ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಗಳೂರು: ಸರ್ಕಾರಿ ಕಟ್ಟಡಗಳಿದ್ದರೂ ಬಾಡಿಗೆಯಲ್ಲಿ ಕಚೇರಿಗಳು

ಲಕ್ಷಾಂತರ ರೂಪಾಯಿ ಬಾಡಿಗೆಗೆ ವ್ಯಯ
Last Updated 11 ಫೆಬ್ರುವರಿ 2020, 19:30 IST
ಅಕ್ಷರ ಗಾತ್ರ

ಜಗಳೂರು:ಇಲ್ಲಿಯ ತಾಲ್ಲೂಕು ಪಂಚಾಯಿತಿ ಆವರಣದಲ್ಲಿರುವ ಹಲವು ಕಟ್ಟಡಗಳು ಖಾಲಿಯಾಗಿದ್ದರೂ ಸದ್ಬಳಕೆ ಮಾಡಿಕೊಳ್ಳದೇ ವಿವಿಧ ಇಲಾಖೆಗಳ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿವೆ. ಇದರಿಂದ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಸಾರ್ವಜನಿಕ ಹಣ ಪೋಲಾಗುತ್ತಿದೆ.

ಸಮಾಜ ಕಲ್ಯಾಣ ಇಲಾಖೆಯ ಕಚೇರಿ, ಹಿಂದುಳಿದ ವರ್ಗಗಳ ಕಲ್ಯಾಣ ಕಚೇರಿ ಹಾಗೂ ಪರಿಶಿಷ್ಟ ಪಂಗಡಗಳ ಕಚೇರಿ ಮತ್ತು 7ಕ್ಕೂ ಹೆಚ್ಚು ಸರ್ಕಾರಿ ಹಾಸ್ಟೆಲ್‌ಗಳನ್ನು ದಶಕಗಳಿಂದ ಬಾಡಿಗೆ ಕಟ್ಟಡದಲ್ಲಿ ನಡೆಸಲಾಗುತ್ತಿದೆ.

ಬಿಸಿಎಂ ಇಲಾಖೆಯ ಕಚೇರಿಗೆ ಪ್ರತಿ ತಿಂಗಳು ₹ 9,500, ನಾಲ್ಕು ಹಾಸ್ಟೆಲ್‌ಗಳಿಗೆ ಸುಮಾರು ₹ 1 ಲಕ್ಷ, ಸಮಾಜ ಕಲ್ಯಾಣ ಇಲಾಖೆಗೆ ₹ 11 ಸಾವಿರ, ಪರಿಶಿಷ್ಟ ಪಂಗಡ ಇಲಾಖೆ ಕಚೇರಿ ಹಾಗೂ ಹಾಸ್ಟೆಲ್ ಸೇರಿ ಪ್ರತಿ ವರ್ಷ ಹತ್ತಾರು ಲಕ್ಷ ಹಣವನ್ನು ವ್ಯರ್ಥವಾಗಿ ಖರ್ಚು ಮಾಡಲಾಗುತ್ತಿದೆ ಎಂಬ ಆರೋಪಗಳು ಕೇಳಿ ಬಂದಿವೆ.

ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಐದಾರು ಸುಸಜ್ಜಿತ ಕಟ್ಟಡಗಳು ಹಲವು ವರ್ಷಗಳಿಂದ ಖಾಲಿ ಬಿದ್ದಿವೆ. ಬ್ರಿಟಿಷರ ಕಾಲದಲ್ಲಿ ನಿರ್ಮಿಸಲಾಗಿರುವ ಹಾಗೂ ವಿಶಾಲವಾದ ಹಳೇ ತಾಲ್ಲೂಕು ಕಚೇರಿಯೂ ಖಾಲಿ ಇದೆ. ಈ ಪಾರಂಪರಿಕ ಕಟ್ಟಡದ ಹಿಂಭಾಗದಲ್ಲಿ ಹಾಗೂ ಮುಂಭಾಗದ ಆವರಣದಲ್ಲಿ ಮರಗಳ ತೋಪು ಇದ್ದು ಇಲ್ಲಿ ಸದಾ ತಂಪಾದ ವಾತಾವರಣ ಇರುತ್ತದೆ. ನಿಯಮಿತವಾಗಿ ಬಳಕೆ ಮಾಡದ ಕಾರಣ ಈ ಎಲ್ಲ ಕಟ್ಟಡಗಳು ಈಗ ಹಾಳಾಗುವ ಸ್ಥಿತಿಗೆ ತಲುಪಿವೆ.

ಹಳೆ ಸರ್ಕಾರಿ ಕಟ್ಟಡಗಳನ್ನು ದುರಸ್ತಿಗೊಳಿಸಿ, ಬಾಡಿಗೆ ಕಟ್ಟಡಗಳಲ್ಲಿ ನಡೆಯುತ್ತಿರುವ ಎಲ್ಲ ಸರ್ಕಾರಿ ಕಚೇರಿಗಳು ಮತ್ತು ಹಾಸ್ಟೆಲ್‌ಗಳನ್ನು ಸ್ಥಳಾಂತರಗೊಳಿಸಬೇಕು ಎಂದು ಈಚೆಗೆ ತಾಲ್ಲೂಕು ಪಂಚಾಯಿತಿ ಸದಸ್ಯರು ತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯಿತಿ ಇಒ ಅವರಿಗೆ ಮನವಿ ಸಲ್ಲಿಸಿದ್ದರು.

ತಾಲ್ಲೂಕು ಪಂಚಾಯಿತಿ ಆವರಣದಲ್ಲಿರುವ ವಸತಿ ಗೃಹ ಹಾಗೂ ತರಬೇತಿ ಕೇಂದ್ರಗಳು ಬಳಕೆಯಲ್ಲಿ ಇಲ್ಲದಿದ್ದರೂ ಆಗಾಗಈ ಕಟ್ಟಡಗಳ ದುರಸ್ತಿ ನೆಪದಲ್ಲಿ ಲಕ್ಷಾಂತರ ರೂಪಾಯಿ ಅನುದಾನ ಖರ್ಚು ಮಾಡಲಾಗಿದೆ. ಆದರೂ ಕಟ್ಟಡಗಳನ್ನು ಉಪಯೋಗಿಸುತ್ತಿಲ್ಲ. ಇದರಿಂದ ಸಾರ್ವಜನಿಕರ ಹಣ ಪೋಲಾಗುತ್ತಿದೆ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಮರೇನಹಳ್ಳಿ ಬಸವರಾಜ್ ಆರೋಪಿಸಿದರು.

ತಾಲ್ಲೂಕು ಪಂಚಾಯಿತಿ ಆವರಣದಲ್ಲಿರುವ ಖಾಲಿ ಕಟ್ಟಡಗಳನ್ನು ಸರ್ಕಾರಿ ಕಚೇರಿಗಳ ಬಳಕೆ ಮಾಡಲು ಯಾವುದೇ ಅಡ್ಡಿ ಇಲ್ಲ. ಕಟ್ಟಡಗಳನ್ನು ದುರಸ್ತಿ ಮಾಡಿ ಸ್ಥಳಾಂತರಿಸಬಹುದು ಎಂದು ಇಒ ಮಲ್ಲಾನಾಯ್ಕ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಲ್ಲೂಕು ಪಂಚಾಯಿತಿ ಕಚೇರಿ ಎದುರಲ್ಲೇ ಮಿನಿವಿಧಾನಸೌಧ, ಅರಣ್ಯ ಇಲಾಖೆ, ಕೃಷಿ, ತೋಟಗಾರಿಕೆ ಹಾಗೂ ಬೆಸ್ಕಾಂ ಕಚೇರಿಗಳು ಕಾರ್ಯನಿರ್ವಹಿಸುತ್ತಿದ್ದು, ಬಾಡಿಗೆ ಕಟ್ಟಡದಲ್ಲಿರುವ ಕಚೇರಿಗಳು ಇಲ್ಲಿಗೆ ಸ್ಥಳಾಂತರವಾದಲ್ಲಿ ಸಾರ್ವಜನಿಕರಿಗೆ ಅಲೆದಾಡುವುದು ತಪ್ಪಿದಂತಾಗುತ್ತದೆ. ಒಂದೇ ಕಡೆ ಎಲ್ಲ ಕಚೇರಿಗಳಿದ್ದರೆ ಅನುಕೂಲವಾಗುತ್ತದೆ. ಕೂಡಲೇ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವ ಬಿಸಿಎಂ ಮತ್ತು ಸಮಾಜ ಕಲ್ಯಾಣ ಇಲಾಖೆ ಕಚೇರಿ ಮತ್ತು ಹಾಸ್ಟೆಲ್‌ಗಳನ್ನು ಸ್ಥಳಾಂತರಿಸಬೇಕು ಎಂದು ತಾಲ್ಲೂಕು ಪಂಚಾಯಿತಿ ಸದಸ್ಯರು ಒತ್ತಾಯಿಸಿದ್ದಾರೆ.

*
ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ವಸತಿ ಗೃಹ ಹಾಗೂ ತರಬೇತಿ ಕೇಂದ್ರಗಳನ್ನು ಬಳಕೆ ಮಾಡಿಕೊಂಡು ಸಾರ್ವಜನಿಕರ ತೆರಿಗೆ ಹಣ ಪೋಲಾಗುವುದನ್ನು ತಪ್ಪಿಸಬೇಕು.
-ಮರೇನಹಳ್ಳಿ ಬಸವರಾಜ್, ತಾ.ಪಂ. ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT