ಸಂತೇಬೆನ್ನೂರು: ಕಳೆದ 15 ದಿನಗಳಿಂದ ಮಳೆ ಹಿನ್ನಡೆಯಾಗಿದ್ದು, ಹೋಬಳಿಯ ಪ್ರಮುಖ ಬೆಳೆ ಮೆಕ್ಕೆಜೋಳ ಬಾಡುತ್ತಿದೆ. ಒಂದೆರಡು ದಿನಗಳಲ್ಲಿ ಮಳೆ ಬೀಳದಿದ್ದಲ್ಲಿ ಬೆಳೆ ರೈತರ ಕೈಸೇರುವ ಭರವಸೆ ಕಮರಲಿದೆ.
ಕಳೆದ ತಿಂಗಳು 10 ರಿಂದ 15 ದಿನ ಸುರಿದ ಪುನರ್ವಸು ಮಳೆಯಿಂದ ಮೆಕ್ಕೆಜೋಳ ಬಿತ್ತನೆ ಕಾರ್ಯ ಭರದಿಂದ ಸಾಗಿತ್ತು. ಹೊಲಗಳಲ್ಲಿ ಮೆಕ್ಕೆಜೋಳ ಬೆಳೆ ಹುಲುಸಾಗಿ ಬೆಳೆದಿತ್ತು. ರೈತರು ಉತ್ತಮ ಮಳೆಯಿಂದ ಹರ್ಷಚಿತ್ತರಾಗಿದ್ದರು. ಎಡೆಕುಂಟೆ ಹೊಡೆದು, ಗೊಬ್ಬರ ನೀಡಿದ್ದರು. ಆಶ್ಲೇಷ ಮಳೆ ಕೈಕೊಟ್ಟ ಪರಿಣಾಮ ಬೆಳೆ ಬಾಡುತ್ತಿದೆ. ಕೆಲ ರೈತರ ಹೊಲಗಳಲ್ಲಿ ಸೂಲಂಗಿ ಒಡೆಯುವ ಹಂತ ತಲುಪಿದೆ. ಈ ಹಂತದಲ್ಲಿ ಮಳೆ ಕೊರತೆ ಉಂಟಾದರೆ ಇಳುವರಿ ಕುಸಿಯುವ ಆತಂಕ ಇದೆ.
ಈ ಬಾರಿ ಮುಂಗಾರು ಪೂರ್ವ ಮಳೆಯೂ ತಡವಾಗಿತ್ತು. ಮುಂಗಾರು ವಿಳಂಬವಾಗಿ, ಬಿತ್ತನೆ ತಡವಾದರೂ ಉತ್ತಮವಾಗಿ ಸುರಿದ ಮಳೆ ಭರವಸೆ ಮೂಡಿಸಿತ್ತು. ಮೋಡ ಕವಿದ ವಾತಾವರಣ ಮುಂದವರಿದಿದ್ದರೂ ಮಳೆ ಮಾತ್ರ ಬೀಳುತ್ತಿಲ್ಲ. ರೈತರು ಬೀಜ, ಗೊಬ್ಬರ, ಉಳುಮೆ, ಕಳೆ ನಿವಾರಣೆಗೆ ಸಾವಿರಾರು ರೂಪಾಯಿ ಖರ್ಚು ಮಾಡಿದ್ದಾರೆ. ಶೀಘ್ರ ಮಳೆಗಾಗಿ ದೇವರ ಮೊರೆ ಹೋಗಿದ್ದಾರೆ.
ಹೋಬಳಿಯಲ್ಲಿ ಮೆಕ್ಕೆಜೋಳ ಹಾಗೂ ಪಾಪ್‌ಕಾರ್ನ್ ಮೆಕ್ಕೆಜೋಳ ಪ್ರಧಾನ ಬೆಳೆಯಾಗಿದ್ದು, 4,500 ಹೆಕ್ಟೇರ್ ವ್ಯಾಪ್ತಿಯಲ್ಲಿ ಬಿತ್ತನೆಯಾಗುತ್ತದೆ. ಆ.10 ರವರೆಗೆ 410 ಮಿ.ಮೀ. ವಾಡಿಕೆ ಮಳೆ ಆಗಬೇಕಿತ್ತು. ಆದರೆ 270 ಮಿ.ಮೀ ಮಳೆ ಬಿದ್ದಿದೆ ಎನ್ನುತ್ತಾರೆ ಕೃಷಿ ಅಧಿಕಾರಿ ಕುಮಾರ್.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.