ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲಮಿತಿಯಲ್ಲಿ ಅನುದಾನ ವೆಚ್ಚ ಮಾಡಲು ಸೂಚನೆ

ಎಸ್.ಸಿ.ಪಿ, ಟಿ.ಎಸ್.ಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್
Published 16 ನವೆಂಬರ್ 2023, 16:34 IST
Last Updated 16 ನವೆಂಬರ್ 2023, 16:34 IST
ಅಕ್ಷರ ಗಾತ್ರ

ದಾವಣಗೆರೆ: ‘ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ ರೂಪಿಸುವ ಯೋಜನೆಗೆ ಬಿಡುಗಡೆಯಾಗುವ ಅನುದಾನವನ್ನು ಕಾಲಮಿತಿಯಲ್ಲಿ ವೆಚ್ಚ ಮಾಡಬೇಕು’ ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ. ವೆಂಕಟೇಶ್  ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ನಡೆದ ಪರಿಶಿಷ್ಟ ಜಾತಿ ವಿಶೇಷ ಘಟಕ ಯೋಜನೆ (ಎಸ್‌ಸಿಪಿ) ಮತ್ತು ಗಿರಿಜನ ಉಪ ಯೋಜನೆ (ಟಿಎಸ್‌ಪಿ)ಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಕೆಲವು ಇಲಾಖೆಯವರು ವರ್ಷವಿಡಿ ಅನುದಾನ ಖರ್ಚು ಮಾಡದಿದ್ದರೂ ಮಾರ್ಚ್ ತಿಂಗಳಲ್ಲಿ ಶೇ 100ರಷ್ಟು ಸಾಧನೆ ಮಾಡುತ್ತಾರೆ. ಆದರೆ ಇದಕ್ಕೆ ಅವಕಾಶ ನೀಡದೆ, ಕೊನೆಯಲ್ಲಿ ಖರ್ಚು ಮಾಡುವ ಇಲಾಖೆ ಅಧಿಕಾರಿಗಳ ಮೇಲೆ ತೀವ್ರ ನಿಗಾ ವಹಿಸಲಾಗುತ್ತದೆ. ನೈಜ ಕಾರಣಗಳಿಲ್ಲದಿದ್ದಲ್ಲಿ ಶಿಸ್ತುಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

‘ಈಗಾಗಲೇ ಎಲ್ಲಾ ಇಲಾಖೆಗಳ ಕ್ರಿಯಾ ಯೋಜನೆ ಅನುಮೋದನೆಯಾಗಿ ಅನುದಾನವನ್ನು ಬಿಡುಗಡೆ ಮಾಡಲಾಗಿದೆ. ವರ್ಷಾಂತ್ಯದಲ್ಲಿ ಚುನಾವಣೆ ಬರುವುದರಿಂದ ಟೆಂಡರ್ ಕರೆದು ಅನುಮೋದನೆ ಮಾಡಬೇಕು’ ಎಂದು ಹೇಳಿದರು.

‘ಬೆಸ್ಕಾಂ ಇಲಾಖೆ ಪ್ರಗತಿ ಶೂನ್ಯವಾಗಿದ್ದು, ಆರೋಗ್ಯ ಇಲಾಖೆ ಶೇ 87, ಆಯುಷ್‌ ಇಲಾಖೆ ಶೇ 35, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಶೇ 64, ಜಲಸಂಪನ್ಮೂಲ ಇಲಾಖೆ ಶೇ 46 ಸಾಧಿಸಲಾಗಿದೆ. ಸಣ್ಣ ನೀರಾವರಿ ಇಲಾಖೆಗೆ ₹ 6 ಕೋಟಿ ಕ್ರಿಯಾ ಯೋಜನೆಗೆ ಅನುಮೋದನೆ ನೀಡಿದ್ದು, ಅನುದಾನ ಬರಬೇಕಿದೆ ಎಂದಾಗ ನೀರಾವರಿ ಸೌಲಭ್ಯದ ಜೊತೆಗೆ ಅವರ ಜಮೀನುಗಳಿಗೆ ಅನುಕೂಲವಾಗುವಂತೆ ಸಣ್ಣ ಸಣ್ಣ ಕೆರೆ, ಚೆಕ್ ಡ್ಯಾಂ ನಿರ್ಮಾಣವನ್ನು ಜಲಸಂಪನ್ಮೂಲ ಇಲಾಖೆಯವರು ಮುಂದಾಗಬೇಕು’ ಎಂದರು.

‘ಜಿಲ್ಲೆಯಲ್ಲಿ ಉದ್ಯೋಗ ಖಾತರಿಯಡಿ ವಾರ್ಷಿಕ 35 ಲಕ್ಷ ಮಾನವ ದಿನಗಳ ಗುರಿ ಇದ್ದು, ಇದನ್ನು ಇನ್ನೂ ಹೆಚ್ಚಿಸುವ ಮೂಲಕ ಕಾಲುವೆ ಸ್ವಚ್ಛ ಮಾಡಲು ಬಳಕೆ ಮಾಡಿಕೊಳ್ಳುವ ನಿಟ್ಟಿನಲ್ಲಿ ಕ್ರಿಯಾ ಯೋಜನೆ ಪರಿಷ್ಕರಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿಗಳಿಗೆ ತಿಳಿಸಿದರು.

‘ಜಿಲ್ಲೆಯಲ್ಲಿ ಎಲ್ಲಾ ಇಲಾಖೆ ಎಸ್‌ಸಿಪಿಯಿಂದ ಶೇ 72 ಮತ್ತು ಟಿ.ಎಸ್.ಪಿ.ಯಲ್ಲಿ ಶೇ 77 ಸೇರಿದಂತೆ ಜಿಲ್ಲೆಯಲ್ಲಿ ಸರಾಸರಿ ಶೇ 74.50ರಷ್ಟು ಪ್ರಗತಿ ದಾಖಲಾಗಿದ. ಡಿಸೆಂಬರ್ ವೇಳೆಗೆ ಶೇ 80ಕ್ಕಿಂತಲೂ ಹೆಚ್ಚು ಸಾಧನೆ ಆಗುವಂತೆ ನೋಡಿಕೊಳ್ಳಬೇಕು’ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಲ್ಲನಾಯಕ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಕೆ.ನಾಗರಾಜ್  ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT