ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಡಿಎಸ್ ಅಧಿಕಾರಕ್ಕೆ ಬಂದರೆ ಪಂಚರತ್ನ ಯೋಜನೆ ಜಾರಿ: ಕುಮಾರಸ್ವಾಮಿ ಭರವಸೆ

ಜನತಾ ಜಲಧಾರೆ ರಥಯಾತ್ರೆಯಲ್ಲಿ ಎಚ್.ಡಿ. ಕುಮಾರಸ್ವಾಮಿ
Last Updated 8 ಮೇ 2022, 3:01 IST
ಅಕ್ಷರ ಗಾತ್ರ

ಹರಿಹರ: ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ಶಿಕ್ಷಣ, ಆರೋಗ್ಯ, ರೈತರ ಅಭಿವೃದ್ಧಿ ಸೇರಿ ಪಂಚರತ್ನ ಯೋಜನೆ ಜಾರಿಗೊಳಿಸಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.

ಪಕ್ಷದ ಜನತಾ ಜಲಧಾರೆ ರಥಯಾತ್ರೆಯ ಅಂಗವಾಗಿ ನಗರದ ತಾಲ್ಲೂಕು ಕ್ರೀಡಾಂಗಣದಲ್ಲಿ ಶನಿವಾರ ಆಯೋಜಿಸಿದ್ದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ‘ಉಚಿತ ಶಿಕ್ಷಣ, ಆರೋಗ್ಯ, ರೈತರ ಉನ್ನತಿ, ಯುವಜನತೆಗೆ ಸ್ವ ಉದ್ಯೋಗ, ಪ್ರತಿ ಕುಟುಂಬಕ್ಕೂ ಸ್ವಂತ ಮನೆ ಸೌಕರ್ಯ ಒದಗಿಸುವ ಪಂಚರತ್ನ ಯೋಜನೆಯನ್ನು ಪಕ್ಷ ರೂಪಿಸಿದೆ’ ಎಂದರು.

‘ಯುಕೆಜಿಯಿಂದ ಪಿಯುವರೆಗೆ ಪ್ರತಿ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಉಚಿತ ಶಿಕ್ಷಣ, 24 ಗಂಟೆ ಸೇವೆ ನೀಡುವ 30 ಬೆಡ್‌ಗಳ ಆಸ್ಪತ್ರೆ ನಿರ್ಮಿಸುವ ಮೂಲಕ ಮನೆ ಬಾಗಿಲಿಗೆ ಆರೋಗ್ಯ ಭಾಗ್ಯ, ರೈತರು ಮತ್ತೆ ಮತ್ತೆ ಸಾಲಗಾರರಾಗುವ ಪರಿಸ್ಥಿತಿ ತೊಡೆದು ರೈತರ ಬದುಕು ಹಸನಗೊಳಿಸುವ ಯೋಜನೆ. ಯುವಕರು 8-10 ಸಾವಿರ ವೇತನಕ್ಕೆ ಮಹಾನಗರಗಳಿಗೆ ಹೋಗದೇ, ಸ್ವಂತ ಉದ್ಯೋಗ ಆರಂಭಿಸಿ, ಇತರರಿಗೆ ಉದ್ಯೋಗ ನೀಡುವಂತ ಶೇ 90 ಸಹಾಯಧನದಲ್ಲಿ ಸಾಲ ಸೌಕರ್ಯ. ನಾಡಿನ ಪ್ರತಿ ಬಡ ಕುಟುಂಬವೂ ಉಚಿತವಾಗಿ ಸ್ವಂತ ಮನೆ ಹೊಂದುವ ಯೋಜನೆ ರೂಪಿಸಲಾಗಿದೆ’ ಎಂದರು.

‘14 ತಿಂಗಳ ಆಡಳಿತಾವಧಿಯಲ್ಲಿ
₹ 25 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿ ದೇಶದಲ್ಲಿ ಇತಿಹಾಸ ಸೃಷ್ಟಿಸಿದ ನನಗೆ ಸ್ತ್ರೀ ಶಕ್ತಿ ಸಂಘಗಳ ₹ 1 ಸಾವಿರ ಕೋಟಿ ಸಾಲ ಮನ್ನಾ ಮಾಡುವುದು ಕಷ್ಟವಲ್ಲ. ರೈತರು ತಮ್ಮ ಬೆಳೆಗಳಿಂದ ಉಪ ಉತ್ಪನ್ನ ವಸ್ತುಗಳ ತಯಾರಿಕೆ ಸೇರಿದಂತೆ ಹಲವಾರು ಅದ್ಭುತ ಯೋಜನೆಗಳನ್ನು ರೂಪಿಸಲಾಗುವುದು’ ಎಂದರು.

‘ಎಚ್.ಡಿ. ದೇವೇಗೌಡರು ಪ್ರಧಾನಿಯಾದ ಅವಧಿ ಹೊರತುಪಡಿಸಿ, ಯಾವ ಕೇಂದ್ರ ಸರ್ಕಾರವೂ ರಾಜ್ಯದ ನೀರಾವರಿಗೆ ಪುಡಿಗಾಸು ನೀಡಿಲ್ಲ. ತರಳಬಾಳು ಶ್ರೀ ಆಶಯದಂತೆ ಭದ್ರಾ ಮೇಲ್ದಂಡೆ ಯೋಜನೆಗೆ 2006ರಲ್ಲಿ ನಾನು ಮುಖ್ಯಮಂತ್ರಿ ಇದ್ದಾಗ ಸಚಿವ ಸಂಪುಟ ಒಪ್ಪಿಗೆ ನೀಡಲಾಯಿತು. ಜಗಳೂರಿನಲ್ಲಿ ಆ ಯೋಜನೆಗೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಚಾಲನೆ ನೀಡಿದರು’ ಎಂದರು.

‘ರಾಜ್ಯದಲ್ಲಿ ನಾವು ಅಧಿಕಾರಕ್ಕೆ ಬಂದರೆ ಹರಿಹರದ ಬೈರನಪಾದ ಏತ ನೀರಾವರಿ ಯೋಜನೆ, ಕೆರೆ ಭರ್ತಿ, ಮೆಡಿಕಲ್, ಎಂಜಿನಿಯರ್ ಕಾಲೇಜು ಸ್ಥಾಪನೆ ಇತ್ಯಾದಿ ಯೋಜನೆಗಳಿಗೆ ಆದ್ಯತೆ ನೀಡಲಾಗುವುದು’ ಎಂದರು.

‘ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮೇರೆ ಮೀರಿದೆ. ಪಿಎಸ್‌ಐ ಹುದ್ದೆಗೆ ₹ 70 ಲಕ್ಷ- ₹ 80 ಲಕ್ಷ, ಉಪವಿಭಾಗಾಧಿಕಾರಿ ಹುದ್ದೆಗೆ ₹ 1 ಕೋಟಿ ಹಣ ನೀಡಬೇಕಿದೆ. ಹಣ ನೀಡಿ ನೌಕರಿ ಪಡೆಯುತ್ತಿದ್ದಾರೆ. ಇಂಥದ್ದನ್ನೆಲ್ಲಾ ಸಂಪೂರ್ಣ ಮಟ್ಟ ಹಾಕಬೇಕೆಂದರೆ ರಾಜಿಯಾಗದೇ, ಸರ್ಕಾರಿ ಕೆಲಸ ದೇವರ ಕೆಲಸ ಅನ್ನೋ ಸರ್ಕಾರ ತರುವುದು ನಿಮ್ಮ ಕೈಲಿದೆ’ ಎಂದು
ಹೇಳಿದರು.

‘ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ, ಆದರೆ ಈ ತೋಟಕ್ಕೆ ಬೆಂಕಿ ಬಿದ್ದಿದೆ. ಬಿಜೆಪಿ ಬೆಂಕಿ ಹಚ್ಚಿದರೆ, ಕಾಂಗ್ರೆಸ್ ಪೆಟ್ರೋಲ್ ಸುರಿಯುತ್ತಿದೆ. ಇಬ್ಬರಿಗೂ ಶಾಂತಿ ಬೇಕಾಗಿಲ್ಲ. ವ್ಯಾಪಾರ ವಹಿವಾಟುಗಳಲ್ಲಿ ಹಿಂದೂ ಮುಸಲ್ಮಾನರ ನಡುವೆ ಪರಸ್ಪರ ಸಹಕಾರ ಅನಿವಾರ್ಯ. ಆದರೆ ಬಿಜೆಪಿ ಅಧಿಕಾರಕ್ಕಾಗಿ ಅಮಾಯಕ ಯುವಕರಿಗೆ ಧರ್ಮದ ಅಮಲು ಏರಿಸುತ್ತಿದೆ’ ಎಂದು ಕಿಡಿ ಕಾರಿದರು.

ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಮಾತನಾಡಿ, ‘5 ವರ್ಷ ಜೆಡಿಎಸ್‌ಗೆ ಅಧಿಕಾರ ನೀಡಿ, 25 ವರ್ಷ ಜೆಡಿಎಸ್ ಅಧಿಕಾರದಲ್ಲಿರುತ್ತದೆ. ದೇವೇಗೌಡರಂತೆ ಕುಮಾರಸ್ವಾಮಿಯವರು ದೆಹಲಿಗೆ ಹೋಗುತ್ತಾರೆ. ಕೆಂಪು ಕೋಟೆ ಮೇಲೆ ಮತ್ತೆ ಕನ್ನಡಿಗರ ಕಹಳೆ ಮೊಳಗುತ್ತದೆ’ ಎಂದರು.

‘ಹಿಂದೂ–ಮುಸಲ್ಮಾನರು ಒಂದೆ ತಾಯಿಯ ಮಕ್ಕಳಂತೆ ಬದುಕಬೇಕು. ಕುಮಾರಣ್ಣ ವಿಧಾನ ಸೌಧವನ್ನು ಬಸವಣ್ಣನ ಕಾಲದ ಅನುಭವ ಮಂಟಪವಾಗಿಸುತ್ತಾರೆ. ನಾನು ಹುಟ್ಟಿದ್ದು ರಾಣೆಬೆನ್ನೂರಿನ ಐರಣಿ ಗ್ರಾಮ. 1972ರಿಂದ ನಾನು ಹರಿಹರ ಪ್ರವಾಸ ಮಾಡುತ್ತಿದ್ದೇನೆ. ಗಾಂಜಿ ವೀರಪ್ಪ, ಎಚ್. ಶಿವಪ್ಪರ ಇಬ್ಬರ ಚುನಾವಣೆ ಮಾಡಿದ್ದೇನೆ. ನನಗೆ ಇಲ್ಲಿನ ಗಣ್ಯರ ಚರಿತ್ರೆ ತಿಳಿದಿದೆ’ ಎಂದು ಹೇಳಿದರು.

ಮಾಜಿ ಶಾಸಕರಾದ ಎಚ್.ಎಸ್. ಶಿವಶಂಕರ್ ಮಾತನಾಡಿ, ‘ಹಲವು ರಾಜ್ಯಗಳಲ್ಲಿ ಬಿಜೆಪಿ ಸೇರಿದಂತೆ ರಾಷ್ಟ್ರೀಯ ಪಕ್ಷಗಳು ನೆಲೆ ಕಳೆದುಕೊಂಡಿವೆ. ಜನತಾ ಜಲಾಧಾರೆ ಕಾರ್ಯಕ್ರಮ ರಾಜ್ಯದಲ್ಲಿ ಬಿರುಗಾಳಿ ಎಬ್ಬಿಸಿದ್ದು, ಮುಂಬರುವ ಚುನಾವಣೆಯಲ್ಲಿ ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬರಲಿದೆ’ ಎಂದರು.

ಜಿಲ್ಲಾಧ್ಯಕ್ಷರಾದ ಬಿ. ಚಿದಾನಂದಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯರಾದ ಚೌಡಾರೆಡ್ಡಿ ತೂಪಲ್ಲಿ, ಮಾಜಿ ಸಚಿವ ನಬಿ ಸಾಬ್, ಅಮನುಲ್ಲಾ ಖಾನ್‌, ಗಣೇಶ್ ದಾಸಕರಿಯಪ್ಪ, ಯೋಗೀಶ್, ಮನ್ಸೂರ್ ಅಲಿಖಾನ್, ಬೀರೇಶ್, ಗಂಗಾಧರಪ್ಪ, ಪಾರ್ವತಿ, ಶಿವಮೂರ್ತಿ, ಕೊಟ್ರೇಶ್ ಕೆ., ಸೋಮಶೇಖರ್, ಶೃತಿ ತ್ಯಾವಣಗಿ, ಚಂದ್ರಶೇಖರಪ್ಪ, ಬಸವಣ್ಣ ಪೂಜಾರ್, ಪರಮೇಶ್ವರಪ್ಪ, ಎಂ.ಮುರುಗೇಶಪ್ಪ, ಹೇಮಾವತಿ, ಲಕ್ಷ್ಮಿ ಆಚಾರ್, ವಾಮನಮೂರ್ತಿ, ಹಾಲಸ್ವಾಮಿ, ಮುರುಗೇಶಪ್ಪ ಗೌಡ, ಸುರೇಶ್, ಎಂ.ಚಂದ್ರಯ್ಯ ರುದ್ರೇಶ್, ಅಬ್ದುಲ್ ರೆಹಮಾನ್ ಖಾನ್, ದಿನೇಶ್ ಬಾಬು, ದೇವರಾಜ್, ಬಂಡೇರ್ ತಿಮ್ಮಣ್ಣ ಇದ್ದರು.

ಇಬ್ರಾಹಿಂ ದಾವಣಗೆರೆಯಿಂದ ಸ್ಪರ್ಧಿಸಲಿ: ಶಿವಶಂಕರ್

ಹರಿಹರ: ಜೆಡಿಎಸ್‌ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಅಲ್ಪಸಂಖ್ಯಾತರ ಪ್ರಾಬಲ್ಯವಿರುವ ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿದರೆ ಅಭೂತಪೂರ್ವ ಜಯಗಳಿಸುತ್ತಾರೆ. ಕಾಂಗ್ರೆಸ್ ದೂಳಿಪಟವಾಗುವುದಲ್ಲದೇ ಜಿಲ್ಲೆಯ 5 ಸ್ಥಾನಗಳೂ ಜೆಡಿಎಸ್‌ಗೆ ದೊರಕುತ್ತವೆ. ಹರಿಹರ ಕ್ಷೇತ್ರದಲ್ಲಿ ನನ್ನ ಗೆಲುವೂ ಸುಲಭವಾಗುತ್ತದೆ. ಆದ್ದರಿಂದ ಸಿ.ಎಂ. ಇಬ್ರಾಹಿಂ ಮತ್ತು ಎಚ್.ಡಿ. ಕುಮಾರಸ್ವಾಮಿ ಇದನ್ನು ಘೋಷಣೆ ಮಾಡಬೇಕು’ ಎಂದು ಎಚ್.ಎಸ್. ಶಿವಶಂಕರ್ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT