ದಾವಣಗೆರೆ: ಇಲ್ಲಿನ ಬಾರ್‌ಲೈನ್ ರಸ್ತೆಯ ‘ಮರ್ಕಜಿ ಎ ಮಹಮ್ಮದಿಯ’ ಮಸೀದಿಯ ಸಾರ್ವಜನಿಕ ಭೇಟಿಗೆ ಸೆ.14ರಂದು ಮುಕ್ತ ಅವಕಾಶ ಕಲ್ಪಿಸಲಾಗಿದ್ದು, ‘ನಮ್ಮೂರ ಮಸೀದಿ ನೋಡ ಬನ್ನಿ’ ಎಂದು ಆಡಳಿತ ಮಂಡಳಿ ಮನವಿ ಮಾಡಿದೆ.
‘ಮಾನವೀಯ ಮನೋಭಾವ ಎತ್ತಿ ಹಿಡಿಯುವ ಹಾಗೂ ಸಹೋದರತೆಯ ಸಂದೇಶ ಸಾರುವ ಉದ್ದೇಶದಿಂದ ಮಸೀದಿ ಭೇಟಿಗೆ ಅವಕಾಶ ನೀಡಲಾಗಿದೆ. ಬೆಳಿಗ್ಗೆ 10ರಿಂದ ಸಂಜೆ 7 ಗಂಟೆಯವರೆಗೂ ಮಸೀದಿಯ ಬಾಗಿಲು ಎಲ್ಲರಿಗೂ ತೆರೆದಿರುತ್ತವೆ. ಆಸಕ್ತರು ಮಸೀದಿಗೆ ಭೇಟಿ ನೀಡಿ ವೀಕ್ಷಿಸಬಹುದು’ ಎಂದು ಶಿಕ್ಷಕ ಮೊಹಮ್ಮದ್ ಉಮರ್ ಅವರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
‘ಮಸೀದಿ ಧಾರ್ಮಿಕ ಶ್ರದ್ಧಾ ಕೇಂದ್ರ. ಶಾಂತಿ, ನೆಮ್ಮದಿಯನ್ನು ಬಯಸಿ ಧಾರ್ಮಿಕ ತಾಣಕ್ಕೆ ಭಕ್ತರು ಬರುತ್ತಾರೆ. ಆದರೆ, ಮಸೀದಿಯ ಬಗೆಗೆ ಸಾರ್ವಜನಿಕರಲ್ಲಿ ತಪ್ಪು ಭಾವನೆಗಳಿವೆ. ಇದನ್ನು ಹೋಗಲಾಡಿಸುವ ದೃಷ್ಟಿಯಿಂದ ಮಸೀದಿಗೆ ಆಹ್ವಾನ ನೀಡಲಾಗಿದೆ. ಮಹಿಳೆಯರೂ ಸೇರಿ ಎಲ್ಲ ಧರ್ಮಿಯರು ಬರಬಹುದು’ ಎಂದು ಹೇಳಿದರು.
‘ಮಸೀದಿಯಲ್ಲಿ ನಡೆಯುವ ಧಾರ್ಮಿಕ ಆಚರಣೆಯನ್ನು ವೀಕ್ಷಿಸಲು ಅವಕಾಶವಿದೆ. ನಮಾಜು ಸೇರಿ ಧಾರ್ಮಿಕ ವಿಧಿವಿಧಾನಗಳ ಕುರಿತು ಗುರುಗಳು ಪರಿಚಯ ಮಾಡಿಕೊಡಲಿದ್ದಾರೆ. ಸಾಮಾನ್ಯ ದಿನಗಳಲ್ಲಿಯೂ ಮಸೀದಿ ಭೇಟಿಗೆ ಎಲ್ಲರಿಗೂ ಮುಕ್ತ ಅವಕಾಶವಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಮಸೀದಿ ಅಧ್ಯಕ್ಷ ಸೈಯದ್ ಮಂಜೂರ್ ಅಹಮ್ಮದ್, ಖಜಾಂಚಿ ಎಂ.ಎ.ಅತಾವುಲ್ಲಾ, ಮುಖಂಡರಾದ ಡಿ.ಕೆ.ಶಕೀಲ್ ಅಹಮ್ಮದ್, ಡಿ.ಎಂ.ನೇಮತ್ ಉಲ್ಲಾ, ಉಮರ್ ಫಾರೂಕ್ ಮೊಹಮ್ಮದಿ ಇದ್ದರು.