ಬುಧವಾರ, ಏಪ್ರಿಲ್ 21, 2021
32 °C
ಕನ್ನಡ ಕಾವ್ಯ ಮತ್ತು ವಿಶ್ವಮಾನವ ಪ್ರಜ್ಞೆ ಗೋಷ್ಠಿ

ನೆಮ್ಮದಿ ಕಸಿದ ಧರ್ಮಕಾರಣ, ರಾಜಕಾರಣ: ಡಾ.ಎಂ.ಜಿ.ಈಶ್ವರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಇಂದು ಧರ್ಮಕಾರಣದ ವ್ಯಕ್ತಿಗಳು ಮಠಗಳನ್ನು ಹಾಗೂ ರಾಜಕಾರಣದ ವ್ಯಕ್ತಿಗಳು ಸಂವಿಧಾನವನ್ನು ತ್ಯಜಿಸಿದ್ದಾರೆ. ನಾವು ಎಲ್ಲಿದ್ದೇವೆ ಎಂಬುದೇ ತಿಳಿಯದ ದ್ವಂದ್ವ ಸ್ಥಿತಿಯಲ್ಲಿದ್ದೇವೆ. ಪ್ರಪಂಚದ ಯಾವ ರಾಷ್ಟ್ರದಲ್ಲೂ ಜನ ನೆಮ್ಮದಿಯಿಂದ ಬದುಕಲು ಬಿಡದಂತಹ ಪರಿಸ್ಥಿತಿಯನ್ನು ಧರ್ಮಕಾರಣ ಹಾಗೂ ರಾಜಕಾರಣದ ವ್ಯಕ್ತಿಗಳು ನಿರ್ಮಿಸಿದ್ದಾರೆ’ ಎಂದು ಜಾನಪದ ತಜ್ಞ ಡಾ.ಎಂ.ಜಿ. ಈಶ್ವರಪ್ಪ ಕಳವಳ ವ್ಯಕ್ತಪಡಿಸಿದರು.

ಸೋಮವಾರ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ‘ಕನ್ನಡದ ಕಾವ್ಯ ಮತ್ತು ವಿಶ್ವಮಾನವ ಪ್ರಜ್ಞೆ’ ಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಸಂತರು ಕತ್ತಲೆಯ ಜಗತ್ತಿಗೆ ಬೆಳಕನ್ನು ಕೊಡಬೇಕು. ಆದರೆ, ಇಂದು ಸಂತರು ರಸ್ತೆಯ ಮೇಲಿದ್ದಾರೆ. ಯಾರು ದಾರಿ ತೋರಿಸಬೇಕೋ ಅವರೇ ದಾರಿಯುದ್ದಕ್ಕೂ ಏನೇನೋ ಮಾಡುತ್ತಿದ್ದಾರೆ. ದೇಶಕ್ಕೆ ಹಿತವಾಗಿದ್ದನ್ನು ಮಾಡಬೇಕಾದ ರಾಜಕಾರಣಿಗಳೆಲ್ಲ ಬೇರೆ ಬೇರೆ ಕೆಲಸ ಮಾಡುತ್ತಿದ್ದಾರೆ. ತಮ್ಮಷ್ಟು ಶ್ರೇಷ್ಠರು ಮತ್ತೆ ಯಾರೂ ಇಲ್ಲ ಎನ್ನುತ್ತಿದ್ದಾರೆ’ ಎಂದು ಹೇಳುವ ಮೂಲಕ ಪರೋಕ್ಷವಾಗಿ ಮೀಸಲಾತಿ ಹೋರಾಟದ ಬಗ್ಗೆ ಬೇಸರ ವ್ಯಕ್ತಪಡಿಸಿದರು.

‘ಈಗಾಗಲೇ ಇವರಂತೆ ಸಾವಿರಾರು ಜನರು ಬಂದು ಹೋಗಿದ್ದಾರೆ. ಅವರ‍್ಯಾರೂ ಬದುಕುಳಿದಿಲ್ಲ. ನಾವು ಮಾಡಿರುವ ಒಳ್ಳೆಯ ಕೆಲಸಗಳು ಮಾತ್ರ ಉಳಿಯುತ್ತವೆ ಎಂಬ ಪ್ರಜ್ಞೆ ಇರಬೇಕು’ ಎಂದು ಹೇಳಿದರು.

‘ಇಂದು ಧರ್ಮ, ರಾಜಕಾರಣ ಮತ್ತು ವಿಶ್ವ ಪ್ರಜ್ಞೆ ಬಗ್ಗೆ ಚರ್ಚೆ ನಡೆಸಬೇಕಾಗಿದೆ. ಮನಸ್ಸನ್ನು ಹದಗೊಳಿಸುವ ಕೆಲಸವನ್ನು ಪಂಪ, ಬಸವಣ್ಣ, ಕುವೆಂಪು ಅವರ ಸಮಕಾಲೀನ ಕವಿಗಳು ಕನ್ನಡ ಸಾಹಿತ್ಯದ ಮೂಲಕ ಮಾಡಿದ್ದಾರೆ. ಇದನ್ನು ದೇಶದ ಧರ್ಮಕಾರಣ, ರಾಜಕಾರಣದ ವ್ಯಕ್ತಿಗಳಿಗೆ ವಸ್ತುಸ್ಥಿತಿಗಳ ಬಗ್ಗೆ ಪರಿಚಯಿಸುವ ಅಗತ್ಯವಿದೆ’ ಎಂದು ಅಭಿಪ್ರಾಯಪಟ್ಟರು.

‘ಆಚಾರಕ್ಕರಸಾಗು ನೀತಿಗೆ ಪ್ರಭುವಾಗು ಮಾತಿನಲಿ ಚೂಡಾಮಣಿಯಾಗು, ಕಂದಯ್ಯ ಜ್ಯೋತಿಯೇ ಆಗು ಜಗಕೆಲ್ಲ’ ಎಂದು ಜನಪದ ಮಹಿಳಾ ಕವಿ ಹೇಳಿದ್ದಾಳೆ. ಪ್ರಾಚೀನ ಕವಿಗಳು ತಮ್ಮ ಸಾಹಿತ್ಯದಲ್ಲಿ ಮಹಾಭಾರತ, ರಾಮಾಯಣದ ಕಥೆಗಳನ್ನು ಹೇಳುವ ಮೂಲಕ ಮನುಷ್ಯರನ್ನಾಗಿ ಮಾಡುವ ಪ್ರಯತ್ನವನ್ನು ಮಾಡಿದ್ದರು. ಪಂಪ, ಬಸವಣ್ಣ, ಕನಕದಾಸರ ಸಾಹಿತ್ಯವನ್ನು ಓದಿಕೊಂಡರೆ ಧರ್ಮಾಧಿಕಾರಿಗಳು, ರಾಜಕಾರಣಿಗಳು ಸರಿಹೋಗಬಹುದು ಎಂದುಕೊಂಡಿದ್ದೆವು. ಆದರೆ, ನಾವೂ 30 ವರ್ಷಗಳ ಕಾಲ ಪಾಠ ಮಾಡಿದ್ದೇವೆ. ನಮ್ಮ ವಿದ್ಯಾರ್ಥಿಗಳು ಇಂದು ಸಂತರು, ರಾಜಕಾರಣಿಗಳಾಗಿದ್ದಾರೆ. ಇವರ ವರ್ತನೆ ನೋಡಿದರೆ ನಾವ ಮಾಡಿದ ಪಾಠ ವ್ಯರ್ಥವಾಗಿದೆ ಎಂದು ಅನಿಸುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ವಿಶ್ವ ಪ್ರಜ್ಞೆ ಎಂದರೆ ನಾನು, ನೀನು ಹಾಗೂ ಎಲ್ಲರೂ ಚೆನ್ನಾಗಿರಬೇಕು ಎಂಬುದಾಗಿದೆ. ಪಕ್ಕದ ಮನೆಯವರನ್ನು, ಪಕ್ಕದ ರಾಷ್ಟ್ರವನ್ನು ದ್ವೇಷಿಸುತ್ತ ಹೋದರೆ ನಾವು ನೆಮ್ಮದಿಯಿಂದ ನಿದ್ದೆ ಮಾಡಲಿಕ್ಕೆ, ಬದುಕಲಿಕ್ಕೆ ಕಂಡಿತ ಸಾಧ್ಯವಿಲ್ಲ. ಹುಟ್ಟುತ್ತ ವಿಶ್ವಮಾನವ; ಬೆಳೆಯುತ್ತ ಅಲ್ಪಮಾನವನಾಗುತ್ತಾರೆ ಎಂದು ಕುವೆಂಪು ಹೇಳಿದ್ದಾರೆ. ಹೀಗಾಗಿ ವೈಚಾರಿಕತೆಯ ನೆಲೆಯಲ್ಲಿ ಹೊಸ ಜನಾಂಗವನ್ನು ನಿರ್ಮಿಸಬೇಕಾದ ಸವಾಲು ನಮ್ಮೆದುರಿಗೆ ಇದೆ’ ಎಂದು ಹೇಳಿದರು.

‘ಪ್ರಾಚೀನ ಕನ್ನಡ ಸಾಹಿತ್ಯದಲ್ಲಿ ಮನುಷ್ಯ ಪರಿಕಲ್ಪನೆ’ ವಿಷಯ ಮಂಡಿಸಿದ ಪ್ರಾಧ್ಯಾಪಕ ಡಾ. ದಾದಾಪೀರ ನವಿಲೇಹಾಳ್‌, ‘ಪ್ರಭುತ್ವವು ಶೂರರನ್ನು ಹೇಡಿಯನ್ನಾಗಿ ಹಾಗೂ ಹೇಡಿಯನ್ನು ಶೂರರನ್ನಾಗಿಯೂ ಮಾಡುತ್ತದೆ. ಪ್ರಭುತ್ವಕ್ಕೆ ಅಂತಹ ಅವಿವೇಕತನ ಇರುತ್ತದೆ ಎಂದು ಪಂಪ ತನ್ನ ಕಾವ್ಯದಲ್ಲಿ ಹೇಳಿದ್ದ. ಕರ್ಣನ ಸಾವಿನ ಸಂದರ್ಭದಲ್ಲಿ ನ್ಯಾಯ, ಧರ್ಮ, ಹೃದಯ ವೈಶಾಲ್ಯತೆಯನ್ನು ದುರ್ಯೋಧನನ ಪಾತ್ರದ ಮೂಲಕ ಕಟ್ಟಿಕೊಟ್ಟಿದ್ದಾನೆ. ಕನ್ನಡ ಕಾವ್ಯ ಪರಂಪರೆಯು ಅಹಿಂಸೆ ಹಾಗೂ ನೈತಿಕತೆಯನ್ನು ಪ್ರತಿಪಾದಿಸಿದೆ’ ಎಂದು ಹೇಳಿದರು. 

‘ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಮಾನವೀಯ ಕಲ್ಪನೆ’ ವಿಷಯ ಮಂಡಿಸಿದ ಪ್ರಾಧ್ಯಾಪಕ ಡಾ.ಎ.ಬಿ. ರಾಮಚಂದ್ರಪ್ಪ, ‘ವಚನ ಸಾಹಿತ್ಯವು ಏಕ ಸಂಸ್ಕೃತಿಯನ್ನು ನಿರಾಕರಿಸಿ, ಬಹು ಸಂಸ್ಕೃತಿಯನ್ನು ಪ್ರತಿಪಾದಿಸಿದೆ. ಸಾಮಾಜಿಕ ಶ್ರೇಣೀಕೃತ ವ್ಯವಸ್ಥೆಗೆ ಆಧ್ಯಾತ್ಮಿಕ ಮಾನ್ಯತೆ ಕೊಡುವುದನ್ನು ಧಿಕ್ಕರಿಸಿದೆ’ ಎಂದು ತಿಳಿಸಿದರು.

‘ಆಧುನಿಕ ಕಾವ್ಯದಲ್ಲಿ ಮನುಷ್ಯ ಸಂಬಂಧ’ ವಿಷಯ ಮಂಡಿಸಿದ ಪ್ರೊ. ಸಿ.ವಿ. ಪಾಟೀಲ್‌, ‘ಸೃಜನಶೀಲತೆ, ವೈಚಾರಿಕತೆಯು ಆಧುನಿಕ ಸಾಹಿತ್ಯ ಕಾಲಘಟ್ಟದಲ್ಲಿ ವಿಸ್ತಾರಗೊಂಡಿದೆ. ನವ್ಯ ಕವಿಗಳು ಮನುಷ್ಯ ಸಬಂಧಗಳನ್ನು ಗಟ್ಟಿಗೊಳಿಸಿದ್ದಾರೆ. ದಲಿತ, ಬಂಡಾಯ ಸಾಹಿತ್ಯವು ಮನುಷ್ಯ ಸಂಬಂಧವನ್ನು ಪ್ರಶ್ನಿಸುವ ಮೂಲಕವೇ ಅದನ್ನು ಗಟ್ಟಿಗೊಳಿಸಿವೆ. ಕಾವ್ಯದ ಮೂಲಕ ಶಿಕ್ಷಣ ನೀಡಲಾಗಿದೆ. ಆದರೆ, ಇಂದು ಎಲ್ಲಾ ಧರ್ಮಗಳಲ್ಲೂ ಮನುಷ್ಯ ಕಳೆದುಹೋಗುತ್ತಿದ್ದಾನೆ’ ಎಂದು ಬೇಸರ ವ್ಯಕ್ತಪಡಿಸಿದರು.

ಸಮ್ಮೇಳನಾಧ್ಯಕ್ಷ ಎನ್‌.ಟಿ. ಎರ‍್ರಿಸ್ವಾಮಿ ಹಾಜರಿದ್ದರು. ರೇವಣಸಿದ್ದಪ್ಪ ಅಂಗಡಿ ನಿರೂಪಿಸಿದರು.

*

ಇಂದು ಜಾತಿ ಶುದ್ಧತೆ ಹೆಸರಿನಲ್ಲಿ ಮರ್ಯಾದೆ ಹತ್ಯೆಗಳು ನಡೆಯುತ್ತಿವೆ. ಜಾತಿ ಶ್ರೇಷ್ಠತೆ ಪ್ರತಿಪಾದನೆ ನಮ್ಮ ಸಂವೇದನೆಯನ್ನು ಹಾಳುಮಾಡುತ್ತಿದೆ. ಮಾನವೀಯ ಪರಿಕಲ್ಪನೆ ಮರುಸ್ಥಾಪಿಸಬೇಕಾಗಿದೆ.

– ಡಾ.ಎ.ಬಿ. ರಾಮಚಂದ್ರಪ್ಪ, ಪ್ರಾಧ್ಯಾಪಕ

*

‘ಕನ್ನಡ ಸಾಹಿತ್ಯವು ಸಂವೇದನೆ ಹಾಗೂ ನ್ಯಾಯಪರ, ಹೃದಯ ಮಿಡಿಯುವಂತೆ ಮಾಡುವ ಮನುಷ್ಯತ್ವವನ್ನು ಪ್ರತಿಪಾದಿಸಿದೆ. ಜೀವನ್ಮರಣದ ಪ್ರಶ್ನೆ ಎಂದು ಭಾವಿಸಿ ಕನ್ನಡ ಸಾಹಿತ್ಯ ಓದಿದಾಗ ಮಾತ್ರ ಅದು ಅರ್ಥವಾಗಲಿದೆ.

– ಡಾ.ದಾದಾಪೀರ್‌ ನವಿಲೇಹಾಳ್‌, ಪ್ರಾಧ್ಯಾಪಕ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು