ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಂದು ಪಡೆಯಲು ಇನ್ನೊಂದು ಕಳೆದುಕೊಳ್ಳಬಾರದು

ಅಖಿಲ ಭಾರತ ಜಂಗಮ ಮಹಾಸಭಾ ಪೂರ್ವಭಾವಿ ಸಭೆಯಲ್ಲಿ ಓಂಕಾರ ಸ್ವಾಮೀಜಿ
Last Updated 29 ನವೆಂಬರ್ 2020, 14:55 IST
ಅಕ್ಷರ ಗಾತ್ರ

ದಾವಣಗೆರೆ: ಮೀಸಲಾತಿ ಹಕ್ಕನ್ನು ಪಡೆಯಲು ಹೋಗಿ, ಇರುವ ಸ್ಥಾನಮಾನವನ್ನು ಕಳೆದುಕೊಳ್ಳುವ ಕೆಲಸ ಆಗಬಾರದು ಎಂದು ಆವರಗೊಳ್ಳ ಪುರವರ್ಗ ಮಠದ ಓಂಕಾರ ಶಿವಾಚಾರ್ಯ ಸ್ವಾಮೀಜಿ ಎಚ್ಚರಿಸಿದರು.

ನಗರದ ಸದ್ಯೋಜಾತ ಮಠದಲ್ಲಿ ಭಾನುವಾರ ನಡೆದ ಅಖಿಲ ಭಾರತ ಜಂಗಮ ಮಹಾಸಭಾದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಸಂವಿಧಾನ ಬದ್ಧವಾದ ಹಕ್ಕನ್ನು ನ್ಯಾಯಸಮ್ಮತವಾಗಿ ಕೇಳಲು ಸಂಘಟಿತರಾಗಬೇಕು. ರಾಜಕೀಯ ಧುರೀಣರ, ಆಡಳಿತಗಾರರ ಕಣ್ಣು ತೆರೆಸುವ ಕೆಲಸವಾಗಬೇಕು. ಅದೇ ಹೊತ್ತಿಗೆ ಶಿವನಷ್ಟೇ ಪ್ರಾಮುಖ್ಯ ಪಡೆದ ಜಂಗಮರು ತಮ್ಮ ಗೌರವವನ್ನು ಪಡೆದುಕೊಳ್ಳಬಾರದು. ಜಂಗಮ ತತ್ವ ಉಳಿದರಷ್ಟೇ ಮಠಗಳು, ಪಂಚಪೀಠಗಳು ಉಳಿಯುತ್ತವೆ. ಜಂಗಮ ಆಚಾರ ವಿಚಾರಗಳು ಅಳಿದರೆ ಮಠ, ಪೀಠಗಳು ಉಳಿಯುವುದಿಲ್ಲ ಎಂದು ತಿಳಿಸಿದರು.

ಜಂಗಮರು ಅಂದರೆ ಪಂಚಪೀಠ ಪರಂಪರೆಯಲ್ಲಿ ಬರುವ ಧರ್ಮಭಿಕ್ಷುಗಳು. ಬೇಡ ಜಂಗಮರು ಎಂದರೆ ಬೇಡುವವರು ಎಂದಲ್ಲ. ಜನರ ಮಧ್ಯೆ ಹೋಗಿ ಅವರನ್ನು ಹರಸಿ ಅವರು ಜೋಳಿಗೆಗೆ ಹಾಕಿದ್ದನ್ನು ತಗೊಂಡು ಬರುವವರು. ಅವರಿಗೆ ನಮ್ಮ ಮಠಗಳಿಂದ ನೀಡುವ ದೀಕ್ಷಾ ಪತ್ರದ ಆಧಾರದಲ್ಲಿ ಜಾತಿ ಪ್ರಮಾಣ ಪತ್ರ ನೀಡುವ ಕಾರ್ಯ ಐದು ವರ್ಷಗಳ ಹಿಂದೆಯೇ ನಡೆದಿತ್ತು. ಜಂಗಮರೇ ಬೇಡ ಜಂಗಮರೆಂದು ಪ್ರಮಾಣಪತ್ರ ಪಡೆಯುತ್ತಾರೆ ಎಂಬ ಅಪಪ್ರಚಾರ ನಡೆದಿತ್ತು. ಅಪಪ್ರಚಾರಗಳಿಗೆ ಕಿವಿಕೊಡದೆ, ಅಂಬೇಡ್ಕರ್‌ ಸಂವಿಧಾನದ ಮೂಲಕ ಬಡವರಿಗೆ ನೀಡಿದ ಸೌಲಭ್ಯ ಪಡೆಯಲು ಬಡವರಾಗಿರುವ ಬೇಡ ಜಂಗಮರು ಪಡೆಯಬೇಕು ಎಂದರು.

ಅಖಿಲ ಕರ್ನಾಟಕ ಬೇಡ ಜಂಗಮ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಬಿ.ಡಿ ಹಿರೇಮಠ್ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಜಂಗಮ, ಬೇಡ ಜಂಗಮ ಸಮುದಾಯದ ಹಕ್ಕುಗಳ ಬಗ್ಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಮನವರಿಕೆ ಮಾಡಿಕೊಡಲು ಸಂಘಟನಾ ಹೋರಾಟ ನಡೆಸಲಾಗುವುದು. ಇದರ ಜೊತೆಗೆ ಸಮುದಾಯದವರಿಗೆ ಎಸ್.ಸಿ. ಮೀಸಲಾತಿಯ ಪ್ರಮಾಣ ಪತ್ರ ದೊರಕಿಸಿ ಕೊಡಲು ತಹಶೀಲ್ದಾರರಿಂದ ಹಿಡಿದು ಸುಪ್ರೀಂ ಕೋರ್ಟ್‌ವರೆಗೆ ಕಾನೂನು ಹೋರಾಟ ನಡೆಸಲು ವಕೀಲರ ಮೂಲಕ ವ್ಯವಸ್ಥೆ ಮಾಡಲಾಗುವುದು’ ಎಂದು ಮಾಹಿತಿ ನೀಡಿದರು.

‘ಮಹಾಸಭಾ ವತಿಯಿಂದ ಮುಂದಿನ ದಿನಗಳಲ್ಲಿ ಬಸವಕಲ್ಯಾಣದಿಂದ ಹೋರಾಟ ಆರಂಭಿಸಲಾಗುವುದು. ಸಮುದಾಯಕ್ಕೆ ಎಸ್.ಸಿ. ಮೀಸಲಾತಿ ಒದಗಿಸಲು ಕಾರಣವಾಗಿರುವ ದಾಖಲೆ, ಪುರಾವೆ, ಸರ್ಕಾರದ ಸುತ್ತೋಲೆ, ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಒಳಗೊಂಡ ಪುಸ್ತಕವನ್ನು ಪ್ರಕಟಿಸಿ ಮುಂದಿನ ಒಂದು ತಿಂಗಳಲ್ಲಿ ಸಮುದಾಯದ ಪ್ರತಿಯೊಬ್ಬರ ಮನೆಗೆ ತಲುಪಿಸಲಾಗುವುದು. ಇದೇ ಪುಸ್ತಕವನ್ನು ಶಾಸಕರು ಹಾಗೂ ಸಂಸದರ ಮನೆಗಳಿಗೂ ತಲುಪಿಸಿ ಹೋರಾಟ ನಡೆಸುತ್ತೇವೆ’ ಎಂದರು.

ನಾವೇ ಬೇಡ ಜಂಗಮರು ಎಂದು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‌ಗಳು ತೀರ್ಪು ನೀಡಿವೆ. ಆದರೂ, ಸಮದಾಯ ಮೀಸಲಾತಿ ಪಡೆಯಲು ಅಡ್ಡಿಪಡಿಸಲಾಗುತ್ತಿದೆ. ಆಡಳಿತ ಹಾಗೂ ವಿರೋಧ ಪಕ್ಷಗಳಿಗೆ ಸೇರಿದವರು ಕಾನೂನುಬ್ಧವಾದ ಸಮುದಾಯದ ಬೇಡಿಕೆಯನ್ನು ವಿರೋಧಿಸಬಾರದು. ಶತಮಾನದ ಹಿಂದಿನಿಂದಲೂ ಬೇಡ ಜಂಗಮರು ಎಸ್.ಸಿ. ಎಂಬುದಕ್ಕೆ ‌ದಾಖಲೆಗಲಿವೆ ಎಂದು ವಿವರಿಸಿದರು.

ಬಳ್ಳಾರಿ ಕಮ್ಮರ ಚೇಡ ಮಠದ ಕಲ್ಯಾಣ ಸ್ವಾಮೀಜಿ, ತುಮಕೂರಿನ ಕುಪ್ಪೂರು ಗದ್ದಿಗೆ ಸಂಸ್ಥಾನ ಮಠದ ಯತೀಶ್ವರ ಶಿವಾಚಾರ್ಯ ಸ್ವಾಮೀಜಿ, ಜಗಳೂರು ಮುಷ್ಟೂರು ಓಂಕಾರೇಶ್ವರ ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ಮಲ್ಲಿಕಾರ್ಜುನ ಶಾಸ್ತ್ರಿ, ವಿಶ್ವನಾಥ ಹಿರೇಮಠ, ವೀರಯ್ಯ ಸ್ವಾಮಿ, ಮಲ್ಲಿಕಾರ್ಜುನ ಭೃಂಗಿಮಠ, ಹುಳುವಯ್ಯ ಸ್ವಾಮಿ ಅವರೂ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT