ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಎಲ್ಲ ಸಮುದಾಯಗಳನ್ನು ಸಮಾನವಾಗಿ ಕಂಡ ಯಡಿಯೂರಪ್ಪ: ಮುಖಂಡರ ಬಣ್ಣನೆ

‘ಶಕ್ತಿ ಸಾಗರ ಸಂಗಮ’ ಸಮಾವೇಶದಲ್ಲಿ ಮುಖಂಡರ ಬಣ್ಣನೆ
Published 5 ಮಾರ್ಚ್ 2024, 15:43 IST
Last Updated 5 ಮಾರ್ಚ್ 2024, 15:43 IST
ಅಕ್ಷರ ಗಾತ್ರ

ಸಾಗರ: ಸಾಮಾಜಿಕ ನ್ಯಾಯ ಎಂದರೆ ದೇವರಾಜ ಅರಸು, ಮೌಲ್ಯಾಧಾರಿತ ರಾಜಕಾರಣವೆಂದರೆ ರಾಮಕೃಷ್ಣ ಹೆಗಡೆ, ಐಟಿ ಬಿಟಿ ಕ್ಷೇತ್ರಕ್ಕೆ ಕಾಯಕಲ್ಪ ನೀಡಿದವರು ಎಸ್.ಎಂ.ಕೃಷ್ಣ, ರೈತರಿಗೆ ಉಚಿತ ವಿದ್ಯುತ್ ಕೊಟ್ಟವರು ಎಸ್.ಬಂಗಾರಪ್ಪ, ಬಡವರ ಬದುಕಿಗೆ ಬೆಳಕು ನೀಡಿದವರು ಯಡಿಯೂರಪ್ಪ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಬಣ್ಣಿಸಿದರು.

ಇಲ್ಲಿನ ಇಂದಿರಾಗಾಂಧಿ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಸಮೀಪದ ಶಾಶ್ವತ ಧ್ವಜಸ್ತಂಭದ ಎದುರು ಮಂಗಳವಾರ ನಡೆದ ಈಡಿಗ, ಬಿಲ್ಲವ, ನಾಮಧಾರಿ, ದೀವರ ‘ಶಕ್ತಿ ಸಾಗರ ಸಂಗಮ’ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಸರ್ವರಿಗೂ ಸಮಪಾಲು, ಸಮಬಾಳು ಎಂಬುದು ಯಡಿಯೂರಪ್ಪ ಪಾಲಿಗೆ ಕೇವಲ ವೇದಿಕೆಯ ಘೋಷಣೆಯಲ್ಲ. ಅಧಿಕಾರವಿದ್ದಾಗ ಅದನ್ನು ಅವರು ಸಾಧಿಸಿ ತೋರಿಸಿದ್ದಾರೆ. ಶರಾವತಿ ಮುಳುಗಡೆ ಸಂತ್ರಸ್ತರಿಗೆ ಇನ್ನೂ ಹಕ್ಕುಪತ್ರ ಸಿಗದೆ ಇರುವ ಬಗ್ಗೆ ಬೇಸರವಿದ್ದು, ಮುಂದಿನ ದಿನಗಳಲ್ಲಿ ಈ ಕೆಲಸವನ್ನು ಆದ್ಯತೆ ಮೇರೆಗೆ ಮಾಡಲಾಗುವುದು’ ಎಂದು ಸಂಸದ ಬಿ.ವೈ.ರಾಘವೇಂದ್ರ ಭರವಸೆ ನೀಡಿದರು.

‘ಎಲ್ಲಾ ಸಮುದಾಯವರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಅಪರೂಪದ ಗುಣ ಯಡಿಯೂರಪ್ಪ ಅವರಲ್ಲಿದೆ. ಹಿಂದುಳಿದವರಿಗೆ ಸಾಮಾಜಿಕ, ರಾಜಕೀಯ ಸ್ಥಾನಮಾನ ಕಲ್ಪಿಸುವ ಭಕ್ತವತ್ಸಲ ಸಮಿತಿಯ ಶಿಫಾರಸುಗಳನ್ನು ರಾಜ್ಯ ಸರ್ಕಾರ ಕೂಡಲೇ ಜಾರಿಗೊಳಿಸಬೇಕು’ ಎಂದು ವಿಧಾನಸಭೆ ವಿರೋಧ ಪಕ್ಷದ ಉಪ ನಾಯಕ ಸುನಿಲ್ ಕುಮಾರ್ ಒತ್ತಾಯಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಎಚ್.ಹಾಲಪ್ಪ ಹರತಾಳು, ‘ಯಡಿಯೂರಪ್ಪ ಅವರನ್ನು ಯಾವುದೇ ಒಂದು ಸಮುದಾಯಕ್ಕೆ ಸೀಮಿತಗೊಳಿಸಲು ಸಾಧ್ಯವಿಲ್ಲ. ಅಧಿಕಾರವಿದ್ದಾಗ ಅವರು ಅಂತಹ ಕೆಲಸ ಮಾಡಿದ್ದಾರೆ. ಈಡಿಗರ 26 ಉಪ ಪಂಗಡಗಳಿಗೆ ಅವರು ನೀಡಿರುವ ಕೊಡುಗೆಯ ಋಣವನ್ನು ತೀರಿಸುವ ಸಲುವಾಗಿ ಸಮಾವೇಶ ಆಯೋಜಿಸಲಾಗಿದೆ’ ಎಂದು ತಿಳಿಸಿದರು.

ಶಾಸಕರಾದ ಆರಗ ಜ್ಞಾನೇಂದ್ರ, ಚನ್ನಬಸಪ್ಪ, ಭಾರತೀ ಶೆಟ್ಟಿ, ಡಿ.ಎಸ್.ಅರುಣ್, ಗುರುರಾಜ್ ಗಂಟಿಹೊಳೆ, ಮಾಜಿ ಸಚಿವ ಮಾಲಿಕಯ್ಯ ಗುತ್ತೆದಾರ್, ಮಾಜಿ ಶಾಸಕ ಸುನಿಲ್ ನಾಯ್ಕ, ಪ್ರಮುಖರಾದ ರುದ್ರೇಗೌಡ, ಕೆ.ಜಿ.ನಾಯ್ಕ, ಬಿ.ಸ್ವಾಮಿರಾವ್, ಡಾ.ರಾಜನಂದಿನಿ ಕಾಗೋಡು, ಜೆ.ಪಿ.ಸುಧಾಕರ್, ರೂಪಾಲಿ ನಾಯ್ಕ್, ಅಶೋಕ್ ನಾಯ್ಕ ಇದ್ದರು.

ಸಮಾವೇಶದಲ್ಲಿ ಸೇರಿದ್ದ ಜನಸ್ತೋಮ
ಸಮಾವೇಶದಲ್ಲಿ ಸೇರಿದ್ದ ಜನಸ್ತೋಮ

ಕುಮಾರ್ ಬಂಗಾರಪ್ಪ ಗೈರುಹಾಜರಿ ಕಾರ್ಯಕ್ರಮದ ಸಿದ್ಧತೆಯ ಆರಂಭದಲ್ಲಿ ಸಂಘಟಕರು ಎಲ್ಲಿಯೂ ಕುಮಾರ್ ಬಂಗಾರಪ್ಪ ಅವರು ಸಮಾವೇಶದಲ್ಲಿ ಭಾಗವಹಿಸುವ ಬಗ್ಗೆ ಹೇಳಿರಲಿಲ್ಲ. ಆದರೆ ಕೊನೆ ಗಳಿಗೆಯಲ್ಲಿ ನಗರದಲ್ಲಿ ಅಳವಡಿಸಿದ್ದ ಫ್ಲೆಕ್ಸ್‌ಗಳಲ್ಲಿ ಅವರ ಭಾವಚಿತ್ರ ಕಾಣಿಸಿಕೊಂಡಿತ್ತು. ಸಮಾವೇಶದಲ್ಲಿ ಕುಮಾರ್ ಬಂಗಾರಪ್ಪ ಗೈರು ಹಾಜರಾಗಿದ್ದರು.

ಬಹಿರಂಗವಾಗಿಯೇ ಚುನಾವಣಾ ಪ್ರಚಾರ ಸಮಾವೇಶದ ಆಯೋಜಕರು ಇದೊಂದು ಪಕ್ಷಾತೀತ ರಾಜಕೀಯೇತರ ಸಮಾವೇಶ ಎಂದು ಪ್ರಚಾರ ಮಾಡಿದ್ದರು. ಆದರೆ ಸಭೆಯಲ್ಲಿ ಮಾತನಾಡಿದವರು ಬರಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವಂತೆ ಬಹಿರಂಗವಾಗಿಯೇ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT