ಗುರುವಾರ, 23 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಬಹಿರಂಗ ಪ್ರಚಾರಕ್ಕೆ ತೆರೆ

ಇನ್ನೇನಿದ್ದರೂ ಮನೆ ಮನೆ ಭೇಟಿಯಷ್ಟೇ* ಮೇ 7ರಂದು ಮತದಾನ
Published 6 ಮೇ 2024, 4:40 IST
Last Updated 6 ಮೇ 2024, 4:40 IST
ಅಕ್ಷರ ಗಾತ್ರ

ದಾವಣಗೆರೆ: ಲೋಕಸಭಾ ಕ್ಷೇತ್ರದ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಬುಧವಾರ ತೆರೆಬಿದ್ದಿದ್ದು, ಅಭ್ಯರ್ಥಿಗಳು, ಪಕ್ಷದ ಮುಖಂಡರು ಮನೆ–ಮನೆಗೆ ತೆರಳಿ ಮತಯಾಚನೆಗೆ ಮಾಡಲಿದ್ದಾರೆ. ಮೇ 7ರಂದು ಮತದಾನ ನಡೆಯಲಿದ್ದು, ಕೊನೆಯ ಕ್ಷಣದ ಕಸರತ್ತಿಗೆ ರಾಜಕಾರಣಿಗಳು ಸಜ್ಜಾಗಿದ್ದಾರೆ.

ಮತದಾನಕ್ಕೆ 48 ಗಂಟೆ ಮುನ್ನ ಬಹಿರಂಗ ಪ್ರಚಾರ ಅಂತ್ಯಗೊಳಿಸಲು ಚುನಾವಣಾ ಆಯೋಗ ನಿರ್ದೇಶಿಸಿದೆ. ಸಾರ್ವಜನಿಕ ಸಭೆ, ಸಮಾವೇಶ, ರೋಡ್‌ ಶೋ ಮೂಲಕ ಮತಯಾಚನೆ ಮಾಡಿದ ಅಭ್ಯರ್ಥಿಗಳಿಗೆ ಸೋಮವಾರ ಈ ಅವಕಾಶ ಇರುವುದಿಲ್ಲ. ಮತದಾರರ ಮನೆಗೆ ಭೇಟಿ ನೀಡಿ ಮನವೊಲಿಸಬಹುದಾಗಿದೆ.

ದಾವಣಗೆರೆ ಲೋಕಸಭಾ ಕ್ಷೇತ್ರದ ಕಣದಲ್ಲಿ ಕಾಂಗ್ರೆಸ್‌, ಬಿಜೆಪಿ, ಪಕ್ಷೇತರ ಅಭ್ಯರ್ಥಿ ಸೇರಿ 30 ಅಭ್ಯರ್ಥಿಗಳಿದ್ದು, ಕಾಂಗ್ರೆಸ್‌, ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಬಿಜೆಪಿ–ಜೆಡಿಎಸ್ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಗಾಯತ್ರಿ ಸಿದ್ದೇಶ್ವರ ಹಾಗೂ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಡಾ.ಪ್ರಭಾ ಮಲ್ಲಿಕಾರ್ಜುನ್ ಹಾಗೂ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯ್‌ಕುಮಾರ್ ಕಣದಲ್ಲಿದ್ದಾರೆ. ಏ.12ರಿಂದ ಆರಂಭವಾಗಿದ್ದ ನಾಮಪತ್ರ ಸಲ್ಲಿಕೆಯಲ್ಲಿ 54 ಜನರು ಉಮೇದುವಾಕೆ ಸಲ್ಲಿಸಿದ್ದರು. ಈ ಪೈಕಿ 39 ಉಮೇದುವಾರಿಕೆ ಸ್ವೀಕಾರವಾಗಿದ್ದವು. 12 ನಾಮಪತ್ರಗಳು ತಿರಸ್ಕೃತವಾಗಿದ್ದವು. ಮೂವರು ಅಭ್ಯರ್ಥಿಗಳು ನಾಮಪತ್ರ ಹಿಂಪಡೆಯುವ ಮೂಲಕ ಕೊನೇ ಕ್ಷಣದಲ್ಲಿ ಚುನಾವಣಾ ಕಣದಿಂದ ಹಿಂದೆ ಸರಿದಿದ್ದಾರೆ.

ಉಮೇದುವಾರಿಕೆ ಶಕ್ತಿ ಪ್ರದರ್ಶನ: ನಾಮಪತ್ರ ಸಲ್ಲಿಕೆಯ ಪ್ರಕ್ರಿಯೆಯನ್ನು ರಾಜಕೀಯ ಪಕ್ಷಗಳು ಶಕ್ತಿ ಪ್ರದರ್ಶನಕ್ಕೆ ವೇದಿಕೆಯಾಗಿ ಬಳಸಿಕೊಂಡವು. ಕಾಂಗ್ರೆಸ್‌, ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್‌ಕುಮಾರ್ ಉಮೇದುವಾರಿಕೆ ಸಲ್ಲಿಕೆಯ ವೇಳೆ ರೋಡ್‌ ಶೋ ಹಾಗೂ ಸಮಾವೇಶ ಆಯೋಜಿಸಿ ಮತದಾರರ ಮನವೊಲಿಸುವ ಪ್ರಯತ್ನ ಮಾಡಿದರು.

ಗಾಯಿತ್ರಿ ಸಿದ್ದೇಶ್ವರ ಅವರು ನಾಮಪತ್ರ ಸಲ್ಲಿಕೆ ವೇಳೆ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಮಾಜಿ ಸಚಿವರಾದ ಮಾಧುಸ್ವಾಮಿ, ಬೈರತಿ ಬಸವರಾಜ್, ಪರಿಷತ್‌ ಸದಸ್ಯ ಎನ್‌.ರವಿಕುಮಾರ್ ಪಾಲ್ಗೊಂಡಿದ್ದರು. ನಟಿ ಶ್ರುತಿ ಹಾಗೂ ಗಾಯಕ ಚಂದ್ರನ್ ಶೆಟ್ಟಿ ತಾರಾ ಮೆರುಗು ನೀಡಿದರು. ಮೆರಣಿಗೆಯಲ್ಲಿ ಉಡುಪಿಯ ಸದಾನಂದ ನಾಯಕ್ ಎಂಬುವವರು‌ ಮೋದಿಯ ವೇಷ ಧರಿಸಿ ಕಾರ್ಯಕರ್ತರ ಗಮನ ಸೆಳೆದರು.

ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರು ಪತಿ, ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಮಾವ, ಶಾಸಕ ಶಾಮನೂರು ಶಿವಶಂಕರಪ್ಪ ನೇತೃತ್ವದಲ್ಲಿ ಬೃಹತ್ ರೋಡ್ ನಡೆಸಿ ನಾಮಪತ್ರ ಸಲ್ಲಿಸಿದ್ದರು.

ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್‌ಕುಮಾರ್ ಅವರು ಸಾವಿರಾರು ಅಭಿಮಾನಿಗಳು ಹಾಗೂ ಕಾರ್ಯಕರ್ತರ ಜೊತೆ ರೋಡ್ ಶೋ ನಡೆಸಿ ಮನವಿ ಸಲ್ಲಿಸಿದ್ದರು.

ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ
ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್
ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್
ಸಿದ್ದರಾಮಯ್ಯ
ಸಿದ್ದರಾಮಯ್ಯ

ಪ್ರಮುಖರಿಂದ ಪ್ರಚಾರದ ಭರಾಟೆ

ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 28ರಂದು ಹೈಸ್ಕೂಲ್ ಮೈದಾನದಲ್ಲಿ ‘ವಿಕಸಿತ ಭಾರತ ವಿಜಯ ಸಂಕಲ್ಪ ಸಮಾವೇಶ’ದಲ್ಲಿ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಅವರ ಪರವಾಗಿ ಮತಯಾಚಿಸಿದರು. ಭಾರಿ ಜನಸ್ತೋಮವೇ ನೆರೆದಿತ್ತು. ಮೈಸೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರೋಡ್ ಶೋ ನಡೆಸಿ ಮತಯಾಚಿಸಿದರು. ಚಿತ್ರನಟಿ ಮಾಳವಿಕಾ ಅವಿನಾಶ್ ಅವರು ಮತಯಾಚಿಸಿದರು. ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಪರವಾಗಿ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮೇ 4ರಂದು ನಗರದ ಹೈಸ್ಕೂಲ್ ಮೈದಾನದಲ್ಲಿ ‘ಪ್ರಜಾಧ್ವನಿ- 2’ ಲೋಕಸಭಾ ಚುನಾವಣಾ ಪ್ರಚಾರ ಹಾಗೂ ಸಾರ್ವಜನಿಕ ಸಭೆಯಲ್ಲಿ ಪ್ರಚಾರ ಮಾಡುವ ಹೊಸ ಸಂಚಲನ ಸೃಷ್ಟಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಐಸಿಸಿ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ನಟ ಸಾಧುಕೋಕಿಲ ಮತ್ತಿತರರು ಪ್ರಚಾರ ನಡೆಸಿದರು. ಪಕ್ಷೇತರ ಅಭ್ಯರ್ಥಿ ಜಿ.ಬಿ. ವಿನಯ್‌ಕುಮಾರ್ ಅವರಿಗೆ ಯಾವುದೇ ಸ್ಟಾರ್ ಪ್ರಚಾರಕರು ಭಾಗವಹಿಸಿರಲಿಲ್ಲ. ಜನರೇ ನನ್ನ ಸ್ಟಾರ್ ಪ್ರಚಾರಕರು ಎಂದು ಏಕಾಂಗಿಯಾಗಿ ಪ್ರಚಾರ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT