರೇಶ , ಡಿ.ಆರ್. ಧನಂಜಯ, ಇನಾಯತ್ ದೇವರಹಟ್ಟಿ, ಮುನ್ನಾ ಮೇಸಿ, ಅಬ್ದುಲ್ ಫಾರೂಕ್ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT