ಗುರುವಾರ , ಫೆಬ್ರವರಿ 20, 2020
26 °C
ಎಐವೈಎಫ್‌ ಜಿಲ್ಲಾ ಸಮ್ಮೇಳನ

ಧರ್ಮಾಧಾರಿತ ಸಿಎಎ ಬೇಡ: ಎಚ್‌.ಕೆ. ರಾಮಚಂದ್ರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಎಲ್ಲ ಜನರನ್ನು ಒಳಗೊಂಡಿದ್ದ ಪೌರತ್ವ ಕಾಯ್ದೆಗೆ ತಿದ್ದುಪಡಿ ಮಾಡಿ ಧರ್ಮಾಧಾರಿತವಾಗಿ ಬದಲಾಯಿಸಲು ಹೊರಟಿದ್ದಾರೆ. ಈ ತಿದ್ದುಪಡಿ ಕಾಯ್ದೆ ಬೇಡ ಎಂದು ಸಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್‌.ಕೆ. ರಾಮಚಂದ್ರಪ್ಪ ಹೇಳಿದರು.

ಅಖಿಲ ಭಾರತ ಯುವಜನ ಒಕ್ಕೂಟದ (ಎಐವೈಎಫ್‌) ಜಿಲ್ಲಾ 10ನೇ ಸಮ್ಮೇಳನವನ್ನು ಇಲ್ಲಿನ ಪಂಪಾಪತಿ ಭವನದಲ್ಲಿ ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ಎಂಬ ಆಶಯದಲ್ಲಿ ಸಂವಿಧಾನ ರಚನೆಯಾಗಿದೆ. ಬಹುತ್ವದ ಭಾರತ, ವಿವಿಧತೆಯಲ್ಲಿ ಏಕತೆಯನ್ನು ಸಾರಿದ ಮಹಾತ್ಮ ಗಾಂಧೀಜಿಯವರನ್ನು ಕೊಂದವರು ಅಧಿಕಾರಕ್ಕೆ ಬಂದಿದ್ದಾರೆ. ಮಾನವತ್ವದ ಆಧಾರದಲ್ಲಿದ್ದ ಪೌರತ್ವವನ್ನು ಜಾತಿ, ಧರ್ಮದ ಆಧಾರದಲ್ಲಿ ನೀಡಲು ಬಂದಿದ್ದಾರೆ ಎಂದು ಟೀಕಿಸಿದರು.

ನುಸುಳುಕೋರರೆಲ್ಲ ಮುಸ್ಲಿಮರು ಎಂದು ತಿಳಿದು ಅಸ್ಸಾಮಿನಲ್ಲಿ ಒಂದು ಸಮೀಕ್ಷೆ ನಡೆಸಿದರು. ಆಗ 18.30 ಲಕ್ಷ ಮಂದಿ ಪತ್ತೆಯಾದರು. ಅದರಲ್ಲಿ 5.20 ಲಕ್ಷವಷ್ಟೇ ಮುಸ್ಲಿಮರು. ಈ ಸಮೀಕ್ಷೆಯನ್ನು ಇಟ್ಟುಕೊಂಡು ಮುಸ್ಲಿಮರನ್ನು ಹೊರಗಿಟ್ಟು ಪೌರತ್ವ ನೀಡಲು ಹೊರಟಿದ್ದಾರೆ. ಇದರಿಂದ ಅವರಷ್ಟೇ ತೊಂದರೆಗೆ ಈಡಾಗುತ್ತಿಲ್ಲ. ಇಲ್ಲಿನ ಆದಿವಾಸಿ, ಅರಣ್ಯವಾಸಿ ಜನಗಳು, ಅಲೆಮಾರಿಗಳು ತೊಂದರೆಗೀಡಾಗುತ್ತಿದ್ದಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

ಭಾರತವನ್ನು ದೇಶದ ಪ್ರಜೆಗಳೇ ಆಳಬೇಕು. ಸಾಮ್ರಾಜ್ಯಶಾಹಿಗಳು ದೇಶಬಿಟ್ಟು ಹೋಗಬೇಕು. ಬಂಡವಾಳಶಾಹಿಗಳನ್ನು ತೊಲಗಿಸಬೇಕು. ರೈತರಪರ, ಕಾರ್ಮಿಕರ ಪರ ಹೀಗೆ ಜನ ಪರ ಇರುವವರು ಆಡಳಿತ ನಡೆಸಬೇಕು ಎಂಬುದು ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ, ಪ್ರಾಣ ತ್ಯಾಗ ಮಾಡಿದವರ ಕನಸಾಗಿತ್ತು. ಕೊನೆಗೂ ಸಾಮ್ರಾಜ್ಯಶಾಹಿಗಳು ಹೋಗುವ ಮೂಲಕ ಸ್ವಾತಂತ್ರ್ಯ ಬಂತು. ಆದರೆ ಜನಪರ ಇರುವವರ ಕೈಗೆ ಅಧಿಕಾರ ಸಿಗದೇ ಬಂಡವಾಳಶಾಹಿಗಳ ಕೈಗೆ ಅಧಿಕಾರ ಸಿಕ್ಕಿತು. ಇದರ ಪರಿಣಾಮವಾಗಿ 70 ವರ್ಷ ದಾಟಿದರೂ ಇನ್ನೂ ಒಪ್ಪತ್ತಿಗೆ ಊಟ ಇಲ್ಲದ, ಶಿಕ್ಷಣ ಸಿಗದ, ಉದ್ಯೋಗ ಇಲ್ಲದ, ಸೂರು ಇಲ್ಲದ ಕೋಟ್ಯಂತರ ಜನ ಇದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಎಐಟಿಯುಸಿ ಜಿಲ್ಲಾ ಖಜಾಂಚಿ ಆನಂದರಾಜ್‌ ಧ್ವಜಾರೋಹಣ ಮಾಡಿದರು. ಎಐವೈಎಫ್‌ ಜಿಲ್ಲಾ ಅಧ್ಯಕ್ಷ ಆವರಗೆರೆ ವಾಸು ಅಧ್ಯಕ್ಷತೆ ವಹಿಸಿದ್ದರು. ರಾಜಯ ಸಂಚಾಲಕ ಎಚ್‌.ಎಂ. ಸಂತೋಷ, ಸಿ‍ಪಿಐ ಜಿಲ್ಲಾ ಸಹಕಾರ್ಯದರ್ಶಿ ಆವರಗೆರೆ ಚಂದ್ರು, ಅಂಗನವಾಡಿ ಕಾರ್ಯಕರ್ತೆ, ಸಹಾಯಕರ ಫೆಡರೇಶನ್‌ ಜಿಲ್ಲಾ ಅಧ್ಯಕ್ಷೆ ಎಂ.ಬಿ. ಶಾರದಮ್ಮ, ಸರೋಜಮ್ಮ, ಐರಣಿ ಚಂದ್ರು, ಮಾಣಪ್ಪ ಉಪಸ್ಥಿತರಿದ್ದರು.

ಕೆರೆನಹಳ್ಳಿರಾಜು ಸ್ವಾಗತಿಸಿದರು. ಎ. ತಿಪ್ಪೇಶ್‌ ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು