ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಯಾನ್ಸರ್ ಜಾಗೃತಿ ಜಾಥಾಗೆ ಅಮೋಘ ಬೆಂಬಲ

ದಾವಣಗೆರೆ: ‘ಪ್ರಜಾವಾಣಿ’ ಅಮೃತ ಮಹೋತ್ಸವದ ಅಂಗವಾಗಿ ಸಾವಿರಾರು ಜನರ ನಡಿಗೆ
Last Updated 4 ಫೆಬ್ರುವರಿ 2023, 17:25 IST
ಅಕ್ಷರ ಗಾತ್ರ

ದಾವಣಗೆರೆ: ‘ಪ್ರಜಾವಾಣಿ’ ಅಮೃತ ಮಹೋತ್ಸವ ಹಾಗೂ ವಿಶ್ವ ಕ್ಯಾನ್ಸರ್‌ ಜಾಗೃತಿ ದಿನಾಚರಣೆ ಅಂಗವಾಗಿ ಶನಿವಾರ ಬೆಳಿಗ್ಗೆ ನಗರದಲ್ಲಿ ನಡೆದ ‘ಕ್ಯಾನ್ಸರ್‌ ಜಾಗೃತಿ ಜಾಥಾ’ಗೆ ಅಮೋಘ ಬೆಂಬಲ ದೊರೆಯಿತು.

ದಾವಣಗೆರೆ ಕ್ಯಾನ್ಸರ್‌ ಫೌಂಡೇಷನ್‌ ಹಾಗೂ ವಿವಿಧ ಸಂಘ–ಸಂಸ್ಥೆಗಳ ಸಹಯೋಗದಲ್ಲಿ ಹೈಸ್ಕೂಲ್‌ ಮೈದಾನದಿಂದ ಹಮ್ಮಿಕೊಂಡಿದ್ದ ಜಾಥಾದಲ್ಲಿ ಬಹುತೇಕ ಕಾಲೇಜು ಹಾಗೂ ದಾವಣಗೆರೆ ವಿಶ್ವವಿದ್ಯಾಲಯದ ಎನ್‌ಎಸ್‌ಎಸ್‌ ಘಟಕಗಳ ವಿದ್ಯಾರ್ಥಿಗಳು, ಸಂಘ–ಸಂಸ್ಥೆಗಳ ಸದಸ್ಯರು, ಸಾರ್ವಜನಿಕರು ನಗರದ ಪ್ರಮುಖ ಬೀದಿಗಳಲ್ಲಿ ಸಾಗುವ ಮೂಲಕ ಕ್ಯಾನ್ಸರ್‌ ಕುರಿತು ಜನಜಾಗೃತಿ ಮೂಡಿಸಿದರು.

ಜಿಲ್ಲಾ ಅಂಗವಿಕಲರ ಸಂಘದ ಸದಸ್ಯರು, ಆಶಾ ಕಾರ್ಯಕರ್ತೆಯರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವ–ಸಹಾಯ ಸಂಘಗಳ ಸದಸ್ಯೆಯರು ಸೇರಿ ಎರಡು ಸಾವಿರಕ್ಕೂ ಹೆಚ್ಚು ಮಂದಿ ಜಾಥಾದಲ್ಲಿ ಹೆಜ್ಜೆ ಹಾಕಿದರು. ‘ಕ್ಯಾನ್ಸರ್ ಓಡಿಸಿ– ಜೀವ ಉಳಿಸಿ’, ‘ಕ್ಯಾನ್ಸರ್‌ಗೆ ಭಯ ಬೇಡ’, ‘ದುಶ್ಚಟದಿಂದ ದೂರವಿರಿ–ಕ್ಯಾನ್ಸರ್‌ ಹತ್ತಿರ ಬಿಟ್ಟುಕೊಳ್ಳದಿರಿ’ ಸೇರಿದಂತೆ ಅನೇಕ ಘೋಷಣೆಗಳನ್ನು ಕೂಗುತ್ತ, ಕ್ಯಾನ್ಸರ್‌ ಕುರಿತು ಜಾಗೃತಿ ಮೂಡಿಸುವ ಘೋಷಣೆಗಳಿರುವ ಫಲಕಗಳನ್ನು ಹಿಡಿದು ಗಮನ ಸೆಳೆದರು.

ದಾವಣಗೆರೆ ಮೂಲದ ನಟರಾದ ‘ಪದವಿಪೂರ್ವ’ ಚಿತ್ರದ ನಾಯಕ ಪೃಥ್ವಿ ಶಾಮನೂರು, ‘ಡೈಮಂಡ್‌ ಕ್ರಾಸ್‌’ ಚಿತ್ರದ ನಾಯಕ ರಜತ್‌ ಅಪ್ಪಣ್ಣ, ‘ಹೊಂದಿಸಿ ಬರೆಯಿರಿ’ ಮತ್ತು ‘ದಿ’ ಚಿತ್ರ ತಂಡದ ಸದಸ್ಯರೂ ಸ್ವಯಂ ಪ್ರೇರಣೆ ಯಿಂದಲೇ ಜಾಥಾದಲ್ಲಿ ಪಾಲ್ಗೊಂಡು ಕ್ಯಾನ್ಸರ್‌ ವಿರುದ್ಧದ ಹೋರಾಟಕ್ಕೆ ಸಾಥ್‌ ನೀಡಿದರು.

ಜಾಥಾ ಆರಂಭಕ್ಕೆ ಮುನ್ನ ನಗರದ ರಿದಂ ಫಿಟ್‌ನೆಸ್‌ ಸಂಸ್ಥೆಯ ನುರಿತ ತರಬೇತುದಾರ ಅನಿಲ್‌ ಹಾಗೂ ಫಿಟ್‌ನೆಸ್ ಟ್ರೈನರ್ ಫೇರಿ ಅವರು ಜುಂಬಾ ನೃತ್ಯದ ಮೂಲಕ ಜಾಥಾಕ್ಕೆ ಹುರುಪು ತುಂಬಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ಜಾಥಾಗೆ ಹಸಿರು ನಿಶಾನೆ ತೋರಿಸಿದರು. 75 ವರ್ಷಗಳನ್ನು ಪೂರೈಸಿರುವ ‘ಪ್ರಜಾವಾಣಿ’ ಅಮೃತ ಮಹೋತ್ಸವದ ಅಂಗವಾಗಿ ಜಾಗೃತಿ ಜಾಥಾ ಆಯೋಜಿಸಿರುವುದು ಅಭಿನಂದನೀಯ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಎ. ಚನ್ನಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗರಾಜ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ. ರಾಘವನ್, ಕ್ಯಾನ್ಸರ್‌ ತಜ್ಞರು, ಸ್ವಯಂ ಸೇವಾ ಸಂಘಟನೆಗಳ ಕಾರ್ಯಕರ್ತರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT