ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡ, ಗ್ರಾಮೀಣರಿಗೆ ಆಸರೆಯಾದ ಎನ್‌ಐಸಿಯು

ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿದೆ ನವಜಾತ ಶಿಶುವಿನ ಆರೈಕೆಗೆ ಅತ್ಯಾಧುನಿಕ ಘಟಕ
Last Updated 15 ನವೆಂಬರ್ 2022, 4:29 IST
ಅಕ್ಷರ ಗಾತ್ರ

ದಾವಣಗೆರೆ: ನಗರದ ಚಿಗಟೇರಿ ಜಿಲ್ಲಾ ಆಸ್ಪತ್ರೆಯಲ್ಲಿರುವ ನವಜಾತ ಶಿಶು ಆರೈಕೆ
ಘಟಕ (ಎನ್‌ಐಸಿಯು)ವು ಖಾಸಗಿ ಆಸ್ಪತ್ರೆಯವರೂ ಮೂಗು ಮುರಿಯುವಂತಹ ಅತ್ಯಾಧುನಿಕ ಸೌಲಭ್ಯ ಹೊಂದಿದ್ದು, ಬಡ, ಹಿಂದುಳಿದ ಹಾಗೂ ಗ್ರಾಮೀಣ ಪ್ರದೇಶಗಳ ಜನರಿಗೆ ಆಸರೆಯಾಗಿದೆ.

ಹೆರಿಗೆ ವೇಳೆ ತಾಯಿ ಮತ್ತು ಮಗುವಿನ ಮರಣ ಪ್ರಮಾಣವನ್ನು ತಗ್ಗಿಸುವ ಸಲುವಾಗಿ ರಾಜ್ಯದ ಪ್ರತಿ ಜಿಲ್ಲಾ ಆಸ್ಪತ್ರೆಗಳಲ್ಲಿ ಎನ್‌ಐಸಿಯು (ಲೆವೆಲ್‌–3) ಘಟಕ ಸ್ಥಾಪಿಸಲಾಗಿದೆ. ನವಜಾತ ಶಿಶು ಕೇರ್‌ ಕಾರ್ನರ್‌, ನವಜಾತ ಶಿಶು ಆರೋಗ್ಯ ಸ್ಥಿರತೆ ಕಾಯ್ದುಕೊಳ್ಳುವಿಕೆ ಮತ್ತು ವೆಂಟಿಲೇಟರ್‌, ಸಿಪ್ಯಾಪ್‌ ಸೇರಿ ಮೂರು ಹಂತಗಳಲ್ಲಿ ಶಿಶುವಿನ ಆರೈಕೆ ಮಾಡಲಾಗುತ್ತಿದೆ.

‘ಜಿಲ್ಲಾ ಆಸ್ಪತ್ರೆಯಲ್ಲಿರುವ ಎನ್‌ಐಸಿಯು ಘಟಕದಲ್ಲಿ
6 ಸಿಪ್ಯಾಪ್‌ ಮೆಷಿನ್‌, 2 ವೆಂಟಿಲೇಟರ್‌, 30 ವಾರ್ಮರ್‌ ಬೆಡ್‌, ಫೋಟೊ ಥೆರೆಪಿ ವ್ಯವಸ್ಥೆಯನ್ನು ನೋಡಿಕೊಳ್ಳಲ ಒಬ್ಬ ನವಜಾತ ಶಿಶು ತಜ್ಞ, 42 ಜನ ಸ್ಟಾಫ್‌ ನರ್ಸ್‌ಗಳು, ಒಬ್ಬ ಆಪ್ತ ಸಮಾಲೋಚಕರು ಹಾಗೂ ಅಂಕಿಅಂಶ ದಾಖಲೆಗೆ ಒಬ್ಬ ಸಿಬ್ಬಂದಿ ಇದ್ದಾರೆ. ಸ್ಟಾಫ್‌ ನರ್ಸ್‌ಗಳಲ್ಲಿ ಮೂವರು ಕಾಂಗೊ ಮದರ್‌ ಕೇರ್‌ (ಶಿಶುವನ್ನು ತಾಯಿ ತನ್ನ ಎದೆಗೆ ಅವುಚಿಕೊಂಡು ಬೆಚ್ಚಗಿರಿಸಿ ಕೊಳ್ಳುವುದು) ವಿಭಾಗದಲ್ಲಿ, ಒಬ್ಬರು ಶಿಶುವಿಗೆ ಹಾಲುಣಿಸುವ ಬಗ್ಗೆ ತಾಯಂದಿರಿಗೆ ತರಬೇತಿನೀಡುವ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ’ ಎಂದು ಆಸ್ಪತ್ರೆಯ ಮಕ್ಕಳತಜ್ಞ ಹಾಗೂ ಎನ್‌ಐಸಿಯು ಘಟಕದ ನೋಡಲ್‌ ಅಧಿಕಾರಿ ಡಾ.ಸುರೇಶ್‌ ಗುಂಡಪಲ್ಲಿ
ಹೇಳಿದರು.

‘ಸಾಮಾನ್ಯವಾಗಿ 1.8 ಕೆ.ಜಿ. (1800 ಗ್ರಾಂ ಇರುವ ಅಥವಾ ಅವಧಿಪೂರ್ವ ಜನನ ಹೊಂದಿದ ಶಿಶು) ತೂಕದ, ಸೋಂಕು ತಗುಲಿದ, ಉಸಿರಾಟದ ತೊಂದರೆಯ, ಕಾಮಾಲೆ ಅಂಶ ಇರುವ, ಹುಟ್ಟುತ್ತಲೇ ಅಂಗವಿಕಲತೆ ಇರುವ ಶಿಶುಗಳನ್ನು ದಾಖಲಿಸಿಕೊಂಡು ಆರೈಕೆ ಮಾಡುತ್ತೇವೆ. ಜಿಲ್ಲೆಯೇ ಅಲ್ಲದೆ, ಸುತ್ತಲಿನ ವಿವಿಧ ಜಿಲ್ಲೆಗಳ ಜನರು ನವಜಾತ ಶಿಶುವನ್ನು ಚಿಕಿತ್ಸೆಗಾಗಿ ಇಲ್ಲಿಗೆ ಕರೆತರುತ್ತಾರೆ. ಚಿಕಿತ್ಸಾ ವೆಚ್ಚ ಸಂಪೂರ್ಣ ಉಚಿತ. ಖಾಸಗಿ ಆಸ್ಪತ್ರೆಗಳಲ್ಲಿ ಜನಿಸಿದ ಶಿಶುವಿನಲ್ಲಿ ನ್ಯೂನತೆ ಕಂಡುಬಂದರೆ, ಅಲ್ಲಿನ ವೈದ್ಯರೂ ಜಿಲ್ಲಾ ಆಸ್ಪತ್ರೆಗೇ ಶಿಶುವನ್ನು ಕಳುಹಿಸಿಕೊಟ್ಟ ಸಾಕಷ್ಟು ಉದಾಹರಣೆಗಳಿವೆ’ ಎಂದು ಅವರು ತಿಳಿಸಿದರು.

‘ಶಿಶು ಆಸ್ಪತ್ರೆಯಿಂದ ಮನೆಗೆ ತೆರಳಿದ ಒಂದು ವರ್ಷದವರೆಗೂ ಕುಟುಂಬದವರೊಂದಿಗೆ ಸಂಪರ್ಕ ದಲ್ಲಿದ್ದು, ನಿಗಾ ವಹಿಸುತ್ತೇವೆ. ಶಿಶು ಮನೆಗೆ ತೆರಳಿದ ಎಂಟು ದಿನಗಳ ನಂತರ, ಒಂದು ತಿಂಗಳು, ಮೂರು ತಿಂಗಳು, ಆರು ತಿಂಗಳು, ಒಂಬತ್ತು ತಿಂಗಳು ಮತ್ತು ಒಂದು ವರ್ಷಕ್ಕೆ ಪ್ರತಿ ಸೋಮವಾರ ಇಲ್ಲವೇ ಗುರುವಾರ ಆಸ್ಪತ್ರೆಗೆ ಕರೆತಂದು ತೋರಿಸಿಕೊಂಡು ಹೋಗುವಂತೆ ಸೂಚಿಸಲಾಗುತ್ತದೆ. ಅವಧಿ ಪೂರ್ವವಾಗಿ ಜನಿಸುವ ಶಿಶುವಿಗೆ ಕಣ್ಣಿನ ಪರೀಕ್ಷೆ ಮತ್ತು ಕಿವಿ ಪರೀಕ್ಷೆ ಮಾಡಲಾಗುತ್ತದೆ’ ಎಂದು ವಿವರಿಸುತ್ತಾರೆ
ಡಾ.ಸುರೇಶ್‌.

........

ತಾಯಂದಿರಿಗೂ ವಾರ್ಡ್‌ ಸೌಲಭ್ಯ

ಎನ್‌ಐಸಿಯುಗೆ ದಾಖಲಾಗುವ ಶಿಶುಗಳ ತಾಯಂದಿರು ಉಳಿದುಕೊಳ್ಳಲು ಘಟಕದ ಮೇಲ್ಭಾಗದಲ್ಲಿಯೇ ವಾರ್ಡ್‌ ಸೌಲಭ್ಯವಿದೆ. ಬೆಡ್‌, ಶೌಚಾಲಯ, ಸ್ನಾನದ ಮನೆ, ಬಟ್ಟೆ ತೊಳೆಯಲು ವ್ಯವಸ್ಥೆಯಿದೆ.

‘ಖಾಸಗಿ ಆಸ್ಪತ್ರೆಗಳಿಗೆ ದುಬಾರಿ ವೆಚ್ಚ ನೀಡಲು ಸಾಧ್ಯವಾಗದ ನಮ್ಮಂತಹವರಿಗೆ ಇದರಿಂದ ಅನುಕೂಲವಾಗಿದೆ. ಬೇರೆ ಆಸ್ಪತ್ರೆಗಳಲ್ಲಿ ಮಗು ಐಸಿಯುನಲ್ಲಿದ್ದರೆ ತಾಯಿ ಉಳಿದುಕೊಳ್ಳುವ ವಾರ್ಡ್‌ಗೆ ಹಣ ನೀಡಬೇಕು. ಆದರೆ, ಇಲ್ಲಿ ಅದೂ ಉಚಿತ. ಇಲ್ಲಿಗೆ ಶಿಶುವನ್ನು ದಾಖಲಿಸಲು ಜನರು ಕಾದು ನಿಂತಿರುತ್ತಾರೆ’ ಎನ್ನುತ್ತಾರೆ ಚಿತ್ರದುರ್ಗ ಜಿಲ್ಲೆ ಚಿತ್ರಹಳ್ಳಿಯ ಮಹಾಲಕ್ಷ್ಮಿ.

......

ಯಾವ ಖಾಸಗಿ ಆಸ್ಪತ್ರೆಗಳಿಗೂ ಕಡಿಮೆ ಇಲ್ಲ ಎಂಬಂತಹ ಸೌಲಭ್ಯವನ್ನು ಜಿಲ್ಲಾ ಆಸ್ಪತ್ರೆಯಲ್ಲಿರುವ ಎನ್‌ಐಸಿಯು ಘಟಕ ಹೊಂದಿದೆ. ಜನರು ಇದರ ಸದುಪಯೋಗ ಮಾಡಿಕೊಳ್ಳಬೇಕು.

-ಡಾ.ಸುರೇಶ್ ಗುಂಡಪಲ್ಲಿ, ಮಕ್ಕಳ ತಜ್ಞ, ಚಿಗಟೇರಿ ಜಿಲ್ಲಾ ಆಸ್ಪತ್ರೆ, ದಾವಣಗೆರೆ

.....

ದೇಶದ ಅಭಿವೃದ್ಧಿ ದೃಷ್ಟಿಯಿಂದ ಮಕ್ಕಳ ಮರಣ ಪ್ರಮಾಣವನ್ನು ತಗ್ಗಿಸುವುದು ಅಗತ್ಯ. ಈ ಉದ್ದೇಶವನ್ನು ಈಡೇರಿಸುವ ನಿಟ್ಟಿನಲ್ಲಿ ಇಂತಹ ಘಟಕಗಳು ಮಹತ್ತರವಾದ ಪಾತ್ರ ನಿರ್ವಹಿಸುತ್ತಿವೆ.

-ಡಾ.ರಾಘವೇಂದ್ರ, ನವಜಾತ ಶಿಶು ತಜ್ಞ, ಎನ್‌ಐಸಿಯು, ಚಿಗಟೇರಿ ಜಿಲ್ಲಾ ಆಸ್ಪತ್ರೆ, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT