ಶನಿವಾರ, ಜೂನ್ 19, 2021
23 °C
ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎಚ್‌.ಬಿ. ಮಂಜಪ್ಪ ವಿಶ್ವಾಸ

ಸಂದರ್ಶನ| ಅಭಿವೃದ್ಧಿ ಮೆಚ್ಚಿ ‘ಕೈ’ ಹಿಡಿಯುವರು

ವಿನಾಯಕ ಭಟ್‌ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಕಳೆದ ಚುನಾವಣೆಯಲ್ಲಿ ಭಾರಿ ಬಹುಮತದೊಂದಿಗೆ ಪಾಲಿಕೆಯ ಚುಕ್ಕಾಣಿ ಹಿಡಿದು ಐದು ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್‌ ಮತ್ತೆ ಗದ್ದುಗೆ ಏರುವ ವಿಶ್ವಾಸ ವ್ಯಕ್ತಪಡಿಸುತ್ತಿದೆ. ‘ಪಾಲಿಕೆ ಪ್ರಜಾಮತ’ಕ್ಕೆ ಪಕ್ಷ ಮಾಡಿಕೊಂಡ ಸಿದ್ಧತೆ ಬಗ್ಗೆ ಜಿಲ್ಲಾ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಎಚ್‌.ಬಿ. ಮಂಜಪ್ಪ ಅವರು ನೀಡಿದ ಸಂದರ್ಶನದ ಆಯ್ದ ಭಾಗ ಇಲ್ಲಿದೆ.

* ಕಳೆದ ಚುನಾವಣೆಯಲ್ಲಿ ಒಟ್ಟು 41 ಸ್ಥಾನಗಳ ಪೈಕಿ 36 ಸ್ಥಾನಗಳನ್ನು ಕಾಂಗ್ರೆಸ್‌ ಗೆದ್ದುಕೊಂಡಿತ್ತು. ಅಧಿಕಾರ ಉಳಿಸಿಕೊಳ್ಳಲು ಯಾವ ತಂತ್ರ ರೂಪಿಸಿದ್ದೀರಿ?

ಅಭಿವೃದ್ಧಿ ಕೆಲಸಗಳೇ ನಮ್ಮ ತಂತ್ರ. ದಾವಣಗೆರೆ ನಗರದಲ್ಲಿ ಎಸ್‌.ಎಸ್‌. ಮಲ್ಲಿಕಾರ್ಜುನ ಹಾಗೂ ಶಾಮನೂರು ಶಿವಶಂಕರಪ್ಪ ಅವರು ಸಚಿವರಾಗಿ ಹಿಂದೆಂದೂ ಕಾಣದಷ್ಟು ಅಭಿವೃದ್ಧಿ ಮಾಡಿದ್ದಾರೆ. ಸರ್ಕಾರದಿಂದ ಹೆಚ್ಚಿನ ಅನುದಾನ ತಂದು ಕುಡಿಯುವ ನೀರು, ಸಿ.ಸಿ ರಸ್ತೆ, ಬೀದಿ ದೀಪ, ಚರಂಡಿಗಳನ್ನು ವ್ಯವಸ್ಥಿತವಾಗಿ ನಿರ್ಮಿಸಿದ್ದಾರೆ. ಗಾಜಿನಮನೆ ನಿರ್ಮಿಸಿದ್ದಾರೆ. ಉದ್ಯಾನಗಳನ್ನು ಅಭಿವೃದ್ಧಿಪಡಿಸಿದ್ದಾರೆ. ಹೀಗಾಗಿ ಖಂಡಿತವಾಗಿಯೂ ಜನ ಮತ್ತೆ ನಮ್ಮ ‘ಕೈ’ ಹಿಡಿಯುತ್ತಾರೆ. ನಾವು ಬಹುಮತ ಪಡೆಯುತ್ತೇವೆ ಎಂಬ ವಿಶ್ವಾಸ ಇದೆ.

* ಯಾವ ಪ್ರಮುಖ ವಿಷಯಗಳನ್ನು ಇಟ್ಟುಕೊಂಡು ಮತದಾರರ ಬಳಿಗೆ ಹೋಗುತ್ತೀದ್ದೀರಿ?

ರಸ್ತೆ, ಒಳಚರಂಡಿ, ಕುಡಿಯುವ ನೀರು, ಬೀದಿ ದೀಪದಂತಹ ಮೂಲಸೌಲಭ್ಯಗಳನ್ನು ಜನ ಪಾಲಿಕೆಯಿಂದ ಬಯಸುತ್ತಾರೆ. ಆದರೆ, ಈ ಎಲ್ಲವನ್ನೂ ಈಗಾಗಲೇ ಒದಗಿಸಿದ್ದೇವೆ, ಒದಗಿಸುತ್ತ ಬಂದಿದ್ದೇವೆ. ಕೆಲವು ಹೊರ ಹಾಗೂ ಹೊಸ ಬಡಾವಣೆಗಳಲ್ಲಿ ಇನ್ನೂ ಮೂಲಸೌಲಭ್ಯ ಕಲ್ಪಿಸಬೇಕಾಗಿದೆ. ಮತ್ತೆ ಅಧಿಕಾರಕ್ಕೆ ಬಂದರೆ ಹೊಸ ಬಡಾವಣೆಗಳಲ್ಲಿ ಕೈಗೊಳ್ಳಬೇಕಾದ ಅಭಿವೃದ್ಧಿ ಕೆಲಸಗಳನ್ನೂ ಮಾಡುತ್ತೇವೆ ಎಂಬ ಭರವಸೆಯನ್ನು ನೀಡುತ್ತಿದ್ದೇವೆ.

* 45ನೇ ವಾರ್ಡ್‌ನಲ್ಲಿ ನಿಮ್ಮ ಪಕ್ಷದ ಅಭ್ಯರ್ಥಿ ನಾಮಪತ್ರ ತಿರಸ್ಕೃತಗೊಂಡು ಒಂದು ಸ್ಥಾನ ಕಳೆದುಕೊಳ್ಳಬೇಕಾದ ಬಗ್ಗೆ ಏನು ಹೇಳುತ್ತೀರಿ?

ಕಾಂಗ್ರೆಸ್‌ ಪಕ್ಷದ ಕೆಲಸ ಮಾಡುತ್ತಿದ್ದ ಹನುಮಂತಪ್ಪ ಅವರ ಮಗ ಸಾಗರ್‌ ಅವರಿಗೆ ‘ಬಿ’ ಫಾರಂ ಕೊಟ್ಟಿದ್ದೆವು. ಆದರೆ, ಅವರು ಪಾಲಿಕೆಯ ನೌಕರರಾಗಿ ವೇತನ ಪಡೆಯುತ್ತಿರುವ ವಿಷಯ ಮುಚ್ಚಿಟ್ಟಿದ್ದ. ಈ ವಾರ್ಡ್‌ನಿಂದ ಪಕ್ಷೇತರರಾಗಿ ಸ್ಪರ್ಧಿಸಿರುವ ವೆಂಕಟೇಶ್‌ ಸಹ ಟಿಕೆಟ್‌ಗಾಗಿ ಅರ್ಜಿ ಸಲ್ಲಿಸಿದ್ದರು. ಹೀಗಾಗಿ ಈಗ ಅವರನ್ನೇ ಪಕ್ಷದ ಅಭ್ಯರ್ಥಿ ಎಂದು ಬೆಂಬಲಿಸುವಂತೆ ಪ್ರಚಾರ ಮಾಡುತ್ತಿದ್ದೇವೆ. ಕೆಲ ವಾರ್ಡ್‌ಗಳಲ್ಲಿ ಬಂಡಾಯ ಅಭ್ಯರ್ಥಿಗಳು ಸ್ಪರ್ಧಿಸಿದ್ದರೂ ವಿಶೇಷ ಪರಿಣಾಮ ಬೀರುವುದಿಲ್ಲ.

* ಕಳೆದ ವಿಧಾನಸಭಾ ಚುನಾವಣೆಯಲ್ಲಿ ಎಸ್‌.ಎಸ್‌. ಮಲ್ಲಿಕಾರ್ಜುನ ಉತ್ತರ ಕ್ಷೇತ್ರದಲ್ಲಿ ಸೋತಿದ್ದರು. ಪಾಲಿಕೆ ಚುನಾವಣೆಯಲ್ಲಿ ಉತ್ತರ ಕ್ಷೇತ್ರದ 25 ವಾರ್ಡ್‌ಗಳಲ್ಲಿ ಎಷ್ಟು ಸ್ಥಾನ ಗೆಲ್ಲುವ ನಿರೀಕ್ಷೆಯಿದೆ?

ಪಕ್ಷದ ಕಾರ್ಯಕರ್ತರ ಅತಿಯಾದ ವಿಶ್ವಾಸದಿಂದಾಗಿ ವಿಧಾನಸಭಾ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಸೋಲುವಂತಾಯಿತು. ಈ ಬಗ್ಗೆ ಜನರೂ ಈಗ ಪಶ್ಚಾತ್ತಾಪ ಪಡುತ್ತಿದ್ದಾರೆ. ಅವರು ಮಾಡಿದ ಕೆಲಸಗಳಿಂದಾಗಿ ಉತ್ತರದಲ್ಲಿ ಕನಿಷ್ಠ 17 ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ಇದೆ.

* ಕಳೆದ ಲೋಕಸಭಾ ಚುನಾವಣೆಯಲ್ಲಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ನಿರೀಕ್ಷೆ ಮೀರಿ ಮತಗಳು ಬಂದಿವೆ. ಪಾಲಿಕೆ ಚುನಾವಣೆಯಲ್ಲೂ ಇದು ಮುಂದುವರಿಯಬಹುದೇ?

ಬದಲಾದ ಜಾತಿ ವ್ಯವಸ್ಥೆ, ಮೋದಿ ಅಲೆ, ಪುಲ್ವಾಮಾ ದಾಳಿಯ ಕಾರಣಕ್ಕೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹೆಚ್ಚು ಮತ ಬಂದಿತ್ತು. ಚುನಾವಣೆ ವೇಳೆ ಬಿಜೆಪಿಯವರು ಒಂದೊಂದು ವಿಚಾರ ಸೃಷ್ಟಿಸಿ ಜನರ ದಿಕ್ಕು ತಪ್ಪಿಸುತ್ತಾರೆ. ಜೆಡಿಎಸ್‌ ಮೈತ್ರಿಯಿಂದಲೂ ಹೊಡೆತವಾಗಿತ್ತು. ಆದರೆ, ಪಾಲಿಕೆ ಚುನಾವಣೆಯಲ್ಲಿ ಆ ರೀತಿ ಆಗುವುದಿಲ್ಲ. ದಕ್ಷಿಣದಲ್ಲಿ 15 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇಟ್ಟುಕೊಂಡಿದ್ದೇವೆ. ಮುಸ್ಲಿಂ ಪ್ರಾಬಲ್ಯದ ಐದಾರು ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ನಡುವೆ ನೇರ ಸ್ಪರ್ಧೆ ಏರ್ಪಡಬಹುದು.

* ಬಿಜೆಪಿಯ ಸಚಿವರು, ಸಂಸದರು, ಶಾಸಕರು ಪ್ರಚಾರದಲ್ಲಿ ತೊಡಗಿದ್ದಾರೆ. ಕಾಂಗ್ರೆಸ್‌ನ ಮುಖಂಡರು ಪ್ರಚಾರಕ್ಕೆ ಬಾರದಿರುವುದರಿಂದ ನಿಮಗೆ ಹಿನ್ನಡೆ ಆಗುವುದಿಲ್ಲವೇ?

ಪಕ್ಷದ ಮುಖಂಡರು ವಿಧಾನಸಭೆಯ ಉಪ ಚುನಾವಣೆಗೆ ಹೆಚ್ಚು ಮಹತ್ವ ನೀಡಿದ್ದಾರೆ. ಈಗಾಗಲೇ ಶಾಮನೂರು ಶಿವಶಂಕರಪ್ಪ ಪ್ರಚಾರ ನಡೆಸುತ್ತಿದ್ದಾರೆ. ಮಲ್ಲಿಕಾರ್ಜುನ ಅವರೂ ನಗರದಲ್ಲಿ ರೋಡ್‌ ಶೋ, ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅವರು ಕೈಗೊಂಡ ಅಭಿವೃದ್ಧಿ ಕೆಲಸಗಳನ್ನು ಮೆಚ್ಚಿ ಜನ ಮತ್ತೆ ಕಾಂಗ್ರೆಸ್‌ಗೆ ಪಾಲಿಕೆ ಅಧಿಕಾರವನ್ನು ನೀಡುತ್ತಾರೆ ಎಂಬ ವಿಶ್ವಾಸ ಇದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು